ಬಹುತ್ವದ ಪ್ರತೀಕಗಳಾಗಿ ಜಾನಪದ ರಾಮಾಯಣ - ಮಹಾಭಾರತಗಳು
ಚರಣ್ ಐವರ್ನಾಡು
ಬಹುಮುಖಿ ಸಂಸ್ಕೃತಿ , ಬಹುಭಾಷಿಕತೆಯನ್ನು ಹೊಂದಿರುವ ಭಾರತದಲ್ಲಿ ಒಂದೇ ಸಂಸ್ಕೃತಿ ಎಂಬ ಏಕಮುಖೀಯ ಚಿಂತನೆ ಒಗ್ಗಿ ಬರುವುದಿಲ್ಲ. ಪ್ರಬಲ ಸಂಸ್ಕೃತಿಯೊಂದರ ಮೂಲಕ ಭಿನ್ನ ನೆಲೆಗಳ ಸಂಸ್ಕೃತಿಯನ್ನು ನಿರ್ಧರಿಸುವುದು. ಆರೋಗ್ಯಕರವಲ್ಲ. ಸಾಂಸ್ಕೃತಿಕ ಭಿನ್ನತೆಯುಳ್ಳ ಈ ದೇಶದಲ್ಲಿ ಪ್ರತಿಯೊಂದು ಭಾಷೆ,ಜನಾಂಗ ತನ್ನವೇ ಆದ ಕಾವ್ಯ,ಇತಿಹಾಸ,ಪುರಾಣಗಳನ್ನು ಹೊಂದಿವೆ.ಇವೇ ಅವರ ಜೀವನ ಶೈಲಿಯನ್ನು ರೂಪಿಸುತ್ತಾ ಬಂದಿವೆ. ಬಹುತೇಕ ಎಲ್ಲಾ ಭಾಷೆಗಳಲ್ಲಿ ,ಜನಾಂಗಗಳಲ್ಲಿ ಕಾಣುವ ವಿಶೇಷತೆ ಎಂದರೆ ನಮ್ಮ ದೇಶದ ಶಿಷ್ಟ ಕಾವ್ಯಗಳೆನಿಸಿದ ರಾಮಾಯಣ – ಮಹಾಭಾರತಗಳ ಪ್ರಭಾವ. ನಮ್ಮಲ್ಲಿ ವಿವಿಧ ಸಮುದಾಯಗಳು ತಮ್ಮ ತಮ್ಮ ಭಾಷೆಗಳಲ್ಲಿ ಈ ಕಾವ್ಯಗಳನ್ನು ತಮಗೆ ಬೇಕಾದಂತೆ ಬರೆದುಕೊಂಡಿವೆ. ಅವು ಮೂಲ ಕರ್ತೃಗಳ ಪಠ್ಯಕ್ಕಿಂತ ಭಿನ್ನವಾಗಿ ಸಮುದಾಯದ ಬದುಕಿಗೆ ಹತ್ತಿರವಾಗಿರುವಂತೆ ಬರೆಯಲ್ಪಟ್ಟಿರುವುದು ಈ ನೆಲದ ಬಹುತ್ವಕ್ಕೆ ಹಿಡಿದ ಕೈಗನ್ನಡಿ.
ಜಾನಪದದಲ್ಲಿ ಕಂಡು ಬರುವ ಈ ಶಿಷ್ಟಕಾವ್ಯಗಳಲ್ಲಿ ಅವುಗಳ ಕರ್ತೃಗಳೆನಿಸಿಕೊಂಡ ವ್ಯಾಸ, ವಾಲ್ಮೀಕಿಯರ ಬಗ್ಗೆ ಅನೇಕ ಬಾರಿ ಜನರಿಗೆ ಅರಿವಿರುವುದಿಲ್ಲ. “ವಾಲ್ಮೀಕಿ, ವ್ಯಾಸರು ರಾಮಾಯಣ , ಮಹಾಭಾರತಗಳ ಮೊಟ್ಟ ಮೊದಲ ಸೃಷ್ಟಿಕರ್ತರಲ್ಲ. ಅವರಿಗಿಂತಲೂ ಪೂರ್ವದಲ್ಲಿ ಈ ಕತೆಗಳು ಜನತೆಯಲ್ಲಿ ಇದ್ದುವು, ಅವರ ತರುವಾಯವೂ ಇದ್ದುವು, ಇವತ್ತಿಗೂ ಇವೆ.ವಾಲ್ಮೀಕಿ ವ್ಯಾಸರು ತಮ್ಮ ಕಾವ್ಯಗಳನ್ನು ರಚಿಸಿದ ಮಾತ್ರಕ್ಕೆ ಇವರಿಗೂ ಪ್ರೇರಕವಾದ,ವಸ್ತುಗಳನ್ನು ಒದಗಿಸಿದ ಜನಪದ ಕಥಾವಾಹಿನಿ ನಿಂತುಹೋಗಿಲ್ಲ.ಸತತವಾಗಿ ಹರಿದಿದೆ. ಆದ್ದರಿ೦ದ ಸಾಮಾನ್ಯ ಜನತೆಗೆ ತಿಳಿದಿರುವುದು ಅಥವಾ ಪ್ರಭಾವ ಬೀರಿರುವುದು ವಾಲ್ಮೀಕಿ,ವ್ಯಾಸರುಗಳ ರಾಮಾಯಣ, ಮಹಾಭಾರತ ಕಥೆಗಳಾಗಿರದೆ,ಅವರಿಗೂ ಮೂಲವಾಗಿ ಇದ್ದ ಇವತ್ತಿಗೂ ಇದ್ದು ಬಂದಿರುವ ಜನಪದ ರಾಮಾಯಣ, ಮಹಾಭಾರತಗಳೆಂಬುದು ಅತ್ಯಂತ ಸ್ಪಷ್ಟವಿರುವ ವಿಷಯ”(ರಾ ಗೌ;ಸಂ.ಜನಪದ ರಾಮಾಯಣ;1973:ix) ಎಂಬ ಸಂಶೋಧಕ ರಾಗೌ ಅವರ ಮಾತುಗಳು ಸ್ತುತ್ಯರ್ಹ.
