ಸುಳ್ಯದಲ್ಲಿ ಕೆಳದಿ ಸಂಸ್ಥಾನದ ಆಡಳಿತದ ಕುರುಹುಗಳು





ರಕ್ಕಸಗಿ- ತಂಗಡಗಿ ಯುದ್ಧದ ಫಲ ವಿಜಯನಗರದ ವೈಭವ ಕಳೆಗುಂದುತ್ತಿದ್ದಂತೆ ಕೆಳದಿ ಸಂಸ್ಥಾನ ತನ್ನ ಗದ್ದುಗೆ ಗಟ್ಟಿ ಮಾಡಿಕೊಂಡಿತು. ಇವರ ಬಿಗು ಆಡಳಿತದ ಪರಿಣಾಮ ಕಾರ್ಕಳ, ಕಳಸ, ಗೇರುಸೊಪ್ಪೆ, ಹೊನ್ನೆಕಂಬಳಿಯಂತಹ ಮನೆತನಗಳು ತಮ್ಮತನ ಕಳಕೊಳ್ಳಲಾರಂಭಿಸಿದವು, ಕರಾವಳಿಯಲ್ಲಿ ಕೆಳದಿ ಅರಸರ ಪ್ರಭಾವ ಸಾಕಷ್ಟಿತ್ತು. ಆ ಕಾಲಕ್ಕೇ ಮಂಗ್ಳೂರು ಬಾರ್ಕೂರು ಪ್ರಾಂತಗಳು ಸೇರಿ ತುಳುರಾಜ್ಯವಾಗಿ ‘ಘಟ್ಟದ ಕೆಳಗಿನ ರಾಜ್ಯ’ ಎಂದು ಕರೆಯಲ್ಪಟ್ಟಿತು. ಇದಕ್ಕೆ ಆಧಾರವಾಗಿ ಅನೇಕ ಕುರುಹುಗಳಿದ್ದರೂ ಬಹುತೇಕ ನಾಶವಾಗಿವೆ.ಕೊಲ್ಲೂರಿನ ದೇಗುಲದ ಪ್ರದಕ್ಷಿಣಾ ಪಥದಲ್ಲಿದ್ದ ಕೆಳದಿಕಾಲದ ಉಬ್ಬುಶಿಲ್ಪಗಳನ್ನು ಅಮೃತಶಿಲೆ ಅಳವಡಿಸಿ ನಾಶಮಾಡಿದ್ದಾರೆ.ಅಲ್ಲಿನ ಕಂಚಿನ ದ್ವಾರಪಾಲಕರು ಯಾರಿಗೂ ಬೇಡವಾಗಿದ್ದಾರೆ.

     ಪ್ರಸ್ತುತ ಲೇಖನದಲ್ಲಿ ಸುಳ್ಯದಲ್ಲಿ ಕೆಳದಿ ಅರಸರ ಕುರುಹುಗಳ ಸಣ್ಣ ಪರಿಚಯ ನೀಡಬಲ್ಲೆ. ಕ್ರಿ.ಶ.1550ರಿಂದ 1763ರ ವರೆಗೆ ಕರ್ನಾಟಕದಲ್ಲಿ ಪ್ರಾಬಲ್ಯ ಹೊಂದಿದ್ದ ಕೆಳದಿಯ ಅರಸರಲ್ಲಿ ಮೊದಲನೇ ವೆಂಕಟಪ್ಪ ನಾಯಕ 1608ರಲ್ಲಿ ಬಾರ್ಕೂರ್ ಕಲ್ಯಾಣಪುರ, ಮಲ್ಲಿಕಾರ್ಜನಗಿರಿ, ಕಂದ್ಲೂರು. ಕಾರ್ಕಳ, ಮೂಲ್ಕಿ, ಕೊಡೆಯಾಲ, ಮೂಡುಬಿದ್ರಿ, ಉಳ್ಳಾಲ, ಕುಂಬ್ಳೆ, ಕಾಸರಗೋಡು, ಚಂದ್ರಗಿರಿ, ಫಣಿಯಾಲ, ಶಿಶಿಲ. ಬಂದ್ಯಡ್ಕ, ಸುಳ್ಯದ ಕಾಂತಮಂಗಲ, ಬೆಳ್ಳಾರೆ, ಮೂಡುಕುಡೆಯಾಲಗಳಲ್ಲಿ ಕೋಟೆ ನಿರ್ಮಸಿದ್ದ. ಬೆಳ್ಳಾರೆಯಲ್ಲಿ ಕೋಟೆಯ ಕುರುಹುಗಳನ್ನು ಕಾಣಬಹುದು.ಕಾಂತಮಂಗಲದಲ್ಲಿ ಕೂಡ ಕಾಣಸಿಕ್ಕರೂ ಕೋಟೆಮುಂಡುಗಾರು ಎಂಬಲ್ಲಿ ಸಿಕ್ಕಿಲ್ಲ. 1832ರ ಕಲ್ಯಾಣಪ್ಪನ ಕಾಟಕಾಯಿ ಎಂದೇ ಜನಜನಿತವಾಗಿರುವ ಸುಳ್ಯ ಅಮರಕ್ರಾಂತಿಯ ಅವಧಿಯಲ್ಲಿ ಪುಟ್ಟಬಸವನಿಗೆ ಇಲ್ಲೇ ಪಟ್ಟಕಟ್ಟಲಾಗಿತ್ತು. ಬೆಳ್ಳಾರೆ ಕೋಟೆಯ ಮೇಲೆ ಆಂಗ್ಲ ಕಲೆಕ್ಟರ್ ಕಚೇರಿಯ ಮೇಲೆ ಅಮರ ಯೋಧರ ಧಾಳಿಯಾಗಿತ್ತು. ಈ ಕಟ್ಟಡ ಇಂದೂ ಇದ್ದು ಬಂಗ್ಲೆಗುಡ್ಡೆ ಎಂದು ಕರೆಯಲ್ಪಡುತ್ತಿದ್ದು, ನಾಶದ ಅಂಚಿನಲ್ಲಿದೆ. ಇದೇ ಕೋಟೆಯ ಹಿಂದೆ ಜೈನ ಬಳ್ಳಾಲರ ಬೀಡಿನ ಕುರುಹು , ಆನೆಕಟ್ಟುವ ಕಲ್ಲು, ಅಡ್ಯಂತಾಯನ ಸ್ಥಾನವಿದೆ. 

