ಕನ್ನಡಂಗಳಲ್ಲಿ ಅರೆಭಾಷೆ
ಅರೆಭಾಷೆಯನ್ನು ಕನ್ನಡದ ಪ್ರಬೇಧ ಎಂದು ಬಗೆದರೂ ಇದು ಸಾಂಸ್ಕøತಿಕವಾಗಿ ಇತರ ಕನ್ನಡಗಳಿಂದ ಅನನ್ಯತೆಯನ್ನು ಕಾಯ್ದುಕೊಳ್ಳುವುದರಿಂದಾಗಿ ನಾನು ಇದನ್ನು ಅಧ್ಯಯನ ಕಾರಣಕ್ಕೆ ಹೊರತುಪಡಿಸಿ ಉಪಭಾಷೆ (ಡೈಲೆಕ್ಟ್) ಎಂದು ಕರೆಯುವ ಬಗ್ಗೆ ತಕರಾರು ಮಾಡುತ್ತೇನೆ.
ಒಂದು ಭಾಷೆ ಸಂಸ್ಕøತಿಯ ಮೂಲಕ ಸಂವಹನ ನಡೆಸುವಂತೆ ಸಂಸ್ಕøತಿಯೂ ಭಾಷೆಯ ಮೂಲಕ ಸಂವಹನ ನಡೆಸುತ್ತದೆ. ಭಾಷೆಯಿಲ್ಲದೆ ಸಂಸ್ಕøತಿಗೆ ಉಳಿಗಾಲವಿಲ್ಲ. ಹಾಗಾಗಿ ಭಾಷೆಯನ್ನು ಕಲಿಯುವುದು ಎಂದರೆ ಸಂವಹನದ ಆಚೆಗೆ ಅದರ ಸಂಸ್ಕøತಿಯನ್ನು ಅರಿಯುವ ಯತ್ನ ಎಂದೇ ಭಾವಿಸಬೇಕು.
ಅರೆಭಾಷೆ ಒಂದುಸಮುದಾಯದ ಭಾಷೆ. ಆದರೆ ಒಂದು ಭಾಷೆ ಸಮುದಾಯ, ಧರ್ಮಗಳ ಆವರಣವನ್ನು ಮೀರದೇ ಇದ್ದರೆ ಉಳಿಯುವುದಿಲ್ಲ. ಅರೆಭಾಷೆ ಪ್ರಸಕ್ತ ಸಂದರ್ಭದಲ್ಲಿ ಈ ಮಿತಿಗಳನ್ನು ಮೀರುವ ಪ್ರಜ್ಞೆಯನ್ನು ಬೆಳೆಸಿಕೊಂಡಿದೆ.
ಹೀಗಾಗಿ ಅರೆಭಾಷೆಯ ಬಗ್ಗೆ ನಾನು ಮಾಡಿದ ಒಂದು ಟಿಪ್ಪಣಿಯನ್ನು ಇಲ್ಲಿ ನೀಡಿದ್ದೇನೆ. ಭಾಷೆಯ ಬಗ್ಗೆ ಚರ್ಚೆಯನ್ನು ಬೆಳೆಸಲು ಉಪಯೋಗವಾಗಬಹುದು ಎಂದು ನಂಬಿದ್ದೇನೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ, ವಿಟ್ಲ, ಕೇರಳದ ಕಾಸರಗೋಡು ಮತ್ತು ಕೊಡಗಿನ ಅನೇಕ ಕಡೆ ವಾಸಿಸುವ ಗೌಡರದ್ದು ಈ ಭಾಗಗಳ ಪ್ರಭಾವಿ ಸಮುದಾಯ. ಇವರು ಹಾಸನ ಪರಿಸರದ ಐಗೂರು ಸೀಮೆಯಿಂದ ಕ್ರಿ.ಶ 1450-1600ರ ಮಧ್ಯೆ ಕರಾವಳಿಗೆ ವಲಸೆ ಬಂದಿದ್ದಾರೆ.
