ಯೋಗ ಅಂತಾರಾಷ್ಟ್ರೀಯ ಸರಕು ಆದಾಗ ಯೌಗಿಕ ದರ್ಶನಗಳಿಗೆ ಭಾರತದಲ್ಲಿ ಬೆಲೆ ಇಲ್ಲದಾಗಿದೆ !
![]() |
| GorakhaNatha of Kadri Manjunatha Temple |
ಕಳೆದ ಒಂದು ದಶಕದಿಂದ ಯೋಗ ಪ್ರಪಂಚಕ್ಕೆ ಪರಿಚಯ ಆಗಿದೆ ಎಂಬ ದೊಡ್ಡ ಸುಳ್ಳನ್ನು ನಮ್ಮ ನಡುವೆ ಹರಿಯಬಿಡಲಾಗಿದೆ. ಆದರೆ ಭಾರತದಲ್ಲಿ ಯೋಗವನ್ನು ಉಚ್ಛ್ರಯಕ್ಕೆ ಕೊಂಡೊಯ್ದ ದಾರ್ಶನಿಕರನ್ನು ಭಾರತದ ಇತಿಹಾಸದಿಂದ ಮರೆಮಾಚಲಾಗಿದೆ ಮಾತ್ರವಲ್ಲ ಅದನ್ನು ಭಾರತೀಯ ಸಂಸ್ಕೃತಿಯ ಬಗೆಗಿನ ಚರ್ಚೆಯಲ್ಲಿ ನಿರ್ಲಕ್ಷ ಮಾಡಲಾಗಿದೆ. ಅದಕ್ಕೂ ಹೆಚ್ಚಾಗಿ ಯೌಗಿಕ ಮೂಲದ ಪಂಥಗಳ ಆರಾಧನಾ ನೆಲೆಗಳು ಅಮೂಲಾಗ್ರವಾಗಿ ವೈದಿಕ ಕ್ಷೇತ್ರಗಳಾಗಿ ಬದಲಾಗಿವೆ.
ಭಾರತದಲ್ಲಿ ಇಂದು ಪ್ರಚಾರದಲ್ಲಿರುವ ಹಾಗೆ ಯೋಗ ಎಂಬುದು ಬರಿಯ ದೇಹವನ್ನು ಬಗ್ಗಿಸುವ ವ್ಯಾಯಾಮ ಅಥವಾ ಉಸಿರಿನ ಜೊತೆ ಕಸರತ್ತು ಮಾಡುವುದು ಅಲ್ಲ. ಅದರಾಚೆಗೆ ಯೋಗ ಬಹು ಸಮುದಾಯಗಳ ನಡುವೆ ಹೋಗಿತ್ತು.
ವಿಸ್ತಾರವಾಗಿ ಬೆಳೆಸಿದ್ದು ವೈದಿಕವಲ್ಲ, ಬದಲಾಗಿ ಅವೈದಿಕ ಮತ್ತು ನಾಸ್ತಿಕ ಪರಂಪರೆಗಳು.
ಯೋಗದ ಮಹಾನ್ ಗುರುಗಳಾದ ನಾಥ/ ವಜ್ರಾಯನದ (ಬೌದ್ಧ) ಗೋರಖ, ಮಚ್ಚೆಂದ್ರ ನಾಥರು ಇಂದು ಯೋಗದ ದಿನ ನಮಗೆ ನೆನಪಿಗೆ ಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಯೋಗ ಎಂಬುದು ದೇಹ ಬಗ್ಗಿಸುವ ಕ್ರಿಯೆ ಎಂಬ ನಮ್ಮ ನಿಲುವು. ಹಾಗಾಗಿ ನಮಗೆ ಅದನ್ನು ಮಾರ್ಕೆಟ್ ಮಾಡುವ ಇಂದಿನ ಧಾರ್ಮಿಕ ನಾಯಕರು ಮುಖ್ಯರಾಗುತ್ತಾರೆ. ಯೋಗದ ಬಗ್ಗೆ ಮಾತನಾಡುವ, happy yoga day ಎಂದು ಬರೆದುಕೊಳ್ಳುವ ನಮಗೆ ಗೋರಖ, ಮಚ್ಚೆಂದ್ರರು ಮುಖ್ಯರಾಗಿಲ್ಲ! ಇವರು ಸಂಸ್ಕೃತಿ, ಭಾರತ ಎಂದೆಲ್ಲ ಮಾತನಾಡುವ ಹಾಗೂ ಬಹುಪಾಲು ಸಾಂಸ್ಕೃತಿಕ ರಾಷ್ಟ್ರೀಯತೆಯ ಪ್ರತಿಪಾದಕರಿಗೆ ಅವರು ಯಾರು ಎಂಬುದು ಗೊತ್ತಿಲ್ಲ!
