ತಿಳಿಯ ಹೇಳುವೆ ಕೃಷ್ಣ ಕಥೆಯನು……
ಈ ನಡುವೆ ಗಮಕಿಯೋರ್ವರಿಗೆ ವ್ಯಾಖ್ಯಾನ ಮಾಡಬೇಕಾಗಿ ಬಂದಾಗ ‘ಕರ್ನಾಟ ಭಾರತ ಕಥಾಮಂಜರಿ’ಯ ಬಗೆಗಿನ ಹೆಚ್ಚಿನ ಓದು ಅನಿವಾರ್ಯವಾಯಿತು. ಆ ಅನಿವಾರ್ಯತೆಯೇ ಈ ಹುಚ್ಚಿಗೆ ಕಾರಣ. ಸ್ನಾನಕ್ಕೆ ಇಳಿಯುವಾಗಲೂ ‘ಶ್ರೀವನಿತೆಯರಸನೆ……’ ಎಂದು ಗುಣುಗುಡುವಂತಾಗಿದ್ದು. ಎಚ್ಚೆಸ್ವ, ತೋಳ್ಪಾಡಿ, ಶತಾವಧಾನಿಗಳಂತಹ ಹಿರಿಯರು ಕುಮಾರವ್ಯಾಸ ಬಗ್ಗೆ ಮಾತನಾಡುವಾಗ ಮೈ ಜುಂ ಎನ್ನುತ್ತಿತ್ತು. ಕೆದಿಲಾಯರು “ಗಜಮುಖನೆ……” ಎಂದು ಗಮಕ ಆರಂಭಮಾಡುವಾಗ, ಪದೇ ಪದೇ ಇಯರ್ ಫೋನ್ ತುರುಕಿಸಿಕೊಂಡು ಕೇಳುವಾಗ ರೋಮಾಂಚನಗೊಳ್ಳುವುದನ್ನು ಹೇಗೆ ಹೇಳದಿರುವುದು?
ಹಾಗಾಗಿ ಕುಮಾರವ್ಯಾಸ ಭಾರತದ ಕೆಲ ಪದ್ಯಗಳು ನಂಗೆ ಕಂಠಪಾಠವಾಗಿದೆ. ಕಾರ್ಯಕ್ರಮಗಳಲ್ಲಿ ಅರ್ಜಂಟಿಗೆ ಪ್ರಾರ್ಥನೆ ಮಾಡಲು ಯಾರೂ ಸಿಗದಿದ್ದರೆ ನಾನು ಇವನ್ನೇ ಹಾಡುತ್ತಿದ್ದೆ.ವ್ಯಾಸ ಪ್ರಣೀತ ಭಾರತವೇ ಕುಮಾರವ್ಯಾಸನಿಗೆ ಪ್ರೇರಣೆಯಾದರೂ ವ್ಯಾಸನಿಗಿಂತ ಒಂದು ಕೈ ಮೇಲೇ ಎಂಬಂತೆ ಕಾವ್ಯವನ್ನು ಪ್ರಸ್ತುತಪಡಿಸುತ್ತಾನೆ.ಮೂಲಕ್ಕಿಂತ ಭಿನ್ನವಾಗಿ ಮೂಲಕ್ಕೆ ದಕ್ಕೆಯಾಗದಂತೆ ಕನ್ನಡ ಭಾರತಗಳಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆಯುತ್ತದೆ. ಮುಖ್ಯವಾಗಿ ಕಾವ್ಯ ಯಾಕೆ ಇಷ್ಟ ಅಂದ್ರೆ ದಾಯಾದಿ ಕಲಹವನ್ನು ಕವಿ ‘ಕೃಷ್ಣ ಕಥೆ’ಯನ್ನಾಗಿಸಿದ್ದಾನೆ!
ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರ ದಾತಾರ|
ರಾವಣಾಸುರಮಥನ ಶ್ರವಣ ಸು
ಧಾವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ||
ಇದು ಕಾವ್ಯಾಂಭದ ಪದ್ಯ. ಕವಿ ಆನತ ಜನರನ್ನು ಕಾಯುವ,ಶ್ರವಣಾಮೃತ ವರ್ಷಿಣಿಯಾದ ವಿನೂತ ಕಥನ ಕಾರಣನಾದ ತನ್ನ ಇಷ್ಟ ದೈವ ಗದುಗಿನ ವೀರನಾರಾಯಣನನ್ನು ಪ್ರಾರ್ಥಿಸುತ್ತಾನೆ.ಇಲ್ಲಿ ಕೃಷ್ಣನ ರಾಮಾವತಾರವನ್ನು ನೆನೆಯುತ್ತಾ ರಾವಣಾಸುರ ಮಥನನನ್ನು ನೆನೆಯುತ್ತಾನೆ…..ಕೃಷ್ಣನನ್ನು ನೇರವಾಗಿ ನೆನೆಯದೇ ಇಂತವರ ಗಂಡ,ಇಂತವರ ವೈರಿ, ಇಂತವರ ದಾತಾರ, ಇಂತವನ ತಂದೆ ಎಂದು ಸಂಬೋಧಿಸಿದ್ದಾನೆ.ವಿಷ್ಣುವಿಂದ ಹಿಡಿದು ವೀರನಾರಾಯಣನ ವರೆಗೆ ಸಂಬೋಧಿಸುತ್ತಾನೆ. ಇಲ್ಲಿ ವೀರನಾರಾಯಣನನ್ನು ನಾರಯಣ ಎಂದದ್ದು ಭಾಮಿನಿಯನ್ನು ಸರಿಗಟ್ಟಿಸಿಕೊಳ್ಳಲು ಅಲ್ಲ, ದೈವದ ಗ್ರಾಮ್ಯರೂಪವನ್ನು ಉಳಿಸಿಕೊಳ್ಳುವುದಕ್ಕಾಗಿ. ಅಖಿಲ ಭಾರತ ಮಟ್ಟದ ದೇವತೆಯನ್ನು ಗದುಗಿಗೆ ಇಳಿಸುವುದು ಕವಿಯ ದೇಸಿಗುಣ. ಈ ಪದ್ಯದಲ್ಲಿರುವ ಶ್ರೀವನಿತೆ ಲಕ್ಷ್ಮೀ, ರಾವಣಾಸುರ ಮಥನ ಇವು ಕ್ಷೀರಸಾಗರ ಮಥನವನ್ನು ಸಂಕೇತಿಸಿದರೆ , ಅದರಿಂದ ಹುಟ್ಟಿದ ಸುಧಾವಿನೂತನ ಕಥನ ಅಮೃತಪ್ರಾಯವಾದುದು. ಇದೊಂದು ಬರಿಯ ಪ್ರಾರ್ಥನಾ ಪದ್ಯವಲ್ಲ!
ಕಾವ್ಯದ ಶ್ರೋತೃಗಳನ್ನು ಕವಿ ಸನಕಾದಿಗಳೆನ್ನುತ್ತಾನೆ. ಇನ್ನೊಂದೆಡೆ “…..ಸೂರಿಗಳು ಸನಕಾದಿಗಳು…..” ಎನ್ನುತ್ತಾನೆ. ಹಾಗಾದರೆ ಪಂಚಮ ಶ್ರುತಿಯನ್ನು ಕೇಳಲು ಅವರು ಮಾತ್ರ ಅರ್ಹರೇ? ಸದಾ ಕೌಮಾರ್ಯದಲ್ಲಿರು ಬ್ರಹ್ಮನ ಮಾನಸ ಪುತ್ರರಾದ ಸನತ್ಕುಮಾರ ಮೊದಲಾದ ಸನತ್ಸುಜಾತರು ಪರಮ ಬ್ರಹ್ಮಜ್ಞಾನಿಗಳು. ಹಾಗಾಗಿ ಕವಿ ತನ್ನ ಕೇಳುಗ ಇವರಂತೆ ಮೇದಾವಿಯಾಗಿರಬೇಕು ಎಂದು ಬಯಸಿರಬೇಕು. ಇವರು ಸದಾ ಜವ್ವನಿಗರಾದ್ದರಿಂದ ತನ್ನ ಕೇಳುಗರಲ್ಲಿ ಯುವಕರನ್ನೂ ಸೇರಿಸಿರಬೇಕು! ಆರಂಭಿಕ ಪದ್ಯಗಳಲ್ಲಿ ವಿಶಿಷ್ಟಪೂರ್ಣವಾದ ಇನ್ನೊಂದು ರಚನೆ ಇದು…..
