"ಮಂಗಳಮುಖಿ" ಮಂಗಳಾರತಿ
ಅಸ್ಸಾಂನ ಗುಹಾವಟಿಯ ಟ್ರೈನಿನ ಅನುಭವ.....
ಚರಣ್ ಐವರ್ನಾಡು
ಗುವಾಹಟಿಯ ಟ್ರೈನಿನಲ್ಲಿ ಪಟ್ ಪಟ್ ಎಂದು ಚಪ್ಪಾಳೆ ಶಬ್ದ ಕೇಳಿದಾಗ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಹಾಗಾಗುತ್ತಿತ್ತು. ನಾಟಕದಲ್ಲಿ ಹೆಣ್ಣಿನ ವೇಷ ಹಾಕಿದ ಗಂಡಸಿನಂತೆ ವಿಚಿತ್ರ ಸಿಂಗಾರ ಮಾಡಿಕೊಂಡು ಬರುವ ಮಂಗಳಮುಖಿಯರ ಹಿಂಡು ಗಳು ನನ್ನ ಕಡೆಗೆ ಬರುವ ತಾಲಿಬಾನಿಗಳಂತೆ ಭಯಾನಕವಾಗಿ ತೋರುತ್ತಿದ್ದವು. ಅವತ್ತು ಬೆಳ್ಳಂಬೆಳಿಗ್ಗೆ ನಡೆದ 'ದರ್ಶನ' ಭಯ ಮಿಶ್ರಿತ ಹೇಸಿಗೆ ಹುಟ್ಟಿಸಿತ್ತು !
ಕಾಮಕ್ಯ ಶಕ್ತಿ ಪೀಠ, ಶಿಲ್ಲಾಂಗ್ ,ಅಸ್ಸಾಂ , ಮೇಘಾಲಯ ಅಂತೆಲ್ಲ ಸುತ್ತಿ ಗುವಾಹಟಿಯ ಲ್ಲಿ ತಿಪ್ಪರಲಾಗ ಹಾಕಿ ಒಂದುಜನರಲ್ ಬೋಗಿ ಹತ್ತಿದಾಗ ರೈಲು ಖಾಲಿ ಖಾಲಿ ಇತ್ತು. ನನ್ನ ಸೀಟಿನಲ್ಲಿ ಬ್ಯಾಗುಗಳನ್ನು ಇಟ್ಟು ಪಕ್ಕದ ಕಂಪಾರ್ಟ್ ಮೆಂಟಿನಲ್ಲಿ ಮೊಬೈಲು ಚಾರ್ಜಿಗೆ ಇಟ್ಟು ಕುಳಿತ್ತಿದ್ದೆ. ಬೆಳಗ್ಗೆ ಆರೂವರೆ ಏಳು ಗಂಟೆಯ ಮಧ್ಯೆ ಮಂಗಳಮುಖಿಯರ ಗುಂಪೊಂದು ರೈಲು ಹತ್ತಿತು. ಲಂಗ ದಾವಣಿ ತೊಟ್ಟ ತೆಳ್ಳಗಿನ ಒಬ್ಬಳು ನನ್ನ ಪಕ್ಕ ಬಂದು ಕುಳಿತಳು. ನಂಗೆ ಅವರ ಬಗ್ಗೆ ತುಂಬಾ ಗೌರವ ಇದ್ದರಿಂದ ಅವಳ ಮುಖವನ್ನು ನೋಡಿ ಮತ್ತೆ ಮೊಬೈಲ್ ಉಜ್ಜತೊಡಗಿದೆ.