ರಾಮಾಯಣ, ಮಹಾಭಾರತಗಳು ಒಂದು ಸ್ಥಳದಿಂದ ಅನಾಮಿಕ ಕರ್ತೃವಿನಿಂದ ಹುಟ್ಟಿ ಕ್ರಮೇಣ ಇತರ ಸಮುದಾಯಗಳಿಂದಲೂ ಸ್ವೀಕರಿಸಲ್ಪಟ್ಟು ಮೌಖಿಕ ಪರಂಪರೆಗಳಾಗಿ ಸಾಗಿ ಬಂದಿವೆ.ಈ ಪ್ರವಾಹದಲ್ಲಿ ಭಿನ್ನ ಕಥನಗಳು,ಹೊಸ ಅಂಶಗಳು ಸೇರ್ಪಡೆಯಾಗಿ ಅನನ್ಯತೆಯನ್ನು ಮೆರೆದಿವೆ.ಜಾನಪದ ವಸ್ತುಗಳಿಂದ ಪ್ರೇರಿತರಾಗಿ ವಾಲ್ಮೀಕಿ ವ್ಯಾಸಾದಿಗಳು ರಚಿಸಿದ ಕಾವ್ಯಗಳು ಜನಪ್ರಿಯತೆಯನ್ನು ಪಡೆದವು. ಕನ್ನಡದಲ್ಲೂ ಪೊನ್ನನ ‘ ಭುವನೈಕ್ಯ ರಾಮಾಭ್ಯುದಯ'(ಕ್ರಿ.ಶ.ಸು 950), ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ'(ಕ್ರಿ.ಶ.ಸು1100), ಕುಮುದೇಂದುವಿನ ರಾಮಾಯಣ(ಕ್ರಿ.ಶ.ಸು1270), ನಾಗರಾಜನ ‘ಪುಣ್ಯಾಸ್ರವ’ ಗಳಂತ ಜೈನರಾಮಾಯಣಗಳು ಬಂದವು. ಹದಿನಾಲ್ಕನೆ ಶತಮಾನದ ಬಳಿಕ ವೈದಿಕ ಕವಿಗಳು ವಾಲ್ಮೀಕಿ ರಾಮಾಯಣದಿಂದ ಪ್ರೇರಿತರಾಗಿ ಜೈನ ರಾಮಾಯಣಗಳಿಗಿಂತ ಭಿನ್ನವಾದ ಕಾವ್ಯಗಳನ್ನು ರಚಿಸಿದರು. ಕುಮಾರ ವಾಲ್ಮೀಕಿಯ ‘ತೊರವೆ ರಾಮಾಮಣ’ (ಕ್ರಿ.ಶ.1500), ಚಾಮರಾಜ ‘ರಾಮಾಯಣ'(ಕ್ರಿ.ಶ.1630),ಮಲ್ಲರಸನ ‘ ದಶಾವತಾರ ಚರಿತೆ'(ಕ್ರಿ.ಶ.1680) ಮುಂತಾದವುಗಳಿಂದ ಹಿಡಿದು ಕುವೆಂಪು, ಮೋಯ್ಲಿಗಳ ವರೆಗೆ ರಚಿತವಾಗಿರುವ ರಾಮಾಯಣಗಳಿಂದ “ತಿಣುಕಿದನು ಣಿರಾಯ ರಾಮಾಯಣಗಳ ಭಾರದಲಿ” (ಕುಮಾರವ್ಯಾಸ)
https://youtu.be/-82w9c0b-Pk Kumaravyasa Bharatha
ಅಂತೆಯೇ ಮಹಾಭಾರತವೂ ಅನೇಕ ಜೈನ ಕವಿಗಳಿಂದ, ವೈದಿಕ ಕವಿಗಳಿಂದ ಪುನರ್ರಚನೆಗೊಂಡಿದೆ. ಪಂಪನ ‘ವಿಕ್ರಮಾರ್ಜುನ ವಿಜಯ’, ರನ್ನನ ‘ಗದಾಯುದ್ಧ’ ಕುಮಾರವ್ಯಾಸನ ‘ ಕರ್ನಾಟ ಭಾರತ ಕಥಾಮಂಜರಿ’ ಇತ್ಯಾದಿಗಳು. ಕ್ರಮೇಣ 16-17 ಶತಮಾನದಲ್ಲಿ ಶ್ರೋತೃಗಳನ್ನು ಕೇಂದ್ರೀಕರಿಸಿಕೊಂಡು ಕುಂಬಳೆಯ ಪಾರ್ತಿಸುಬ್ಬನಂತಹ ಅನೇಕ ಯಕ್ಷಗಾನ ಕವಿಗಳು ಪ್ರಸಂಗಗಳನ್ನು ಕಾವ್ಯಗಳ ಮೇಲೆ ಬರೆದಿದ್ದಾರೆ. ಕರಾವಳಿಯ ಜನರಿಗೆ ಮಹಾಕಾವ್ಯಗಳು, ಪುರಾಣಗಳು ಯಕ್ಷಗಾನದ ಮೂಲಕ ಚಿರ ಪರಿಚಿತವಾಗಿವೆ.
![]() |
| Krishna and Balarama in Yaxagana (google-K.K.Bhat, Chitramule) |
ಭಾರತದ ಬಹುತೇಕ ಭಾಷೆಗಳಿಗೆ ತಮ್ಮವೇ ಆದ ರಾಮಾಯಣ, ಮಹಾಭಾರತಗಳಿವೆ. ತುಳುವಿನಲ್ಲಿ ಅರುಣಾಬ್ಜ ಕವಿ ವಿರಜಿತ ‘ಮಹಾಭಾರತೊ’ (ಕ್ರಿ.ಶ.1657) ಇದೆ,’ ಮಂದಾರ ರಾಮಾಯಣ’ ಇದೆ.ಆದರೆ ಇವೆಲ್ಲ ಶಿಷ್ಟ ಕಾವ್ಯಗಳಿಗೆ ನಿಷ್ಠವಾಗಿದ್ದು ಜಾನಪದ ಕಾವ್ಯಗಳಿಗೆ ಭಿನ್ನತೆಗಳವೆ.