ನಾಥದ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ ಅದೊಂದು ವೇದಗಳ ಪಾರಮ್ಯವನ್ನು ಒಪ್ಪದ, ವರ್ಣವ್ಯವಸ್ಥೆಯನ್ನು ಸಂಪೂರ್ಣ ತಿರಸ್ಕರಿಸಿ ಬಹು ಸಮುದಾಯಗಳ ನಡುವೆ ಬೆಳೆದ ದೊಡ್ಡ ಪಂಥ. ಇದರ ಜೊತೆ ಜೊತೆಗೆ ಕಾಪಾಲಿಕ, ಕಾಳಾಮುಖ, ಶಾಕ್ತ, ಕೌಳ, ದತ್ತ, ವಾರಕರಿ, ಸೂಫಿ, ಮಹಾನುಭಾವ ಮೊದಲಾದ ಪಂಥಗಳು ಇವೆ. ಇವುಗಳ ನಡುವೆ ವ್ಯತ್ಯಾಸಗಳು ಇದ್ದರೂ ಅನುಸಂಧಾನ ನಡೆದಿದೆ. ನಾಥ ಇವೆಲ್ಲದರ ಜೊತೆಗೆ ಅನುಸಂಧಾನ ಮಾಡಿಕೊಂಡಿದ್ದು ಅದರ ಒಳಗೊಳ್ಳುವಿಕೆಯ ಗುಣದಿಂದಾಗಿ.
ಕಾಳಾಮುಖ, ಕಾಪಾಲಿಕ ಪಂಥಗಳು ಬೌದ್ಧರ ವಜ್ರಯಾನದ ಜೊತೆಗೆ ಸೇರಿಕೊಂಡು ನಾಥ ಪಂಥ ಹುಟ್ಟಿದ್ದು ಭಾರತದ ಇತಿಹಾಸದಲ್ಲಿ ನಾವು ನಿರ್ಲಕ್ಷಿಸಿದ ಸಂಗತಿ. ಅಲ್ಲದೆ ಭೌತವಾದಿ ಪಂಥಗಳಾದ ಇವುಗಳ ಬಗ್ಗೆ ವಿಕೃತವಾಗಿ ಇತರ ಮತಗಳು ಚಿತ್ರಿಸಿವೆ. ಅಲ್ಲದೆ ಇದೆ ಪರಂಪರೆ ನಂತರ ಬಂದ ಇತಿಹಾಸದ ಅಧ್ಯಯನದಲ್ಲಿ ಕೂಡ ಮುಂದುವರಿದಿದೆ.
ಇವೆಲ್ಲವೂ ಬೆಳೆಸಿದ ಯೋಗವು ಇಂದು ಇವುಗಳನ್ನು ಬಿಟ್ಟು ವ್ಯಾಯಾಮ ಎಂಬ ಅರ್ಥದಲ್ಲಿ ಪ್ರಚಾರ ಪಡೆಯುತ್ತಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಲ್ಲಿ ಅದಕ್ಕೆ ಬೆಲೆ ಇದೆ.