ಸಡನ್ ಆಗಿ ಎದ್ದ ಅವಳು "ಪೈಸಾ ಕೊಡು...." ಅಂತ ಹಿಂದಿಯಲ್ಲಿ ನನ್ನನ್ನು ತಟ್ಟಿ ಕೇಳಿದಳು. ನಾನು ಅಸಮಾಧಾನದಿಂದಲೇ "ಪೈಸೆ ಬ್ಯಾಗಲ್ಲಿದೆ. ತಂದೆ...." ಅಂದಾಗ ಕೆಕ್ಕರಿಸಿ ನನ್ನನ್ನು ನೋಡಿ ನನ್ನದೆರು ಕುಳಿತಳು. ತನ್ನ ಒಂದು ಕಾಲನ್ನು ಎದುರಿನ ಸೀಟಿಗಿಟ್ಟು ಕಾಲುಗಳನ್ನು ಅಗಲಿಸಿ ಲಂಗವನ್ನು ಎತ್ತಿ ಹಿಡಿದು "ಪೈಸಾ ಇಲ್ಲಾ.....? ನೋಡು....ನೋಡು...." ಅಂತ ರಾಕ್ಷಸ ಭಯಂಕರವಾಗಿ ಹೇಳಿದಳು. ಈ ಅನಿರೀಕ್ಷಿತ ಆಘಾತಕ್ಕೆ ಭಯಗೊಂಡು ನಾನು ಬ್ಲಾಂಕೇಟಿನಿಂದ ಮುಖ ಮುಚ್ಚಿ ನನ್ನ ಕಂಪಾರ್ಟ್ ಮೆಂಟಿಗೆ ಓಡಿ ಬ್ಯಾಗಿನಲ್ಲಿ ಕೈಗೆ ಸಿಕ್ಕಿದ ಹತ್ತು ರುಪಾಯಿ ತೆಗೆದು ಕೊಟ್ಟೆ.
ಸುಮಾರು ಗಂಟೆಗಳಷ್ಟು ನನ್ನ ಎದೆಯಲ್ಲಿ ಜಲ್ಲಿ ಪುಡಿಮಾಡುವ ಯಂತ್ರ ಕೆಲಸ ನಿಲ್ಲಿಸಿರಲಿಲ್ಲ! ಕೆಲವರು ನನ್ನ ಅವಸ್ಥೆ ನೋಡಿ ನಗುತ್ತಿದ್ದರು. ನಂಗೂ ಒಳಗೊಳಗೆ ನಗು ಒತ್ತರಿಸಿ ಬರುತ್ತಿತ್ತು. ಹಿಂದೆ ಯಾರೋ ಗೆಳೆಯರು ಹೇಳಿದ್ದು ನೆನಪಿಗೆ ಬಂತು- "ಅವರದ್ದನ್ನು ನೋಡಿದರೆ ಬಾರಿ ದೊಡ್ಡ ದೋಷ ಅನಿಷ್ಟ ಮಾರಾಯ !"
ನಾನು ಮಂಗಳಮುಖಿಯರು ಬಗೆಗಿನ ಫಿಲಂಗಳನ್ನು ನೋಡಿ , ಪುಸ್ತಕ ಓದಿ ಬಹಳ ಗೌರವ ಹೊಂದಿದ್ದೆ. ಅವರ ಕಷ್ಟ-ದಾರಿದ್ರ್ಯ ಬದುಕನ್ನು , ಸಮಾಜ ಅವರನ್ನು ನೋಡುವ ಮತ್ತು ಟ್ರೀಟ್ ಮಾಡುವ ರೀತಿಯನ್ನು ನೋಡಿ ನೊಂದಿದ್ದೇನೆ. ಅವರ ಸುತ್ತ ಕೇಂದ್ರೀಕೃತವಾಗಿ ಭಾರತದಲ್ಲಿ ಬೆಳೆದ ಆರಾಧನಾ ಪರಂಪರೆಗಳ ಬಗ್ಗೆ ತಕ್ಕಮಟ್ಟಿಗೆ ತಿಳಿದಿದ್ದೇನೆ. ತಮಿಳುನಾಡಿನ "ಆರವನ್ ಜಾತ್ರೆ" , ಭಾರತದ ಉಭಯಲಿಂಗಿ ದೇವತೆಗಳು, ತಾಯಿಯಾಗಿ ಮಾನವನಾಗಿ ಸಲಹುವ ತುಳುನಾಡಿನ ದೈವಗಳು ಇತ್ಯಾದಿ... ಆರವನ್ ನ ಜಾತ್ರೆಯಲ್ಲಿ ಮಂಗಳಮುಖಿಯರು ಅರ್ಜುನನ ಮಗ ಆರವನ್ ನನ್ನು ಮದುವೆಯಾಗುವ ಮತ್ತು ಅವನ ಸಾವಿನೊಂದಿಗೆ ವಿಧವೆಯರಾಗುವ ಜಾನಪದೀಯ ಆರಾಧನೆಯನ್ನು ತಿಳಿದಿದ್ದೇನೆ. ಈ ಬಗ್ಗೆ ಹೆಚ್ಚು ತಿಳಿಯಲು ಹೆಚ್ಚು ಉತ್ಸುಕನಾಗಿದ್ದೇನೆ.
