ಸುಳ್ಯದ ಸ್ಥಳನಾಮಗಳು
ಸುಳ್ಯದ ಸ್ಥಳನಾಮಗಳು
ಚರಣ್ ಐವರ್ನಾಡು
ದಿನ ಬಳಕೆಯಲ್ಲಿ ಅನೇಕ ಊರುಗಳ,ಸ್ಥಳಗಳ ಹೆಸರುಗಳನ್ನು ಬಳಸುತ್ತೇವೆ.ಕೆಲವು ಹೆಸರುಗಳು ಸುಲಭವಾಗಿ ಅರ್ಥವಾಗುವಂತಿದ್ದರೆ ಕೆಲವು ಅರ್ಥಹೀನ,ನಿಗೂಢ ಅನ್ನಿಸುತ್ತವೆ.ಈ ಹೆಸರುಗಳು ಹೇಗೆ ಬಂದಿರಬಹುದು? ಯಾರಿಟ್ಟರು? ಇವುಗಳ ಹಿಂದಿನ ರಹಸ್ಯವನ್ನರಿತಾಗ ಕಳೆದುಹೋಗಿರುವ ಪರಂಪರೆಯನ್ನು ಜ್ಞಾಪಿಸಿಕೊಂಡಾಗ ಶೋಧಿಸಿದ ಆನಂದ ನಮಗಾಗುತ್ತದೆ.
ಸ್ಥಳ,ವ್ಯಕ್ತಿ,ವಸ್ತು,ಪ್ರಾಣಿ-ಪಕ್ಷಿ ಹಾಗೂ ಸಸ್ಯಗಳ ಹೆಸರನ್ನು ಸೂಚಿಸುವ ಪದಗಳು “ನಾಮಪದಗಳು”.ಇಲ್ಲಿ ಒಂದು ವಸ್ತು ಅಥವಾ ವ್ಯಕ್ತಿಯ ಹೆಸರು ಅಂಕಿತನಾಮಗಳಾದರೆ ಅದು ಅತಿ ಬಳಕೆಯಾದಾಗ ರೂಢನಾಮಗಳಾಗುತ್ತವೆ.ಈ ಅರ್ಥದಲ್ಲಿ ನಾವು ಬಳಸುವ ಸ್ಥಳ,ವಸ್ತು,ಪ್ರಾಣಿ-ಪಕ್ಷಿ ಹಾಗೂ ಸಸ್ಯಗಳ ಹೆಸರುಗಳು ಅಂಕಿತದಿಂದ ರೂಢಿಗೆ ಇಳಿದವು.
ಹೆಸರಿಡುವ ಮೂಲ ಉದ್ದೇಶ ಗುರುತಿಸುವುದು identification ಹಾಗೂ ಪ್ರತ್ಯೇಕೀಕರಣ discrimination.ಇವಿಷ್ಟೇ ಉದ್ದೇಶಗಳಾಗಿರದೆ ಅವು ವ್ಯಕ್ತಿ-ವಸ್ತು-ಸ್ಥಳಗಳ ಸ್ವರೂಪ,ವೈಶಿಷ್ಟ್ಯತೆ,ಅಂತಃಸತ್ವವನ್ನು ಸಾರುತ್ತವೆ.ಒಟ್ಟಾರೆ ಒಂದು ಸ್ಥಳದ ಗುಣಸ್ವರೂಪದ ಬಗ್ಗೆ ವಾಕ್ಯಗಳಲ್ಲಿ ಹೇಳುವುದನ್ನು ಪದಕವೊಂದರಲ್ಲಿ ಹೇಳಿ ಮುಗಿಸುತ್ತದೆ.ಉದಾಹರಣೆಗೆ ಬೇಂಗದ ಮರಗಳು ಹೇರಳವಾಗಿರುವ ಕಾರಣ ಕಾಡಿಗೆ ಬೇಂಗಮಲೆ ಎಂಬ ಹೆಸರು ಬಂತು.
ಒಂದು ಸ್ಥಳದ ಹೆಸರು ಹೇಗೆ ಹುಟ್ಟಿತು ಎಂಬುದನ್ನು ಅರಿಯಲು ಆ ಜಾಗದ ಭೌಗೋಳಿಕ ಸ್ಥಿತಿಗತಿ,ವೈಶಿಷ್ಟ್ಯಗಳನ್ನು ಗಮನಿಸಬೇಕಾಗುತ್ತದೆ.ಆ ಲಕ್ಷಣಗಳೇ ಸ್ಥಳವನ್ನು ಇತರ ಎಡೆಗಳಿಂದ ಪ್ರತ್ಯೇಕಿಸುತ್ತವೆ.ಅವು ನಿರ್ಧಿಷ್ಟ ವ್ಯಕ್ತಿಯಿಂದ,ಕುಲದಿಂದ,ಆರಾಧನಾ ಕೇಂದ್ರಗಳಿಂದ,ಚಾರಿತ್ರಿಕ ವ್ಯಕ್ತಿಗಳಿಂದ,ಘಟನೆಗಳಿಂದ ತದ್ಭವಿಸಿರಬಹುದು.
