ಬಹುರೂಪಿ ಭಾರತ 



Varanasi, Kashi one of the Moxadayi Xetra


                
                     ನಮ್ಮ ದೇಶದಲ್ಲಿ ರಾಷ್ಟ್ರೀಯತೆಯ ಬಗೆಗಿನ ಚರ್ಚೆ ರಾಜಕೀಯ ಮತ್ತು ಮತೀಯ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸಾಂಸ್ಕøತಿಕ ನೆಲೆಯಲ್ಲಿ ರಾಷ್ಟ್ರೀಯತೆಯನ್ನು ನಿರೂಪಿಸುವ ಅಗತ್ಯತೆ ತುಂಬಾ ಇದೆ. ಇತರ ದೇಶಗಳಂತೆ ಏಕರೂಪದ ಮಾನದಂಡದಿಂದ ಭಾರತದ ಸಮಗ್ರತೆಯನ್ನು, ರಾಷ್ಟ್ರೀಯ ಪರಿಕಲ್ಪನೆಯನ್ನು ಅಳತೆ ಮಾಡಲು ಸಾಧ್ಯವಿಲ್ಲ. ರಾಷ್ಟ್ರವೊಂದರ ಸಾಮಾನ್ಯ ಲಕ್ಷಣಗಳಾದ - ಏಕ ಭಾಷೆ, ಏಕ ಮತ, ಏಕ ಸಂಸ್ಕøತಿ, ಕೇಂದ್ರೀಕೃತ ಆಡಳಿತ ವ್ಯವಸ್ಥೆ ಮಾತ್ರವಲ್ಲ ಇತ್ತೀಚೆಗೆ ಆತಂಕಕಾರಿಯಾಗಿ ಬೆಳೆಯುತ್ತಿರುವ ಏಕರೂಪದ ರಾಜಕೀಯ, ಸಾಮಾಜಿಕ ಚಿಂತನೆಗಳು, ಒಂದೇ ರಾಜಕೀಯ ಪಕ್ಷ ಮೊದಲಾದವುಗಳು ಭಾರತದಂತಹ ಬಹು ಸಂಸ್ಕøತಿಯ ರಾಷ್ಟ್ರದಲ್ಲಿ ಬೆಳೆಯಲು ಸಾಧ್ಯವಿಲ್ಲ. ಆದರೂ ಈ ಚಿಂತನೆಗಳನ್ನು ಬಲವಂತವಾಗಿ ಹೇರುವ ಯತ್ನಗಳು ನಡೆಯುತ್ತಿದ್ದು ಭಾರತಕ್ಕೆ ಇದು ಮಾರಕವಾಗಿ ಪರಿಣಮಿಸುತ್ತದೆ. ಸಾಂಸ್ಕøತಿಕವಾಗಿ ಮತ್ತು ಆದ್ಯಾತ್ಮಿಕವಾಗಿ ಭಾರತ ಅನೇಕತೆಯನ್ನು ಕಳೆದುಕೊಳ್ಳುತ್ತದೆ.

                        ನಾನು ಭಾರತದ ''ಬಹುರೂಪಿ ಸಂಸ್ಕøತಿ''ಯನ್ನು ರಾಷ್ಟ್ರೀಯತೆಯನ್ನು ನಿರೂಪಿಸುವ ಶಕ್ತಿಯೆಂದು ನಂಬಿದ್ದೇನೆ. ಭಾರತೀಯ ಸಂಸ್ಕøತಿ ಎಂದು ಬಿಂಬಿಸುವ ಏಕರೂಪದ ಆಧುನಿಕ ಸಾಂಸ್ಕøತಿವಾದವನ್ನು ಬಲವಾಗಿ ತಿರಸ್ಕರಿಸುತ್ತೇನೆ. ಅದನ್ನು ಓರ್ವ ಭಾರತೀಯನಾಗಿ ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ಹೊಸ ಅಲೆಯೊಂದಿಗೆ ಹುಟ್ಟಿರುವ ನನ್ನ ತಲೆಮಾರಿನವರ ಆಲೋಚನೆಗಳು ಭಾರತವನ್ನು ನೋಡುತ್ತಿರುವ ದೃಷ್ಟಿಕೋನ ಅತ್ಯಂತ ಸಂಕುಚಿತವಾದದ್ದು. ಕೆಲವು ಮತೀಯ ವಾದಗಳು ಬಿತ್ತುತ್ತಿರುವ ಭಾರತೀಯ ಪರಿಕಲ್ಪನೆಗಳು ಅಖಿಲ ಭಾರತ ಮಟ್ಟದಲ್ಲಿ ಒಂದೇ ಆಗಿವೆ. ಅದೇ ಹಿನ್ನಲೆಯಿಂದ ಬಂದ ತಲೆಮಾರು ಸಂಸ್ಕøತಿಯನ್ನು ವ್ಯಾಖ್ಯಾನಿಸುತ್ತಿರುವ ರೀತಿ ದೇಶದ ಯಾವ ಮೂಲೆಗೆ ಹೋದರೂ ಒಂದೇ ಆಗಿದೆ. ಇದಕ್ಕೆ ಸಮೂಹ ಮಾಧ್ಯಮಗಳು ವೇದಿಕೆಗಳನ್ನು ಕಲ್ಪಿಸಿವೆ. ಈ ಕಾರಣಗಳಿಂದ ಏಕರೂಪದ ಸಾಂಸ್ಕøತಿಕವಾದ ಭಾರತದಲ್ಲಿ ದಿನೇ ದಿನೇ ಬೆಳೆಯತ್ತಿದೆ. ಇದು ನೇರವಾಗಿ ಸ್ಥಳೀಯ ಸಮುದಾಯಗಳ ಸಂಸ್ಕøತಿಯನ್ನು ನಾಶಮಾಡದೆ ಅಮೂಲಾಗ್ರವಾಗಿ ಬದಲಾವಣೆ ಮಾಡುತ್ತಿದೆ. 