ನಾನು ಮಂಗಳಮುಖಿಯರು ಬಗೆಗಿನ ಫಿಲಂಗಳನ್ನು ನೋಡಿ , ಪುಸ್ತಕ ಓದಿ ಬಹಳ ಗೌರವ ಹೊಂದಿದ್ದೆ. ಅವರ ಕಷ್ಟ-ದಾರಿದ್ರ್ಯ ಬದುಕನ್ನು , ಸಮಾಜ ಅವರನ್ನು ನೋಡುವ ಮತ್ತು ಟ್ರೀಟ್ ಮಾಡುವ ರೀತಿಯನ್ನು ನೋಡಿ ನೊಂದಿದ್ದೇನೆ. ಅವರ ಸುತ್ತ ಕೇಂದ್ರೀಕೃತವಾಗಿ ಭಾರತದಲ್ಲಿ ಬೆಳೆದ ಆರಾಧನಾ ಪರಂಪರೆಗಳ ಬಗ್ಗೆ ತಕ್ಕಮಟ್ಟಿಗೆ ತಿಳಿದಿದ್ದೇನೆ. ತಮಿಳುನಾಡಿನ "ಆರವನ್ ಜಾತ್ರೆ" , ಭಾರತದ ಉಭಯಲಿಂಗಿ ದೇವತೆಗಳು, ತಾಯಿಯಾಗಿ ಮಾನವನಾಗಿ ಸಲಹುವ ತುಳುನಾಡಿನ ದೈವಗಳು ಇತ್ಯಾದಿ... ಆರವನ್ ನ ಜಾತ್ರೆಯಲ್ಲಿ ಮಂಗಳಮುಖಿಯರು ಅರ್ಜುನನ ಮಗ ಆರವನ್ ನನ್ನು ಮದುವೆಯಾಗುವ ಮತ್ತು ಅವನ ಸಾವಿನೊಂದಿಗೆ ವಿಧವೆಯರಾಗುವ ಜಾನಪದೀಯ ಆರಾಧನೆಯನ್ನು ತಿಳಿದಿದ್ದೇನೆ. ಈ ಬಗ್ಗೆ ಹೆಚ್ಚು ತಿಳಿಯಲು ಹೆಚ್ಚು ಉತ್ಸುಕನಾಗಿದ್ದೇನೆ.
![]() |
| Aravan fare- A transgender taking vrita of Aravan's wife TN photo from Google |
ತರಗತಿಯಲ್ಲಿ LGBTಗಳ ಹಕ್ಕುಗಳ ಬಗೆಗಿನ ಹೋರಾಟಗಳ ಬಗ್ಗೆ ಒಮ್ಮೆ ಮಾತನಾಡುವಾಗ ಬಹುತೇಕರ ಅಜ್ಞಾನದ ಅರಿವಾಗಿತ್ತು. ಕೆಲವರು gay (ಗಂಡು ಸಲಿಂಗ ಪ್ರೇಮಿ)ಗಳೇ ಈ ಟ್ರಾನ್ಸ್ ಜೆಂಡರ್ (ಲಿಂಗಾಂತರಿಗಳು) ಎಂದುಕೊಂಡಿದ್ದರು! ಆಮೇಲೆ gay, lesbian, transgender.....ಎಂದೆಲ್ಲ ಬಿಡಿಸಿ ಹೇಳುವಾಗ ಕೆಲವರು ತಲೆ ಕೆಳಗೆ ಹಾಕಿದ್ದರು!