(Purush Raya, Kannada speaking deity worshipped by Arebase speaking Gowda community Photo: Lokesh Kunchadka)
ಕಾಲಾಂತರದಲ್ಲಿ ಈ ಭಾಗಗಳಲ್ಲಿ ಗೌಡರ ಸಂಖ್ಯೆ ಹೆಚ್ಚಾದಂತೆ ಹತ್ತು ಕುಟುಂಬ ಹದಿನೆಂಟು ಗೋತ್ರಗಳಾಗಿ ನೆಲೆಯೂರಿದರು. ಕರ್ನಾಟಕವನ್ನಾಳಿದ ಗಂಗರು ಮೂಲತಃ ಒಕ್ಕಲಿಗರು. ರಾಜಕೀಯವಾಗಿ ಗಂಗರ ಪ್ರಭಾವ ಕುಸಿದಂತೆ ತಮ್ಮ ಮೂಲದ ಒಕ್ಕಲು ಕೆಲಸಕ್ಕೆ ಮರಳುತ್ತಾರೆ. ಇವರು ಗಂಗಟಿಕಾರ ಒಕ್ಕಲಿಗರೆಂದು ಹಾಸನ ಮೊದಲಾದೆಡೆ ವಿಸ್ತರಿಸಿಕೊಳ್ಳುತ್ತಾರೆ. ಗೌಡರು ದಕ್ಷಿಣ ಕನ್ನಡಕ್ಕೆ ಬಂದ ಕಾರಣಗಳನ್ನು ಭಿನ್ನ ನೆಲೆಗಳಲ್ಲಿ ಚರ್ಚಿಸಬಹುದು.
ಕ್ರಿ.ಶ 1450-1600ರ ಮಧ್ಯೆ ಐಗೂರು ಸೀಮೆಯೆಂದು ಕರೆಸಿಕೊಳ್ಳುತ್ತಿದ್ದ ಹಾಸನ ಜಿಲ್ಲೆಯ ಮಂಜರಾಬಾದಿನ ಸುತ್ತಲಿನ ಪ್ರದೇಶದಿಂದ ಬಂದು ಸುಬ್ರಹ್ಮಣ್ಯದ ಕುಮಾರ ಧಾರೆಯ ಇಕ್ಕೆಲಗಳಲ್ಲಿ ವಾಸಿಸಿದರು. ಕಾಲಾಂತರದಲ್ಲಿ ಸುಳ್ಯದ ಇತರ ಭಾಗಗಳಿಗೆ ಹರಡಿಕೊಂಡರು. ಇಲ್ಲಿ ನೆಲೆನಿಂತ ಗೌಡರು ಪ್ರಾಚೀನರೂ ಇತರ ಗೌಡರನ್ನು ನಿಯಂತ್ರಿಸುವ ಕಟ್ಟೆಮನೆಯ ಹಕ್ಕನ್ನು "ಕೂಜುಗೋಡು" ಕಟ್ಟಮನೆಯವರು ಪಡೆದಿದ್ದಾರೆ.
ಬಂಗಾಡಿ ಕಡ್ತಿಕಲ್ಲಿನ ಮೂಲಕ ಬಂದ ಗೌಡರು ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು, ವಿಟ್ಲ, ಬಂಟ್ವಾಳ ಭಾಗಗಳಲ್ಲಿ ನೆಲೆ ನಿಂತರು. ಇವರನ್ನು ನಿಯಂತ್ರಿಸುವ ಹಕ್ಕನ್ನು "ಬಲ್ನಾಡು" ಕಟ್ಟೆಮನೆಯವರು ಪಡೆದಿದ್ದಾರೆ.