ಆಂಗ್ಲರು ಭಾರತವನ್ನು ಆಳಲು ತೊಡಕಾಗಿದ್ದುದು ಇಲ್ಲಿನ ಬಹುತ್ವತೆ. ಇವೆಲ್ಲವನ್ನೂ ಒಂದೇ ಮರದಡಿಗೆ ತಾರದೆ ಅವರಿಗೆ ತಮ್ಮ ನೆಲೆಯನ್ನು ಗಟ್ಟಿಗೊಳಿಸುವುದು ಅಸಾಧ್ಯವಾಗಿತ್ತು. ಅದಕ್ಕೆ ಅವರು ಕಂಡುಕೊಂಡ ಮಾರ್ಗ ಭಾರತದ ಸಾಹಿತ್ಯಕ ಕ್ಷೇತ್ರಗಳಲ್ಲಿನ ವಿಭಿನ್ನತೆಯನ್ನು diversity ಒಂದುಗೊಳಿಸುವುದು. ಭಾರತದಾದ್ಯಂತ ಇರುವ ಮಹಾಕಾವ್ಯಗಳ ಭಿನ್ನ ಪಠ್ಯಗಳನ್ನು ಸಂಪಾದಿಸಿ ಅಧಿಕೃತವಾಗಿ ಒಂದೇ ಪಠ್ಯವನ್ನು ಜಾರಿಗೊಳಿಸುವುದು. ಹಾಗಾಗಿ ಶ್ರೀವಿಷ್ಣು ಸೂಕ್ತಂಕರ್ ನೇತೃತ್ವದಲ್ಲಿ ಪಿ.ವಿ.ಕಾಣೆ, ವಿ.ಜಿ.ಪರಾಂಜಪೆ ಮೊದಲಾದ ಪ್ರಖ್ಯಾತ ಸಂಸ್ಕೃತ ವಿದ್ವಾಂಸರ ತಂಡ ರಚಿಸಿ 1919ರಲ್ಲಿ ಭಾರತದಾದ್ಯಂತ ಲಭ್ಯವಿರುವ 160 ಹಸ್ತಪ್ರತಿಗಳನ್ನು ಸಂಗ್ರಹಿಸಿ ಹಳೆಯದಾದ ಮೂಲಕ್ಕೆ ಹತ್ತಿರವೆನಿಸಿದ ಪಠ್ಯಗಳ ಮೂಲಕ ಅಧಿಕೃತ ಮಹಾಭಾರತವನ್ನು ರಚಿಸಿ ಪೂನಾದ ‘ Bandarkar Oriental Research Institute’ ನಿಂದ 1933ರಲ್ಲಿ ಪ್ರಕಟಿಸಿದರು. ಸೂಕ್ತಂಕರ್ ಹೇಳುತ್ತಾರೆ- “ವ್ಯಾಸರು ರಚಿಸಿದ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಅಸಾಧ್ಯ.ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ” ಈ ಮಾತು ಗಮನಾರ್ಹವಾದುದು.
ಆದರೆ ಇವು ಶಿಷ್ಟಪಠ್ಯಗಳು ಅಂದರೆ ಲಿಖಿತವಾಗಿರುವ ಪಠ್ಯಗಳ ಮೂಲಕ ರಚಿಸಿದ್ದಾದರೆ ವಿವಿಧ ಸಮುದಾಯಗಳು ಬರೆದುಕೊಂಡ ನಿರೂಪಣೆಗಳು ಭಿನ್ನ ಹಾಗೂ ನಾವು ಮರೆತು ಬಿಟ್ಟಿರುವುದು. ಜನಸಾಮಾನ್ಯ ಕಾವ್ಯಗಳನ್ನು ತನ್ನ ಬದುಕಿನೊಂದಿಗೆ ಮುಖಾಮುಖಿಯಾಗಿಸಿ ರಚಿಸಿದ್ದಾನೆ. ಇವು ನಿಂತ ನೀರಲ್ಲ, ಪ್ರವಾಹೋಪಾದಿಯಲ್ಲಿ ಸಮಕಾಲಿನ ಸಂಘರ್ಷ, ತಲ್ಲಣಗಳಿಗೆ ಎದುರುಗೊಂಡು ಬದಲಾಗುತ್ತಾ ಹರಿಯುವಂತವು.ಇವುಗಳ ಅಧ್ಯಯನ ಅಗತ್ಯ.
ಸಂಶೋಧಕ ರಾಗೌ ಹಾಗೂ ಇತರರು ಸಂಪಾದಿಸಿದ ‘ಜನಪದ ರಾಮಾಯಣ’ದಲ್ಲಿ ತಂಬೂರಿಯವರ ರಾಮಾಯಣವು ರಾವಣ ಹಾಗೂ ಸೀತೆಯರ ತಂದೆ-ಮಗಳ ಸಂಬಂಧ ಚಿತ್ರಿಸುತ್ತದೆ. “ಇದು ಸೀತೆಯ ಜೀವನ ದುರಂತತೆಯನ್ನು ಧ್ವನಿಸುವುದು ಮಾತ್ರವಲ್ಲ, ಇಡೀ ರಾಮಾಯಣ ಕಥಾ ಕಟ್ಟಡವನ್ನೇ ತನ್ನಲ್ಲಿ ನಿಲ್ಲಿಸಿಕೊಂಡಿರುವಂತಿದೆ.” (ರಾಗೌ;xviii:1973) ಇಲ್ಲಿ ಶಿವನಿಂದ ರಾವಣ ಮಾವಿನಹಣ್ಣೊಂದನ್ನು ಪಡೆದು, ಅದನ್ನು ತಿಂದು ವಾಟೆಯನ್ನು ಹೆಂಡತಿಗೆ ನೀಡುತ್ತಾನೆ. ಆಗ ಅವನೇ ಗರ್ಭ ಧರಿಸಿ ಸೀತೆಯನ್ನು ಹೆರುತ್ತಾನೆ. ವಾಲ್ಮೀಕಿಯ ರಾಮಾಯಣದಲ್ಲಿ ದಶರಥ ಹಣ್ಣಿನಿಂದ ಮಕ್ಕಳನ್ನು ಪಡೆಯುವುದನ್ನು ನೋಡಬಹುದು.
ಇವರದೇ ಸಂಪಾದನೆಯ ‘ಹೊನ್ನಾಜಮ್ಮನ ರಾಮಾಯಣ’ದಲ್ಲಿ ಸೀತೆ ಕಮಲದ ರೂಪದಲ್ಲಿರುವುದು, ತಾವರೆಯನ್ನು ಆಘ್ರಾಣಿಸಿದ ರಾವಣನ ಮೂಗಿನ ಹೊಳ್ಳೆಗಳ ಒಳಗೆ ಸೇರಿಕೊಳ್ಳುವುದು, ಸೀನಿದಾಗ ಮೂಗಿನಿಂದ ಸೀತೆ ಹುಟ್ಟುವುದು- ಇಲ್ಲಿ ಸೀತೆಯ ಜನನ ಅಸಹಜ ಹಾಗೂ ಅಮಂಗಳಕರ. ತಂಬೂರಿಯವರ ರಾಮಾಯಣದಂತೆ ಇಲ್ಲೂ ರಾವಣನಿಂದ ನೀರಿನಲ್ಲಿ ತೇಲಿ ಬಿಟ್ಟ ಸೀತೆ ಜನಕನಿಗೆ ಸಿಗುತ್ತಾಳೆ.
