ಕದ್ರಿಯ ಲೋಕೇಶ್ವರ ಮತ್ತು ಮಂಜುನಾಥ
ಕದ್ರಿಯ ಲೋಕೇಶ್ವರ ಮತ್ತು ಮಂಜುನಾಥ
ಕದ್ರಿಯ ಮಂಜುನಾಥ ದೇವಾಲಯ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರ. ಅದೊಂದು ಲಿಂಗಾರಾಧನೆಯ ಶೈವಕ್ಷೇತ್ರವಾದರೂ ಶಿವನಿಗೆ ಮಂಜುನಾಥ ಎಂಬ ಹೆಸರು ಯಾವುದೇ ಪ್ರಾಚೀನ ದಾಖಲೆಗಳಲ್ಲಿ ಇಲ್ಲ. ಗೋವಿಂದ ಪೈಗಳು ಪ್ರಾಚೀನ ಶಿವಸಹಸ್ರನಾಮದಲ್ಲೂ ಇಲ್ಲವೆನ್ನುತ್ತಾರೆ. ಕದಿರೆಯ ಮಂಜುನಾಥನೊಬ್ಬನೇ ಅಖಿಲಭಾರತದಾದ್ಯಂತ ಇರುವ ಏಕೈಕ ಮಂಜುನಾಥನ ಲಿಂಗ. ಧರ್ಮಸ್ಥಳಕ್ಕೆ ದೇವರನ್ನು ಇಲ್ಲಿಂದಲೇ ಕೊಂಡುಹೋದದ್ದು. ಶಿವನಿಗೆ ಮಂಜುನಾಥನೆಂಬ ಹೆಸರು ಬರಲು ಕಾರಣವನ್ನು ಗೋವಿಂದ ಪೈಗಳು ವಿಸ್ತøತವಾಗಿ ಹೀಗೆ ಚರ್ಚಿಸುತ್ತರೆ. ಮಂಜುಶ್ರೀ ಅಥವಾ ಮಂಜುಘೋಷನೆಂಬ ಬೋಧಿಸತ್ವನಿಗೆ ಮಂಜುನಾಥ ಎಂಬ ಹೆಸರು ಇದ್ದದ್ದು ಮಹಾಯನದ ಕೃತಿಗಳಿಂದ ತಿಳಿದು ಬರುತ್ತದೆ. ನೇಪಾಳದ ಬೌದ್ಧಕವಿ ಅಮೃತಾನಂದನ ಕಲ್ಯಾಣಪಂಚವಿಂಶತಿಕಾ ಸ್ತೋತ್ರದ ಸ್ರಗ್ಧರೆಯೊಂದರಲ್ಲಿ.......ಸ್ವಸ್ತೀಭೂತಾಬ್ಜಸಂಸ್ಥಂ ಸಕಲ ಜಿನವರಂ ಪ್ರಾಭಜನ್ ಮಂಜುನಾಥಃ......ಎಂದಿದೆ. ಮಂಜುನಾಥವೆಂಬುದು ಕದ್ರಿಯ ಗುರು ಮಚ್ಚೇಂದ್ರನಾಥನಿಂದಲೂ ಬಂದಿರಬಹುದು. ಮಚ್ಚಿನಾಥವೇ ಮಂಜುನಾಥವಾಗಿರಹುದೆಂಬ ಚರ್ಚೆಯೂ ಇದೆ.