ಕ್ರಿ.ಶ 1500ರ ನಂತರ ಕೆಳದಿ ನಾಯಕರ ಪ್ರಭಾವಿ ಆಡಳಿತ ತುಳುನಾಡಿನಲ್ಲಿ ಆರಂಭವಾದ ಮೇಲೆ ಗೌಡ ಕುಟುಂಬಗಳು ಅನೇಕ ಸಂದರ್ಭಳಲ್ಲಿ ಘಟ್ಟ ಇಳಿದು ಬಂದಿದ್ದಾರೆ. ಬಚ್ಚನಾಯಕ ಮೊದಲಾದವರು ಕಂದಾಯ, ತೆರಿಗೆ ಸಂಗ್ರಹ, ರಾಜ ಪ್ರತಿನಿಧಿಗಳಾಗಿ ಬಂದಿದ್ದಾರೆ. ಐಗೂರು ಸೀಮೆಯಿಂದ ಲಿಂಗಾಯತ ಸೋದರರಿಬ್ಬರು ಕುದುರೆಯಲ್ಲಿ ಘಟ್ಟ ಇಳಿದು ಬಂದಾಗ ಕೂಜುಗೋಡಿನ ಗೌಡರು ಅವರಿಗೆ ಆಶ್ರಯ ನೀಡುತ್ತಾರೆ.
ಪನ್ನೆ ಬೀಡಿನ ಬಲ್ಲಾಳರ ನಂತರ ಸುಳ್ಯವನ್ನಾಳಿದ "ಚಾತು ನಾಯರ್" ಶ್ರೀಂಗೇರಿ ಗುರುಗಳ ಮಾತಿನಂತೆ ಬಿಸಿಲೆ, ಶಿರಾಡಿ ಮೂಲಕ ಒಕ್ಕಲುಗಳೆಂದು ತಂಡ ತಂಡವಾಗಿ ಗೌಡರನ್ನು ಸುಳ್ಯಕ್ಕೆ ಕರೆತಂದ. ಈ ಒಕ್ಕಲುಗಳು ಇಂದೂ ಇವೆ. ನಾಯರ್ ನೇಮದ ಸಂದರ್ಭದಲ್ಲಿ ತಾನು ಕರೆತಂದ ಒಕ್ಕಲುಗಳು ಇವೆಯೇ ಎಂದು ದೈವ ಇಣುಕಿ ನೋಡುತ್ತದೆ.
ಬಂಗಾಡಿ ಮತ್ತು ಶಿರಡಿ ಘಟ್ಟಗಳ ಮೂಲಕ ತುಳುನಾಡಿಗೆ ಇಳಿದು ಬಂದ ಗೌಡ ಪಂಗಡಗಳು ಅಲ್ಲಿಯ ಮೂಲ ಪ್ರಬಲ ಸಮುದಾಯಗಳಾದ, ಭೂಮಿಯ ಒಡೆಯರಾದ ಜೈನ, ಬಂಟ, ಬಿಲ್ಲವ ಮೊದಲಾದವರ ಒಕ್ಕಲುಗಳಾದರು. ತಮ್ಮ ಮೂಲದ ಭಾಷೆಯನ್ನು ಬಿಟ್ಟು ತುಳುವನ್ನು ಸ್ವೀಕರಿಸುವುದು ಆ ಪ್ರದೇಶಗಳಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಅನಿವಾರ್ಯವಾಗಿತ್ತು. ತಮ್ಮನ್ನು ತುಳು ಗೌಡರೆಂದು ಗುರುತಿಸಿಕೊಂಡರು.