ಹೊನ್ನಾಜಮ್ಮನ ರಾಮಾಯಣದ ಸೀತೆಯ ಪಾವಿತ್ರ್ಯತೆಯ ಪರೀಕ್ಷೆಯೂ ವಿಶಿಷ್ಟ. ಇಲ್ಲಿ ರಾಮ ಇವಳಿಗೆ ಸರ್ಪವನ್ನು ಸಿಂಬಿಯಾಗಿಸಿಕೊಂಡು ಮರಳಿನ ಮಡಿಕೆಯಲ್ಲಿ ನೀರು ತರುವ ಹಾಗೂ ಮಲ್ಲಿಗೆ ಬಾಡದಂತೆ;ಉಟ್ಟ ಬಟ್ಟೆ ಹಾಳಾಗದಂತೆ, ಅರಶಿನ ಕುಂಕುಮ ಕೆಡದಂತೆ ಅಗ್ನಿ ಕೊಂಡದಲ್ಲಿ ನಿಂತುಕೊಳ್ಳುವ ಪರೀಕ್ಷೆಗಳನ್ನು ಒಡ್ಡುತ್ತಾನೆ. (ರಾಗೌ:xxx:1973)
![]() |
| Sundaranga Rama |
ಹನುಮಂತನ ಬಗ್ಗೆ ಗಂಗಾ ಯಮುನಾ ಬಯಲಿನಲ್ಲಿ ಪ್ರಚಲಿತದಲ್ಲಿರುವ ಹಲವಾರು ಕತೆಗಳಲ್ಲಿ ಕೆಲವನ್ನು ಅಯೋವಾ ವಿ.ವಿ.ಯ ಪ್ರಾಧ್ಯಾಪಕರಾದ ಡಾ. ಫಿಲಿಪ್ ಲಟ್ಗೆಂಡಾರ್ಫ್ ಪ್ರಕಟಿಸುತ್ತಾರೆ.ಇದರಲ್ಲೊಂದು ಕತೆಯಲ್ಲಿ ಪಾತ್ರಗಳೇ ನಿರೂಪಕರಾಗುತ್ತಾ ತಮ್ಮದೇ ಪಾತ್ರಗಳಿಗೆ ಮುಖಾಮುಖಿಯಾಗುವ ಅದ್ಭುತ ಸನ್ನಿವೇಷವಿದೆ.ಇದರಲ್ಲಿ ಅಂಜನಾದೇವಿ ಬಾಲ ಆಂಜನೇಯನಿಗೆ ರಾತ್ರಿ ರಾಮನ ಕತೆಯನ್ನು ಹೇಳುತ್ತಾಳೆ. ಆಂಜನೇಯ-ರಾಮನ ಬೇಟಿಯ ಬಗ್ಗೆ ಹೇಳುವಾಗ ಬಾಲ ಆಂಜನೇಯ “ಈ ಆಂಜನೇಯ ಯಾರು?” ಎಂದು ಅಚ್ಚರಿಯಿ೦ದ ಕೇಳುತ್ತಾನೆ. ರಾವಣ-ಆಂಜನೇಯರ ಬೇಟಿಯ ಬಗ್ಗೆ ಹೇಳುವಾಗ ಆಂಜನೇಯ ರಾವಣನನ್ನು ಅಲ್ಲೇ ಕೊಲ್ಲದ್ದಕ್ಕೆ ಬಾಲಾಂಜನೇಯ ಆಕ್ರೋಶ ವ್ಯಕ್ತ ಪಡಿಸುತ್ತಾನೆ! ರಾಮಾಂಜನೇಯರ ಆಲಿಂಗನದ ಬಗ್ಗೆ ಹೇಳುವಾಗ ಆ ಆಂಜನೇಯ ತಾನಾಗಬಾರದಿತ್ತೇ ಎಂದು ಆಸೆ ಪಡುತ್ತಾನೆ. ರಾಮನನ್ನು ಈಗಲೇ ತೋರಿಸುವಂತೆ ಹಠ ಹಿಡಿದಾಗ ಅಂಜನಾದೇವಿ “ರಾಮ ಈಗಷ್ಟೇ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ. ಅವನದು ಇನ್ನೊಂದು ರಾಮಾಯಣ” ಎನ್ನುತ್ತಾಳೆ. ಆಂಜನೇಯ ತಕ್ಷಣ ಅಯೋಧ್ಯೆಗೆ ಹೊರಡಲನುವಾದಾಗ ತಾಯಿ ತಡೆದು “ಅಲ್ಲಿ ಮಾನವರು ವಾಸಿಸುತ್ತಾರೆ. ಕಪಿಗಳಿಗೆ ಅಲ್ಲಿ ಜಾಗವಿಲ್ಲ. ಕಾಲ ಕೂಡಿ ಬಂದಾಗ ಬೇಟಿಯಾಗು” ಎನ್ನುತ್ತಾಳೆ. ಈ ಕಥಾನಿರೂಪಣೆಯ ಶೈಲಿ ಅದ್ಭುತವಾದುದು.(ಬಹುರೂಪ:ಡಾ.ಬಿಳಿಮಲೆ)
ಹಿ.ಚಿ.ಬೋರಲಿಂಗಯ್ಯರವರು ಸಂಪಾದಿಸಿದ ‘ಗೊಂಡರ ರಾಮಾಯಣ’ ಬಹಳ ವಿಶಿಷ್ಟವಾದದು. ಕೋವಿ ಹಿಡಿದು ಬೇಟೆಗೆ ಹೊರಡುವ ದಶರಥನನ್ನು ಸಾಮಾನ್ಯ ಗೊಂಡನಂತೆ ಚಿತ್ರಿಸಲಾಗಿದೆ.ಕೆರೆಯಲ್ಲಿ ಆನೆಯೊಂದು ನೀರು ಕುಡಿಯುವಾಗ ಅದಕ್ಕೆ ಗುಂಡು ಹಾರಿಸುವ ದಶರಥ ” ನೀನು ನಿನ್ನ ಮಗನಿಂದಲೇ ಮರಣ ಹೊಂದು” ಎಂದು ಆನೆಯಿಂದ ಶಪಿಸಲ್ಪಡುತ್ತಾನೆ.ವಾಲ್ಮೀಕಿಯ ರಾಮಾಯಣದಲ್ಲಿ ಆನೆಯೆಂದು ಭಾವಿಸಿ ಶ್ರವಣ ಕುಮಾರನ ಹತ್ಯೆಯಾಗುತ್ತದೆ.
ಗೊಂಡರ ರಾಮಾಯಣದಲ್ಲಿ ಮಡಿವಾಳ ಮಾಜಯ್ಯ(?) ಹೀಯಾಳಿಸುವಾಗ ರಾಮ ತನ್ನ ಘನತೆಯನ್ನು ಕಾಯ್ದುಕೊಳ್ಳಲು ಸೀತೆಯನ್ನು ಕಾಡಿನಲ್ಲಿ ಕೊಂದು ಬರುವಂತೆ ಕಿರಾತಕರಲ್ಲಿ ಆಜ್ಞಾಪಿಸುತ್ತಾನೆ. ಕೊಲ್ಲುವಾಗ ಕಿರಾತಕರಿಗೆ ಕತ್ತಿಯ ಅರಗಿನಲ್ಲಿ ಮಗುವಿನ ಬಿಂಬ ಕಂಡು ಶಿಶುಹತ್ಯಾ ದೋಷಕ್ಕೆ ಹೆದರಿ ಕಾಡಲ್ಲಿ ಬಿಟ್ಟು ಬರುತ್ತಾರೆ.ಇಲ್ಲಿಯೂ ವಾಲ್ಮೀಕಿಯ ರಾಮಾಯಣದಂತೆ ಸೀತೆಗೆ ಅವಳಿ ಮಕ್ಕಳ ಜನನವಾಗುವುದಿಲ್ಲ. ಬದಲಾಗಿ ‘ಚಿತ್ರಪಟ ರಾಮಾಯಣ’ದಂತೆ ಕುಶನು ವಾಲ್ಮೀಕಿಯ ದರ್ಬೆಯಿಂದ ಜನಿಸುತ್ತಾನೆ.