             ಭಾರತೀಯ ಸಂಸ್ಕøತಿ ಎಂಬ ಪರಿಭಾಷೆಯನ್ನು ಬಳಸುವಾಗ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಇದು ಒಂದೇ ಮೂಲದಿಂದ ಹುಟ್ಟಿದ ಭಿನ್ನ ಸಾಂಸ್ಕøತಿಕ ನೆಲೆಗಳೊ? ಅಥವಾ ಬೇರೆ ಬೇರೆ ಮೂಲದಿಂದ ಹುಟ್ಟಿದ್ದೊ? ಭಾರತೀಯ ಸಂಸ್ಕøತಿಯ ಬಗೆಗಿನ ಚರ್ಚೆಯನ್ನು ಅನೇಕ ಮಂದಿ ವೇದ ಪ್ರಣೀತ ವಾದಗಳಿಂದ ಆರಂಭಿಸುತ್ತಾರೆ. ಭಾರತೀಯ ಜಾತಿ ವ್ಯವಸ್ಥೆಯ ಬಗ್ಗೆ ಚರ್ಚಿಸುವಾಗ ವರ್ಣ ವ್ಯವಸ್ಥೆಯನ್ನು ಆಧಾರವಾಗಿ ಇಟ್ಟುಕೊಳ್ಳುತ್ತಾರೆ. ಭಾರತೀಯ ಆರಾಧನಾ ಪರಂಪರೆಗಳ ಮೂಲವನ್ನು ವೇದಮೂಲ ಮತ್ತು ಪುರಾಣಮೂಲಗಳಿಂದ ಚರ್ಚಿಸುತ್ತಾರೆ. ಇದು ನಿಜವಾದ ಭಾರತದ ಸಾಂಸ್ಕøತಿ ಚರ್ಚೆಯಲ್ಲ. ಯಾಕೆಂದರೆ ವೇದ ಮೂಲದ ಸಂಸ್ಕøತಿ ಭಾರತ ಮಟ್ಟದ ಸಂಸ್ಕøತಿಯಲ್ಲಿ ಬಹಳ ಮುಖ್ಯವಾದ ಒಂದು ಪುರಾತನ ಮತ್ತು ಅಪೂರ್ವ ಭಾಗವಷ್ಟೇ. ಇದನ್ನು ಪಾಲಿಸುವವರ ಸಂಖ್ಯೆ ಬಹಳ ಸಣ್ಣದು. ಆದರೂ ಭಾರತದ ಸಂಸ್ಕøತಿ, ಸಾಹಿತ್ಯ, ತತ್ವಶಾಸ್ತ್ರಕ್ಕೆ ಇದರ ಕೊಡುಗೆ ತುಂಬಾ ದೊಡ್ಡದು. ಆದರೆ ಇದನ್ನೇ ಭಾರತೀಯ ಸಂಸ್ಕøತಿ ಎಂದು ಬಿಂಬಿಸುವ ಮೂಲಕ ಬಹುಸಮುದಾಯಗಳ ಸಂಸ್ಕøತಿಯನ್ನು ಮೂಲೆಗುಂಪು ಮಾಡಲಾಗುತ್ತಿದೆ. ಅಲ್ಲದೇ ಇಂದು ಪರಿಭಾವಿಸಲಾಗುತ್ತಿರುವ ಹೊಸದಾದ ಅಖಿಲ ಭಾರತೀಯ ಸಂಸ್ಕøತಿಗೆ ಅ ಆದನ್ನು ಮಾರ್ಪಡಿಸಿ ಆದರ ಮರಣವನ್ನು ಸಂಭ್ರಮಿಸಲಾಗುತ್ತಿದೆ.