ಅದು ಇರಲಿ......ಟ್ರೈನು ಕಲ್ಕತ್ತಾದ ಕಡೆ ಹೋಗುತ್ತಿತ್ತು. ರೈಲು ಜನಸಂದಣಿಯಲ್ಲಿ ತುಂಬಿಹೋಗಿತ್ತು. ನನ್ನ ಸೀಟಿನಲ್ಲಿ ಆರು ಜನ ಒಬ್ಬ ಸಣ್ಣ ಹುಡುಗ ಕುಳಿತಿದ್ದರಿಂದ ಅವರ ಮಧ್ಯೆ ನನ್ನ ಸ್ಥಿತಿ ಹಪ್ಪಳದ ಮಣೆಗೆ ಸಿಕ್ಕಿದ ಹಲಸಿನ ಹಿಟ್ಟಿನ ಉಂಡೆಯಂತಾಗಿತ್ತು! ಕಿಟಕಿ ಪಕ್ಕ ನನ್ನ ಹತ್ತಿರ ಬೆಂಗಾಳಿ ವ್ಯಕ್ತಿಯೋರ್ವ ಕುಳಿತಿದ್ದ. ಇನ್ನೊಂದು ಪಕ್ಕದಲ್ಲಿ ಇನ್ನೋರ್ವ. ಎದುರು ಸೀಟಿನಲ್ಲಿ ಓರ್ವ ಅಜ್ಜಪ್ಪ ತನ್ನ ಮೂರು ಮೊಮ್ಮಕ್ಕಳೊಂದಿಗೆ ತಾನು ತಂದಿದ್ದ ಬುತ್ತಿ ಖಾಲಿ ಮಾಡುತ್ತಿದ್ದ. ನನ್ನ ಕಂಪಾರ್ಟ್ ಮೆಂಟಿನಲ್ಲಿಯೇ ಸುಮಾರು ಮೂವತ್ತು ಮೂವತ್ತೈದು ಮಂದಿ ಕುಳಿತು ಮತ್ತು ನಿಂತಿದ್ದರು. ಈ ರಷ್ ನ ಮಧ್ಯೆ ಚುರುಮುರಿ , ಬೇಯಿಸಿದ ಕರಿ ಕಡ್ಲೆ , ಮಣ್ಣಿನ ಸಣ್ಣ ಗಡಿಗೆಗಳಲ್ಲಿ ಮೊಸರು, ಒಣ ದ್ರಾಕ್ಷಿ, ಪುಸ್ತಕಗಳು, ಬಳೆ, ಬಿಂದಿ, ಕನ್ನಡಿ, ಬಾಚಣಿಕೆ, ಪೌಡರ್, ಸೆಂಟು ಮೊದಲಾದವಗಳನ್ನು ಮಾರುವವರು ಬೊಬ್ಬೆ ತುಂಬಿಹೋಗಿತ್ತು. ಖಾನಾ...ಖಾನಾ..ಬಿರಿಯಾನಿ.....ಪಾನಿ...ಪಾನಿ... ಎಂದು ಕೂಗುತ್ತಾ ಬರುವ ರೈಲಿನ ಸಿಬ್ಬಂದಿಗಳು!
ಈ ಮಧ್ಯೆ ನನ್ನ ಜೊತೆಗಿದ್ದವರಿಗೆ ಎ.ಸಿ ಬೋಗಿಯಲ್ಲಿ ಸೀಟು ಸಿಕ್ಕಿದ್ದರಿಂದ ನನ್ನ ಸರದಿಗಾಗಿ ಕಾಯುತ್ತಿದ್ದೆ. ಅವರು ನನ್ನ ಲಗೇಜು, ದುಡ್ಡಿನ ಬ್ಯಾಗನ್ನು ಅವರು ತೆಗೊಂಡು ಹೋದರು. ನಾನು ಹಾಗೇ ಕಣ್ಣು ಮಚ್ಚಿ ಕುಳಿತಿದ್ದೆ.