ಗುರು ಮೂಲದ ಪಂಥವಾದ ನಾಥಕ್ಕೆ ಯೋಗವು ಇಂದು ಪ್ರಮುಖ ಚಟುವಟಿಕೆ. ಯೋಗ ಎಂದರೆ ಸೇರುವುದೇ ಆಗಿದೆ, ಅರ್ಥಾತ್ ಮಿಲನ. ಇಲ್ಲಿ ದೇಹವೇ ಮುಖ್ಯ. ದೇಹದ ಮೂಲಕ ಗಳಿಸುವ ಅನುಭವವೇ ಸತ್ಯ. ಎಲ್ಲಾ ಅರಿವುಗಳನ್ನು ದೇಹದ ಮೂಲಕವೇ ಪಡೆಯಬೇಕು ಎಂಬುದು ನಾಥದ ನಿಲುವು.
ನಾಥ ಪಂಥಕ್ಕೆ ಯೋಗಮರ್ಗ ಎಂಬ ಹೆಸರಿದೆ. ನಾಥರು ಯೋಗಿಗಳು. ಅದರ ಅನುಯಾಯಿಗಳು "ಜೋಗಿಗಳು" (ತುಳುನಾಡಿನಲ್ಲಿ ಜೋಗಿ ಸಮುದಾಯ ಇದೆ). ನಾಥರು ಇಂದ್ರಿಯಗಳನ್ನು ನಿಯಂತ್ರಿಸಿಕೊಂಡು ಅದರ ಮೇಲೆ ಹಿಡಿತ ಸಾಧಿಸಿದವರು. ಯೋಗಿ ಉಸಿರನ್ನು ಮೇಲ್ಮುಖವಾಗಿ ಹರಿಯ ಬಿಟ್ಟು ಮನಸನ್ನು ಶುದ್ದಿ ಮಾಡುವವನು. ಅಲ್ಲದೆ ವೀರ್ಯವನ್ನು ಉರ್ಧ್ವಮುಖಿಯಾಗಿ ಹಿಡಿದಿಟ್ಟು ಸ್ಖಲನವಾಗದ ಹಾಗೆ ನಿಯಂತ್ರಿಸುವವ.
ದ್ವೈತ, ಅದ್ವೈತಗಳಿಗೆ ಹೊರತಾದ ಹೊರತಾದ ನಾಥ ಪಂಥಕ್ಕೆ ದೇಹವೇ ಮೂಲ. ದೇಹದ ಮೂಲಕವೇ ಎಲ್ಲಾ ಅನುಭವಗಳನ್ನು ದಕ್ಕಿಸಿಕೊಳ್ಳಬೇಕು. ಹಾಗಾಗಿ ದೇಹಾರೋಗ್ಯದ ಬಗ್ಗೆ ಒತ್ತು ಕೊಟ್ಟವು. ದೇಹವನ್ನು ಸದೃಢವಾಗಿ ಇಡಲು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಂಡವು.
ಯೋಗ ಕೇವಲ ದೈಹಿಕವಾಗಿರಲಿಲ್ಲ. ಸದಾ ಚಂಚಲವಾದ ಮನಸ್ಸು, ಉಸಿರು, ವೀರ್ಯಗಳ ಮೇಲೆ ಹತೋಟಿ ಸಾಧಿಸಲು ಅದು ತಿಳಿಸುತ್ತದೆ. ಯೋಗಶಾಸ್ತ್ರ ಹೇಳುವ ಹಾಗೆ ಅದು ಚಿತ್ತವೃತ್ತಿ ನಿರೋಧ ಮಾಡುತ್ತದೆ. ಏಕಾಗ್ರತೆಯ ಮೂಲಕ ಪರತತ್ವದ ಜೊತೆಗೆ ಲೀನವಾಗುವ ಬಗೆಯನ್ನು ಅದು ತಿಳಿಸುತ್ತದೆ. ಹಾಗಾಗಿ ಯಮ ನಿಯಮ ಆಸನ.....ಗಳ ಮೂಲಕ ಉಸಿರನ್ನು ಹತೋಟಿಗೆ ತಂದು ಸಾಧನೆ ಮಾಡಲಾಗುತ್ತದೆ.