ದೇವಾಲಯದ ಗರ್ಭಗುಡಿಯ ಹೊರ ಅಂತಃಪ್ರಾಕಾರದಲ್ಲಿ ಅತ್ಯಂತ ಸುಂದರವಾದ ಲೋಕೇಶ್ವರನ ಕಂಚಿನ ವಿಗ್ರಹವಿದೆ. ಇದನ್ನು ಅರ್ಚಕರು ತ್ರಿಲೋಕೇಶ್ವರನೆಂದು ಕರೆಯುತ್ತಾರೆ. ಅಡಿಯಿಂದ ಮುಡಿಯವರೆಗೆ 150 ಸೆಂ.ಮೀ. ಇರುವ ಈ ಪ್ರತಿಮೆ ಮೂರು ಮುಖಗಳನ್ನೂ ಆರು ಕೈಗಳನ್ನೂ ಹೊಂದಿದೆ. ಕೈಗಳಲ್ಲಿ ಮಣಿ, ಪದ್ಮಾದಿಗಳಿವೆ. ಪ್ರಭಾವಳಿಯ ನಡುವೆ ಮತ್ತು ಶಿರೋಭಾಗದಲ್ಲಿ ಧ್ಯಾನ ಮಾಡುತ್ತಿರುವ ಬುದ್ಧನಿದ್ದಾನೆ. ಕಣ್ಣುಗಳು ಬಹಳ ಹೊಳಪಿನವು. ಇದರ ಪೀಠದ ಮೇಲೆ ಗ್ರಂಥಲಿಪಿಯಲ್ಲಿರುವ ಒಂಬತ್ತು ಸಾಲುಗಳ ಸಂಸ್ಕøತ ಶಾಸನವಿದೆ. ಮಂಗಳೂರನ್ನು ಆಳುತ್ತಿದ್ದ ಶ್ರೀಕುಂದವರ್ಮಾ ಗುಣವಾನಾಳುಪೇಂದ್ರನು ಈ ಸುಮನೋಹರವಾದ ಕದರಿಕಾ ವಿಹಾರದಲ್ಲಿ ಕ್ರಿ.ಶ.968ರಲ್ಲಿ ಲೋಕೇಶ್ವರನ ಪ್ರತಿಮೆಯನ್ನು ಸ್ಥಾಪಿಸಿದ.
ಕುಂದವರ್ಮ ಶೈವಮತದವನು ಎಂಬುದು ಸ್ಪಷ್ಟ. ಇದೇ ಶಾಸನದಲ್ಲಿ"ಪಾದಾರವಿಂದ ಭ್ರಮರೋ ಬಾಲಚಂದ್ರ ಶೀಖಾಮಣೇಃ" ಎಂಬುದು ಶಿವನನ್ನು ಉದ್ದೇಶಿಸಿ.
ವಿಹಾರ ಎಂಬುದು ಶೈವ ದೇವಾಲಯಕ್ಕೆ ಹೆಸರಲ್ಲ, ಅದು ಬೌದ್ಧಕೇಂದ್ರವೇ. ಶ್ರೀಲಂಕಾದಲ್ಲಿ ಅವಲೋಕಿತೇಶ್ವರನನ್ನು ಲೋಕೇಶ್ವರನಾಥನೆಂದೇ ಕರೆಯುತ್ತಾರೆ. ಲೋಕೇಶ್ವರನ ಪ್ರತಿಮೆಯಲ್ಲಿ ಶಿವ ಸಂಬಂಧದ ಲಕ್ಷಣಗಳಾದ ಸರ್ಪ, ಅರ್ಧ ಚಂದ್ರ ಇತ್ಯಾದಿಗಳಿಲ್ಲ. ಅದು ಅವಲೋಕಿತೇಶ್ವರನ ಪ್ರತಿಮೆಯೇ.
ಅಂತಃ ಪೌಳಿಯ ಎಡಭಾಗದಲ್ಲಿ ಪೂರ್ವಾಭೀಮುಖವಾಗಿರುವ ನಾಲ್ಕು ಕೈಗಳ ಮಂಜುಶ್ರೀ ಬೋಧಿಸತ್ವನ ಮೂರ್ತಿಯಿದೆ. ಅದಕ್ಕೆ ಎದುರಾಗಿ ಬಹಳ ಸುಂದರವಾದ ಸಾಕ್ಷಾತ್ ಬುದ್ಧನ ಪ್ರತಿಮೆಯಿದೆ. ಮಂಜುಳ ಅಥವಾ ಮಂಜು ಎಂಬ ಪದಕ್ಕೆ ಸಂಸ್ಕøತದಲ್ಲಿ ಮನೋಹರವೆಂಬ ಅರ್ಥವಿದೆ.