ಪುನಃ ಫಟ್....ಫಟ್.... ಚಪ್ಪಾಳೆ ! ಐದಾರು ಮಂಗಳಮುಖಿಯರು ಕಲೆಕ್ಷನ್ನಿಗೆ ಬಂದಿದ್ದರು. ನನ್ನ ನಿದ್ದೆ ಮಾಡುವ ನಟನೆ ಸೊಲ್ಪ ಜಾಸ್ತಿಯಾಯಿತು. "ಹಾ...ಪೈಸಾ...ಪೈಸಾ....." ಎಂದು ನನ್ನನ್ನು ತಟ್ಟಿ ಕರೆದಂತಾಯ್ತು. ಕಣ್ಣು ತೆರೆದರೆ ಭಯಂಕರ ವೇಷದಲ್ಲಿದ್ದ ಶರೀರವೊಂದು ನನ್ನ ತಲೆಯನ್ನು ಕುಟ್ಟುತ್ತಿದೆ ! ದುಡ್ಡು ಇಲ್ಲ ಅಂದಾಗ ಕಣ್ಣಗಲಿಸಿ ವಕ್ಕರಿಸಿ ನೋಡಿ ಪಾನ್ ಚಗಿದು ರಕ್ತಕೆಂಪಾಗಿದ್ದ ಬಾಯಿಯಲ್ಲಿ "ಪೈಸಾ ನಹೀ.....ಇದರ್ ದೇಖೋ..... ಕುತ್ತೇ ಕ ಬಚ್ಚಾ! " ಎಂದು ತನ್ನ ಸೀರೆ ನೇಚಿದಳು. ನಂಗೆ ತಲೆ ಸುತ್ತಿದಂತಾಗಿತ್ತು. ದೊಂಡೆಯ ಪಸೆ ಆರಿಹೋಗಿತ್ತು. ಪೌಂಡೇಷನ್ ಗಡ ಗಡ ನಡುಗುತ್ತಿತ್ತು. ಜೇಬಿನಲ್ಲಿ ತಡಕಾಡಿದೆ , ದುಡ್ಡಿಲ್ಲ!
ಪುನಃ ತಡಕಾಡಿದಾಗ ಒಂದು ರುಪಾಯಿಯ ಒಂದು ನಾಣ್ಯ ಇತ್ತು. ತೆಗೆದು ಅವಳಿಗೆ ಕೊಟ್ಟಾಗ ಕೋಪೋದ್ರಿಕ್ತಳಾದ ಆಕೆ "ಇದರಲ್ಲಿ ಕಾಂಡಮ್ ಕೂಡ ಬರಲ್ಲ " ಎಂದು ನನ್ನ ಮುಖಕ್ಕೆ ಎಸೆದು ತಲೆಗೆ ಹೊಡೆದಳು. ಪುನಃ ಸೀರೆಯನ್ನು ನೇಚಿ "ನೋಡು...ನೋಡು....." ಎಂದು ಹತ್ತಿರ ಹತ್ತಿರ ಬಂದಳು.
ನಾನು ಭಯದಿಂದ ಪಕ್ಕದ ಬೆಂಗಾಳಿಯ ಭುಜಕ್ಕೆ ಮುಖವಿಟ್ಪು ಜೋರಾಗಿ ಅಪ್ಪಿದೆ. ಆದರೂ ಇವಳ ಆಟ ನಿಲ್ಲಲಿಲ್ಲ! ಸೀರೆ ನೇಚಿ ನಿಂತುಕೊಂಡಿದ್ದಳು! ಆತ ಕೊನೆಗೆ " ಕರ್ನಾಟಕದಿಂದ ಬಂದಿದ್ದಾರೆ.......ಬಿಟ್ಟು ಬಿಡಿ" ಎಂದು ಬೆಂಗಾಳಿಯಲ್ಲಿ ಹೇಳಿದಾಗ ಆಕೆ ತನ್ನ ಪರಿವಾರದೊಂದಿಗೆ ಹೊರಟಳು. ಇದು ಮಧ್ಯಾಹ್ನ ಹನ್ನೆರಡು ವರೆಯಿಂದ ಒಂದು ಗಂಟೆಗೆ ನಡೆದ ಘಟನೆ.
ನಂಗೆ ಹಿಂಸೆ ಹೇಸಿಗೆಯಾಗಿ ಅಳು ಬಂದು ಹೋಗಿತ್ತು. ಹೊದಿಕೆ ಹೊದ್ದುಕೊಂಡು ಆ ವ್ಯಕ್ತಿಯ ಬುಜಕ್ಕೆ ತಲೆ ಒರಗಿಸಿ ಮೆಲ್ಲಗೆ ಅತ್ತುಬಿಟ್ಟೆ. ಅಲ್ಲೇ ನಿದ್ದೆ ಬಂತು. ಕಲ್ಕತ್ತಾದ ಸ್ಟೇಷನ್ ಬಂದಾಗ ಎಚ್ಚರವಾಯಿತು. ಆ ವ್ಯಕ್ತಿ ಇಳಿದ. ನನಗೆ ಇವೆಲ್ಲದರ ಮಧ್ಯೆ ಹಸಿವೆಯೂ ನಿಂತುಹೋಗಿತ್ತು. ಕಣ್ಣುಗಳನ್ನು ಉಜ್ಜಿಕೊಂಡು ಈ ಘಟನೆಗಳ ಬಗ್ಗೆ ಮೊಬೈಲಿನಲ್ಲಿ ಬರೆಯಲು ಶುರುಮಾಡಿದೆ.