ಆರಂಭದಲ್ಲೇ ಹೇಳಿದ ಹಾಗೆ ಯೋಗ ಎಂದರೆ ಮಿಲನ. ಶಿವ ಮತ್ತು ಶಕ್ತಿಯ ಮಿಲನ. ಶಿವನ ವೀರ್ಯವೆಂದು ಭಾವಿಸಲಾದ ಪಾದರಸ ಮತ್ತು ಶಕ್ತಿಯ ರಜವಾದ ಅಬ್ರಕದ ಮಿಲನ (ರಸವಾದ) ಬ್ರಹ್ಮಾಂಡದ ಎಲ್ಲಾ ಶಕ್ತಿ ಚೈತನ್ಯಗಳು ಹುದುಗಿರುವ ಕುಂಡಲಿನಿಯನ್ನು ಎಚ್ಚರಿಸಿ ಆಸನ, ಪ್ರಣಯಾಮಗಳ ಮೂಲಕ ನಿಯಂತ್ರಿಸಿ ಮೂಲಾಧಾರ, ಸ್ವಾಧಿಷ್ಟಾನ, ಮಣಿಪೂರ, ಅನಾಹುತ, ವಿಶುದ್ದಿ, ಅಜ್ಞಾ ಚಕ್ರಗಳನ್ನು ಬೇಧಿಸಿ ಸಹಸ್ರಾರದ ಜೊತೆ ಲೀನ ಮಾಡುವುದು ಯೋಗ.
ಯೋಗದ ಆತ್ಯಂತಿಕ ಸ್ಥಿತಿಯಲ್ಲಿ ನಾಥನೆ ಶಿವನಾಗುವ ಕಾರಣ ಪ್ರತ್ಯೇಕ ಶಿವನ ಅವಶ್ಯಕತೆ ಇಲ್ಲ. ಹಾಗಾಗಿ ಇವರಲ್ಲಿ ದೇವರ ಕಲ್ಪನೆ ಇಲ್ಲ. ನಾಥದರ್ಶನ ಬೇರೆ ಬೇರೆ ದೇವರನ್ನು ಪೂಜೆ ಮಾಡುವ ಬಗ್ಗೆ ಆಕ್ಷೇಪ ವ್ಯಕ್ತ ಮಾಡುತ್ತದೆ. ಇದೊಂದು ಶುದ್ಧ ನಾಸ್ತಿಕ ಧರ್ಮ.
ರೂಢಿಯಿಂದ ಬಂದ ಆಚರಣೆಯ ಮತ್ತು ಸಿದ್ದ ಜ್ಞಾನವನ್ನು ಒಪ್ಪದೆ ಅನುಭವ ಮುಖೇನ ಅರಿವನ್ನು ಕಂಡುಕೊಳ್ಳುವ ನಾಥ ವೈಧಿಕವನ್ನು ಕಟುವಾಗಿ ಟೀಕಿಸುತ್ತಿದ್ದ. ಅಲ್ಲದೆ ದೇಹ ಮುಖ್ಯದಾಗ ಅಲ್ಲಿ ಬೇಧವಿಲ್ಲ. ಹೀಗಾಗಿ ನಾಥ ಪಂಥಕ್ಕೆ ಜಾತಿ ಧರ್ಮ ಇಲ್ಲ. ನಾಥರಲ್ಲಿ ಮುಸಲ್ಮಾನ ಗುರು ಇದ್ದಾನೆ. (ಕದ್ರಿ ಮಂಜುನಾಥ ದೇವಾಲಯದಲ್ಲಿ ಒಂದು ಸಮಾಧಿ ಇದೆ) ಹೀಗಾಗಿ ವರ್ಣ ಜಾತಿ ವ್ಯವಸ್ಥೆಯನ್ನು ಸಂಪೂರ್ಣ ಟೀಕಿಸುವ ನಾಥ ಪಂಥ ಒಂದು ಸೆಕ್ಯೂಲರ್ ಮನೋಭಾವ ಹೊಂದಿದ್ದು.