ಅಲೆಮಾರಿಯಾಗಿದ್ದ ಆದಿ ಮಾನವ ಸಾಂಘಿಕ ಬದುಕಿನ ಅಗತ್ಯತೆಯನ್ನು ಕಂಡುಕೊಂಡಾಗ ಊರುಗಳು ಹುಟ್ಟಿದವು.”ಆದಿಮಾನವ ಸಂಚಾರಿಯಾಗಿದ್ದು ಪಶುಪಾಲನೆಯನ್ನು ಕೈಗೊಂಡ ಮೇಲೆ,ಅಥವಾ ಆ ಸುಮಾರಿನ ಕಾಲದಲ್ಲಿ,ತಾತ್ಪೂರ್ತಿಕವಾಗಿ ಒಂದೊಂದು ಎಡೆಗಳಲ್ಲಿ,ಅನುಕೂಲಕರ ಸ್ಥಳವನ್ನು ಅರಸುತ್ತಾ ನಿಂತಾಗ ಹುಟ್ಟಿಕೊಂಡ ಇಂಥ ‘ಹಟ್ಟಿ’ಗಳು ಸ್ಥಳನಾಮಗಳಲ್ಲೇ ಅತ್ಯಂತ ಪ್ರಾಚೀನ ಘಟಕಗಳು ಎನ್ನಲಾಗಿದೆ.ಮಾನವಶಾಸ್ತ್ರದ ಪ್ರಕಾರ ಈ ಸಿದ್ಧಾಂತವನ್ನು ಒಪ್ಪಬಹುದಾಗಿದೆ.ಒಂದು ಕಡೆ ನಿಲ್ಲುವ(ನೆಲೆ),ಭದ್ರವಾಗಿ ಬೇರೂರುವ(ಊರು),ವ್ಯವಸಾಯದೊಂದಿಗೆ(ಗದ್ದೆ,ಕ್ಷೇತ್ರ,ಹೊಳೆ,ಏರಿ,ಆರ,ಆಲ,ಕಟ್ಟೆ),ಆಸರೆ ನಿರ್ಮಿಸಿಕೊಳ್ಳುತ್ತಾ (ಮನೆ,ಹಳ್ಳಿ,ಗ್ರಾಮ,ಪೇಟೆ,ಪತ್ತನ,ಆವರ)-ಹೀಗೆ ಹಲವಾರು ಜೀವನ ವಿಕಾಸದ ಚಾರಿತ್ರಿಕ ವ್ಯವಸ್ಥೆ stage ಗಳನ್ನು ದಾಟಿಕೊಂಡು ಈ ವೃತ್ತಾಂತ ಸ್ಥಳನಾಮಗಳಲ್ಲಿ ಹರಳುಗಟ್ಟಿದೆ;ಆಳವಟ್ಟಿದೆ”(ಜೋಶಿ,ಶಂ.ಬಾ.,ಎಡೆಗಳು ಹೇಳುವ ಕರುನಾಡ ಕತೆ,ಪು.ಸಂ34-40)ಪಾಡಿಗಳು, ನಂದಗ್ರಾಮಗಳು,ಕುರಿಗ್ರಾಮಗಳು,ಪೇರ್ ಗ್ರಾಮಗಳೆಲ್ಲ ಪಶುಸಂಗೋಪನೆಯನ್ನೇ ಸೂಚಿಸುತ್ತದೆ.ಉದಾಹರಣೆಗಳು-ಪೇರಜ್ಜ,ನಂದಳಿಕೆ,ಪೆರಾಜೆ,ಕುರಿಯ,ಪೇರಡ್ಕ ಪೆರುವಾಜೆ ಇತ್ಯಾದಿಗಳು.
ಸುಳ್ಯದ ಅನೇಕ ಸ್ಥಳಗಳು ಪಾಡಿಯಿಂದ ಅಂತ್ಯಗೊಳ್ಳುತ್ತವೆ.ಜೋಶಿಯವರ ಅಭಿಪ್ರಾಯದಂತೆ ಇವು ‘ಹಟ್ಟಿಕಾರರ ವಾಸದ ಎಡೆಗಳು’.ಕ್ರಮೇಣ ಪಾಡಿಗಳು ಗ್ರಾಮ-ಊರುಗಳೆಂಬ ಅರ್ಥಗಳಿಗೆ ಸಂವಾದಿಯಾಗಿ ಬೆಳೆದಿರಬೇಕು.ಕೆಲವು ಹೆಸರುಗಳಲ್ಲಿ ಪಾಡಿಯು ಬಾಡಿ-ವಾಡಿಯಾಗಿದೆ.(ಬಾಡಿ-ವಾಡಿ-ಪಾಡಿ ವಾಟ)ಕೆದಂಬಾಡಿ,ಕರ್ಲಪ್ಪಾಡಿ,ಉದ್ದಂಪಾಡಿ,ಅಂಬಲ್ಪಾಡಿ,ರೆಂಜಲಾಡಿ,ಅಚ್ರಪ್ಪಾಡಿ,ಕಂದ್ರಪ್ಪಾಡಿ,ಮಡಪ್ಪಾಡಿ,ಪಾಲೆಪ್ಪಾಡಿ,ಕೋಡಿಂಬಾಡಿ,ತಂಟೆಪಾಡಿ,ಪಾರೆಪ್ಪಾಡಿ,ನೀರ್ಪಾಡಿ,ಎರ್ಕಲ್ಪಾಡಿಇತ್ಯಾದಿ.’ನಮ್ಮ ನಾಡಿನ ಎಲ್ಲೆಡೆಗಳಲ್ಲೂ ಇರುವ ಈ ಹಾಡಿಗಳು ಒಂದು ಕಾಲದಲ್ಲಿ ಇಲ್ಲಿ ನೆಲೆಮಾಡಿಕೊಂಡಿದ್ದ ಕಂನಾಡಿನ ಹಟ್ಟಿಕಾರರ ಪಂಗಡವಾದ ತುರುಕಾರರ ಪ್ರಾಧಾನ್ಯತೆಯನ್ನು ಎತ್ತಿತೋರಿಸುತ್ತದೆ’(ಗುರುರಾಜಭಟ್ಟ,ಪಾದೂರು,2009,ಪು.ಸಂ:21)ಹಾಗಾಗಿ ಇವು ಬರಿಯ ಹೆಸರುಗಳಾಗಿರದೆ ಪರಂಪರೆಯ ಘಟಕ ಹಾಗೂ ವಾಹಕಗಳಾಗುತ್ತವೆ.
