ಆರಿಕಲ್ಲು ದಿಗಂಬರ ಜೈನ ಬಸದಿ


Arikal Digambara Jaina Basadi of Kadeshvalya, Bantwal

ನನ್ನ ಮಿತ್ರ ಆಝಾದ್ ಖಂಡಿಗ ಬೆಳೆಯುತ್ತಾ ತನ್ನ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಹೆಸರು ಮಾಡುತ್ತಿರುವ ಪತ್ರಕರ್ತ. ಕನ್ನಡ ಪತ್ರಿಕೆಗಳಲ್ಲಿ ಫೇಸ್ಬುಕ್ ಅನ್ನು ಸಮರ್ಪಕವಾಗಿ ಬಳಸಿ ವರದಿ ಮಾಡುವ ಆಝಾದ್ ಮಂಗಳೂರಿನ ಅಪರೂಪದ ವ್ಯಕ್ತಿಗಳ ಮೇಲೆ ಸಣ್ಣ ಸಣ್ಣ ಡಾಕ್ಯುಮೆಂಟರಿಗಳನ್ನು ಮಾಡಿ ವರದಿ ಮಾಡುತ್ತಿದ್ದರು. ನನ್ನ ಸಮಕಾಲೀನರಾದ ಪತ್ರಕರ್ತರಲ್ಲಿ ಇವರು ಪ್ರಬುದ್ಧ ಆಲೋಚನೆ ಇರುವವರು. ಚೆನ್ನಾಗಿ ಓದುತ್ತಾರೆ, ರಂಗ ಭೂಮಿಯ ಹಿನ್ನಲೆ ಇರುವವರು. ಮೊನ್ನೆ ಕಲ್ಕತ್ತಾದ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡ ಬ್ಯಾರಿ ಭಾಷೆಯ ಚಲನಚಿತ್ರದಲ್ಲಿ ನಟಿಸಿದ್ದಾರೆ. (ಒಳ್ಳೆಯ ಕೆಲಸ ಮಾಡುವ ನಮ್ಮವರ ಬಗ್ಗೆ ನಾವು ಮಾತನಾಡಬೇಕು 😜)
ನಾನು ಮತ್ತು ಅಜಾದ್ ದಿಡೀರ್ ಎಂದು ರಾತ್ರೆ ಹಗಲು ಮಳೆ ಬಿಸಿಲು ಎನ್ನದೆ ಊರು ಸುತ್ತಲು ಹೋಗುವ ಹುಚ್ಚರು. ಕೆಲವು ದಿನಗಳ ಹಿಂದೆ "ನಿಮಗೊಂದು ಬಸದಿ ತೋರಿಸಬೇಕು...ಬನ್ನಿ.." ಅಂತ ಅವರ ಊರು "ಕಡೇಶ್ವಲ್ಯದ ಅಜಿಲ ಮೊಗರಿಗೆ" ಕರ್ಕೊಂಡು ಹೋದ್ರು. ನಮ್ಮ ಜೊತೆ ಅವಿನಾಶ್ ಕಡೇಶ್ವಲ್ಯ ಕೂಡಾ ಇದ್ದರು. ಮನೆಯಲ್ಲಿ ಕೋಳಿ, ಮೀನು ಏನೇನೋ ಗಮ್ಮತ್ತು ಮಾಡಿದ್ದರು 🥴