ವೀರನಾರಾಯಣನೆ ಕವಿ ಲಿಪಿ
ಕಾರ ಕುವರವ್ಯಾಸ ಕೇಳವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು|
ಚಾರುಕವಿತೆಯ ಬಳಕೆಯಲ್ಲ ವಿ
ಚಾರಿಸುವಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದು ಸಲುಗೆ ಬಿನ್ನಪವ||
ವ್ಯಾಸ ಮಹಾಭಾರತವನ್ನು ಹೇಳುವಾಗ ಗಣಪತಿ ಬರೆದನೆಂಬ ಕತೆ ಇದೆ. ಇದು ಕಾವ್ಯಕ್ಕೆ ಒಂದು ಘನತೆ. ಆದರೆ ಕುಮಾರವ್ಯಾಸ ಸಮರ್ಪಣಾ ಭಾವ ಇದನ್ನೂ ಮೀರಿಸಿದ್ದು! ತಾನು ಭಗವಂತ ಹೇಳಿದನ್ನು ಟೈಪ್ ಮಾಡಿದ್ದು ಮಾತ್ರ ಎಂಬಲ್ಲಿ ತನ್ನ ಮೇರು ಕವಿತ್ವಕ್ಕೆ ಯಾವುದೇ ಮುಲಾಜೂ ಇಲ್ಲದೆ ವೀರನಾರಾಯಣನನ್ನು ಹೊಣೆಯಾಗಿಸಿ ಕಾವ್ಯವನ್ನು ಅವನಿಗೆ ಸಮರ್ಪಿಸುತ್ತಾನೆ. ಇಂತಹ ಅಪೂರ್ವ ಅರ್ಪಣಾ ಭಾವವನ್ನೂ ಕನ್ನಡದಲ್ಲಿ ಯಾವ ಕವಿಯೂ ಹಿಂದೆ ಹೊಂದಿರಲಿಲ್ಲ. ಅಲ್ಲದೇ, ಸರಸ್ವತಿಯನ್ನು ಸ್ತುತಿಸುತ್ತಾ “ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ” ಎನ್ನುತ್ತಾನೆ. ಇದರ ಪ್ರೇರಣೆಯಿಂದ ನಮ್ಮ ತುಳುಕವಿ ಅರುಣಾಬ್ಜ “ಈರ್ ನೃತ್ತಿಪೊಡೆನ್ನಾ ಮುಖರಂಗಂಟ್” ಎನ್ನುತ್ತಾನೆ. ಇಲ್ಲಿ ಹಾಡುವುದೂ ಬರೆಯುವುದು ಕುಮಾರವ್ಯಾಸನೇ. ಕ್ರಿಯೆ ಇವನದ್ದೇ ಆದರು ಅದಕ್ಕೆ ಪ್ರೇರಕವಾದ ಪರಾಶಕ್ತಿ ಬೇರೆ,ಅದು ಭಗವಂತ! ಇವೆರಡೂ ಕ್ರಿಯೆಗಳಿಗೆ ವೇದಿಕೆಯನ್ನು ನೀಡಿ ಅಪೌರುಷೇಯವಾದ ಭಗವದ್ ಶಕ್ತಿಗೆ ತನ್ನನ್ನು ಕವಿ ಅರ್ಪಿಸಿಕೊಂಡಿದ್ದಾನೆ.