ಮಂಜುಶ್ರೀ ಮೂಲಕಲ್ಪ ಮತ್ತು ಗುಹ್ಯಸಮಾಜತಂತ್ರಗಳಂತಹ ಬೌದ್ಧ ತಾಂತ್ರಿಕ ಕೃತಿಗಳಲ್ಲಿ ಮಂಜುಶ್ರೀಯ ವಿವರಣೆಗಳಿವೆ. ಎಸ್ ಶ್ರೀಕಂಠ ಶಾಸ್ತ್ರಿಗಳು ಚೀನೀ ಭಾಷೆಯ ಮಾನ್-ಚು ಎಂಬುದೇ ಮಂಜುವಾಗಿದೆ ಎನ್ನತ್ತಾರೆ. ಈ ಮಂಜುಘೋಷನ ಪ್ರತಿಮೆಯನ್ನು ಬ್ರಹ್ಮನೆಂದು ಮರುನಾಮಕರಣ ಮಾಡಿದರೂ ಇದು ನಿಖರವಾಗಿ ಬ್ರಹ್ಮನಲ್ಲ. ಬುದ್ಧನನ್ನು ವ್ಯಾಸನೆಂದು ಕರೆಯಲಾಗುತ್ತದೆ.
Manjusri Bhodisatva, Kadri Manjunatha Temple
ಈ ದೇವಾಲಯದ ಒಳಪೌಳಿಯ ಹೊರಗೆ ಆಯಕವನ್ನು ಹೋಲುವ ಶಿಲಾಸ್ಥಂಭವಿದೆ.ಅದರ ನಾಲ್ಕು ಬದಿಗಳಲ್ಲಿ ಧ್ಯಾನಸ್ಥ ಬುದ್ಧನ ವಿಗ್ರಹಗಳಿವೆ. ಶೈವ ದೇಗುಲಗಲಲ್ಲಿ ಬುದ್ಧನ ಕೆತ್ತನೆಗಳಿರುವ ಸಂಪ್ರದಾಯವಿಲ್ಲ.ಕದ್ರಿಯ ಗುಡ್ಡದಲ್ಲಿರುವ ಪಾಂಡವರ ಗುಹೆಗಳು ಬೌದ್ಧ ಅವಶೇಷಗಳೇ. ಈ ಗುಡ್ಡೆಯಲ್ಲಿ ಬೋಧಿಸತ್ವನ ಪಟ್ಟಿಕೆಯೊಂದು ದೊರೆತಿದೆ.(ಡಾ,ಗುರುರಾಜ ಭಟ್ಟ:1975,298) ಕದ್ರಿಯ ಕೆರೆಯಲ್ಲಿ ಮತ್ತು ಮೇಲ್ಬಾಗದ ಶಿವಲಿಂಗದ ಹಿಂದಿನ ಕಸದ ರಾಶಿಯಲ್ಲಿ ರುಂಡವಿಲ್ಲದ ಬುದ್ಧನ ಕೆತ್ತನೆಗಳಿವೆ.
ಬೌದ್ಧ ಧರ್ಮವು ಕದರಿಯಲ್ಲಿ ನೆಲೆಸಿತ್ತಾದರೂ ಕ್ರಿ.ಶ.7-8ರಲ್ಲಿ ತುಳುನಾಡಿನಿಂದ ತೀರ ಲುಪ್ತವಾಯಿತು. ಆದ ಕಾರಣ ಕ್ರಿ.ಶ.11ರಲ್ಲಿ ಪ್ರತಿಷ್ಠಿತವಾದ ಲೋಕೇಶ್ವರನ ವಿಗ್ರಹವೂ ಶಾಸನದಲ್ಲಿರುವ ಕದಿರೆಯ ವಿಹಾರವು ಖಾಸಾ ಬೌದ್ಧ ಮತದಿಂದಲ್ಲ ಉತ್ತರಭಾರತ ಹಿಂದೂ ಪಂಥದಿಂದ ನಿರ್ಮಿಸಲ್ಪಟ್ಟಿರಬೇಕು. ಅದು ಕದಿರೆ ಗುಡ್ಡದಲ್ಲಿ ಮಠಮಾಡಿಕೊಂಡಿರುವ ಜೋಗಿಗಳೆಂಬ ಶೈವ ಧರ್ಮದ ನಾಥಪಂಥದವರು.(ಗೋವಿಂದ ಪೈ:601)