ಸುಳ್ಯ ಭಾಗಗಳಲ್ಲಿ ತಮ್ಮ ಪ್ರಾಬಲ್ಯವನ್ನು ಸಾಧಿಸಲು ಗೌಡರು ಹೆಚ್ಚು ಕಷ್ಟಪಟ್ಟರೆನಿಸುವುದಿಲ್ಲ. ಆದರೂ ಮೂಲ ನಿವಾಸಿಗಳ ಜೊತೆಗೆ ಅವರ ಸಂಘರ್ಷ ನಡೆದಿದೆ. ಉಲ್ಲಾಕುಳು ಮತ್ತು ಸುಬ್ರಾಯ ದೇವರ ನಡುವಿನ ಸಂಘರ್ಷವನ್ನು ಗೌಡರಿಗೆ ಇಲ್ಲಿನ ಮೂಲ ನಿವಾಸಿಗಳು ಒಡ್ಡಿದ ಪ್ರತಿರೋಧಕ್ಕೆ ನಡೆದ ಸಂಘರ್ಷ ಎಂದು ಡಾ. ಪುರುಷೋತ್ತಮ ಬಿಳಿಮಲೆ ಹೇಳುತ್ತಾರೆ. ಇದರ ಹೊರತಾಗಿಯೂ ಗೌಡರು ತಮ್ಮ ಪ್ರಾಬಲ್ಯವನ್ನು ಈ ಪ್ರದೇಶಗಳಲ್ಲಿ ಬಲ ಪಡಿಸಲು ಇದ್ದ ಸಾಧ್ಯವಾದದ್ದು ಒಕ್ಕಲಿಗ ಮೂಲದ ಗಂಗರು, ಕೆಳದಿ ನಾಯಕರು ಈ ಪ್ರದೇಶಗಳಿಗೆ ತಮ್ಮ ಆಡಳಿತವನ್ನು ವಿಸ್ತರಿಸಿಕೊಂಡದ್ದು. ತುಳುನಾಡಿನ ಚೌಟ, ಬಂಗ, ಅಜಿಲ, ಬೈಲರಸ, ವಿಟ್ಲ ಮೊದಲಾದ ರಾಜ ಮನೆತನಗಳಷ್ಟು ದೊಡ್ಡ ಮಟ್ಟದ ರಾಜಾಡಳಿತ ಈ ಪ್ರದೇಶಗಳಲ್ಲಿ ಇಲ್ಲದೆ ಸಣ್ಣ ಸಣ್ಣ ಜೈನ ಬಲ್ಲಾಳರು ಇಲ್ಲಿದ್ದರು. ಇವರ ಹೊರತಾಗಿ ಇದ್ದವರು ಮಲೆಕುಡಿಯ, ಮುಗೇರ, ಮನ್ಸ, ಮಾಯಿಲ, ಕೊರಗ ಮೊದಲಾದ ದುರ್ಬಲ ಸಮುದಾಯಗಳು. ಇವರೊಂದಿಗೆ ಗೌಡರ ಸಂವಹನ ಒಂದು ಮಿತಿಯೊಳಗೆ ಮಾತ್ರ ಇತ್ತು. ಹೀಗಾಗಿ ತಮ್ಮ ನೆಲೆಯನ್ನು ಗಟ್ಟಿಗೊಳಿಸಲು ಮತ್ತು ಆಡಳಿತ ನಡೆಸುವಷ್ಟು ಅಧಿಕಾರವನ್ನು ಸಾಧಿಸಲು ಗೌಡರಿಗೆ ಕಷ್ಟವಾಗಲಿಲ್ಲ.
ಗೌಡರು ತಮ್ಮ ಆಡಳಿತಾತ್ಮಕ ನೆಲೆಯನ್ನು ಗಟ್ಟಿಗೊಳಿಸದ ನಂತರ ತಮ್ಮ ಭಾಷೆಯನ್ನು ಯಾವುದೇ ಮುಲಾಜಿಗೆ ಒಳಗಾಗದೆ ಬಳಸಿದರು. ತುಳು ಗೌಡರಂತೆ ಕನ್ನಡವನ್ನು ಬಿಟ್ಟು ತುಳುವನ್ನು ಮಾತೃಭಾಷೆಯನ್ನಾಗಿ ಮಾಡಿಕೊಳ್ಳಲಿಲ್ಲ.. ಆದರೆ ಸಾಂಸ್ಕøತಿಕವಾಗಿ ತುಳುವಿನಿಂದ ಅನೇಕ ಆಚರಣೆಗಳನ್ನು ಪಡೆದುಕೊಂಡ ಗೌಡರು ದೈವಾರಾಧನೆ ಮೊದಲಾದ ನಂಬಿಕೆ-ಆಚರಣೆಗಳನ್ನು ತಮ್ಮಲ್ಲಿ ಅಳವಡಿಸಿಕೊಂಡರು.