‘ಚಾರು ಕವಿತೆಯ ಬಳಕೆಯಲ್ಲ-ವಿಚಾರಿಸುವೊಡೆ ಅಳವಲ್ಲ’ಎಂಬಲ್ಲಿ ತನ್ನ ಕಾವ್ಯ ಚಪ್ಪುಡಿಯಲ್ಲ ಎಂಬ ಬಲವಾದ ಆತ್ಮವಿಶ್ವಾಸ, ಅಭಿಮಾನವಿದೆ. ‘ಸರ್ವಜ್ಞರಾದರು ಚಿತ್ತವಧಾರುಹೋ” ಎಂದು ಉದ್ಗಾರ ತೆಗೆಯುವಲ್ಲಿ ತಿಳಿದವರು ಎಚ್ಚರದಿಂದ ಓದಬೇಕು ಎಂಬ ವಿನಯವೂ ಇದು. ಇಂತಹ ಗುಣಗಳೇ ಕುಮಾರವ್ಯಾಸನನ್ನು ಜನಸಾಮಾನ್ಯರ ಕವಿಯಾಗಿಸಿದ್ದು. ಯಾರಿಗಾಗಿ ಈ ಕಾವ್ಯ? ಈ ಪದ್ಯವನ್ನು ಗಮನಿಸೋಣ…..
ತಿಳಿಯ ಹೇಳುವೆ ಕೃಷ್ಣ ಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ|
ಹಲವು ಜನ್ಮದ ಪಾಪರಾಶಿಯ
ತೊಳೆವ ಜಲವಿದು ಶ್ರಿಮದಾಗಮ
ಕುಲಕೆ ನಾಯಕ ಭಾರತ ಕೃತಿ ಪಂಚಮ ಶ್ರುತಿಯ||
ಇದು ಕುರು-ಪಾಂಡವರ ದಾಯದಿ ಕದನವನ್ನು ಕುಮಾರವ್ಯಾಸ ಕೃಷ್ಣಕತೆಯನ್ನಾಗಿಸಿದ ರೀತಿ. ತನ್ನ ಕಾವ್ಯವನ್ನು ಪಾಪರಾಶಿಯ ತೊಳೆವ ಜಲವಿದು ಎನ್ನುತ್ತಾ ಪಾಪನಾಶಿನಿಯಾದ ಗಂಗೆಗೆ ಹೊಲಿಸುತ್ತಾನೆ. ಗಂಗೆಯಂತೆ ಕಾವ್ಯವೂ ನಿರಂತರ ಹರಿಯುವಿಕೆಯನ್ನು ಹೊಂದಿರುವಂತದ್ದು, ಚಲನಶೀಲವಾದುದು.
ತಿಳಿಯ ಹೇಳುವೆ ಎಂದರೆ ತಿಳಿಸುವುದಕ್ಕಾಗಿ ಹೇಳುವುದೋ, ಲಾಲಿತ್ಯದಿಂದ ಮಕ್ಕಳಿಗೆ ಕತೆಹೇಳಿದಂತೆ ಹೇಳುವೆನೆಂದೋ….ಆದರೆ ಗಟ್ಟಿ ಮಜ್ಜಿಗೆಯನ್ನು ನೀರು ಹಾಕಿ ತಿಳಿಯಾಗಿಸುವಂತೆ ಕಾವ್ಯವನ್ನೂ ಸರಳೀಕರಿಸಿದ್ದಾನೆ ಎನಿಸುತ್ತದೆ.
ಕವಿಗೆ ಸನಕಾದಿಗಳು, ಇಳೆಯ ಜಾಣರು ಮಾತ್ರ ಕೇಳುಗರಲ್ಲ. ಅವರೆಲ್ಲರಿಗಿಂತ ಕವಿಗೆ ಕೃಷ್ಣನನ್ನು ಮೆಚ್ಚಿಸುವುದೇ ಮುಖ್ಯ. ಇಲ್ಲಿ ಕೃಷ್ಣ ತನ್ನ ಕಥೆಯನ್ನು ತಾನೇ ಕೇಳುತ್ತಾನೆ ಎಂಬುದು ವಿಶೇಷ!
