ತುಳುನಾಡಿನ ದೈವಾರಾಧನೆಯಲ್ಲಿ ಗೌಡ ಜನಾಂಗದ ಪಾತ್ರ ಸಂಸ್ಕೃತಿ ಎಂಬುದು ಸಮೂಹ ಸಮ್ಮತ ಜೀವನ ಪದ್ಧತಿ. ಈ ಜೀವನ ಕ್ರಮದೊಳಗೆ ಸಮಾಜದ ಎಲ್ಲ ವರ್ಗಗಳೂ ನಿರ್ದಿಷ್ಟ ಪಾಲನ್ನು ಪಡೆದುಕೊಂಡಿರುತ್ತವೆ. ಹಾಗಾಗಿ ಪ್ರತಿವರ್ಗವೂ ಆ ಸಂಸ್ಕ್ರತಿಯ ಅವಿಭಾಜ್ಯ ಅಂಗಗಳು. ಅವುಗಳ ಸಂಪೂರ್ಣ ಪಾಲುದಾರಿಕೆ ಸಂಸ್ಕೃತಿಯೊಂದನ್ನು ಬಹುಮುಖಿಯಾಗಿ ರೂಪಿಸುತ್ತದೆ. ತುಳುವರ ದೈವಾರಾಧನೆಯೂ ತುಳುವ ಸಮಾಜದ ವಿವಿಧ ಜಾತಿಗಳ, ಸಮುದಾಯಗಳ ಭಾಗವಹಿಸುವಿಕೆಯಿಂದ ರೂಪುಗೊಂಡು ಬೆಳೆದು ಬಂದಿದೆ. ಧನಿಕ ವರ್ಗಗಳು ರಾಜಕೀಯ ಅಧಿಕಾರದಿಂದ ಸಮಾಜದ ವ್ಯವಸ್ಥೆಗಳ ಮೇಲೆ ಹಿಡಿತ ಸಾಧಿಸಿಕೊಂಡರೆ ಪುರೋಹಿತ ವರ್ಗ ಧಾರ್ಮಿಕ ಅಧಿಕಾರಗಳನ್ನು ಹೊಂದಿ ತುಳುವ ಸಮಾಜದ ಮೇಲ್ತುದಿಯಲ್ಲಿರುತ್ತಾರೆ. ತುಳುನಾಡಿನ ಸೀಮೆ, ಮಾಗಣೆ, ಗ್ರಾಮ, ಗುತ್ತು, ಬಾವ ಇವೆಲ್ಲವೂ ಜಾತಿ ಆಧಾರಿತ ಆಡಳಿತ ಘಟಕಗಳು. ಸೀಮೆ,ಮಾಗಣೆಗಳು ಜೈನರ ಕೈಯಲ್ಲಿದ್ದರೆ, ಗ್ರಾಮ-ಗುತ್ತುಗಳಲ್ಲಿ ಬಂಟರು ಕೆಲವೆಡೆ ಬಿಲ್ಲವರು ಮುಖ್ಯಸ್ಥರಾಗಿರುತ್ತಾರೆ. ಇವರಿಗೆ ಸಮಾನಾಂತರವಾಗಿ ಸುಳ್ಯ,ಪುತ್ತೂರು,ಬೆಳ್ತಂಗಡಿ ಭಾಗಗಳಲ್ಲಿ ಗೌಡ ಜನಾಂಗ ಬೆಳೆದು ಬಂದಿದೆ. ಆಶ್ಚರ್ಯವೆಂದರೆ ಯಜಮಾನ್ಯ ನೆಲೆಯಲ್ಲಿರುವ ಯಾವುದೇ ವರ್ಗಗಳೂ ತುಳುನಾಡಿನ ಮೂಲನಿವಾಸಿಗಳಲ್ಲ ಎಂಬುದು! ಈ ಎಲ್ಲಾ ಪ್ರಬಲ ವರ್ಗಗಳು ವಲಸೆ ಬಂದ ಸಮುದಾಯಗಳು. ಆದರೆ ಇವು ತಮ್ಮ ಮೂಲ ಸಂಸ್ಕೃತಿಯೊಂದಿಗೆ ತುಳುನ...