ಹೆಚ್ಚಿನ ಮಾಹಿತಿಗಾಗಿ: ತುಳುನಾಡಿನ ದೈವಾರಾಧನೆಯಲ್ಲಿ ಗೌಡ ಜನಾಂಗದ ಪಾತ್ರ
ಮೂಲದಲ್ಲಿ ಗೌಡರೆಲ್ಲರೂ ಗೌಡ ಭಾಷಿಕರಾಗಿದ್ದರು. ಇಂದು ಭಾಷಿಕವಾಗಿ ಎರಡು ಪ್ರಬೇಧಗಳಿವೆ. ಸುಳ್ಯ ಪರಿಸರಗಳ ಗೌಡರು ತುಳು ಮಾತನಾಡುತ್ತಾರೆ. ಇದಕ್ಕೆ ಆ ಭಾಗಗಳಲ್ಲಿ ಪ್ರಭಾವಿಗಳಾಗಿರುವ ಬಂಟ, ಬಿಲ್ಲವ ಮೊದಲಾದ ತುಳು ಮಾತೃಭಾಷೆಯ ಸಮುದಾಯಗಳು ಕಾರಣ.
ಗೌಡಕನ್ನಡ ಎಂಬ ಪದವು ಪ್ರಚಲಿತದಲ್ಲಿರುವ "ಅರೆಭಾಷೆ"ಗೆ ಸಂವಾದಿಯಾಗಿ ಬಳಕೆಯಾಗುತ್ತದೆ. ಈ ಬಳಕೆಯನ್ನು ಮೊದಲು ಆರಂಭಿಸಿದ್ದು ಪ್ರೊ. ಮರಿಯಪ್ಪ ಭಟ್ಟರು. ಹವ್ಯಕರ ಭಾಷೆಯನ್ನು ಹವ್ಯಕ ಕನ್ನಡವೆಂದೂ ಕೋಟದವರ ಕನ್ನಡವನ್ನು ಕೋಟ ಕನ್ನಡವೆಂದು ಒಂದು ಜಾತಿಗೆ ಸೀಮಿತವಾದ ಕನ್ನಡದ ಪ್ರಭೇದವನ್ನು ಆಯಾ ಜಾತಿಯ ಹೆಸರಿನಿಂದ ಗುರುತಿಸುವ ರೂಢಿ ಭಾಷಾಶಾಸ್ತ್ರದಲ್ಲಿ ಬಳಕೆಯಲ್ಲಿರುವುದರಿಂದ ಪ್ರೊ. ಮರಿಯಪ್ಪ ಭಟ್ಟರು "ಗೌಡ ಕನ್ನಡ"ವೆಂದು ಕರೆದರು. ಇವರು Annual
Of Oriental Research Institute, Medras ನಲ್ಲಿ ನಡೆದ ಭಾಷಾಧ್ಯಯನ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದನ್ನು ಪ್ರೊ. ಕೋಡಿ ಕುಶಾಲಪ್ಪ ಗೌಡರು ದಾಖಲಿಸಿದ್ದಾರೆ. ಈ ಭಾಷೆಯ ಮೇಲೆ ಮೊದಲ ಬಾರಿಗೆ ವೈಜ್ಞಾನಿಕವಾದ ಅಧ್ಯಯನ ನಡೆಸಿದ ಪ್ರೊ. ಕೋಡಿ ಕುಶಾಲಪ್ಪ ಗೌಡರು "ಗೌಡ ಕನ್ನಡ"ಎಂಬ ಪದವನ್ನೇ ಅಧಿಕೃತ ಎಂಬಂತೆ ಬಳಸಿದರು. ಇವರ ಗೌಡಕನ್ನಡದ ಬಗೆಗಿನ ಸಮಗ್ರ ಭಾಷಿಕ ಅಧ್ಯಯನವನ್ನು 1970ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯ ಪ್ರಕಟಿಸಿದೆ.