ಯಾರಿಟ್ಟರು ಈ ಹೆಸರುಗಳನ್ನು? ನಮಗೆ ನಾವೇ ಹೆಸರಿಟ್ಟುಕೊಳ್ಳುವುದು ಅಸಾಧ್ಯ.ಅದನ್ನು ನಮ್ಮ ಹಿರಿಯರು ಇಡುತ್ತಾರೆ.ಅಂತಯೇ ಒಂದು ಜಾಗದ ಜನರು ತಮ್ಮ ನೆಲೆಗೆ ತಾವೇ ಹೆಸರಿಡಲಾರರು.ಅವರು ಮಾತಿನಲ್ಲಿ ತಮ್ಮ ನೆಲೆಗಳನ್ನು ‘ನಮ್ಮಲ್ಲಿ’,’ಇಲ್ಲಿ’ ಎಂದೆಲ್ಲ ಸಂಬೋಧಿಸುತ್ತಾರೆ.ಆ ಸ್ಥಳದ ಹೆಸರನ್ನು ಪಕ್ಕದ ಊರವರು ಗುರುತಿಸಲು ಇಡುತ್ತಾರೆ.ಆಗ ಅವರು ಆ ಸ್ಥಳದ ಭೌಗೋಳಿಕ ಸ್ವರೂಪವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.ಕಾಲಾನುಗತಿಯಲ್ಲಿ ಆ ಹೆಸರಿನ ವ್ಯಾಪ್ತಿ ವಿಸ್ತಾರವಾಗುತ್ತದೆ.ಪಾಲೆಪ್ಪಾಡಿ(ಹಾಳೆಯ ಮರಗಳು ಹೇರಳವಾಗಿರುವ ಕಾರಣ)ಒಂದು ನಿರ್ಧಿಷ್ಟ ಸ್ಥಳವಾಗಿದ್ದು ಕ್ರಮೇಣ ಅದರ ಹರವನ್ನು ವಿಸ್ತರಿಸಿಕೊಂಡಿದೆ.ಕೆಲವೊಮ್ಮೆ ಅದು ಇಡೀ ಊರಿನ ಹೆಸರಾಗುವುದುಂಟು.
ಕೆಲವು ಹೆಸರುಗಳು ಅರ್ಥವನ್ನು ಕಳಕೊಂಡಂತೆ ಅನ್ನಿಸುತ್ತವೆ.ಅವು ಮೂಲದ್ರಾವಿಡ ಪದವಾಗಿರಬಹುದು.ಇಲ್ಲವೇ ಆ ಪದದ ಬಳಕೆ ಕಾಲಾನುಕ್ರಮದಲ್ಲಿ ನಿಂತುಹೋಗಿ ಅರ್ಥಹೀನವಾಗಿರಬಹುದು.ಉದಾ-ಪೈಕ,ಕುದುಂಗು,ನಿಡುಬೆ,ಜಬಳೆ..ಇತ್ಯಾದಿ
ಸ್ಥಳನಾಮಗಳಲ್ಲಿ ಎರಡು ಭಾಗಗಳಿರುತ್ತವೆ.ಪೂರ್ವಾರ್ಧ(prefix)ವಿಶೇಷಾರ್ಥವಾಗಿದ್ದರೆ ಉತ್ತರಾರ್ಧ(suffix)ಸಾಮಾನ್ಯಾರ್ಥಕ ಪದವಾಗಿರುತ್ತದೆ.ಹಾಗಾಗಿ ಬಹುತೇಕ ಸ್ಥಳನಾಮಗಳು ಸಮಸ್ತ ಪದಗಳು.ಒಂದು ಹೆಸರಿನಲ್ಲಿ ಪೂರ್ವಾರ್ಧವಾಗಿರುವುದು ಇನ್ನೊಂದರಲ್ಲಿ ಉತ್ತರಾರ್ಧವಾಗಿರಬಹುದು.ಉದಾಹರಣೆಗೆ:-ಕುಂಚಡ್ಕ-ಅಡ್ಕಾರು, ಬೆಟ್ಟಂಪಾಡಿ-ಮಾಣಿಬೆಟ್ಟು, ಪಂಜಿಕಲ್-ಕಲ್ಮಡ್ಕ. ಉತ್ತರಾರ್ಧಪದದ ಸ್ಥಳನಾಮಗಳು ಹಲವಾರಿದ್ದಾಗ ಆ ಜಾಗದ ಲಕ್ಷಣಗಳಿಗೆ ಅನುಗುಣವಾಗಿ ಪೂರ್ವಾರ್ಧವನ್ನು ಸೇರಿಸುತ್ತಾರೆ.ಊರಿನಲ್ಲಿ ಹಲವಾರು ವೆಂಕಪ್ಪನವರಿದ್ದಾಗ ಕುಳ್ಳವೆಂಕಪ್ಪ,ದೋಂಟವೆಂಕಪ್ಪೆ ಎಂದೆಲ್ಲಾ ಕರೆಯುತ್ತೇವಲ್ಲಾ? ಕೋಡಿ ಎಂಬ ಸ್ಥಳಗಳು ಹಲವಾರಿವೆ.