                   ಈ ಏಕರೂಪದ ಸಾಂಸ್ಕøತಿಕ ಭಾರತದ ಆರಾಧನಾ ಪರಂಪರೆಯಲ್ಲಿ ತುಳುನಾಡಿನ ಎಲ್ಲಾ ಮನೆಗಳಲ್ಲಿ ಆರಾಧನೆಗೊಳ್ಳುವ 'ಕಲ್ಲುರ್ಟಿ'ಗಿರುವ ಸ್ಥಾನವೇನು? 'ಮಲೆಮಾದೇಶ್ವರ'ನಿಗಿರುವ ಸ್ಥಾನವೇನು? ತುಳುವಿನ 'ಸಿರಿ' ಕಾವ್ಯಕ್ಕೆ, ಕನ್ನಡದ 'ತಂಬೂರಿಯವರ ರಾಮಾಯಣ'ಕ್ಕೆ ಇರುವ ಸ್ಥಾನವೇನು? ಹದಿನೆಂಟನೇ ಪರಿಚ್ಛೇದಕ್ಕೆ ತುಳುವಿನಂತಹ ಶಿಷ್ಟ ಹಾಗೂ ಜಾನಪದ ಸಾಹಿತ್ಯ ಸಂಪತ್ತನ್ನು ಹೊಂದಿರುವ ಭಾಷೆಯನ್ನು ಯಾಕೆ ಸೇರಿಸಲು ಸಾಧ್ಯವಾಗಿಲ್ಲ? ಇನ್ನು ಅಳಿವಿನಂಚಿನಲ್ಲಿರುವ 'ಕೊರಗ' ಮೊದಲಾದ ಭಾಷೆಗಳ ಪಾಡೇನು? ಯಾಕೆ ನಾವು ನಮ್ಮ ಕುಮಾರವ್ಯಾಸನನ್ನು, ಪಂಪ ಮೊದಲಾದ ಕವಿಗಳನ್ನು ಅಖಿಲ ಭಾರತಕ್ಕೆ ಪರಿಚಯಿಸಲು ಸೋತಿದ್ದೇವೆ? ಸಂಸ್ಕøತಿಯ ಅಧಿಕೃತ ರಕ್ಷಕರೆಂದು ಘೋಷಿಸಿಕೊಂಡವರು ಯಾಕೆ ಮೆಲ್ಲಗೆ ಅಮೂಲಾಗ್ರವಾಗಿ ಸ್ಥಿತ್ಯಂತರಗೊಳ್ಳುತ್ತಿರುವ, ನಾಶವಾಗುತ್ತಿರುವ ನೆಲಮೂಲದ ಜಾನಪದ ಸಂಸ್ಕøತಿಯ ಬಗ್ಗೆ ಗಮನಕೊಡುತ್ತಿಲ್ಲ?- ಈ ಎಲ್ಲವೂ ಸಮಸ್ಯೆಗಳಾಗಿ ಉಳಿದಿರುವುದು ಮತೀಯತೆಯ ಜೊತೆಗೆ ಬಂದ ಹೊಸ ಸಾಂಸ್ಕøತಿಕವಾದದಿಂದ. ಇದು ಮನುಷ್ಯನ ಆಲೋಚನೆಯನ್ನು ಸಂಕುಚಿತಗೊಳಿಸುತ್ತದೆ. ಇಲ್ಲಿ ಅವನು ಬೆಳೆದ ಸಂಸ್ಕøತಿಗಿಂತ ಅವನಿಗಿಂತ ಸಾಮಾಜಿಕವಾಗಿ ಮುಂದುವರಿದ ಸಮುದಾಯದ ಸಂಸ್ಕøತಿ ಶುದ್ದವೆಂದು ಭಾವಿಸುವ ಮೂಲಕ ತನ್ನ ಸಂಸ್ಕøತಿಯ ಬಗ್ಗೆ ತಾತ್ಸಾರ ಭಾವವನ್ನು ತಾಳುತ್ತಾನೆ. ಇದೇ ಕಾರಣದಿಂದ ಕೊರಗ ಭಾಷೆ ಇತರ ಸಮುದಾಯಗಳಿಗೆ ಹರಡದೆ ಅದೇ ಜನಾಂಗದ ವ್ಯಾಪ್ತಿಯೊಳಗೆ ನಶಿಸುತ್ತಿರುವುದು! ತುಳುವರ ಬೊಬ್ಬರ್ಯ ಮಹಾಭಾರತದ ಬಭ್ರುವಾಹನನಾಗಿ ಮರುನಾಮಗೊಂಡು ಹೊಸ ಪುರಾಣದ ಸೃಷ್ಟಿಯಗುತ್ತಿರುವುದು!



