ಬೆಂಗಳೂರಿನಲ್ಲಿ ಕುಷನರ ಕಾಲದ 1900 ವರ್ಷ ಹಳೆಯ ನಾಣ್ಯ!

 ಬೆಂಗಳೂರಿನಲ್ಲಿ ಕುಷನರ ಕಾಲದ 1900 ವರ್ಷ ಹಳೆಯ ನಾಣ್ಯ!

Third Kushan king Vima Kathphishas standing facing, sacrificing at fire altar at left, club, tamgha and axehead-shafted trident in fields,


ಕಳೆದ ವಾರ ನನಗೆ ತುಂಬಾ ಪ್ರಾಚೀನವಾದ ನಾಲ್ಕು ನಾಣ್ಯಗಳು ಸಿಕ್ಕವು. ಕೆಲವು ದಿನಗಳಿಂದ ವಿನೆಗರ್, ವಾಟೆ ಹುಳಿ ಹಾಕಿ ತೊಳೆದದ್ದೇ ತೊಳೆದದ್ದು. ಈಗ ಈ ನಾಣ್ಯಗಳು ಯಾವುದು ಎಂದು ತಿಳಿಯಲು ಸಾಧ್ಯವಾಗಿದೆ.
ಇದು ಕುಷಾನರ ಮೂರನೇ ರಾಜ ವಿಮಾ ಕಡ್ ಫೀಸಸ್ ನ ನಾಣ್ಯ. ವಿಮಾ ಕಡ್ ಫೀಸಸ್ ನ ಚಿನ್ನದ ಮತ್ತು ತಾಮ್ರದ ನಾಣ್ಯಗಳು ಇವೆ. ಇವನ ನಾಣ್ಯಗಳು ಇವನನ್ನು ಶಿವಭಕ್ತ ಎಂದು ತೋರಿಸುತ್ತವೆ.
ಸಧ್ಯ ನನ್ನ ಬಳಿ ಎರಡು ನಾಣ್ಯಗಳು ಇವೆ. ಇಲ್ಲಿ ನೀಡಿರುವ ನಾಣ್ಯದ ಒಂದು ಬದಿ ಕೋಟು ತೊಟ್ಟು ಕೈಯಲ್ಲಿ ಆಯುಧ ಹಿಡಿದ ವ್ಯಕ್ತಿ ಇದ್ದಾನೆ. ಹಿಂದೆ ನಂದಿಯ ಕುಂಡೆ ಇರುವುದರಿಂದ ಅದರ ಜೊತೆಗೆ ನಿಂತಿರುವ ವ್ಯಕ್ತಿಯ ತಲೆ ಕೂಡ ನೋಡಬಹುದು. ನಿಂತಿರುವ ವ್ಯಕ್ತಿ ವಿಮಾ ಕಡ್ ಫೀಸಸ್ ಮತ್ತು ನಂದಿಯ ಜೊತೆಗೆ ಇರುವವನು ಶಿವ! ಇದು ಸುಮಾರು 1900 ವರ್ಷಗಳ ಹಳೆಯ ನಾಣ್ಯ! ಆದರೆ ಅಕ್ಷರಗಳು ಅಸ್ಪಷ್ಟ.

Siva standing facing, holding trident and deerskin, bull Nandi right behind,ption