ಅವುಗಳಿಂದ ಪ್ರತ್ಯೇಕಿಸಲು ದಂಬೆಕೋಡಿ,ಕಟ್ಟಕೋಡಿ,ದೆಂಗೋಡಿ,ಸುಳ್ಯಕೋಡಿ,ಕೀಲಂಗೋಡಿ ಹುಟ್ಟಿದವು.ಹಾಗಾಗಿ ಸ್ವತಂತ್ರ್ಯವಾಗಿ ಬಳಕೆಯಲ್ಲಿರುವ ಕೋಡಿ,ಅಡ್ಕ,ಕೋಟೆ,ಕಾವು,ಕಾನ,ಪಡ್ಪು,ಪಟ್ಟೆ,ಕಚೆ,ಸುಳ್ಯ(ಉತ್ತರಾರ್ಧ ಬಿದ್ದುಹೋಗಿರುವಂತಿದೆ-ಸೂಳೆಯ?!? ನೋಡಿ:ಸೂಳೆಯ ಪದವು-ಸುಳ್ಯಪದವು) ಕೂವೆ,ಕೊಪ್ಪ,ಅಳ್ಪೆ,ಅಳ್ಬೆ,ಜಾಕೆ ಇತ್ಯಾದಿಗಳು ಅತ್ಯಂತ ಪ್ರಾಚೀನ ಸ್ಥಳನಾಮಗಳು.ಮಿತ್ತೂರು,ಬಿದಿರೆಗಳು ಬೇರೆಡೆ ಇರುವುದರಿಂದ ಉಬರಡ್ಕಮಿತ್ತೂರು,ನೀರಬಿದಿರೆ ಹುಟ್ಟಿರಬೇಕು.
ಸ್ಥಳನಾಮಗಳ ವಿಧಗಳು
- ಪ್ರಾಣಿ ಮೂಲ:-ಪಂಜಿಗಾರ್, ಆನೆಮಲೆ, ಎರ್ಮೆಗುಳಿ,ಪಂಜಿಪಳ್ಳ,ಪಿಲಿಕಜೆ.ಪಂಜಿಪಳ್ಳ ಎಂದರೆ ಹಂದಿಗಳು ಈಜಾಡುವ ಕೆಸರಿನ ಹಳ್ಳ.ಆದರೆ ಪಂಜಿಕಲ್ಲಿನಲ್ಲಿ ಕಲ್ಲು ಮುಖ್ಯ.ಹಂದಿ ಇಲ್ಲಿ ವಿಶೇಷಣವಾಗುತ್ತದೆ.ಕಾಡು ಹಂದಿಯ ಗಾತ್ರದ ಕರ್ರಗಿನ ಕಲ್ಲು ಪಂಜಿಕಲ್ಲು!
- ಸಸ್ಯಮೂಲ:-ಪಾಲೆಪ್ಪಾಡಿ, ಮರ್ವತ್ತಡ್ಕ,ನೆಕ್ಕಿಲ, ಸಾಂತಿಮೂಲೆ,ಕುಕ್ಕುಡೇಲು,ನೆಕ್ರಪ್ಪಾಡಿ,ಪೆಲ್ತಡ್ಕ,ಬೆದ್ರಪಣೆ,ಕಾಯರ್ತೋಡಿ.
- ಧಾನ್ಯಮೂಲ:-ರಾಗಿಯಡ್ಕ,ಮೆತ್ತಡ್ಕ, ಚಾಮೆತ್ತಡ್ಕ,ಮುಚ್ಚಿನಡ್ಕ(ಮುಂಚಿ-ಮೆಣಸು)
- ಮೂಲನಿವಾಸಿಗಳಿಂದ:ಮಾಣಿಬೈಲು,ಪರಿವಾರ(ಅವಾರ),ಅಜ್ಜಾವರ,ಮಾಣಿಬೆಟ್ಟು,ಕಂದ್ರಪ್ಪಾಡಿ(ಕನ್ನರಪ್ಪಾಡಿ?!),ಅಚ್ರಪ್ಪಾಡಿ(ಅಚ್ಚ?!),ಕನ್ನಡ್ಕ(ಕನ್ನರು),ಬೆಳ್ಳಾರೆ,ಬೆಳ್ಳಿಪ್ಪಾಡಿ(ವೆಳ್ಳರು),ಕೊಲ್ಲಮೊಗ್ರ,ಮೊಗೇರಡ್ಕ(ಮುಗೇರರು),ಮಾಯ್ಲಡ್ಕ(ಮಾಯಿಲ), ಮಾಪ್ಲಡ್ಕ(ಮಾಪಿಳ್ಳೆ ಬ್ಯಾರಿಗಳಿಂದ),ಜೋಗಿಯಡ್ಕ. ಇವು ಆ ಜಾಗದಲ್ಲಿ ನೆಲೆಸಿದ್ದ ಪ್ರಾಚೀನ ಜನಾಂಗಗಳಿಂದ ಬಂದ ಹೆಸರುಗಳು.
- ದಿಕ್ಕುಗಳಿಂದ:ಅಮರಪಡ್ನೂರು,ಮೂಡುಗದ್ದೆ,ಪಡ್ಡಂಬೈಲು,ನಡುಮನೆ,ನಡುಮುಟ್ಲು,ನಡುಬೆಟ್ಟು ಇತ್ಯಾದಿ.