                        ಇದು ಬರಿಯ ಕನ್ನಡ ಅಥವಾ ತುಳುವಿನ ಸಂದರ್ಭದ ಸಮಸ್ಯೆಗಳಲ್ಲ. ಭಾರತದ ಬಹುತೇಕ ಸಾಮುದಾಯಿಕ ಸಂಸ್ಕøತಿಗಳಿಗೆ ಹೊಸ ಸಿಂಡಿಕೇಟೆಡ್ ಸಾಂಸ್ಕøತಿಕವಾದದಿಂದ ಹುಟ್ಟಿರುವ ಸಮಸ್ಯೆಗಳು ಮತ್ತು ಅವುಗಳ ಅಸ್ತಿತ್ವದ ಪ್ರಶ್ನೆ. ಭಾರತೀಯ ಸಂದರ್ಭದಲ್ಲಿ ಇವುಗಳ ಬಗೆಗಿನ ಚರ್ಚೆ ಅಗತ್ಯವಾದದ್ದು. ಸ್ಥಳೀಯ ಸಮುದಾಯಗಳು ಬೆಳೆದು ಬಂದಿರುವ ಸಂಸ್ಕøತಿಗಳೇ ಇಡೀ ಭಾರತವನ್ನು ಕಟ್ಟಿದ್ದು. ಇದರಲ್ಲಿ ವೈದಿಕ ಸಾಹಿತ್ಯಗಳಷ್ಟೇ ಪಾತ್ರವನ್ನು ತುಳುವಿನ ಜಾನಪದ ಸಾಹಿತ್ಯಗಳು, ತಮಿಳಿನ ಸಂಗಂ ಸಾಹಿತ್ಯಗಳು ಪಡೆದಿವೆ. ಇಲ್ಲಿ ಯಾವುದೇ ಒಂದು ಭಾಷೆ ನಾಶವಾದರೂ ಅದು ಭಾರತದ ಅಂತಃಸತ್ವ ಕುಸಿದಂತೆ.

                          ಇತ್ತೀಚಿನ ಹೊಸ ತಲೆಮಾರಿನ ಸಾಂಸ್ಕøತಿಕ ಸಂದರ್ಭದಲ್ಲಿ 'ಕೇಸರಿ' ಸನಾತನ ಧರ್ಮದ ಸಂಕೇತವಾಗಿ ಮಾರ್ಪಟ್ಟಿದೆ. ಆದರೆ ವೈವಿದ್ಯಮಯ ಹಿಂದೂ ಧರ್ಮದಲ್ಲಿ ಏಕ ಧಾರ್ಮಿಕ ಗ್ರಂಥ, ಧರ್ಮದ ಜನಕ ಮುಂತಾದ ಪರಿಕಲ್ಪನೆಗಳಿಲ್ಲ. ಕೇಸರಿಯ ವಿಚಾರವನ್ನೇ ತೆಗೆದುಕೊಂಡರೆ ಅಂದು ತುಳುವ ಸಂಸ್ಕøತಿ ಬಿಳಿ ಬಣ್ಣಕ್ಕಿರುವ ಸ್ಥಾನವನ್ನು ಅದು ಆವರಿಸಿದೆ. ಹುಟ್ಟಿನಿಂದ ಸಾವಿನ ನಡುವೆ ನಡೆಯುವ ಎಲ್ಲಾ ಕ್ರಿಯೆಗಳು ಬಿಳಿ ವಸ್ತ್ರವನ್ನು ಅವಲಂಬಿಸಿರುತ್ತದೆ. ಇವತ್ತು ದೈವಾರಾಧನೆಯಲ್ಲಿ ಪರಂಪರೆಯಿಂದ ಬಂದ ಬಿಳಿಯ ಮೇಲು ಬಟ್ಟೆ ಕಟ್ಟುವುದನ್ನು ಮರೆತರೂ ಕೇಸರಿ ಬಟ್ಟೆ ಕಟ್ಟುವುದನ್ನು ಮರೆಯದಿರುವುದು ಕೆಲ ದಶಕಗಳಿಂದ ರೂಪಿಸಿಕೊಂಡು ಬಂದಿರುವ ಹೊಸ ಸಂಪ್ರದಾಯ!