ತನ್ನ ಕಾವ್ಯ ಬರಿಯ ಕಾವ್ಯವಲ್ಲ, ಶ್ರೀಮದಾಗಮ ಕುಲಕೆ ನಾಯಕ- ಪಂಚಮ ಶೃತಿ ಎಂದು ಶ್ರೇಷ್ಠತೆಯನ್ನು ಗಟ್ಟಿಯಾಗಿ ಹೇಳುತ್ತಾನೆ. ಮಹಾಭಾರತವನ್ನು ಪಂಚಮವೇದ ಎನ್ನುತ್ತಾನೆ ಕವಿ.
ರಾಜಸೂಯ ಯಾಗ ಸಮಾಪ್ತಗೊಂಡ ಮೇಲೆ ಧರೆಯಲ್ಲಿರುವ ಮಾನ್ಯರನ್ನು ಗೌರವಿಸುವುದು ಸಂಪ್ರದಾಯ. ಹತ್ತು ಮಂದಿಯನ್ನು ಸನ್ಮಾನಿಸುವುದಾದರೆ ಮೊದಲನೆಯದಾಗಿ ಯಾರಿಗೆ ಅಗ್ರ ಪೂಜೆ? ಮುನಿ ವರ್ಯರು, ಜ್ಞಾನವೃದ್ಧರು, ವಯೋವೃದ್ಧರು, ಗುರು ಶ್ರೇಷ್ಠರು……ಯಾರು ಮೊದಲನೆಯವರು?ಒಬ್ಬರನ್ನು ಕರೆದರೆ ಇನ್ನೊಬ್ಬರಿಗಾಗದು. ಎಲ್ಲರೂ ಶ್ರೇಷ್ಠರೇ ಆದರೂ ಒಂದು ವ್ಯವಸ್ಥೆಗಾಗಿ ಯಾರನ್ನು ಮೊದಲು ಗೌರವಿಸುವುದು ಎಂದಾಗ ಆಚಾರ್ಯ ಭೀಷ್ಮ ಎದ್ದು ನಿಲ್ಲುತ್ತಿಲೇ “ಕೃಷ್ಣ…ಅವನ ಹೊರತು ಬೇರಾರೂ ಇಲ್ಲ” ಎಂದರು.
ಗಿರಿಗಳಲಿ ಹೇಮಾದ್ರಿ ಘನ ಸಾ
ಗರದೊಳಗೆ ದುಗ್ದಾಬ್ಧಿ ದೇವಾ
ಸುರ ನರೋಗರ ನಿಕರದಲಿ ನಾರಾಯಣನೆ ಮಿಗಿಲು|
ಅರಸ ಸಂಶಯವೇಕೆ ಕೃಷ್ಣನ
ಚರಣವನು ತೊಳೆ ರಾಜಸೂಯಾ
ಧ್ವರಕೆ ಪೂಜಾಪಾತ್ರನೀ ಹರಿಯೆಂದನಾ ಭೀಷ್ಮ||
ಇಡೀ ಜಗತ್ತಿನಲ್ಲಿ ಕೃಷ್ಣನೇ ಮೇಲು, ಅವನೇ ಅಗ್ರಪೂಜೆಗೆ ಅರ್ಹ ಎಂದಾಗ ಕೆಲವರು ವಿರೋಧಿಸಲಾಗದೇ ಅವುಡುಗಚ್ಚಿ ಕುಳಿತಿದ್ದರು, ಕೆಲವರು ಜೈ ಎಂದರು. ಆದರೆ ಶಿಶುಪಾಲ ಮಾತ್ರ ತನ್ನ ವಾಗ್ಧಾಳಿಯನ್ನು ಆರಂಭಿಸುತ್ತಾನೆ. ಅವನಿಗೆ ಕೃಷ್ಣ ದನ ಮೇಯಿಸೋನು,ಯಾದವ,ಅಪ್ರಬುದ್ಧ,ಎಳೆಯ ಕುನ್ನಿ…….