![]() |
| MachendraNatha of Kolaramma Temple, Kolar Dist. Karnataka |
"ಯೋಗಮಾರ್ಗಾತ್ ಪರೋ ಮಾರ್ಗೊ, ನಾಸ್ತಿನಾಸ್ತಿ ಶ್ರುತೌಸ್ಮೃತೌ" ಎನ್ನುವ ಗೋರಕ್ಷ ಸಿದ್ದಾಂತ ಸಂಗ್ರಹದ ಮಾತು ಗ್ರಂಥಸ್ಥ ಜ್ಞಾನದ ಮೂಲಕ ಬೆಳೆದ ವೇದದ ವಿರುದ್ಧವೇ ಆಗಿದೆ. ಇದನ್ನು ಆಚರಣೆಗಳಿಗೆ ಕೂಡ ತಂದರು. ಸುಳ್ಯದ ಸಿದ್ದವೇಶ ಎಂಬ ಆಚರಣೆಯ ಕುಣಿತದಲ್ಲಿ ನಾಥ ಸನ್ಯಾಸಿ ತನ್ನ ಬೆತ್ತದ ಶಿಶ್ನದಿಂದ ಪೂಜೆ ಮಾಡುವ ಬ್ರಾಹ್ಮಣನನ್ನು ಅವಮಾನಿಸುವ ಅನ್ನಿವೇಶ ಇದೆ. ಕಂದ್ರಪ್ಪಾಡಿಯ ನಾಥ ಜೋಗಿ ಪುರುಷ ವೈದಿಕ ವಿಧಿಗಳ ಮೂಲಕ ಪ್ರತಿಷ್ಠಾಪನೆ ಗೊಳ್ಳಲಿರುವ ದೇವಾಲಯವನ್ನು ಅಶುದ್ಧ ಮಾಡಿ ರಾಜ್ಯ ದೈವವನ್ನು ಪ್ರತಿಷ್ಠಾಪನೆ ಮಾಡುತ್ತಾನೆ. ಗೋರಖನು ಪೂಜೆ, ಹವನಗಳನ್ನು ವಿರೋಧಿಸುತ್ತಾರೆ.
ನಾಥ ಮೂಲದ ಆದಿಚುಂಚನಗಿರಿ ಮಠ ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗುತ್ತ ವೈದಿಕ ಆಚರಣೆಗಳನ್ನು ರೂಢಿಗೆ ತರುತ್ತಿರುವುದು ನಮ್ಮ ಕಣ್ಣ ಮುಂದೆ ನಡೆಯುತ್ತಿದೆ. ಅಲ್ಲಿಗೆ ಝಂಡಿ ಯಾತ್ರೆ ಬಂದು ನಾಥರ ಪಟ್ಟಾಭಿಷೇಕ ಆಗುವುದು ನಿಂತು ಹೋಗಿದೆ. ಹೀಗೆ ಯೌಗಿಕ ಪಂಥಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಾತ್ರವಲ್ಲ ಕಾಲಕ್ಕೆ ತಕ್ಕ ಹಾಗೆ ಸಾಂಸ್ಕೃತಿಕ ಸ್ಥಿತ್ಯಂತರಕ್ಕೆ ಒಳಗಾಗಿವೆ.
ನಾನು ಇದನ್ನು ಇಲ್ಲಿ ಹೇಳಿದ್ದು ವೈದಿಕ ವಿರೋಧಿ ಮನೋಭಾವದಿಂದ ಅಲ್ಲವೇ ಅಲ್ಲ. ಯಾಕೆಂದರೆ ಭಾರತೀಯ ಸಂಸ್ಕೃತಿಯ ಬಗ್ಗೆ ಕುತೂಹಲ ಇರುವ ವಿದ್ಯಾರ್ಥಿಯಾಗಿ ನನಗೆ ನಿರ್ಲ್ಕ್ಯಕ್ಕೆ ಒಳಗಾದ ಒಂದು ದರ್ಶನದ ಬಗ್ಗೆ ಹೇಳಬೇಕು ಅನ್ನಿಸಿತ್ತು. ಅನುಭಾವಿ ಪಂಥಗಳು ದೇಶದ ಬಹು ಸಮುದಾಯಗಳನ್ನು ಪ್ರಭಾವಿಸಿರುವ ಬಗೆ ನನಗೆ ಕುತೂಹಲ ಉಂಟು ಮಾಡಿದೆ.