ಕದ್ರಿಯ ಮಂಜುನಾಥನ ಉಲ್ಲೇಖ ಮೊದಲಿಗೆ ಬರುವುದು ಕ್ರಿ.ಶ.1277-1292ರ ಬಲ್ಲ ಮಹಾದೇವಿಯ ಶಾಸನದಲ್ಲಿ. (ಡಾ.ಗುರುರಾಜ ಭಟ್ಟ:1975,295)
ಲೋಕೇಶ್ವರನು ಕದರಿಯ ಪ್ರಧಾನ ದೇವತೆಯಾಗಿದ್ದು 12-13 ಶತಮಾನದಲ್ಲಿ ಸಂಪೂರ್ಣ ಶೈವಾಲಯವಾಗಿ ಬದಲಾಗಿರಬೇಕು. ನಾಥಪಂಥವೂ ಬೌದ್ಧಧರ್ಮದ ಮಹಾಯಾನ ಶಾಖೆಯ ವಜ್ರಾಯಾನದಿಂದ ಹುಟ್ಟಿಕೊಂಡ ಪಂಥ. ನಾಥಸಾಹಿತ್ಯಗಳಲ್ಲಿ ಬೌದ್ಧನಿಂದನೆಗಳಿದ್ದರೂ ಚೌರಾಸಿ ಬೌದ್ಧಸಿಧ್ದರಲ್ಲಿ ಮತ್ಸ್ಯೇಂದ್ರ ಮತ್ತು ಗೋರಖರೂ ಇದ್ದಾರೆ. ಇವರ ಶಿಷ್ಯೆ ಕೇರಳದ ಪರಿಮಳೆಯು ಇವರನ್ನು ಅನುಸರಿಸಿ ಮಂಗಳೂರಿಗೆ ಬರುತ್ತಾಳೆ. ಇವಳಿಗೆ ಮಂಗಳಾ ಎಂಬ ಹೆಸರಿಟ್ಟರು. ಬೋಳಾರಿನಲ್ಲಿ ಮಂಗಳದೇವಿ ನೆಲೆಯಗುತ್ತಾಳೆ. ದೇವಿಯ ಅಷ್ಟರೂಪಗಲಲ್ಲಿ ಒಂದಾದ ಮಂಗಳೆಯ ಪಕ್ಕ ಮಾತೃಕೆಯರಿರಬೇಕು. ಆದರೆ ಇದೊಂದು ಸ್ತ್ರೀಯಂತೆ ಭಾಸವಾಗುವ ಕರಿಕಲ್ಲೇ ಹೊರತು ಶಿಲ್ಪವಲ್ಲ. ಮಂಗಳಾದೇವಿಯನ್ನು ತಾರಾಭಗವತಿ ಎಂದಿದ್ದಾರೆ. ಕದರಿಯಲ್ಲಿ ಲೋಕೇಶ್ವರನ ಆರಾಧನೆ ನಡೆಯುತ್ತಿದ್ದ ಸಮಯದಲ್ಲಿ ಇಲ್ಲಿ ತಾರಾದೇವಿಯ ಕ್ಷೇತ್ರ ಇದ್ದಿರಬೇಕು. ಕೇರಳದಲ್ಲಿ ಬುದ್ಧನ ವಿಗ್ರಹಗಳು ದೊರೆತಲ್ಲೆಲ್ಲಾ ಭಗವತಿ ಸಾನಿಧ್ಯಗಳಿವೆ. ಅಲ್ಲದೆ ಪೊಳಲಿಯ ರಾಜರಾಜೇಶ್ವರಿಗೆ ಹೊಳಲಭಟ್ಟಾರಕಿ ಎಂಬ ಬೌದ್ಧಮೂಲದ ಅಭಿದಾನವಿದೆ(ಸಾಲೆತ್ತೂರು:1936,378&381)
Budda of Kadri Temple
ಸನ್ನತ್ತಿಯಲ್ಲಿನ ತಾರಾಗುಡಿಯು ಈಗ ಚಂದ್ರಲಾಂಬಾ ಗುಡಿಯಾಗಿದೆ. ಈಕೆಗೆ ಹಿಂಗುಳಾದೇವಿ ಎಂಬ ಹೆಸರಿದೆ. ತಾರಾ ಟಿಬೇಟಿನಿಂದ ಬಂದ ಬೌದ್ಧದೇವತೆ. ಕಾಳಿ, ತಾಂತ್ರಿಕ ಸರಸ್ವತಿ ಕೂಡ ಮೂಲತಃ ಬೌದ್ಧದೇವತೆಗಳು ಎಂಬ ಅಭಿಪ್ರಾಯವಿದೆ.(ಡಾ.ಚಿದಾನಂದ ಮೂರ್ತಿ:1966,136)