ಈಗ ಬಸದಿಗೆ ಬನ್ನಿ.....
ಇದು ಅಜಿಲ ಮೊಗರಿನ "ಧರ್ಮ ಚಾವಡಿಯ" ಮನೆಗೆ ಸೇರಿದ ಬಸದಿ. ನಲ್ಕಂಕಣದ "ಸುತ್ತು ಪಡ್ಪಿರೆ ಮನೆಯ" ಪಕ್ಕ ಈ ಹಳೆಯ ಬಸದಿ ಇದೆ. ಇದಕ್ಕೆ ಆರಿಕಲ್ಲು ದಿಗಂಬರ ಜೈನ ಬಸದಿ ಎಂದು ಕರೆಯುತ್ತಾರೆ. ಹೆಸರು ಹೇಳುವಂತೆ ಅಜಿಲ ಮೊಗರಿಗು ತುಳುನಾಡಿನ ಅರಸು ಮನೆತನಗಳಲ್ಲಿ ಒಂದಾದ "ವೇಣೂರಿನ ಅಜಿಲ ಅರಸ"ರಿಗೂ ಸಂಬಂಧ ಇದೆ. ಇಲ್ಲಿನ ಧರ್ಮ ಚಾವಡಿ ಮನೆಯವರು ಇವರದೇ ಸಂಬಂಧಿಕರು.
ವೇಣೂರಿನ ಅಜಿಲರು ವೇಣೂರು ಮತ್ತು ಅಳದಂಗಡಿಗಳಲ್ಲಿ ಅರಮನೆ ಕಟ್ಟಿಕೊಂಡು ಆಳಿದ ಜೈನ ರಾಜವಂಶ. ಈ ವಂಶದ ಅರಸ "ನಾಲ್ಕನೆಯ ವೀರ ತಿಮ್ಮಣ್ಣಾಜಿಲ" (ಕ್ರಿ.ಶ1550-1610) ವೇಣೂರಿನ ಗುಮ್ಮಟ ದೇವರನ್ನು ಸ್ಥಾಪಿಸಿದ. ಕಾರ್ಕಳದ "ಇಮ್ಮಡಿ ಭೈರವರಾಯ ಪಾಂಡ್ಯ" ತನ್ನ ಪ್ರತಿಷ್ಟೆಯ ಕಾರ್ಕಳದ ಗುಮ್ಮಟನ ಇನ್ನೊಂದು ಮೂರ್ತಿ ವೇಣೂರಿನಲ್ಲಿ ಪ್ರತಿಷ್ಟೆಯ ಆದಾಗ ಅದನ್ನು ತನ್ನ ಕೀರ್ತಿಗೆ ಕುಂದು ಎಂದು ಬಗೆದು ವೇಣೂರಿನ ಮೇಲೆ ಧಾಳಿ ಮಾಡಿದ್ದ. ಇವನ ಧಾಳಿಯಿಂದ ಪ್ರತಿಮೆಗೆ ಹಾನಿಯಾಗದ ಹಾಗೆ ತಡೆಯಲು ಹೊಳೆಯ ಹೊಯಿಗೆಯ ಕೆಳಗೆ ಅಡಗಿಸಿ ಇಟ್ಟಿದ್ದರಂತೆ. ಕೊನೆಗೆ ತಿಮ್ಮಣ್ಣಜಿಲನ ಸೇನೆಯ ಸೇನಾಧಿಪತಿ "ನಾರಾವಿಯ ಕಾಂತು ಸಮಾಣಿ" ಭೈರರಸನ ಸೇನೆಯನ್ನು ಹೊಡೆದೋಡಿಸಿದ.

