ಸುಳ್ಯದ ಸ್ಥಳನಾಮಗಳು ಸುಳ್ಯದ ಸ್ಥಳನಾಮಗಳು ಚರಣ್ ಐವರ್ನಾಡು ದಿನ ಬಳಕೆಯಲ್ಲಿ ಅನೇಕ ಊರುಗಳ,ಸ್ಥಳಗಳ ಹೆಸರುಗಳನ್ನು ಬಳಸುತ್ತೇವೆ.ಕೆಲವು ಹೆಸರುಗಳು ಸುಲಭವಾಗಿ ಅರ್ಥವಾಗುವಂತಿದ್ದರೆ ಕೆಲವು ಅರ್ಥಹೀನ,ನಿಗೂಢ ಅನ್ನಿಸುತ್ತವೆ.ಈ ಹೆಸರುಗಳು ಹೇಗೆ ಬಂದಿರಬಹುದು? ಯಾರಿಟ್ಟರು? ಇವುಗಳ ಹಿಂದಿನ ರಹಸ್ಯವನ್ನರಿತಾಗ ಕಳೆದುಹೋಗಿರುವ ಪರಂಪರೆಯನ್ನು ಜ್ಞಾಪಿಸಿಕೊಂಡಾಗ ಶೋಧಿಸಿದ ಆನಂದ ನಮಗಾಗುತ್ತದೆ. ಸ್ಥಳ,ವ್ಯಕ್ತಿ,ವಸ್ತು,ಪ್ರಾಣಿ-ಪಕ್ಷಿ ಹಾಗೂ ಸಸ್ಯಗಳ ಹೆಸರನ್ನು ಸೂಚಿಸುವ ಪದಗಳು “ನಾಮಪದಗಳು”.ಇಲ್ಲಿ ಒಂದು ವಸ್ತು ಅಥವಾ ವ್ಯಕ್ತಿಯ ಹೆಸರು ಅಂಕಿತನಾಮಗಳಾದರೆ ಅದು ಅತಿ ಬಳಕೆಯಾದಾಗ ರೂಢನಾಮಗಳಾಗುತ್ತವೆ.ಈ ಅರ್ಥದಲ್ಲಿ ನಾವು ಬಳಸುವ ಸ್ಥಳ,ವಸ್ತು,ಪ್ರಾಣಿ-ಪಕ್ಷಿ ಹಾಗೂ ಸಸ್ಯಗಳ ಹೆಸರುಗಳು ಅಂಕಿತದಿಂದ ರೂಢಿಗೆ ಇಳಿದವು. ಹೆಸರಿಡುವ ಮೂಲ ಉದ್ದೇಶ ಗುರುತಿಸುವುದು identification ಹಾಗೂ ಪ್ರತ್ಯೇಕೀಕರಣ discrimination .ಇವಿಷ್ಟೇ ಉದ್ದೇಶಗಳಾಗಿರದೆ ಅವು ವ್ಯಕ್ತಿ-ವಸ್ತು-ಸ್ಥಳಗಳ ಸ್ವರೂಪ,ವೈಶಿಷ್ಟ್ಯತೆ,ಅಂತಃಸತ್ವವನ್ನು ಸಾರುತ್ತವೆ.ಒಟ್ಟಾರೆ ಒಂದು ಸ್ಥಳದ ಗುಣಸ್ವರೂಪದ ಬಗ್ಗೆ ವಾಕ್ಯಗಳಲ್ಲಿ ಹೇಳುವುದನ್ನು ಪದಕವೊಂದರಲ್ಲಿ ಹೇಳಿ ಮುಗಿಸುತ್ತದೆ.ಉದಾಹರಣೆಗೆ ಬೇಂಗದ ಮರಗಳು ಹೇರಳವಾಗಿರುವ ಕಾರಣ ಕಾಡಿಗೆ ಬೇಂಗಮಲೆ ಎಂಬ ಹೆಸರು ಬಂತು. ಒಂದು ಸ್ಥಳದ ಹೆಸರು ಹೇಗೆ ಹುಟ್ಟಿತು ಎಂಬುದನ್ನ...