- ವಿಶೇಷಮನೆಗಳು:ಕಟ್ಟೆಮನೆ,ಉಗ್ರಾಣಿಮನೆ,ಮುಂಗ್ಲಿಮನೆ,ಪಿಂಡಿಮನೆ,ಪೂಜಾರಿಮನೆ,ಮಡ್ತಿಲ(ಮಾಡ್ ದ ಇಲ್),ಕೋಡ್ತಿಲ್(ಕೋಡಿತ ಇಲ್,ಈಗ ಬೈಲಿನ ಹೆಸರಾಗಿದೆ)ಪೀರಮನೆ,ದೊಡ್ಡಮನೆ,ದಂಡಿನಮನೆ, ಇತ್ಯಾದಿ.
- ವ್ಯಕ್ತಿವಿಶೇಷಣಗಳಿಂದ:-ದೇರಪ್ಪಜ್ಜನ ಮನೆ,ಕೋಟಿಗೌಡನ ಮನೆ,ನಾರ್ಣಕಜೆ,ಚುಕ್ರಡ್ಕ,ಕುಕ್ಕನ್ನೂರು,ಜತ್ತನಕೋಡಿ,ಕಾಳಮ್ಮನಮನೆ,ಸಂಬರಮೂಲೆ (ಶಂಭು ಅಯ್ಯರ ಮೂಲೆ) ಇತ್ಯಾದಿ.
- ಕುಟುಂಬಗಳ ಸಂಖ್ಯೆಗಳಿಂದ:-ಐವತ್ತೊಕ್ಲು,ಮಪ್ಪೇರ್ಯ,ಐವರ್ನಾಡು (ತೀರ ಇತ್ತೀಚಿನ ಹೆಸರಿರಬೇಕು)
- ಪ್ರಾಚೀನ-ಅರ್ವಾಚೀನ:-ಹೊಸಳಿಕೆ,ಹೊಸೊಕ್ಲು,ಹೊಸಗದ್ದೆ,ಹೊಸೂರು ಇತ್ಯಾದಿ.
ಸ್ಥಳನಾಮಗಳಲ್ಲಿ ಪ್ರಾಚೀನ ಜನಾಂಗಗಳು
ಒಂದು ಪ್ರದೇಶದಲ್ಲಿ ನೆಲೆಸಿದ್ದ ಜನಾಂಗಗಳಿಂದ ಆ ಸ್ಥಳಕ್ಕೆ ಹೆಸರು ಬರುವುದಿದೆ.ಕ್ರಮೇಣ ಆ ಜನಾಂಗಗಳು ನಶಿಸಿದರೂ ಸ್ಥಳನಾಮಗಳಲ್ಲಿ ಜೀವಂತವಾಗಿರುತ್ತವೆ.ಅವುಗಳಲ್ಲಿ ಕೋಲರು (ಕೋಳಿ ಜನಾಂಗ),ಮುಂಡರು,ಕನ್ನರು,ಮಲವ,ಮಾಯಿಲ,ವೆಲ್ಲಾಲ,ಮೊಗೇರರು ಪ್ರಮುಖರು.ಮಾಯಿಲರು ಅನೇಕ ಪ್ರದೇಶಗಳಲ್ಲಿ ಪ್ರಬಲ ಜನಾಂಗವಾಗಿದ್ದವರು.ಮಾಯಿಲರು ತಮ್ಮ ಜಾನಪದ ನಿರೂಪಣೆಗಳಲ್ಲಿ ಅವರು ರಾಜರಾಗಿದ್ದವರು ಎನ್ನುತ್ತಾರೆ.ಮಾಯಿಲಕೋಟೆ ಇದಕ್ಕೆ ನಿದರ್ಶನ.ತೀರ ಇತ್ತೀಚೆಗೆ ಅಡ್ಕಾರಿನ ಮಾಯಿಲರ ಕೋಟೆಗೆ ಅಂಜನಾದ್ರಿ(?!?) ಎಂದು ಮರುನಾಮಕರಣ ಮಾಡಲಾಗಿದೆ!ಕೊರಗರಿಗೂ ಹುಬಷಿಕ ಎಂಬ ರಾಜನಿದ್ದ!ಮುಂಡರು ಸುಳ್ಯದಲ್ಲಿ ನಶಿಸಿಹೋಗಿದ್ದರೂ ಮುಂಡಾಜೆ,ಪೆರುಮುಂಡ,ಮುಂಡ್ಕೂರು ಇತ್ಯಾದಿಗಳು ಇಂದೂ ಇವೆ.ಕೊಲ್ಲಮೊಗ್ರ,ಪಂಜಿಮೊಗ್ರ,ಮೊಗರ್ಪಣೆ ಇವು ಮೊಗೇರರ ಆವಾಸಗಳು.ಬೆಳ್ಳಾರೆ,ಬೆಳ್ಳಿಪ್ಪಾಡಿ,ಬೆಳ್ವಾಯಿ ಇವೆಲ್ಲ ಬೆಳ್ಳಾರ(ವೆಲ್ಲಾಲ)ರ ಮೂಲನೆಲೆಗಳಿರಬೇಕು.