ಅರೆಭಾಷೆ ಕೇವಲ ಈ ಸಮಾಜದ ವ್ಯಕ್ತಿಗಳ ನಡುವೆ ಹಾಗೂ ಗೃಹಕೃತ್ಯಗಳಲ್ಲಿ ಬಳಕೆಯಾಗುತ್ತಿದ್ದ ಮಾತಾಗಿ, ಇತರ ಜನರಿಗೆ ಈ ಮಾತನ್ನು ಕೇಳುವಾಗ ಅರ್ಧಂಬರ್ಧ ಅರ್ಥವಾಗುತ್ತಿದ್ದರಿಂದಲೋ ಏನೋ ಇದನ್ನು ಅರೆಭಾಷೆ, "ಅರೆಗನ್ನಡ" ಎಂದು ಗುರುತಿಸಿದರು ಎಂದು ಡಾ. ಕುಶಾಲಪ್ಪ ಗೌಡ ಅಭಿಪ್ರಾಯ ಪಡುತ್ತಾರೆ. ಪ್ರೊ.ಕೆ ಕುಶಾಲಪ್ಪ ಗೌಡರು ಗೌಡ ಕನ್ನಡವನ್ನು ನೀಲಗಿರಿ ಬೆಟ್ಟ ಪರಿಸರದಲ್ಲಿ ಮಾತನಾಡುವ "ಬಡಗ' ಭಾಷೆಯೊಂದಿಗೆ ಹೋಲಿಸುತ್ತಾರೆ.
ಶಿಷ್ಟಭಾಷೆಯಿಂದ ಉಚ್ಚಾರಣೆ, ವ್ಯಾಕರಣ ಪ್ರಕ್ರಿಯೆಗಳಲ್ಲಿನ ಭಿನ್ನತೆಗಳಿಂದ ಉಪಭಾಷೆಯು ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುತ್ತದೆ. ಹಾಗಾಗಿ ಭಾಷಾ ವಿಜ್ಞಾನದ ದೃಷ್ಟಿಯಿಂದ ಅರೆಭಾಷೆಯನ್ನು ಕನ್ನಡದ ಉಪಭಾಷೆಯೆಂದು ಗುರುತಿಸಲಾಗುತ್ತದೆ. ಒಂದು ಉಪಭಾಷೆಯ ಹುಟ್ಟಿಗೆ ಪ್ರಾದೇಶಿಕ ಸಂಸ್ಕøತಿ, ಇತರ ಭಾಷೆಗಳ ಸಂಪರ್ಕ, ಸಾಮಾಜಿಕ ಪ್ರಭಾವಗಳು ಕಾರಣವಾಗುತ್ತವೆ. ತನ್ನ ಮೂಲ ಭಾಷೆಯ ಸ್ವರೂಪವನ್ನು ಉಳಿಸಿಕೊಂಡು ವೈಶಿಷ್ಟ್ಯತೆಯನ್ನು ಬೆಳೆಸಿಕೊಂಡು ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುತ್ತದೆ. ಶಿಷ್ಟ ಕನ್ನಡಕ್ಕಿಂತ ಅರೆಭಾಷೆಯು ಧ್ವನಿಸನಾಮ್ನಾಯ (Phonology) ವ್ಯಾಕರಣ (Morphology) ಮತ್ತು ವಾಕ್ಯ ರಚನೆಯಲ್ಲಿ (Syntax) ಭಿನ್ನತೆಯನ್ನು ತೋರಿಸುತ್ತದೆ.