ವಿಲಿಯಮ್ ಡಾಲ್ರಿಂಪಲ್ ನ ''ನೈನ್ ಲೈವ್ಸ್'' ನಲ್ಲಿ ರಾಜಸ್ಥಾನದ ನಾಲ್ಕು ಸಾವಿರ ಸಾಲುಗಳ ‘ಪಭುಜೀಯ’ ಮಾಖಿಕ ಕಾವ್ಯದ ಬಗ್ಗೆ ಬರವು ಇದೆ. ಕೇಂಬ್ರಿಡ್ಜ್ ನ ಸಂಶೋಧಕ ಜಾನ್ ಡಿ ಸ್ಮಿತ್ 1970 ರಲ್ಲಿ ಈ ವೀರ ಪಭುಜೀಯ ಕಾವ್ಯ ಹಾಗೂ ಅದನ್ನು ಹಾಡುವ ಭೋಪರ ಮೇಲೆ ಪಿ.ಎಚ್.ಡಿ ಮಾಡಿದ್ದಾರೆ. ಅಖಿಲ ಭಾರತ ಮಟ್ಟದ ರಾಮಾಯಣದಂತೆ ರಾಮ ತನ್ನ ಅಪಹೃತ ಪತ್ನಿಗಾಗಿ ಲಂಕೆಗೆ ಹೋಗುವುದಿಲ್ಲ,ಬದಲಾಗಿ ರಾವಣನ ಒಂಟೆಗಳನ್ನು ಕದಿಯಲು ಹೋಗುತ್ತಾನೆ. ರಾಜಸ್ಥಾನದ ಮರಳುಗಾಡಿಗೆ ಒಂಟೆಗಳನ್ನು ತಂದ ಪಭುಜೀಯನ್ನು ಅಲ್ಲಿಯ ಜನರು ಆರಾಧಿಸುತ್ತಾರೆ. ರೋಬರಿ ಜನಾಂಗದ ಭೋಪ ತನ್ನ ಸಂಗಡಿಗರೊಂದಿಗೆ ಕಾವ್ಯವನ್ನು ಹಾಡುತ್ತಾನೆ.ಜೊತೆಗೆ ‘ಪಾಡ್’ ಎಂಬ ಪವಿತ್ರವಾದ ಚಿತ್ರಪಟವನ್ನು ಕಥಾ ನಿರೂಪಣೆಗೆ ಬಳಸುತ್ತಾರೆ.
![]() |
| Bhop singing Phabhuji's kavya (google pic) |
![]() |
| par or pad, a cloth painting used while singing Pabhuji;s kavya |
ರಾಮಾಯಣವನ್ನು ಹಿಂದೂ ಧರ್ಮದ ಅಧಿಕೃತ ಕಾವ್ಯವೆಂದು ಭಾವಿಸುವ ಸಂದರ್ಭದಲ್ಲಿ ಮತೀಯ ವ್ಯಾಪ್ತಿಯನ್ನು ಮೀರಿ ಅದು ಬೆಳೆದ ಬಗೆಯನ್ನು ಕೇರಳದ ಮಾಪಿಳ್ಳೆ ರಾಮಾಯಣದಲ್ಲಿ ನೋಡಬಹುದು. ಇದು ಮುಸಲ್ಮಾನ ಮಾಪಿಳ್ಳೆಗಳ ಜಾನಪದ ಹಾಡುಗಳಲ್ಲಿ ರಾಮ ಕಾಣಿಸಿಕೊಂಡ ಬಗೆ. ರಾಮನ ಹೆಸರನ್ನು "ಲಾಮನ್" ಎಂದು ಬದಲಿಸಿದ್ದಷ್ಟೇ, ಉಳಿದ ಪಾತ್ರಗಳು ಅಂತೆಯೇ ಇವೆ. ಮುಸ್ಲಿಂ ಮಾಪಿಳ್ಳೆಗಳ ಬದುಕು-ಸಂಸ್ಕøತಿಗೆ ಹೊಂದಿಕೊಳ್ಳುವಂತೆ ರಾಮಾಯಣ ಮರುರೂಪುಗೊಂಡಿದೆ, ಇದು ರಾಮನ ಹೆಸರಿನಲ್ಲಿ ನಡೆಯುವ ರಾಜಕೀಯ ಪ್ರೇರಿತ ಮತೀಯ ಸಂಘರ್ಷಗಳಿಗೆ ಮುಖಾಮುಖಿಗೊಳ್ಳುವ ಅಗತ್ಯತೆ ತುಂಬಾ ಇದೆ.
ರಾಮಾಯಣಕ್ಕಿಂತ ತುಸು ಹೆಚ್ಚು ಜನಮಾನಸವನ್ನು ಹೊಕ್ಕಿರುವ ಕಾವ್ಯ ಮಹಾಭಾರತ. ಅದಕ್ಕೆ ಅದರ ಸರ್ವ ರಸೋದಯ ಕಾರಣವೇನೋ…. ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಪ್ರಸಿದ್ಧ ಜಾನಪದ ವಿದ್ವಾಂಸ ಎನ್.ಆರ್.ನಾಯಕರು ಸಂಪಾದಿಸಿದ ‘ಗ್ರಾಮೊಕ್ಕಲ ಮಹಾಭಾರತ’ ಕರಾವಳಿ ಕರ್ನಾಟಕ ಭಾಗದಲ್ಲಿರುವ ಗ್ರಾಮೊಕ್ಕಲು ಸಮುದಾಯದ ಭಾರತ. ಇದರಲ್ಲಿ ಧರ್ಮರು, ಗೀಚಕ(ಕೀಚಕ), ಸುಭದ್ರೆ,ಲಕ್ಷ್ಮಣ,ಅರ್ಜುನ,ಕುಸುಮಾಲಿ(ಚಿತ್ರಾಂಗದೆ),ಕನಕಾಂಗಿ ಕಲ್ಯಾಣ,ಅಭಿಮನ್ಯು ಹಾಗೂ ಸಾವಿತ್ರಿ ಹೀಗೆ ಒಂಬತ್ತು ಬಿಡಿ ಕಥನಗಳಿವೆ.ಈ ಮಹಾಭಾರತ ಅನಕ್ಷರಸ್ಥ ಜನರ ಮೂಲಕ ಮೌಖಿಕವಾಗಿ ಹರಿದು ಬಂದಿದೆ.