ಮೂರು ಲೈನು ಬರೆದಿರಲಿಲ್ಲ, ನನ್ನ ಎದುರು ಆ ಸ್ಟೇಷನ್ನಿನಿಂದ ಹತ್ತಿದ ಇಬ್ಬರು ಮಂಗಳಮುಖಿಯರು ! ಅವರು ಚಪ್ಪಾಳೆ ತಟ್ಟಿದ್ದು ನನ್ನ ಎದೆಯಲ್ಲಿ ಡೈನಮೇಟ್ ಸ್ಫೋಟವಾದಂತೆ ಆಯ್ತು. "ಪೈಸಾ ಕೊಡು......." ಅಂದಾಗ ನಯಾಪೈಸೆ ಇಲ್ಲದ ನನ್ನ ಹಾರ್ಟು ಬಾಯಿಗೆ ಬಂದಂತಾಗಿತ್ತು! ಪಕ್ಕದಲ್ಲಿ ಕುಳಿತಿದ್ದಾತನಿಗೆ ಹತ್ತು ರುಪಾಯಿ ಕೊಡಲು ಗೋಗರೆದೆ. ಆತ ಮಿಸುಕಾಡಲಿಲ್ಲ! ಆಕೆಯ ಅರ್ಜಂಟಾಯಿತು. ಆಕೆಯೂ ಸೀರೆ ಎತ್ತಿ ತೋರಿಸಿ ನೋಡು.... ನೋಡು...... ಅಂತ ಎಂದೂ ಕೇಳದ ಸಹಸ್ರನಾಮಗಳನ್ನು ಹಾಡಿದಳು.
ತಲೆ ಸುತ್ತಿದಂತಾಯ್ತು. ಒಮ್ಮೆ ಅಲ್ಲೇ ಸತ್ತುಹೋಗಬೇಕು ಅನ್ನಿಸಿತು. ಕೈಯಲ್ಲಿದ ಸ್ವಲ್ಪ ದುಬಾರಿಯಾದ ನನ್ನ ವಾಚನ್ನು ಬಿಚ್ಚಿ ಆ ವ್ಯಕ್ತಿಗೆ ಕೊಟ್ಟು ದುಡ್ಡು ಕೊಡು ಅಂದೆ. ಆತನಿಗೆ ನನ್ನ ಸ್ಥಿತಿ ವಿಚಿತ್ರವೆನಿತ್ತು. ಕೊನೆಗೆ ಆತ ಹತ್ತು ರುಪಾಯಿ ನೋಟನ್ನು ನನ್ನ ಕೈಗಿಟ್ಟ. ಅವಳ ಕೈಗೆ ಅದನ್ನು ಕೊಟ್ಟು ಹೊದಿಕೆ ಹೊದ್ದು ಕಣ್ಣು ಮುಚ್ಚಿದೆ.
ಎದ್ದವನೇ ಎ.ಸಿ ಬೋಗಿಯ ಕಡೆ ಬಂದು ಟಾಯ್ಲೆಟ್ ಪಕ್ಕ ನಿಂತೆ. ಹೊಟ್ಟೆ ತೊಳೆಸುವಂತ ವಾಸನೆಗೆ ಯಾವುದನ್ನೆಂದು ಮುಚ್ಚಿಕೊಳ್ಳುವುದು? ಬಾಯನ್ನೋ ಅಲ್ಲಾ ಮೂಗನ್ನೋ? ಟಾಯ್ಲೆಟ್ಟಿನ ನೀರು ಹೊರಗೆ ಬಂದಿತ್ತು. ಹದಿನೈದು ಮಂದಿ ಜನರು ಅಲ್ಲೇ ಕುಕ್ಕುರು ಕಾಲಲ್ಲಿ ಕುಳಿತಿದ್ದರು, ಬಿಲ್ಲಿನಂತೆ ಮುದುರಿ ಮಲಗಿದ್ದರು!