ಕನ್ನಡದ ವರ್ಣಮಾಲೆಯಲ್ಲಿ ಇಲ್ಲದ ಕೆಲವು ಸ್ವರಗಳು ಅರೆಭಾಷೆಯಲ್ಲಿ ಧ್ವನಿಮಾಗಳೆಂದು ಪರಿಗಣಿತವಾಗುತ್ತವೆ. ಇದಕ್ಕೆ ಪ್ರೊ ಕೋಡಿಯವರು ಕೊಡುವ ಉದಾಹರಣೆಗಳು,
ಕೊಟ್ಟ್ (ಕ್ರಿಯಾಪದ) - ಕೊಟ್ಟು (ಹಾರೆ)
ಮೊ.ರಿ (ಬೊಗಳು) - ಮೊರಿ (ಕುನ್ನಿ, ಮರಿ)
ಇವುಗಳ ಉಚ್ಚಾರಣೆ ಬದಲಾದರೆ ಅರ್ಥವೇ ಬೇರೆಯಾಗುತ್ತದೆ. ಈ ಕಾರಣದಿಂದ ಇವು ಅರೆಭಾಷೆಯಲ್ಲಿ ಧ್ವನಿಮಾ ಸ್ಥಾನ ಪಡೆಯುತ್ತವೆ. ಇವುಗಳನ್ನು ಕನ್ನಡ ಲಿಪಿಯಲ್ಲಿ ಬರೆಯುವುದು ಕಷ್ಟ. ಗೌಡ ಕನ್ನಡದಲ್ಲಿ ಶಿಷ್ಟಕ್ಕಿಂತ ಹೆಚ್ಚು ಸ್ವರಾಕ್ಷರಗಳಿವೆ. ಇವು ವಿಶಿಷ್ಟ ಧ್ವನಿಮಾಗಳು.
ಕನ್ನಡದ ಲಿಪಿಯಲ್ಲಿ ಮಾತ್ರ ಬಳಕೆಯಲ್ಲಿರುವ ಙ ಮತ್ತು ಞ ಗಳು ಅರೆಭಾಷೆಯಲ್ಲಿ ಧ್ವನಿಮಾಗಳಾಗಿ ದ್ವಿತ್ವರೂಪದಲ್ಲಿ ಇವೆ. ಉದಾ: ಮಙ (ಮಗ), ಹಞ್ಞ(ಸ್ವಲ್ಪ), ಇತ್ಯಾದಿ. ಇಂದು ಅರೆಭಾಷೆ ಮಾತನಾಡುವವರು ಈ ಪದಗಳನ್ನು ಉಚ್ಚರಿಸಲು ಹಿಂಜರಿಯುತ್ತಾ ಶಿಷ್ಟ ಕನ್ನಡದಿಂದ ಸ್ವಲ್ಪ, ಮಗ ಎಂಬ ಪದಗಳನ್ನು ಬಳಸಲಾರಂಭಿಸಿದ್ದಾರೆ.
ಅರೆಭಾಷೆಯ ಮುಖ್ಯ ಲಕ್ಷಣವೆಂದರೆ ಇದರಲ್ಲಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕ ಲಿಂಗಗಳೆಂಬ ಬೇಧಗಳಿಲ್ಲ. (ಬೆಂಗಾಳಿಯಲ್ಲಿಯೂ ಇಲ್ಲ!) ಪುಲ್ಲಿಂಗ, ನಪುಂಸಕಗಳೆರಡೇ ಇರುವುದು. ಶಿಷ್ಟ ಕನ್ನಡದಲ್ಲಿರುವಂತೆ ಪ್ರಥಮ ಪುರುಷ ಬಹುವಚನದಲ್ಲಿ ಮಹತ್, ಅಮಹತ್ ಎಂಬೆರಡು ವರ್ಗಗಳಿದ್ದರೆ ಅರೆಭಾಷೆಯಲ್ಲಿ ಬಹುವಚನದ ರೂಪವೇ ಎಲ್ಲಕ್ಕೂ ಪ್ರಯೋಗವಾಗುತ್ತದೆ.