ಬೆಳ್ಳಾರೆಯ ಮಾಸ್ತಿಕಟ್ಟೆ
ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಮಾಸ್ತಿಕಟ್ಟೆ ಎಂಬ ಸ್ಥಳವಿದೆ.ಅಲ್ಲೊಂದು ಒಕ್ಕೈ(ಒಂದು ಕೈ)ಮಾಸ್ತಿಕಲ್ಲು ಇತ್ತೆಂದು ಹೇಳುತ್ತಾರೆ.ಕೆಲವು ವರ್ಷಗಳ ಹಿಂದೆ ದುರುದ್ದೇಶದಿಂದ ಮೂರ್ಖರು ನಾಶಮಾಡಿದ್ದಾರೆ.ಮಹಾಸತಿ ಕಲ್ಲು ನಾಶವಾದರೂ ಮಾಸ್ತಿಕಟ್ಟೆ ಎಂಬ ಹೆಸರು ಚಾಲ್ತಿಯಲ್ಲಿದೆ.ಗಂಡನ ಉರಿವ ಚಿತೆಗೆ ಜನಸ್ತೋಮದ ಎದುರು ಹಾರಿ (ಬಲಾತ್ಕಾರದಿಂದ ಕೈಕಾಲು ಕಟ್ಟಿಯೂ) ಪ್ರಾಣಾರ್ಪಣೆ ಮಾಡುವ ಹೆಂಡತಿ ಮಹಾಸತಿಯಾಗುತ್ತಾಳೆ.ಅವಳ ನೆನಪಿಗೆ ಮಾಸ್ತಿಕಲ್ಲುಗಳನ್ನು ನೆಟ್ಟು ಆರಾಧಿಸುತ್ತಾರೆ.ಬೆಳ್ಳಾರೆಯಲ್ಲಿಸಿಕ್ಕದ ಉಬ್ಬಿದ ಸ್ಥನಗಳಿರುವ ಕಲಶಗಳು ಇವಕ್ಕೇ ಸಂಬಂಧಿಸಿದ್ದಿರಬೇಕು.
ಸ್ಥಳನಾಮಗಳಲ್ಲಿ ಆರಾಧನಾ ಕೇಂದ್ರಗಳು
ಬೊಮ್ಮೆಟ್ಟಿ,ಭಿರ್ಮಕಜೆ,ಬೆರ್ಮಕಂಡ,ದೇರಾಜೆ,ದೇವರಕಾನ,ಹರಿಹರ(ಅರ್ವಾಚೀನ),ದೇವರಗುಂಡ, ಕಣಿಲೆಗುಂಡಿ ಇತ್ಯಾದಿಗಳು ಪ್ರಾಚೀನ ಆರಾಧನಾ ಕೇಂದ್ರಗಳಿದ್ದ ಜಾಗಗಳು.ವೈದಿಕ ಧರ್ಮಗಳ ಆಗಮನಕ್ಕಿಂತ ಪೂರ್ವದಲ್ಲಿ ತುಳುನಾಡಿನಲ್ಲಿ ಬೆರ್ಮ,ಕಾಡ,ದೈವಗಳ,ನಾಗನ ಆರಾಧನೆಗಳಿದ್ದವು. ಆಲಡೆ,ಮೂಲತಾನ,ಚಿತ್ತೇರಿ,ಬೆರ್ಮನಗುಂಡ ಮೊದಲಾದ ಅನೇಕ ಅವೈದಿಕ ಆರಾಧನಾ ಕೇಂದ್ರಗಳು ವೈದಿಕರ ಪ್ರವೇಶದೊಂದಿಗೆ ದೇವಸ್ಥಾನಗಳಾಗಿ ಬದಲಾದವು.ಮಹಾಲಿಂಗೇಶ್ವರ,ಬ್ರಹ್ಮಲಿಂಗೇಶ್ವರಗಳು ಮೂಲತಃ ಆಲಡೆಗಳಾಗಿದ್ದು ದೇವಸ್ಥಾನಗಳಾಗಿ ಬದಲಾದರೂ ರಕ್ತಾಹಾರದ ದೈವಗಳು,ಲೆಕ್ಕೆಸಿರಿ,ನಂದಿಗೋಣ,ಮೈಸಂದಾಯ,ಪಂಜುರ್ಲಿ,ಮುಖ್ಯವಾಗಿ ಸಿರಿಪರಿವಾರ ಇತ್ಯಾದಿಗಳಿಗೆ ಅನೇಕ ಕಡೆ ಆರಾಧನೆಯಿದೆ.ಇಲ್ಲಿ ದೇವರಿಗೆ (ದೇವ-ಸಂಸ್ಕೃತ) ಸಂವಾದಿಯಾಗಿ ಬೆರ್ಮನ ಆರಾಧನೆ ನಡೆಯುತ್ತದೆ.(ಬಹುಶಃ ‘ಕಾಡ+ಕಡ’ ಎಂಬದು ಪೂರ್ವದ್ರಾವಿಡದಲ್ಲಿ ದೇವ ಎಂಬ ಅರ್ಥವನ್ನು ಕೊಡುತ್ತಿದ್ದಿರಬೇಕು!ನೋಡಿ-ಕಾಡ್ಯನಾಟ,ತಮಿಳಿನ ಕಡವುಲ್.ಇವನ ನೆಲೆ ಕಾಡು?!?) ಇವನು ವೈದಿಕ ಚತುರ್ಮುಖ ಬ್ರಹ್ಮನಲ್ಲ! ಬೆರುಮ-ಪೆರುಮ(ತಮಿಳು-ಪೆರುಮಾಳ್)ಗೆ ಹಿರಿಯವನು ಎಂಬ ಅರ್ಥ ಇದೆ.