ಪಾಕಿಸ್ತಾನದ ಬಲೂಚಿಸ್ತಾನದ ಹಿಂಗ್ಲಜಾ ಒಂದು ಕಾಲದ ಪ್ರಸಿದ್ಧ ವಜ್ರಾಯಾನದ ಬೌದ್ಧ ನೆಲೆ. ಹಿಂಗ್ಲಜಾ ಒಂದು ಶಕ್ತಿಪೀಠ. ಬಾರ್ಕೂರಿನಲ್ಲೂ ಹಿಂಗಳಾ ಗುಡಿಯಿದ್ದು ಅದು ಶೈವ ದೇವತೆಯ ಆರಾಧನೆಯ ಕೇಂದ್ರವಾಗಿದೆ. ಮಂಗಳೂರಿನ ಬೋಳಾರಿನಲ್ಲಿರುವ ಮಂಗಳದೇವಿಯೂ ಹಿಂಗಳೆಯೇ ಇರಬೇಕು. ಈಕೆ ಗುರು ಗೋರಖನಾಥ ಮತ್ತು ಮಚ್ಚೇಂದ್ರನಾಥನನ್ನು ಹಿಂಬಾಲಿಸಿ ಕೇರಳದಿಂದ ಬಂದ ದೇವತೆ.
Manjusri Bhodisatva, Kadri Manjunatha Temple1. ಕದ್ರಿ ಕ್ರಿ.ಪೂ.ದಿಂದಲೂ ಒಂದು ಬೌದ್ಧ ನೆಲೆಯಾಗಿರಬೇಕು. ಕೋಶರರು ಎಂದು ಕರೆಸಿಕೊಂಡ ಕೊರಗರು ಇಲ್ಲಿನ ಆರಾಧಕರು.
2. ಕ್ರಿ.ಶ.8 ನೇ ಶತಮಾನದ ವರೆಗೆ ಅದೊಂದು ದ.ಭಾರತದ ವಜ್ರಾಯಾನದ ತಾಂತ್ರಕ ಬೌದ್ಧ ನೆಲೆಯಾಗಿತ್ತು. 10ನೇ ಶತವನದ ಹೊತ್ತಿಗಾಗಲೇ ವಜ್ರಯಾನದ ಹಿನ್ನಲೆಯುಳ್ಳ ಶೈವ ನಾಥಪಂಥದ ಪ್ರಭಾವಕ್ಕೆ ಒಳಗಾಗಿರಬೇಕು. ಆಲೂಪರು ಶೈವರಾದರೂ ಮೂಲ ಬುದ್ಧಮತದ ಚಿಹ್ನೆಗಳನ್ನು ಅಳಿಸಿಲ್ಲ ಎಂಬುದಕ್ಕೆ ಲೋಕೇಶ್ವರನೇ ಸಾಕ್ಷಿ.
3. 13ನೇ ಶತಮಾನಕ್ಕಾಗಲೇ ಬೌದ್ಧ ಮೂಲವನ್ನು ಕಳಚಿಕೊಂಡು ಶುದ್ಧ ಶೈವವಾಗುವ ಸ್ಥಿತ್ಯಂತರಕ್ಕೆ ಒಳಗಾಯಿತು. ಮಂಜುನಾಥ ಎಂಬ ಹೆಸರು ಆಗ ಹುಟ್ಟಿದ್ದಿರಬೇಕು.
4. ಮಂಗಳ ದೇವಿಯು ಹಿಂಗಳೆಯೇ ಅಥವಾ ತಾರೆಯಾಗಿರಬೇಕು.
5. ನಾಥ ಪರಂಪರೆಯ ಮಠ ಅತ್ಯಂತ ಪ್ರಭಾವಿಯಾಗಿತ್ತಲ್ಲದೆ ಈಗ ತನ್ನ ಪ್ರಭಾವವನ್ನು ಕಳೆದು ಕೊಂಡಿದೆ. ಈಗ ಮಂಜುನಾಥ ನಾಥ ಹಿನ್ನಲೆಯನ್ನು ಕಳೆದುಕೊಳ್ಳುತ್ತಿದೆ.





ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Thank You