ಈ ಮಹಾಭಾರತದಲ್ಲಿ ಪಾಂಡವರನ್ನು ಸೋಲಿಸಿದ ದುರ್ಯೋಧನನನ್ನು ದ್ರೌಪದಿಯು ಪಗಡೆಯಾಟದಲ್ಲಿ ಗೆಲ್ಲುತ್ತಾಳೆ. ದ್ರೌಪದಿ ಕರ್ಣನ ನೆರವಿನಿಂದ ನಾರಾಯಣ ದೇವರ ಪಗಡೆ ಮಣೆಯನ್ನು ತರಿಸಿ ಕೌರವನ ಮೋಸದ ಮಣೆಯನ್ನು ಬದಲಿಸುತ್ತಾಳೆ. ಪಗಡೆಯಾಡುವಾಗ ಗಾಳಿ ಬೀಸಿ ದ್ರೌಪದಿಯ ಸೆರಗು ಜಾರಿ, ಇದರಿಂದ ಚಿತ್ತ ಚಂಚಲಗೊಂಡ ಕೌರವ ಸೋಲುತ್ತಾನೆ. ಕಾವ್ಯದಲ್ಲಿ ಕರ್ಣನ ಧರ್ಮಬೀರುತನ, ಸಹೋದರತ್ವ, ನೈತಿಕತೆ ಸುಂದರವಾಗಿ ವ್ಯಕ್ತಗೊಂಡಿದೆ. ಇತರರಂತೇ ದುರ್ಯೋಧನನು ಇವನನ್ನು ಸೂತನೆಂದು ಕರೆಯುವ ನವೀನ ಆಶಯ ಇದೆ. ದ್ರೌಪದಿ ವಸ್ತ್ರಾಪಹರಣದಂತಹ ಅನೈತಿಕ ಪ್ರಸಂಗವನ್ನು ನಿರೂಪಕ ಬದಲಿಸಿದ್ದಾನೆ. ಪಗಡೆಯಾಟದಲ್ಲಿ ದ್ರೌಪದಿ ಗೆದ್ದರೂ ಈ ಮಹಾಭಾರತದಲ್ಲಿ ಪಾಂಡವರನ್ನು ಸೋಲಿಸಿದ ದುರ್ಯೋಧನನನ್ನು ದ್ರೌಪದಿಯು ಪಗಡೆಯಾಟದಲ್ಲಿ ಗೆಲ್ಲುತ್ತಾಳೆ. ದ್ರೌಪದಿ ಕರ್ಣನ ನೆರವಿನಿಂದ ನಾರಾಯಣದೇವರ ಪಗಡೆ ಮಣೆಯನ್ನು ತರಿಸಿ ಕೌರವನ ಮೋಸದ ಮಣೆಯನ್ನು ಬದಲಿಸುತ್ತಾಳೆ. ಪಗಡೆಯಾಡುವಾಗ ಗಾಳಿ ಬೀಸಿ ದ್ರೌಪದಿಯ ಸೆರಗು ಜಾರಿ,ಇದರಿಂದ ಚಿತ್ತ ಚಂಚಲಗೊಂಡ ಕೌರವ ಸೋಲುತ್ತಾನೆ. ಕಾವ್ಯದಲ್ಲಿ ಕರ್ಣನ ಧರ್ಮ ಬೀರುತನ, ಸಹೋದರತ್ವ, ನೈತಿಕತೆ ಸುಂದರವಾಗಿ ವ್ಯಕ್ತಗೊಂಡಿದೆ.ಇತರರಂತೇ ದುರ್ಯೋಧನನೂ ಇವನನ್ನು ಸೂತನೆಂದು ಕರೆಯುವ ವನವಾಸಕ್ಕೆ ಕಾರಣ ಅಸ್ಪಷ್ಟ
ಈ ಮಹಾಭಾರತದಲ್ಲಿ ‘ಸುಭದ್ರೆಯ ಹಾಡು’ ಅಭಿಜಾತ ಮಹಾಭಾರತಕ್ಕಿಂತ ಭಿನ್ನ . ಜೋಗಿಯಾಗಿ ಬಂದು ಭಿಕ್ಷೆಗಾಗಿ ಪೀಡಿಸುವ ಅರ್ಜುನನ ಉಪಟಳವನ್ನು ತಾಳಲಾರದೆ ಸುಭದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದು,ಅರ್ಜುನ ತನ್ನ ನಾಗರ ಬೆತ್ತ- ಅಮೃತ ನೀರಿನಿಂದ ಬದುಕಿಸುವ ವಿಶಿಷ್ಟ ಪ್ರಕರಣಗಳು ಇದರಲ್ಲಿವೆ.ಅರ್ಜುನ ಚದುರಂಗಿ ಕುಸುಮಾಲಿಯನ್ನು ಮದುವೆಯಾಗಿ ಹನ್ನೆರಡು ವರ್ಷದ ನಂತರ ಜೋಗಿ ವೇಷಧಾರಿಯಾಗಿ ಬಂದು ಪರೀಕ್ಷಿಸಿ ಹಸ್ತಿನಾವತಿಗೆ ಕರೆದೊಯ್ಯುವ ಪ್ರಸಂಗ ಇದರಲ್ಲಿ ಮಾತ್ರ ಕಾಣಸಿಗುತ್ತದೆ.
ಮಧ್ಯಭಾರತದ ಗೊಂಡರಲ್ಲಿ ಪ್ರಸಿದ್ಧವಾದ ‘ ಭೀಮ ಸಿದಿ’ ಕಥನ ಕಾವ್ಯದಲ್ಲಿ ಭೀಮನೇ ವಸ್ತ್ರಾಪಹರಣ ಮಾಡುವವನು.ಸುಂದರಿಯರನ್ನು ನೋಡುವಾಗ ತನ್ನ ತಂದೆ ಪವನಾರನನ್ನು ಪ್ರಾರ್ಥಿಸುತ್ತಾನೆ. ತಂದೆ ಜೋರಾಗಿ ಗಾಳಿ ಬೀಸಿ ಹೆಂಗಳೆಯರು ಬಟ್ಟೆ ಹಾರಿಸುತ್ತಾನೆ. ಗೊಂಡರಿಗೆ ಭೀಮ ಫಲವಂತಿಕೆಯ ದೈವ, ಮಳೆ ತರುವವನು.