ನಾಗನೊಂದಿಗೆ ಕಾಲಾನಂತರದಲ್ಲಿ ಸಮೀಕರಿಸಿಕೊಂಡು ನಾಗಬೆರ್ಮನಾಗಿದ್ದಾನೆ.ಇವನ ಆರಾಧನೆಯ ನೆಲೆಗಳೇ ಆಲಡೆ,ಮೂಲತಾನ,ಬೆರ್ಮಸ್ಥಾನ, ಗುಂಡೊ,ಚಿತ್ತೇರಿಗಳು.ಬಹುತೇಕ ಇವು ಕಾಡಿನಲ್ಲಿದ್ದು ತುಳು ಮೂಲದ ಪ್ರತಿ ಜಾತಿಗೂ ಮೂಲತಾನವಿದೆ.ಸುಬ್ರಮಣ್ಯ ಮಲೆಕುಡಿಯರ ಮೂಲತಾನವಾಗಿರಬೇಕು.ಸುಳ್ಯಭಾಗದ ಗೌಡರು ಹಾಸನ-ಐಗೂರಿನಿಂದ ಆಗಮಿಸಿದವರಾಗಿದ್ದು (ಕ್ರಿ.ಶ.16)ಇವರಿಗೆ,ಮರಾಠಿ ನಾಯ್ಕರಿಗೆ ಮೂಲತಾನಗಳ ಕಲ್ಪನೆಯಿಲ್ಲ. ಇವರ ಸುಪರ್ದಿಗೆ ಜಾಗಗಳು ಬಂದಮೇಲೆ ಬೆರ್ಮನ ಆರಾಧನೆ ಬಹುತೇಕ ಕಡೆ ನಿಂತಿದೆ. ನನ್ನ ಊರಿನ ಭಿರ್ಮುಕಜೆ,ಬೊಮ್ಮೆಟ್ಟಿಯರಿಗೆ ಈ ಬಗ್ಗೆ ಅರಿವಿಲ್ಲ! ಆದರೆ ಸ್ಥಳನಾಮಗಳು ಅವುಗಳನ್ನು ಜೀವಂತವಾಗಿಟ್ಟಿವೆ. ಬಿರ್ಮುಕಜೆ-ಬೆರ್ಮೆರೆ ಕಜೆ,ಬೊಮ್ಮೆಟ್ಟಿಕಂಡ-ಬೆರ್ಮೆ ಇತ್ತಿ ಕಂಡ,ಬೆರ್ಮನ ಮನೆ ಇತ್ಯಾದಿ.
ದೇವ ಪದವು ಆದಿ ಮೂಲದ ದೈವಗಳ ನೆಲೆಯಿರಬೇಕು. ದೇವರಗುಂಡದಲ್ಲಿ ಗುಂಡ ಎಂಬುದು ಬೆರ್ಮನ ನೆಲೆಯಾದ್ದರಿಂದ ಈ ದೇವೆರ್ ಬೆರ್ಮನೇ ಇರಬೇಕು.(ಬೆರ್ಮೆರೆಗ್ ಗುಂಡೊ,ನಂದಿಗೋಣೆ ಲೆಕ್ಕೆಸಿರಿಗ್ ಬರಿಮಾಡೊ,ನಾಗೊಗು ಬನೊ-ಸಿರಿಪಾಡ್ದನ)ಬೆರ್ಮೆರೆಗುಂಡವೇ ದೇವರಗುಂಡವಾಗಿದೆ. ದೇರಾಜೆ-ದೇವೆರೆ ಕಜೆ,ದೇವರಕಾನ ಇತ್ಯಾದಿ.”ಗೋಂಡ್ವಾನ ಸಂಸ್ಕೃತಿ” ಎಂಬ ಪುಸ್ತಕದಲ್ಲಿ ಎಂ.ಆರ್.ಪಂಪನಗೌಡ ಎಂಬ ಸಂಶೋಧಕರೋರ್ವರು “ದೇವರಗುಂಡ” ಗೊಂಡ ಜನಾಂಗದಿಂದ ಬಂದಿದೆ ಎಂದಿದ್ದಾರೆ.ಇದು ಆಧಾರ ರಹಿತವಾದುದು! ಐವರ್ನಾಡಿನ ದೇರಾಜೆಯಲ್ಲಿ ಪಂಚಲಿಂಗೇಶ್ವರ ದೇವಾಲಯವಿದೆ.ಈ ದೇರಾಜೆಗೊಂದು ಆಧಾರರಹಿತವಾದ ಕಾಲ್ಪನಿಕ ಕತೆಯೊಂದನ್ನು ಇತ್ತೀಚಿಗೆ ಹೆಣೆಯಲಾಗಿತ್ತು.ದೇವರಾಜ ಎಂಬ ಬಲ್ಲಾಳನ ಅರಮನೆಯಿದ್ದರಿಂದ ದೇರಾಜೆಯಾಗಿದೆ ಎಂದು! ಸುಳ್ಯದ ಬೆಟ್ಟ ಕೋಳಿಕ್ಕಮಲೆಗೂ ಕೃಷ್ಣ ಪಾಂಡವರನ್ನು ಮೋಸಗೊಳಿಸಲು ಕೋಳಿಯಾಗಿ ನಿಂತು ಕೂಗಿದ ಜಾಗ ಎಂಬ ಕತೆಯಿದೆ.ಇದೊಂದು ವಿಶೇಷ ಅಧ್ಯಯನವಾಗಬಹುದು.