                   ಭಾರತ ಭಿನ್ನ ಆಲೋಚನೆಗಳಿಗೆ ನೆಲೆ ನೀಡಿದ ಭೂಮಿ. ಇಲ್ಲಿ ಆಸ್ತಿಕ ನಾಸ್ತಿಕ ಚಿಂತನೆಗಳಿಗೆರಡಕ್ಕೂ ಬೆಲೆ ಇದೆ.  ಈ ಭೂಮಿಗೆ ಬಂದ ಕ್ರೈಸ್ತ, ಇಸ್ಲಾಂ ಮೊದಲಾದ ಧರ್ಮಗಳು ಭಾರತೀಕರಣಗೊಂಡಿವೆ. ಹಾಗಾಗಿ ನಮಗೆ ಕೇರಳದ ಮುಸಲ್ಮಾನರು ಹಾಡುವ ಸುಂದರವಾದ 'ಮಾಪಿಳ್ಳೆ ರಾಮಾಯಣ' ಸಿಗುತ್ತದೆ. ನಾನು ಬಯಸುವ ಭಾರತ ವೈವಿಧ್ಯತೆಯಿಂದ ಕೂಡಿದ್ದು. ಅದು ಶತಮಾನಗಳಿಂದ ಬೆಳೆದು ಬಂದ ಬಂಧುತ್ವವನ್ನು ಸಾರುವ ಮೌಢ್ಯದ ಕೊಳೆಯನ್ನು ಬಿಟ್ಟ, ಹೊಸ ವಿಭಜಕ ಚಿಂತನೆಯನ್ನು ತಿರಸ್ಕರಿಸಿದ ಸರ್ವರನ್ನೂ ಒಳಗೊಳ್ಳುವಂತದ್ದು ಮತ್ತು ಸನಾತನವಾದದ್ದು. ಈ ನಿಜಭಾರತದ ಸಾಂಸ್ಕøತಿಕ ವೈವಿಧ್ಯತೆ ಬಗ್ಗೆ ಈ ಸರಣಿ ಲೇಖನಗಳು ಇದನ್ನೇ ಪ್ರತಿಪಾದಿಸುತ್ತದೆ. 



ಚರಣ್ ಐವರ್ನಾಡು
ಪಾಲೆಪ್ಪಾಡಿ
ಸುಳ್ಯ





ಕಾಮೆಂಟ್‌ಗಳು

  1. ನನ್ನ ಜ್ಞಾನದ ವ್ಯಾಪ್ತಿಗೆ ನಿಲುಕದ ವಿಮರ್ಷೆ! ಚೆನ್ನಾಗಿ ಮೂಡಿಬಂದಿದೆ. ಕಾಲಘಟ್ಟದಲ್ಲಿ ಹಲವಾರು ಸಂಸ್ಕೃತಿಗಳು ನಶಿಸಿ ಹೋಗಿವೆ. ಈಜಿಪ್ಟ್, ರೋಮ್, ಗ್ರೀಕ್, ಚೀನೀ ಇತ್ಯಾದಿಗಳೇ ಉದಾಹರಣೆ. ಕಮ್ಯುನಿಸಂ ಮತ್ತು ಇಸ್ಲಾಂ ತಾವು ಆವರಿಸಿದ ಯಾವುದೇ ಪ್ರಾಂತ್ಯ ತನ್ನ ಚರಿತ್ರೆ, ಹಳೆ ಸಂಸ್ಕೃತಿ ಏನನ್ನೂ ಉಳಿಯಲು ಬಿಡುವುದಿಲ್ಲ.ಹಿಂದೂ ಧರ್ಮವು ಎಲ್ಲಾ ಸಂಸ್ಕೃತಿಗಳನ್ನು ತನ್ನ ಒಡಲಿನಲ್ಲಿ ತುಂಬಿಕೊಂಡು ಸಮಯೋಚಿತವಾಗಿ ಪರಿವರ್ತನೆಗೊಂಡು ಬೆಳೆದು ಬರುತ್ತಿರುವ ಸಂಸ್ಕೃತಿ. ಹಿಂದು ಧರ್ಮವು ಉಳಿದರೆ ಇಲ್ಲ ನಶಿಸಿದರೆ ನನಗೇನಿಲ್ಲ. ಆದರೆ ನನ್ನ ವ್ಯಕ್ತಿ ಸ್ವಾತಂತ್ರ,dress habit, believer or non belief in faith ಉಳಿಸಿಕೊಳ್ಳಲು ಹಿಂದೂ ಧರ್ಮ ಉಳಿಯಬೇಕು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank You

Bahurupi Bharatha