ಛತ್ತೀಸಘಡದ ಕಥನವೊಂದರಲ್ಲಿ ಕೃಷ್ಣ ಬಾಣ ಹರಿತಗೊಳಿಸುವಾಗ ಕೈ ಬೆರಳಿಗೆ ಗಾಯ ಮಾಡಿಕೊಳ್ಳುತ್ತಾನೆ. ಆಗ ದ್ರೌಪದಿ ತನ್ನ ಸೆರಗಿನ ಬಟ್ಟೆ ತುಂಡೊಂದನ್ನು ಹರಿದು ಅವನ ಬೆರಳಿಗೆ ಕಟ್ಟುತ್ತಾಳೆ. ಇನ್ನೊಂದು ಕಥನದಲ್ಲಿ ಪಾಂಡವರೊಂದಿಗೆ ಕೃಷ್ಣ ಈಜಾಡುವಾಗ ತನ್ನ ಲಂಗೋಟಿಯನ್ನು ಕಳೆದುಕೊಳ್ಳುತ್ತಾನೆ. ಆಗ ದ್ರೌಪದಿ ತನ್ನ ಸೆರಗಿನ ತುಂಡೊಂದನ್ನು ನೀಡುತ್ತಾಳೆ. ಈ ಉಪಕಾರವನ್ನು ಅಕ್ಷಯಾಂಬರ ವಿಲಾಸದಲ್ಲಿ ತೀರಿಸುತ್ತಾನೆ.
ಮಹಾಭಾರತದ ಪ್ರಮುಖ ಪಾತ್ರ ದ್ರೌಪದಿಯು ತಮಿಳುನಾಡಿನಲ್ಲಿ ದೈವವಾಗಿ ಆರಾಧಿಸಲ್ಪಡುತ್ತಾಳೆ. ಕೊಯಮ್ಬತ್ತೂರಿನ ‘ಅರವನ್ ಜಾತ್ರೆ’ ಯಲ್ಲಿ ಇವಳು ಒಂದು ದೈವ. ಕೃಷ್ಣ ಮೋಹಿನಿಯಾಗಿ ಆರವನ್ ನನ್ನು ಮದುವೆಯಾದ ದಿನದಂದು ಈ ಜಾತ್ರೆ ನಡೆಯುತ್ತದೆ. ಇದರಲ್ಲಿ ತೃತೀಯ ಲಿಂಗಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಆರವನ್ ಉಲೂಪಿಯ ಮಗ ಇರಾವಂತನೆಂಬ ವಾದ ವಿದ್ವಾಂಸರದ್ದು. ತಮಿಳುನಾಡಿನ ನೃತ್ಯ ಪ್ರಕಾರ ‘ತೆರಕೂತ್ತು’ವಿನಲ್ಲಿ ಮಹಾಭಾರತದ ಪ್ರಸಂಗಗಳಿವೆ.
![]() |
| Aravan's fair anf priest taking mangalya of a transgender after the death of Aravan |
ತೆಲುಗಿನ ಮಹಾಭಾರತದಲ್ಲಿ ಪಾಂಡವರು ತಾವು ಚಿರಂಜೀವಿಗಳಾಗಲು ತಂದೆ ಪಾಂಡುವಿನ ಹೆಣವನ್ನು ತಿನ್ನುವ ಪ್ರಸಂಗವಿದ್ದು, ಇದನ್ನು ಕೃಷ್ಣ ತಪ್ಪಿಸುತ್ತಾನೆ. ಗ್ರಾಮೊಕ್ಕಲು ಮಹಾಭಾರತದಂತೆ ಇಲ್ಲೂ ದ್ರೌಪದಿ ಕೌರವನೊಂದಿಗೆ ಪಗಡೆಯಾಡುತ್ತಾಳೆ, ಆದರೆ ಕಾಲ ಬೆರಳಿನಲ್ಲಿ!
ಭಾರತದ ಅನೇಕ ಜನಾಂಗಗಳು ಮಹಾಭಾರತದ ಪಾತ್ರಗಳನ್ನು ತಮ್ಮ ಪೂರ್ವಜರೆಂದು ಬಗೆಯುತ್ತವೆ.ಹಿಮಾಚಲಪ್ರದೇಶದ ‘ಮಂಡಿ’ಯಲ್ಲಿ ಹಿಡಿಂಬೆಯ ದೇಗುಲವಿದೆ. ಉತ್ತರಾಖಾಂಡದಾದ್ಯಂತ ಇರುವ ಗಿಡ್ಡಿ ಜನಾಂಗೀಯರಿಗೆ ಜರಾಸಂಧ ದೈವ! ರಾಜಸ್ಥಾನದ ಜೋದಾಪುರದಲ್ಲಿ ಮುದ್ಗಲ್ ಗೋತ್ರದ ದವೆ ಬ್ರಾಹ್ಮಣರು ತಮ್ಮನ್ನು ರಾವಣನ ವಂಶಸ್ಥರೆಂದು ಕರೆಸಿಕೊಂಡು ಅವನಿಗೆ ದೇವಾಲಯ ನಿರ್ಮಿಸಿ ಆರಾಧಿಸುತ್ತಾರೆ.
ಹಿಮಾಚಲಪ್ರದೇಶದ ಕಿನ್ನೂರು ಪ್ರದೇಶದ ನಿರೂಪಣೆಯೊಂದರ ಪ್ರಕಾರ ಕುಂತಿಗೆ ಮಂಗಗಳನ್ನು ನೋಡಿ ಮಗುವಿನ ಬಯಕೆಯಾಗಿ ‘ಋಷಿ ಮಾಮ’ನ ಸೇವೆ ಮಾಡಿ ಮಕ್ಕಳನ್ನು ಪಡೆಯುತ್ತಾಳೆ.ಇಲ್ಲಿ ಬೆಟ್ಟದ ಮೇಲೆ ವಾಸಿಸುವ ಪಾಂಡವರಿಗೂ ಕೆಳಗೆ ವಾಸಿಸುವ ಕೌರವರಿಗೂ ನೀರಿಗಾಗಿ ಜಗಳವಾಗುತ್ತದೆ. ಅಸ್ಸಾಂನ ಜನರು ರುಕ್ಮ, ಭಗದತ್ತ,ಬಾಣಾಸುರರನ್ನು ತಮ್ಮ ಪೂರ್ವಜರೆಂದು ಭಾವಿಸುತ್ತಾರೆ. ಕೃಷ್ಣನ ಪತ್ನಿ ರುಕ್ಮಿಣಿ ಬೋಡೋಗಳ ಕನ್ಯೆ!!!