ಪಾಂಡವರ ತಾಣಗಳು ಅನೇಕ ಊರುಗಳಲ್ಲಿ ಪಂಚ ಪಾಂಡವರ ಹೆಸರುಗಳೊಂದಿಗೆ ತಳುಕುಹಾಕಿಕೊಂಡಿರುವ ಸ್ಥಳಗಳಿವೆ.ಪಾಂಡವರ ಅಗರು,ಭೀಮನಕಲ್ಲು,ಪಾಂಡವ ಪಣೆ,ಪಾಂಡವರ ಕೆರೆ ಇತ್ಯಾದಿ.ಐವರ್ನಾಡಿನ ಪಾಂಡವರ ಅಗಳು ಜಬಳೆಯೆಂಬಲ್ಲಿಂದ ಆರಂಭವಾಗಿ ಅಗರಿ ಎಂಬಲ್ಲಿ ಅಂತ್ಯವಾಗುವ ಬಹು ಉದ್ದದ ಕಂದಕ.ವನವಾಸದಲ್ಲಿ ಪಾಂಡವರು ಒಂದೇ ರಾತ್ರೆ ಒಂದು ಕೊಟ್ಟಿನ ಪೆಟ್ಟಿನಲ್ಲೇ ತೆಗೆದ ಅಗರ್ ಅನ್ನುವ ಐತಿಹ್ಯ!
ಭೀಮನಿಂದ ಮಾತ್ರ ಎತ್ತಲಾಗಬಲ್ಲ ಕಲ್ಲು ಭೀಮನ ಕಲ್ಲಾಯಿತು.ಅದರೊಂದಿಗೆ ಕೋಳಿಕ್ಕಮಲೆಯನ್ನು ಸೇರಿಸಿ ರಂಜನೆಯ ಕತೆ ಹೆಣೆಯಲಾಗಿದೆ.ಕೃಷ್ಣನ ಚಾಲೆಂಜ್ ನಂತೆ ಪಾಂಡವರು ಒಂದು ರಾತ್ರಿಯಲ್ಲೇ ಪಯಸ್ವಿನಿಗೆ ಕಲ್ಲ ಸೇತುವೆ ಕಟ್ಟ ಬೇಕಿತ್ತು.ಬೆಳಗಾಗುವ ಮುನ್ನವೇ ಈ ವೀರರು ಸೇತುವೆ ಕಟ್ಟುವುದನ್ನು ಮುಗಿಸುವುದನ್ನು ಕಂಡ ಕೃಷ್ಣ ಮೋಸದಿಂದ ಕೋಳಿಯಂತೆ ಕೂಗಿ ಬೆಳಗಾಯ್ತು ಎಂದು ಸೂಚಿಸುತ್ತಾನೆ.ಭೀಮ ಇನ್ನೇನು ಒಂದು ಕಲ್ಲಿಟ್ಟರೆ ಮುಗಿಯೋದಿತ್ತು! ತಾನು ಎತ್ತಿದ ಕಲ್ಲನ್ನು ಬದಿಗೆಸೆದು ಕೆಲಸವನ್ನು ಅರ್ಧಕ್ಕೆ ನಿಲ್ಲಿಸುತ್ತಾನೆ. ಆ ಕಲ್ಲೇ ‘ಭೀಮನಕಲ್ಲು’,ಕೃಷ್ಣ ಕೂಗಿದ ಬೆಟ್ಟವೇ ‘ಕೋಳಿಕ್ಕಮಲೆ’!
ಈ ಪಾಂಡವರ ಗುಹೆ,ಅಗಳು ಇಲ್ಲೆಲ್ಲ ಉತ್ಖನನ excavation ಕೈಗೊಂಡರೆ ಪ್ರಾಗಿತಿಹಾಸದ ಕುರುಹುಗಳು ಸಿಕ್ಕಾವು. ಆ ಅಗಳು ಮೂಲ ಜನಾಂಗ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲೋ,ಗಡಿ ಸೂಚಿಗೋ ಮಾಡಿದ್ದವಿರಬೇಕುಸಾಮಾನ್ಯ ಮನುಷ್ಯ ಮಾಡಲಾಗದ ಕೆಲಸಗಳನ್ನು ಅಸಾಮಾನ್ಯ ಪುರುಷರಿಗೆ ಹೋಲಿಸುವುದು ಜನಪದರ ನಂಬಿಕೆ. ಇದರ ಬಗ್ಗೆ ಈ ಲೇಖನ ನೋಡಿ… http://wp.me/p7CziO-2s
ಒಂದು ಭಾಷೆಯ ಮೂಲ ಪದಗಳನ್ನು ಸ್ಥಳನಾಮೆಗಳಿಂದ ತಿಳಿಯಬಹುದು.ಅವು ಸಂಸ್ಕೃತಿ ವಾಹಕಗಳು.ಒಂದು ಸ್ಥಳದ ಭಾಷೆ ಸಂಪೂರ್ಣವಾಗಿ ನಾಶವಾದರೂ ಸ್ಥಳನಾಮಗಳು ಅವಿನಾಶಿಯಾಗಿರುತ್ತವೆ.ಅದೇ ಸ್ಥಳನಾಮಗಳಿಗಿರು ಶಕ್ತಿ!
ಪ್ರಕಟಣೆ:-ದೀಪಾವಳಿ ವಿಶೇಷಾಂಕ,2015
ಚರಣ್ ಐವರ್ನಾಡು
ಪಾಲೆಪ್ಪಾಡಿ
ಸುಳ್ಯ, ದ.ಕ



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thank You