ಬಂದನು, ಬಂದಳು, ಬಂದಿತು- ಇವು ಅರೆಭಾಷೆಯಲ್ಲಿ ಬಾತ್ ಆಗುತ್ತದೆ. ಅವರು ಬಂದರು (ಮಹತ್ ವರ್ಗ)- ಅವು ಬಂದೊ, ಅವುಗಳು ಬಂದವು (ಅಮಹತ್ ವರ್ಗ)- ಅವು ಬಂದೊ ಆಗುತ್ತದೆ.
ಅರೆಭಾಷೆಯು ಇತರ ಭಾಷೆಗಳ ಸಾಮಾನ್ಯ ಪ್ರವೃತ್ತಿಯಾದ ಪ್ರಾದೇಶಿಕ ವಿಭಿನ್ನತೆಯನ್ನು ಪಡೆದುಕೊಂಡಿದೆ. ಸಂಪಾಜೆ, ಪೆರಾಜೆ, ಮಡಿಕೇರಿ, ಭಾಗಮಂಡಲ ಪರಿಸರದ ಅರೆಭಾಷೆಗೂ, ಬೆಳ್ಳಾರೆ, ಸುಬ್ರಹ್ಮಣ್ಯ, ಗುತ್ತಿಗಾರು ಪ್ರದೇಶಗಳ ಅರೆಭಾಷೆಗೂ ಕಾಸರಗೋಡಿನ ಬಂದಡ್ಕ ಭಾಗದ ಅರೆಭಾಷೆಗೂ ಪ್ರಾದೇಶಿಕ ಭಿನ್ನತೆ ಇದೆ.
ಸುಬ್ರಹ್ಮಣ್ಯದವರು ಹೋದಿಗಾ, ಬಂದಿಗಾ ಎಂದರೆ, ಪೆರಾಜೆ ಭಾಗದವರು ಹೋದಿಯಾ, ಬಂದಿಯಾ ಎನ್ನುತ್ತಾರೆ. ಕೊಡಗಿನವರು ಹೋದ್ಯರಾ, ಬಂದ್ಯರಾ ಎನ್ನುತ್ತಾರೆ
ಅರೆಭಾಷೆಯು ಹಳೆಗನ್ನಡದ ಮೂಲ ರೂಪಗಳನ್ನು ಇನ್ನೂ ತನ್ನಲ್ಲಿ ಉಳಿಸಿಕೊಂಡಿದೆ. ಉದಾ: ಕೊತ್ತಿ, ಕೂಸು, ಇಕ್ಕ್, ಹುಗ್ಗೆ, ಹೈದ ಇತ್ಯಾದಿಗಳು. ಅನೇಕ ಪದಗಳಲ್ಲಿ ಉಚ್ಚಾರಣೆಯನ್ನು ಸುಲಭವಾಗಿಸಲು ಅಂತ್ಯಾಕ್ಷರ ಲೋಪವಾಗಿವೆ.
ತುಳು ಮತ್ತು ಅರೆಭಾಷೆಗಳು ಒಂದೇ ಮನೆಯ ಭಾಷೆಗಳು. ಅರೆಭಾಷೆಯಲ್ಲಿ ಬಳಕೆಯಾಗುವ ಅನೇಕ ಪದಗಳು ತುಳುವಿನವೂ ಆಗಿವೆ. ಇವು ತುಳುವಿನಿಂದಲೇ ಬಂದಿವೆ ಎಂಬುದೂ ಒಂದು ತೆರನಾದ ಅನುಮಾನವೇ.
ಚರಣ್ ಐವರ್ನಾಡು
ಬೆಂಗಳೂರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thank You