ಭಾರತದಲ್ಲಿ ಅನೇಕ ಸ್ಥಳನಾಮಗಳು ಮಹಾಭಾರತ ರಾಮಾಯಣ ಕೇಂದ್ರಿತವಾಗಿವೆ. ಪಾಂಡವರ ಗುಡ್ಡ, ಪಾಂಡವಪುರ, ಪಾಂಡವ ಪಣೆ, ಹಂಪಿಯ ಸೀತೆಯ ಸೆರಗು, ಭೀಮನ ಕಲ್ಲು ಇತ್ಯಾದಿ. ಸಾಮಾನ್ಯ ಮಾನವ ಮಾಡಲಾಗದ ಅಸಾಮಾನ್ಯ, ಅತಿಮಾನುಷ ಕಾರ್ಯಗಳನ್ನು ಪುರಾಣ ಪಾತ್ರಗಳಿಗೆ ಆರೋಪಿಸುವುದು ಜನಸಮುದಾಯದ ಸಾಮಾನ್ಯ ನಂಬಿಕೆ. ಯಾರೂ ಎತ್ತಲಾಗದ ಭಾರೀ ಗಾತ್ರದ ಕಲ್ಲು ‘ ಭೀಮನ ಕಲ್ಲು’ ಆಗುವುದು ಭೀಮನ ದೇಹ ದಾಢ್ಯತೆಯ ಅರಿವು ಇರುವುದರಿಂದ.ಅನೇಕ ಗ್ರಾಮಗಳು ತಮ್ಮ ಊರಿನ ಐತಿಹ್ಯವನ್ನು ಪಾಂಡವರ ವನವಾಸದೊಂದಿಗೆ ಸಂಬಂಧ ಕಲ್ಪಿಸಿಕೊಳ್ಳುತ್ತವೆ.ನನ್ನ (ಚರಣ್) ಊರು ಐವರ್ನಾಡಿಗೆ ಪಾಂಡವರು ಬಂದಿದ್ದರು, ಅವರು ಸ್ಥಾಪಿಸಿದ ಲಿಂಗಗಳೇ ಪಂಚಲಿಂಗೇಶ್ವರ ಎಂಬ ಐತಿಹ್ಯವಿದ್ದು ಇದೊಂದು ವಿಶ್ಲೇಷಣಾರ್ಹ ವಿಚಾರ.
ಕರ್ನಾಟಕದ ನೀಲಗಾರ ಸಮುದಾಯದ ‘ಕೊಂತ್ಯಂಮ್ಮನ ಹಾಡು’ ಪಾಂಡವರು ಹಾಗೂ ಕುಂತಿಯ ಬಡತನದ ಮೂಲಕ ಸಮುದಾಯದ ಬಡತನವನ್ನು ತೆರೆದಿಡುವ ವಿಶಿಷ್ಟ ಪರಿಕಲ್ಪನೆ.
ಜನಪದರು ಮೌಖಿಕ ಪರಂಪರೆಯ ಮೂಲಕ ಉಳಿಸಿಕೊಂಡು ಬಂದಿರುವ ರಾಮಾಯಣ, ಮಹಾಭಾರತಗಳು ವಾಸ್ತವಕ್ಕೆ ನಿಕಟವಾದುವು. ಆ ಸಮುದಾಯದ ಬದುಕನ್ನು ಅವು ತೆರೆದಿಡುತ್ತವೆ. ನಾವು ಜನಪದ ಮಹಾ ಕಾವ್ಯಗಳ ಮೂಲಕ ಇತಿಹಾಸವನ್ನು ನೋಡುವ ಬದಲಾಗಿ ಆ ಸಮುದಾಯದ ವಿಕಾಸವನ್ನು ಅಧ್ಯಯನ ಮಾಡಬಹುದು.ಹಾಗಾಗಿ ಇಲ್ಲಿ ಕಾಲ ಕಾಲಕ್ಕೆ ಅವುಗಳ ಸಮಗ್ರ ದಾಖಲಾತಿಯ ಅಗತ್ಯವಿದೆ.
ರಾಮಾಯಣ, ಮಹಾಭಾರತಗಳು ರಾಷ್ಟ್ರ ದ ಸಂಸ್ಕೃತಿಯನ್ನು ನಿರೂಪಿಸುವ ಶಕ್ತಿಗಳು.ಇಲ್ಲಿ ಬಹುತ್ವಕ್ಕೆ ಎಡೆ ಮಾಡಿಕೊಡದೆ ಏಕತ್ವವನ್ನು ಬಲವಂತವಾಗಿ ತಂದರೆ ಕಾವ್ಯಗಳ ಅರ್ಥಾತ್ ಸಂಸ್ಕೃತಿಯ ಅವನತಿಯಾಗುತ್ತದೆ. ಸಮುದಾಯಗಳು ತಾವು ಯಾವೆಲ್ಲ ರೀತಿಯಲ್ಲಿ ಕಾವ್ಯಗಳನ್ನು ಬರೆದುಕೊಂಡಿವೆಯೋ ಅಂತೆಯೇ ಅವುಗಳೆಲ್ಲವೂ ಅಧಿಕೃತಗೊಳ್ಳುತ್ತವೆ. ಅವುಗಳನ್ನು ಮೂಲಪಠ್ಯದೊಂದಿಗೆ ಹೋಲಿಸಿ ತಿರಸ್ಕರಿಸುವ ಬದಲು ತೌಲಾನಿಕ ಅಧ್ಯಯನವಾಗಬೇಕು. ಖಿಗಿ ಮಾಧ್ಯಮಗಳಲ್ಲಿ ಬರುವ ಮಹಾಭಾರತ ಹಾಗೂ ರಾಮಾಯಣಗಳನ್ನು ನೋಡಿ ಜನಾಂಗವೊಂದು ತನ್ನ ಹಿರಿಯರು ಕಟ್ಟಿಕೊಟ್ಟ ಕಾವ್ಯಗಳು ತಪ್ಪು ಎಂದು ತಿರಸ್ಕಾರದ ಮನೋಭಾವನ್ನು ತಾಳಿದರೆ ಅದು ಸಾಂಸ್ಕೃತಿಕ ಅಧಃಪತನದ ಮುನ್ಸೂಚನೆ. ನಿಧಾನವಾಗಿ ನಡೆಯುವ ಈ ಏಕಸೂತ್ರೀಕರಣವು ಸ್ವಯಂ ಸಮರ್ಥ ಸ್ಥಾನೀಯ ಸಂಪ್ರದಾಯವನ್ನು ನಾಶಮಾಡುತ್ತದೆ. ಇದೇ ‘ನಗರ ಜೀವನದ ಮಾಧ್ಯಮಿಕ ವರ್ಗದ ಹೊಸ ಸಿಂಡಿಕೇಟೆಡ್ ಧರ್ಮ !!!!
ಚರಣ್ ಐವರ್ನಾಡು
ಪಾಲೆಪ್ಪಾಡಿ
ಸುಳ್ಯ ತಾಲೂಕು, ದ.ಕ







ಸಮಗ್ರ ಅದ್ಭುತ ಅಧ್ಯಯನಕ್ಕೆ ನಮನ
ಪ್ರತ್ಯುತ್ತರಅಳಿಸಿthank you...
ಪ್ರತ್ಯುತ್ತರಅಳಿಸಿ