ಕುಜುಲ ಕಡ್‍ಫೀಸಿಸ (ಸಾಮಾನ್ಯ ಶಕ. 30-80) ವಿಮಾ ಟಕ್ಟು (ಸಾಮಾನ್ಯ ಶಕ 80-95) ನಂತರ ಆಳಿದ ವಿಮ ಕಡ್‍ಫೀಸಿಸನ (ಸಾಮಾನ್ಯ ಶಕ 95-127) ಚಿನ್ನದ ಮತ್ತು ತಾಮ್ರದ ನಾಣ್ಯಗಳು ದೊರಕಿವೆ. ಚಿನ್ನದ ನಾಣ್ಯದ ಮುಂಬದಿಯಲ್ಲಿ ಅಂಕುಶ ಮತ್ತು ದೊಣ್ಣೆಗಳೊಂದಿಗೆ ರಾಜನ ಎದೆ ಚಿತ್ರವೂ ಹಿಂಬದಿಯಲ್ಲಿ ಬಲಗೈಯಲ್ಲಿ ತ್ರಿಶೂಲ-ಪರಶುಗಳೆರಡೂ ಕೂಡಿರುವ ಆಯುಧ ಹಿಡಿದ ಶಿವನ ಚಿತ್ರ ಇವೆ. ಎಡಗೈಯ ಮೇಲೆ ಚರ್ಮವಿದೆ. ಹಿಂಬದಿಯಲ್ಲಿ ಮಹಾರಾಜನ ಸರ್ವಲೋಗ ಈಶ್ವರ ಮಹೇಶ್ವರಸ ವಿಮಾಕತ್ ಪಿಸಸ ತ್ರಾತರಸ ಎಂದಿದೆ. ಚಿನ್ನದ ಇನ್ನೊಂದು ಚಿಕ್ಕ ನಾಣ್ಯದ ಮೇಲಿನ ಚೌಕದಲ್ಲಿ ರಾಜನ ತಲೆ ಇದೆ. ಹಿಂಬದಿಯಲ್ಲಿ ತ್ರಿಶೂಲಕ್ಕೆ ಸೇರಿಸಿದ ಪರಶುವುಂಟು. ಮಹಾ ರಾಜಾಧಿರಾಜ ವಿಮಾಕತ್ ಪಿಸಸ ಎಂಬ ಖರೋಷ್ಠಿ ಶಾಸನವಿದೆ. ತಾಮ್ರದ ನಾಣ್ಯದಲ್ಲಿ ನಿಂತಿರುವ ರಾಜನ ಚಿತ್ರದಲ್ಲಿ ಉದ್ದವಾದ ಕೋಟು ಷರಾಯಿಗಳಿವೆ. ಹಿಮ್ಮುಖದಲ್ಲಿ ಬಸವನೊಂದಿಗೆ ನಿಂತಿರುವ ಶಿವನ ಚಿತ್ರವಿದೆ. ಕನಿಷ್ಕನ ನಾಣ್ಯಗಳ ಮೇಲೆ ಗ್ರೀಕರ ಮತ್ತು ಇರಾನಿನ ದೇವತೆಗಳೊಡನೆ ಬುದ್ಧ ಮತ್ತು ಈಶ್ವರ ಚಿತ್ರಗಳಿವೆ. ಮತೀಯ ವಿಚಾರಗಳಲ್ಲಿ ಆತ ಉದಾರ ನೀತಿ ತಳೆದಿದ್ದನೆಂಬುದಕ್ಕೆ ಇದು ದೃಷ್ಟಾಂತ. ಅವನ ಚಿನ್ನದ ನಾಣ್ಯವೊಂದರಲ್ಲಿ ಓಡುತ್ತಿರುವ ವಾಯುದೇವತೆಯ ಚಿತ್ರವಿದೆ.
ಕನಿಷ್ಕನ ಅನಂತರ ಬಂದ ಹುವಿಷ್ಕ ಮತ್ತು ವಾಸುದೇವರೂ ಇದೇ ರೀತಿಯ ನಾಣ್ಯಗಳನ್ನು ಅಚ್ಚು ಹಾಕಿಸಿದರು.
ಕುಷಾಣ ರಾಜರಿಗೆ ವಿವಿಧ ಬಗೆಯ ಯವನ ಹಾಗೂ ಭಾರತೀಯ ಬಿರುದುಗಳಿದ್ದುವೆಂಬುದು ಇವರ ನಾಣ್ಯಗಳು ಮತ್ತು ಶಾಸನಗಳು ತಿಳಿಸುತ್ತವೆ. ಷಾಹಿ (ಶಾಹಿ) ಶಾವೊನನೊ ಶಾವೊ (ಶಾಹನ್‍ಶಾಹ್ : ರಾಜಾಧಿ ರಾಜ), ಮುರೋಡ ಶಕ ಮುರುಣ್ಣ:ಅಧಿಪತಿ), ಮರ್ಝಕ, (ಶಕ:ಗೃಹಪತಿ), ಕಇಸರ ಇವು ಯವನ ಬಿರುದುಗಳು.