ಮರಾಠರ , ಮಲಬಾರಿನ ನಾಯಕರ , ಪೋರ್ಚುಗೀಸರ ಧಾಳಿ ತಡೆಯಲು ಇವುಗಳನ್ನು ನಿರ್ಮಿಸಿದರು. ಇದರ ರಕ್ಷಣೆಗೆ ರಾಮಕ್ಷತ್ರಿಯರೆಂಬ ಜನಾಂಗವನ್ನು ನೇಮಿಸಿದ್ದು ಇವರನ್ನು ಇಂದು ಕೋಟೆಯವರೆಂದು ಕರೆಯುತ್ತಾರೆ.  ಕೋಟೆಗಳ ನಿರ್ಮಾಣದ ಉಲ್ಲೇಖ ಕೆಳದಿಯ ಕವಿ ಲಿಂಗಣ್ಣನ ಕೆಳದಿ ನೃಪವಿಜಯದಲ್ಲಿದೆ. 
“ಭೈರಸವೊಡೆಯರುಮಂ ತದ್ಧೀರಂ ಸಿಗ್ರಹಿಸಿ ಕೊಪ್ಪಮಂ ಬೆಳ್ಳರೆಯಂ
ಕಾರಕಳ ಕಳಸ ಖಾಂಡ್ಯದ ಚಾರುಪರಿಸ್ತರಣಭೂಮಿಯಂ ವಶಗೈದಂ” 
ಕಾರಕಳದ ಭೈರವರಸರಿಂದ ಮೊದಲವೆಂಕಟಪ್ಪ ನಾಯಕ ಕೊಪ್ಪ ಬೆಳ್ಳಾರೆ ಕಾರ್ಕಳ ಕಳಸ ಖಾಂಡ್ಯ ಪರಿಸ್ತರಣಗಳನ್ನು ವಶಮಾಡಿಕೊಂಡ ಎಂದಿದೆ. ಸುಬ್ರಹ್ಮಣ್ಟಕ್ಕೂ ಕೆಳದಿಗೂ ಬಹಳಾ ನಂಟು.