Sanctum of the Basadi

ಇದೇ ತಿಮ್ಮಣ್ಣಾಜಿಲನಿಗೂ "ಬಂಗಾಡಿ ಅರಸ ಲಕ್ಷ್ಮಪ್ಪ" ಅರಸ ಬಂಗರಾಜನಿಗೂ ಹಣದ ವಿಷಯದಲ್ಲಿ ವಿವಾದವಾಗಿ ಯುದ್ಧದ ತನಕ ಹೋಗುತ್ತದೆ.
ತಿಮ್ಮಣ್ಣಾಜಿಲ ತನ್ನ ಸೇನೆಯನ್ನು "ಪೇರಿಂಜೆ ಗುತ್ತಿನ ದೇವ ಪೂಂಜನ" ನೇತೃತ್ವದಲ್ಲಿ ಬಂಟವಾಲಕ್ಕೆ ಕಳಿಸುತ್ತಾನೆ. ಈ ಸೈನ್ಯಕ್ಕೆ ಮತ್ತು ಬಂಗರಾಜನ ಸೇನಾಧಿಪತಿ ಮಣಿ ಗುತ್ತಿನ ದುಗ್ಗಣ್ಣ ಕೊಂಡೆಗೂ ಮಣಿ ಗ್ರಾಮದ ಚಂಡೆತ್ತಿಮಾರ್ ನಲ್ಲಿ ಯುದ್ದವಾಗಿ ದುಗ್ಗಣ್ಣಕೊಂಡೆ ಸೋಲುತ್ತಾನೆ. ಇವನ ತಲೆಯನ್ನು ಕಡಿದು ದೇವು ಪೂಂಜ ಅದನ್ನು ಪಂಜೀಕಲ್ಲಿನ ಕೋಟೆಯಲ್ಲಿ ಇದ್ದ ಅಜಿಲ ಅರಸನಿಗೆ ತಂದು ಒಪ್ಪಿಸುತ್ತಾನೆ. ಸಣ್ಣ ಪ್ರಾಯದ ದೇವು ಪೂಂಜನ ಶೌರ್ಯ ಕಂಡ ಅರಸ ಮುಂದೆ ತನಗೆ ಇವ ಅಪತ್ತು ತಂದಾನು ಎಂದು ದೂರ ಮಾಡ ತೊಡಗಿದ. ಇದರಿಂದ ಬೇಸರಗೊಂಡ ದೇವು ಪೂಂಜ ತನ್ನ ಮನೆಯವನ್ನು ಕರೆದುಕೊಂಡು ಬಂದು ಬಂಟ್ವಾಳದ ಬೆಲ್ಲೂರಿನಲ್ಲಿ ಬಂದು ನೆಲೆಸುತ್ತಾನೆ. ಮುಂದೆ ಇವನನ್ನು ಬಂಗರಾಜ ತನ್ನ ಸೇನಾಧಿಪತಿಯಾಗಿ ನೇಮಿಸುತ್ತಾನೆ.
ಬಂಟ್ವಾಳದ ಮೇಲೆ ಅಜಿಲರ ಅಧಿಪತ್ಯ ಇತ್ತು. ಇವರು ತಮ್ಮ ರಕ್ತ ಸಂಬಂಧಿಗಳನ್ನು ಈ ಊರಲ್ಲಿ ಆಡಳಿತ ಕಾರಣಕ್ಕೆ ನೇಮಿಸಿದ ಹಾಗಿದೆ. ಅರಿಕಲ್ಲು ಧರ್ಮ ಚಾವಡಿಯವರು ತಮ್ಮನ್ನು ಅಜಿಲರು ಎಂದು ಕರೆದುಕೊಳ್ಳುತ್ತಾರೆ. ಇವರಿಗೆ ಸಂಬಂಧಿಸಿದ ಬಸದಿ ಅರಿಕಲ್ಲು ದಿಗಂಬರ ಜೈನ ಬಸದಿ.
Digambaras inside the Sanctum 