ಬ್ಯಾಸಿಲಿಯಸ್ ಬ್ಯಾಸಿಲಿಯನ್ (ರಾಜಾಧಿರಾಜ) ಎಂಬುದು ಗ್ರೀಕ್ ಬಿರುದು. ಮಹರಜ (ಮಹಾರಾಜ), ರಜತಿರಜ (ರಾಜಾಧಿರಾಜ) ಮಹಿಶ್ವರ (ಮಹೇಶ್ವರ), ದೇವಪುತ್ರ , ಧ್ರಮೆಠಿದ (ಧರ್ಮಸ್ಥಿತ) ಅಥವಾ ಸಚಧ್ರ ಮಠಿದ (ಸತ್ಯಧರ್ಮಸ್ಥಿತ), ಸರ್ವಲೋಗ ಇಸ್ವರ (ಸರ್ವಲೋಕೇಶ್ವರ) ಹಾಗೂ ತ್ರತರ (ತ್ರಾತಾ) ಇವು ಕುಷಾನ ಅರಸರಿಗೆ ಇದ್ದ ಭಾರತೀಯ ಬಿರುದುಗಳು.
ಮಧ್ಯ ಏಷ್ಯದಿಂದ ಪ್ರಾಚೀನ ಭಾರತಕ್ಕೆ ವಲಸೆ ಬಂದ, ವಾಯುವ್ಯ ಭಾಗದಲ್ಲಿ ನೆಲಸಿದ ಕುಶಾನರು ಭಾರತದ ರಾಜಕೀಯ, ಆರ್ಥಿಕ ಧಾರ್ಮಿಕ ಹಾಗೂ ಸಾಂಸ್ಕøತಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಇವರು ಯೂ-ಚಿ ಕುಲದವರು ಅರ್ಥಾತ್ ಚಂದ್ರ ವಂಶೀಯರು.
ಈ ಅಲೆಮಾರಿ ತಂಡ ಕ್ರಿ.ಪೂ. 2ನೆಯ ಶತಮಾನದಲ್ಲಿ ಮಧ್ಯೆ ಏಷ್ಯಾದಲ್ಲಿ ಹುಟ್ಟಿತು ಎಂದು ಚೀನೀ ಇತಿಹಾಸ ತಿಳಿಸುತ್ತದೆ. ಆದರೆ ಕ್ರಿ.ಪೂ. 165ರ ಸುಮಾರಿಗೆ ಮಧ್ಯ ಏಷ್ಯದ ಮತ್ತೊಂದು ಗಣಕ್ಕೆ ಸೇರಿದ ಮತ್ತು ಇವರ ನೆರೆಯವರಾದ ಹ್ಯೂಂಗ್ ನುಗಳು ಇವರನ್ನು ಸೋಲಿಸಿದ್ದರಿಂದ ಯೂ-ಚಿಗಳು ತಮ್ಮ ನೆಲೆಯಾದ `ಹುಲ್ಲುಗಾವಲನ್ನು ಬಿಟ್ಟು ಪಶ್ಚಿಮದ ಕಡೆಗೆ ಸರಿದರು. ಹೀಗೆ ನೆಲೆಗಾಗಿ ಅಲೆಯುತ್ತಿದ್ದ ಯೂ-ಚಿಗಳು ಇಲ್ಲಿ ನದಿ ಪ್ರದೇಶದ ಸನ್ ಜನಾಂಗವನ್ನು ಸೋಲಿಸಿದರು.
ಇಷ್ಟರಲ್ಲಿ ಯೂ-ಚಿಗಳ ತಂಡದಲ್ಲಿ ಇಬ್ಭಾಗವಾಗಿ ಅವರ ಸಣ್ಣ ತಂಡ ದಕ್ಷಿಣಕ್ಕೆ ಸರಿದು ಟಿಬೆಟಿನತ್ತ ವಲಸೆ ಹೋಯಿತು. ಪ್ರಧಾನ ತಂಡ (ಟಯೂ-ಚಿ) ಪಶ್ಚಿಮಕ್ಕೆ ಪ್ರಯಾಣ ಬೆಳೆಸಿ ವು-ಸನ್ ರಾಜ್ಯದ ಪಶ್ಚಿಮದ ಮತ್ತು ಜಕ್ಸಾರ್ಟಿಸ್ ನದಿಯ ಉತ್ತರದ ಭಾಗಗಳನ್ನು ಆಕ್ರಮಿಸಿಕೊಂಡು ಶಕರನ್ನು ಸೋಲಿಸಿತು. ಶಕರು ಆಘ್ಘಾನಿಸ್ತಾನದ ದಕ್ಷಿಣ ಭಾಗಕ್ಕೆ ಹೋಗಿ ನೆಲೆಸಿದರು. ಇಷ್ಟರಲ್ಲಿ ಶತ್ರುಗಳು ಕೈಯಿಂದ ಪಾರಾಗಿದ್ದ ವು-ಸನ್ ರಾಜಪುತ್ರ ಹ್ಯೂಂಗ್-ನುಗಳ ಸಹಾಯದಿಂದ ಯೂ-ಚಿಗಳನ್ನು ಸೋಲಿಸಿ ಅವರನ್ನು ತನ್ನ ಮತ್ತು ಶಕರ ಪ್ರದೇಶಗಳಿಂದ ಓಡಿಸಿದರು.