ಗಲೀಜು ನೀರು ಹೊರಬರುತ್ತಿದ್ದರೂ ಮುಂಡಾಸಿನ ವ್ಯಕ್ತಿಯೋರ್ವ ಬರಿಗಾಲಲ್ಲಿ ಎರಡು ಟಾಯ್ಲೆಟ್ಟುಗಳ ಮಧ್ಯೆ ಕುಳಿತಿದ್ದ.ಅಲ್ಲೇ ನಡೆದುಹೋಗುತ್ತಿದ್ದ ವ್ಯಾಪಾರಿಗಳು, ರೈಲು ಸಿಬ್ಬಂದಿಗಳು ಅವನನ್ನು ತುಳಿದುಹೋಗುತ್ತಿದ್ದರೂ ವಿಚಲಿತನಾಗದ ಆತನ ಎವೆಯಿಕ್ಕದೆ ಒಂದೇ ಕಡೆಗೆ ನೋಡುತ್ತಿದ್ದ ಅವನ ಕಣ್ಣುಗಳು ಶೂನ್ಯ ಆಲೋಚನೆಯನ್ನು ತೋರಿಸುತ್ತಿದ್ದವು. ಆತ ಚಡ್ಡುಗಟ್ಟಿದ್ದ!
ಪಕ್ಕದಲ್ಲಿ ರೈಲಿನ ಸಿಬ್ಬಂದಿಯೋರ್ವ ಮಂಗನಂತೆ ತಿನಿಸಿನ ಬುಟ್ಟಿಯನ್ನು ತಲೆಯಲ್ಲಿ ಹೊತ್ತು ಬೊಬ್ಬೆ ಹೊಡೆಯುತ್ತಾ ಕುಣಿಯುತ್ತಿದ್ದ. ಅಲ್ಲೇ ನನ್ನ ಪ್ರಾಯದ ಹುಡುಗೋರ್ವ ಕುಳಿತು ಕಬ್ಬಿಣದ ತುಂಡೊಂದರಿಂದ ಗಾಂಜಾದ (marijuana) ಕೋಡುಗಳನ್ನು ಜಜ್ಜಿ ಪೈಪಿಗೆ ತುಂಬಿಸುತ್ತಿದ್ದ. ಅದಕ್ಕೆ ಬೆಂಕಿ ಹಚ್ಚಿ ಒಂದು ದಮ್ಮು ಎಳೆದು ಪಕ್ಕದಲ್ಲಿ ಇದ್ದವರಿಗೆ ಕೊಟ್ಟ. ಇದರ ಪ್ರಭಾವದಿಂದ ಆತ ಮಂಗನಂತೆ ಆಡುತ್ತಿದ್ದದ್ದು! ಅಲ್ಲೇ ಬಾಗಿಲಲ್ಲಿ ನಿಂತಿದ್ದ ನನ್ನ ಕಡೆ ನೋಡಿ ಬೆಂಗಾಳಿಯಲ್ಲಿ "ಬೇಕಾ........ಮಜಾ ಬರ್ತದೆ !" ಅಂದ. ನಾನು ನಕ್ಕು ಬೇಡವೆಂದೆ.
ಅಷ್ಟರಲ್ಲೇ ಎ.ಸಿ ಬೋಗಿಯಲ್ಲಿ ಸೀಟೊಂದು ಖಾಲಿಯಾಯಿತು. ರೈಲ್ವೇ ಮಾಸ್ಟರ್ ಜೊತೆ ಆ ಸೀಟಿನ ಚಾರ್ಜ್ ಕೊಟ್ಟು ಒಮ್ಮೆ ಒಳಗೆ ಹೋದೆ. ಮತ್ತೆ ಹೊರಗೆ ಬರಲಿಲ್ಲ!
ಚರಣ್ ಐವರ್ನಾಡು
ಪಾಲೆಪ್ಪಾಡಿ
ಸುಳ್ಯ ತಾಲೂಕು
ದ.ಕ


ಚಂದದ ಬರಹ , ಇಷ್ಟವಾಯಿತು
ಪ್ರತ್ಯುತ್ತರಅಳಿಸಿthank you
ಅಳಿಸಿ