ಇಲ್ಲಿ ಯಾವುದೇ ಶಾಸನ ಬರಹಗಳು ಕಾಣುವುದಿಲ್ಲ. ದಕ್ಷಿಣ ಕನ್ನಡದ ಇತಿಹಾಸ ಅಧ್ಯಯನಗಳಲ್ಲಿ ಇದನ್ನು ದಾಖಲಿಸಿದ ಬಗ್ಗೆ ನಾನು ನೋಡಿಲ್ಲ. ಬಸದಿಯ ಒಳಗಿರುವ "ಶ್ರುತ ಸ್ಕಂದ"ದಲ್ಲಿ ದಾಖಲೆಗಳು ಸಿಗಬಹುದು.
ಉಳ್ಳಾಲದ ಬಸದಿಯಲ್ಲಿ ಇರುವ ಶ್ರುತ ಸ್ಕಂದದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕನ ಉಲ್ಲೇಖ ಇರುವ ಶಾಸನವಿದೆ.
ಇನ್ನು.... ಕಡೇಶ್ವಲ್ಯ ಬಾಳ್ತಿಲದ ಬಲ್ಲಾಳನ ಆಳ್ವಿಕೆಗೆ ಸೇರಿದ್ದು. ಇವನು 15 ಗ್ರಾಮಗಳನ್ನು ಒಳಗೊಂಡಿದ್ದ ಮೊಗರನಾಡು ಸಾವಿರ ಸೇನೆಯನ್ನು ಆಳುತ್ತಿದ್ದ. ಮೊದಲು ಶಿವಾಲಯವಾಗಿದ್ದ ಕಡೇಶ್ವಲ್ಯ ನರಸಿಂಹ ದೇವಾಲಯ ಇವನಿಗೆ ಸೇರಿದ್ದು.
ಇಷ್ಟು ಮಾಹಿತಿಯನ್ನು ಬಳಸಿ ತಿಳಿದವರು ಅರೀಕಲ್ಲು ಬಸದಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರೆ ಚೆನ್ನಾಗಿರುತ್ತದೆ.
Padmavathi 

ಇಲ್ಲಿ ದ್ವಾರಪಾಲಕರ ಚಿತ್ರ ವಿಶಿಷ್ಟವಾಗಿದೆ. ಇದು ಬ್ರಿಟೀಷ್ ಸೈನಿಕರನ್ನು ಹೋಲುತ್ತದೆ. ಇದು ಯಾಕೆ ಹೀಗೆ? ಬೇರೆ ಯಾವುದಾದರೂ ಬಸದಿ ಅಥವಾ ಆರಾಧನಾ ಕೇಂದ್ರಗಳಲ್ಲಿ ನೋಡಿದ್ರೆ ತಿಳಿಸಿ.
ಚಿತ್ರದಲ್ಲಿ ಬಸದಿ, ಬಸದಿಯ ಒಳ ಅಂಗಣ, ಪದ್ಮಾವತಿ, ತೀರ್ಥಂಕರರು, ದ್ವಾರಪಾಲಕರು..ಇದ್ದಾರೆ.
Notes: ಅಜಿಲ ಮೊಗರು ದರ್ಗಾ ಮತ್ತು ಕಡೇಶಿವಾಲಯ ದೇವಸ್ಥಾನಕ್ಕೆ ಸಂಬಂಧವಿದೆ. ಈ ಊರು ಇನ್ನೂ ತನ್ನ ಮತ ಬ್ರಾತ್ರುತ್ವವನ್ನು ಉಳಿಸಿಕೊಂಡಿದೆ. ಈ ದರ್ಗಾಕ್ಕೆ ಜಾಗವನ್ನು ನೀಡಿದವರು ಜೈನ ಅರಸರು. ದೈವಗಳ ಭಂಡಾರ ದರ್ಗಾದ ಪಕ್ಕ ಬರುವಾಗ ವಾದ್ಯ ಘೋಷಗಳನ್ನು ನಿಲ್ಲಿಸುತ್ತವೆ. ದೈವವೊಂದರ ನೇಮ ನಡೆಯುವಾಗ ಇಡೀ ದಿನ ದರ್ಗಾದಲ್ಲಿ ದೀಪ ಆರದಂತೆ ಇರಿಸುತ್ತಾರೆ. ಇಲ್ಲಿ ನಡೆಯುವ ಮಾಲಿದ ಉರೂಸ್ ತುಂಬಾ ಖ್ಯಾತಿ ಪಡೆದಿದೆ. ಎಲ್ಲ ಧರ್ಮದವರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಹೇಳುವುದಕ್ಕೆ ಕೇಳುವುದಕ್ಕೆ ತುಂಬಾ ಉಂಟು... ಇತ್ತೆ ರೈಟ್ ಪೊಯಿ 
ಅವಿನಾಶ್ ಹೇಳ್ತಾರೆ...
ಅಜಿಲ ಮನೆತನದ ಸಾರಾಲ ಮುಗೇರ ಪಂಜುರ್ಲಿಗೂ ಅಜಿಲಮೊಗರು ದರ್ಗಾಗೂ ಸಂಬಂಧ ಇದೆ ಅನ್ನೋದು ನಿಜ. ಅಜಿಲಮೊಗರು ಚಾವಡಿಯಲ್ಲಿ ಈ ದೈವದ ನೇಮ ನಡೆಯುವಾಗ ದರ್ಗಾಗೆ ಭೇಟಿ ನೀಡುವ ಕ್ರಮ ಈಗ ಇಲ್ಲ. ಹಿಂದೆ ಇತ್ತೋ ಗೊತ್ತಿಲ್ಲ. ಆದರೆ ನಡುಮೊಗರು ಗುತ್ತಿನಲ್ಲಿ ಧರ್ಮ ನೇಮ ನಡೆಯುವಾಗ ಇದೇ ಅಜಿಲಮೊಗರು ಚಾವಡಿಯಿಂದ ಭಂಡಾರ ತೆರಳಬೇಕು. ನಡುಮೊಗರಿಗೆ ಮಸೀದಿ ಮಾರ್ಗವಾಗೇ ಭಂಡಾರ ತೆರಳುವಾಗ ಮಸೀದಿ ಮುಂದೆ ಭಂಡಾರ ಇಳಿಸಿ ದರ್ಗಾಗೆ ನಮಿಸಿ ಮುಂತೆರಳುತ್ಗಾರೆ. ಐದಾರು ವರ್ಷದ ಹಿಂದೆ ನಡುಮೊಗರು ಗುತ್ತಿನ ಮನೆಯಲ್ಲಿ ಧರ್ಮನೇಮ ನಡೆಯೋವಾಗ ಈ ಕ್ರಮ ನಡೆದಿತ್ತು.