ಅನಂತರ ಪ್ರಧಾನ ಯೂ-ಚಿ ತಂಡ ಅಲೆಯುತ್ತ ಬ್ಯಾಕ್ಟ್ರಿಯದ ಆಕ್ಸಸ್ ನದೀ ಪ್ರದೇಶವನ್ನು ತಲುಪಿ ಅಲ್ಲಿ ನೆಲಸಿದ್ದ ಶಕರನ್ನು ಮತ್ತೆ ಓಡಿಸಿ ಹಲವಾರು ನೆರೆಹೊರೆಯ ಪ್ರದೇಶವನ್ನು ಗೆದ್ದುಕೊಂಡು ರಾಜ್ಯ ವಿಸ್ತಾರ ಮಾಡಿದರು. ಆಗ ಅವರ ಆಡಳಿತ ಬ್ಯಾಕ್ಟ್ರಿಯದಿಂದ ಆಕ್ಸಸ್‍ನ ದಕ್ಷಿಣದವರೆಗೂ ಹಬ್ಬಿತ್ತು. ಅವರ ರಾಜಧಾನಿ ಆಕ್ಸಸ್ ನದಿಯ ಉತ್ತರಕ್ಕಿದ್ದ ಕಿಯೆನ್-ಚಿ ಎಂದೂ ಅವರ ರಾಜ್ಯದ ದಕ್ಷಿಣದ ಗಡಿ ಕಿ-ಪಿನ್ ಬಳಿಯಿತ್ತೆಂದೂ ಕ್ರಿ.ಶ. 24ರವರೆಗಿನ ಇತಿಹಾಸವನ್ನು ತಿಳಿಸುವ ಚೀನೀ ಚರಿತ್ರಕಾರ ಪಾನ್-ಕುವಿನ ಬರಹಗಳಿಂದ ತಿಳಿದು ಬರುತ್ತದೆ. ಐದು ಗುಂಪುಗಳನ್ನೊಳಗೊಂಡಿದ್ದ ಯೂ-ಚಿ ಪಂಗಡದಲ್ಲಿ ಕಾಲಕ್ರಮದಲ್ಲಿ ಒಂದು ಪಂಗಡ ಪ್ರಬಲವಾಗಿ ಇತರ ಗುಂಪುಗಳನ್ನು ಗೆದ್ದು ಕೊಂಡಿತೆಂದು ಇನ್ನೊಬ್ಬ ಚೀನೀ ಚರಿತ್ರಕಾರ ಫಾನ್-ಯೆ ತಿಳಿಸಿದ್ದಾನೆ. ಅನಂತರ ಯೆನ್-ಕಾವೊ-ಚೆನ್ ಎಂಬ ನಾಯಕನ ಆಳ್ವಿಕೆಯಲ್ಲಿ ಭಾರತದ ಪಂಜಾಬ್ ಪ್ರದೇಶ ಇವರ ವಶವಾಯಿತು. ಪ್ರಬಲರಾದ ಯೂ-ಚಿಯರಿಗೆ ಆಗಿನಿಂದ ಕುಷಾಣರೆಂದು ಹೆಸರಾಯಿತು.
ಕೊನೆಗೆ.... ನಮ್ಮಲ್ಲಿ ಇಂದು ನಾವು ಭಾವಿಸಿರುವ ಭಾರತಕ್ಕೆ ಹೊರಗಿನಿಂದ ಬಂದ ಈ ರಾಜವಂಶ ತಮ್ಮ ಮೂಲ ಧರ್ಮ, ಬೌದ್ಧ ಮತ್ತು ಜೋರಾಸ್ಟ್ರಿಯನ್ ಧರ್ಮದ ಜೊತೆಗೆ ಹಿಂದೂ ದೇವತೆಗಳನ್ನು ಆರಾಧಿಸಿದ, ಮಥುರಾ ದಂತಹ ಪಟ್ಟಣವನ್ನು ಕಟ್ಟಿ ಬೆಳೆಸಿದ ಕುಷಾನರು ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ.
ಭಾರತದಲ್ಲಿ "ಹೊರಗಿನಿಂದ ಬಂದವರು" ಏನೆಲ್ಲಾ ಮಾಡಿದ್ದಾರೆ ನೋಡಿ!



Charan Aivarnad
Bengaluru

ಕಾಮೆಂಟ್‌ಗಳು

Bahurupi Bharatha