ಇಷ್ಟು ಯೋಗದ ದೆಸೆಯಿಂದ ಹೇಳಲು ಕಾರಣಗಳು ಇವೆ.
1. ಭಾರತದ ಸಂಸ್ಕೃತಿಯಲ್ಲಿ ಜಾತ್ಯತೀತ ನಿಲುವುಗಳು ಅಳವಾಗಿವೆ. ಇಂದು ಸೆಕ್ಯೂಲರ್ ಪ್ರಜ್ಞೆಯನ್ನು ಹಾಸ್ಯ ಮಾಡುವ ಮಂದಿಗೆ, ದೇವರ ಪಾರಮ್ಯವನ್ನು ಒಪ್ಪದ ಜನಕ್ಕೆ ಭಾರತದ ಬಹು ವೈಚಾರಿಕ ನೆಲೆಗಳ ಬಗ್ಗೆ ಅರಿವಿಲ್ಲ.
2. ಜಾತ್ಯತೀತ ಮನೋಭಾವದ ನಾಥ, ಕಾಳಾಮುಖ, ವಾರಕರಿ, ದತ್ತ, ಸೂಫಿ, ಕೌಳ...ಮೊದಲಾದ ತಾಂತ್ರಿಕ ಪರಂಪರೆಗಳು ಮೂಲೆಗೆ ಸರಿಯಲು ಕಾರಣ ಜಾತಿ ವಾದವನ್ನು ಪ್ರತಿಪಾದಿಸುತ್ತಾ ಬೆಳೆದ ಇತರ ಮತಗಳು. ಇವು ಸಣ್ಣ ವರ್ಗವನ್ನು ಪ್ರಭಾವಿಸುತ್ತಾ ಬೆಳೆದರೂ ಯೌಗಿಕ ಮತಗಳನ್ನು ಇತಿಹಾಸದಿಂದ ಮರೆ ಮಾಡುವಷ್ಟು ಪ್ರಭಾವಶಾಲಿಯಾಗಿವೆ. ಇವುಗಳ ಆಧುನಿಕ ರೂಪವೇ ಬಹುಸಂಸ್ಕೃತಿಗಳನ್ನು ಒಪ್ಪದ ಹೊಸದಾದ "ಹಿಂದುತ್ವದ" ಪರಿಕಲ್ಪನೆ (ಹಿಂದೂ ಧರ್ಮ ಅಲ್ಲ)
3. ಯೋಗ ಎಂಬುದು ಯಾರ ಸೊತ್ತೂ ಅಲ್ಲ. ಅದನ್ನು ಬ್ರಾಹ್ಮಣ್ಯ ಎಂದು ಪರಿಗಣಿಸುವುದು ತಪ್ಪು. ಯಾಕೆಂದರೆ ಯೋಗವನ್ನು ದೇಶದಲ್ಲಿ ಪ್ರಚುರ ಮಾಡಿದ ಬಹುತೇಕ ಎಲ್ಲಾ ಪಂಥಗಳು ಅವೈದಿಕ ಮತ್ತು ನಾಸ್ತಿಕ.
4. ಯೋಗವನ್ನು ಕಾಲು ದೇಹ ಕುತ್ತ ಮಾಡುವುದು ಎಂದು ಬಗೆದಿರುವ ನಮಗೆ ಅದರ ಹಿಂದಿರುವ ದಾರ್ಶನಿಕ ಪ್ರಜ್ಞೆಗಳು ಬೇಡ. ಯಾಕೆಂದರೆ ಯೋಗ ಎಂಬುದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಸರಕು ಆಗಿದೆ. ಅಲ್ಲದೆ ಈಗ ಅದೊಂದು ರಾಜಕೀಯದ ಗೊಂಬೆಯಾಗಿದೆ.
5. ಯೋಗಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ.
ಚರಣ್ ಐವರ್ನಾಡು
Charan Aivarnad
Bengaluru
9740249793


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thank You