ಆಝಾದ್ ಹೇಳ್ತಾರೆ....

ಹೌದು... ಇನ್ನೊಂದು ವಿಚಾರ ಇದೆ‌. ನಾ ನೋಡಿಲ್ಲ ಊರವರು ಹೇಳಿದ್ದು ಕೇಳಿದ್ದೆ. ಅಜಿಲಮೊಗರು ಉರೂಸ್ ಸಂಧರ್ಭ ಕಡೇಶಿವಾಲಯ ದೇವಸ್ಥಾನದಿಂದ ಅಕ್ಕಿ ಮತ್ತು ಬೆಲ್ಲ ಕಾಣಿಕೆಯಾಗಿ ನೀಡುತ್ತಾರೆ ಮತ್ತು ಕಡೇಶಿವಾಲಯ ದೇವಸ್ಥಾನದ ಜಾತ್ರೆಗೆ ಅಜಿಲಮೊಗರು ಮಸೀದಿಯಿಂದ ದೀಪದ ಎಣ್ಣೆ ನೀಡುತ್ತಾರೆ ಎಂದು... ಇದು ಹಿರಿಯರು ಹೇಳಿದ ನೆನಪು... ನಾ ನೋಡಿಲ್ಲ


More Photos
Ajeevakas??
Wall Painting of a guard, mostly a British soldier 






SrithaSkanda of Ullala Basadi, Mangaluru which mentions the name of Ullala Chowta Queen Abbakke
















Charan Aivarnad

Aivarnad
Sullia
Dakshina Kannada
charanaivarnad@gmail.com
Bhahurupibharatha@gmail.com 





ಕಾಮೆಂಟ್‌ಗಳು

Bahurupi Bharatha