ತನ್ನ ಮಗನೊಂದಿಗೆ ರಾಣಿ ಚೆನ್ನಮ್ಮಾಜಿ ಇಲ್ಲಿಗೆ ಆಗಾಗ ಬರುತ್ತಿದ್ದಳು. “ದೊರೆ
ಚನ್ನಮಾಂಬೆಯತಿಭಾಸುರ ಸುಬ್ರಹ್ಮಣ್ಯ ಯಾತ್ರೆಯಂ ವಿರಚಿಸಿದಳ್ || ಇಂತು
ಸುಬ್ರಹ್ಮಣ್ಯೆಶ್ವರ ಯಾತ್ರೆಯಂ ರಚಿಸಿ ಮರಳ್ದು…..ತನ್ನ ಮಗನೊಂದಿಗೆ ರಾಣಿ ಚೆನ್ನಮಾಂಬೆಯು ಸುಬ್ರಹ್ಮಣ್ಯ ಯಾತ್ರೆ ಮಾಡಿದಳು ಎಂದಿದೆ. ಸೋಮಶೇಖರನಾಯಕನು ಕಳಸದ ಘಟ್ಟ ಇಳಿದು ಇಲ್ಲಿಗೆ ಬರುತ್ತಿದ್ದ.”ಕಂ:ಚಳಕದೆ ಕಳಸದ ಘಟ್ಟವನಿಳಿದಾ ಭೂಮಿಶವರ್ಯ ಸುಬ್ರಹ್ಮಣ್ಯ ಸ್ಥಳಕೈದಿ ಪೆರ್ಮೆಯಿಂ ಮಂಜುಳ ಸುಬ್ರಹ್ಮಣ್ಯ ದೆವರಂ ಭಜಿಯಿಸಿದಂ||” ಎರಡನೇ ಬಸಪ್ಪನಾಯಕನು ಷಷ್ಠಿಯ ಸಮಯದಲ್ಲಿ ಉತ್ಸವಕ್ಕೆ ಕ್ರಮ ಕೈಗೊಂಡಿದ್ದಾನೆ.”ಪೊಸ ತೆರಮೀ ಪರಿಬಕುತಿಯೆನಿಸಿ ಚಂಪಾ ಷಷ್ಠಿಯಲ್ಲಿ ಸುಬ್ರಹ್ಮಣಂಗೆಸೆವ ತದುತ್ಸವಂ ನಡೆಯಿಸಿದಂ ಪ್ರತಿವರ್ಷಗಳೊಳೆತಪ್ಪದ ತೆರದಿ ||” ಎಂದು ಲಿಂಗಣ್ಣ ಹೇಳಿದ್ದಾನೆ.
ಸುಬ್ರಹ್ಮಣ್ಯನ ರಥವು ಕೆಳದಿಯರಸರ ಕೊಡುಗೆ. ಅಲ್ಲಿರುವ ವೀರಭದ್ರನಾಯಕನ ಶಾಸನ ಇಂದು ಅನಾಥವಾಗಿದೆ. 

ವೀರಶೈವರಾದ ಕೆಳದಿ ಅರಸರ ಕಾಲದಲ್ಲಿ ಬಹುತೇಕ ಪಂಚಲಿಂಗೇಶ್ವರ ದೇವಾಲಯಗಳು ನಿರ್ಮಾಣವಾದವು. ಎಡಮಂಗಲ ದೇಗುಲ ಅವರ ಕಾಲದ್ದೇ. ಇಲ್ಲಿ ಮಾಲಿಂಗರಾಯ ಎಂಬ ವಿಶಿಷ್ಟ ದೈವವಿದೆ. ಇಂದಿಗೂ ದೈವಗಳ ಪಾಡ್ದನಗಳಲ್ಲಿ ಕಪ್ಪವಸೂಲಿಗೆ ಶಿವಮೊಗ್ಗೆಯಿಂದ ಗೌಡರು ಬರುವ ಉಲ್ಲೇಖಗಳಿವೆ. ಗೌಡಸಾರಸ್ವತರು ಇವರ ಕಾಲದಲ್ಲೇ ಇಲ್ಲಿಗೆ ಬಂದು ನೆಲೆಸಲಾರಂಭಿಸಿದರು. ಹೀಗೆ ಅನೇಕ ಕುರುಹುಗಳು ಇವರ ವೈಭವ ಸಾರುತ್ತಿವೆ. ಅನೇಕ ದೇಶೀಸಂಸ್ದಾನಗಳ ಇತಿಹಾಸ ಸಾಮಗ್ರಿಗಳು ವಿಪುಲವಾಗಿ ಉಪಲಬ್ಧವಿದ್ದು ಚದುರಿಹೋಗಿ ಇತಿಹಾಸಕ್ಕೆ ನಷ್ಟವಾಗುತ್ತಿವೆ. ಶಾಸ್ತ್ರೀಯವಾಗಿ ಇವುಗಳ ರಕ್ಷಣೆ ಹಾಗೂ ಸೂಚಿ ಸಿದ್ಧಪಡಿಸಿ ಅಧ್ಯಯನಕ್ಕೆ ಒದಗಿಸುವುದು ಸರ್ವಥಾ ಯೋಗ್ಯವಾಗಿದೆ. ಇವುಗಳ ರಕ್ಷಣೆಯಾಗಲಿ ಎಂದು ಆಶಿಸುತ್ತೇನೆ.





Anantharaja Gowda Puttur 5 December 2014 at 03:04
Dear Charan: Your Study of History is worth probing. Part of your investigations are related to the migration of “Hathu Kutumba Hadinentu gothrada Gowdaru” from Ikkeri Maha samsthana around year 1530. I have incorporated your story of Malingaraya in my yet to be published book ” In Pursuit of our root.



ಚರಣ್ ಐವರ್ನಾಡು

ದ್ವಿತೀಯ ಎಂಸಿಜೆ

ಮಂಗಳಗಂಗೋತ್ರಿ

ಮಂಗಳೂರು ವಿಶ್ವವಿದ್ಯಾನಿಲಯ

9740249793



ಕಾಮೆಂಟ್‌ಗಳು

Bahurupi Bharatha