ಇವನು ಗಡ ಚಿಕ್ಕೆಂದು ಮೊಲೆಗೊ
ಟ್ಟವಳ ಹಿಂಡಿದ ಗಡ ಬಂಡಿಯ
ಜವಳಿಗಾಲಲಿ ಮುರಿದನೈ ಮಾಮಾ ಸಮರ್ಥನಲೆ|
ಸವಡಿ ಮರ ನೆಗ್ಗಿದವು ಗಡ ಮೈ
ಯವುಚಿದರೆ ಬಲುಗತ್ತೆ ಗೂಳಿಯ
ನಿವ ವಿಭಾಡಿಸಿದನೆ ಮಹಾದ್ಭುತವೆಂದನಾ ಚೈದ್ಯ||
ಹಕ್ಕಿ ಹರಿಣಿಯ ತರಿದ ಗಡ ಕೈ
ಯಿಕ್ಕಿದರೆ ಕಡುಗುದುರೆಯನು ನೆಲ
ಕಿಕ್ಕಿದನೆ ನೆರೆ ಹೇಳಾ ಕೃಷ್ಣನಾಳ್ತವ|
ಹೊಕ್ಕು ಹೆಬ್ಬಾವಿನ ಬಸುರ ಸೀ
ಳಿಕ್ಕಿದನೆ ಯಾದವನ ಪೌರುಷ
ವಕ್ಕಜವಲಾ ಭೀಷ್ಮ ತೂಪಿರಿಯೆಂದನಾ ಚೈದ್ಯ||
ಶಿಶುಪಾಲನ ಪ್ರಕಾರ ಕೃಷ್ಣ ಗೋವರ್ಧನವನ್ನು ಎತ್ತಿಹಿಡಿದದ್ದು,ಕಾಳಿಂಗ ಮರ್ಧನ,ಶಕಟನನ್ನು ಕೊಂದದ್ದು……. ಇವನು ಕೃಷ್ಣ ಏನೋ…ಅವೆಲ್ಲವನ್ನೂ ತಿರಸ್ಕರಿಸುತ್ತಾನೆ.
ಇವನ ಮಾತಿಗೆ ಪ್ರತಿಯಾಗಿ ಭೀಷ್ಮನ ಕೆಲ ವಾದಗಳನ್ನು ಗಮನಿಸೋಣ. ಭೀಷ್ಮ ಇಲ್ಲಿ ಅತ್ಯಂತ ಪ್ರಜ್ಞಾಶೀಲನಾಗಿ ವರ್ತಿಸುತ್ತಾನೆ.
ನಿರವಯವ ತತ್ವೈಕ ರಸವಿದೆ
ನರ ಮನೋಹರ ರೂಪಿನಲಿ ವ್ಯವ
ಹರಣ ಸಂಜ್ಞಾರಹಿತವಿದೆ ಕೃಷ್ಣಾಭಿದಾನದಲಿ|
ಭರಿತ ಬಹಳ ಬ್ರಹ್ಮವಿಲ್ಲಿಯೆ
ಧರಣಿಯಲಿ ಸಂಚರಿಸುತಿದೆ ಮುರ
ಹರನ ತತ್ವರಹಸ್ಯ ಮುದ್ರೆಯನರಿವಲಾನೆಂದ||
ಹೊಗಳಿ ದಣಿಯವ ವೇದ ತತಿ ಕೈ
ಮುಗಿದು ದಣಿಯರು ಕಮಲಭವ ಭವ
ರೊಗುಮಿಗೆಯ ಮಾನಸ ಸಮಾಧಿಯ ಸಾರ ಸತ್ವದಲಿ|
ಬಗೆದು ದಣಿಯರೆ ಯೋಗಿಗಳು ಕೈ
ಮುಗುಚಿ ದಣಿಯರು ಕರ್ಮಿಗಳು ಮೂ
ಜಗದ ದೈವದ ದೈವ ಕೃಷ್ಣನ ಬೈವನಿವನೆಂದ||
ಭೀಷ್ಮ ತನ್ನ ‘ವಚನಮಯ ಖಡುಗ ‘ ದಿಂದ ಶಿಶುಪಾಲನನ್ನು ತರಾಟಗೆ ತೆಗೆದುಕೊಳ್ಳುತ್ತಿದ್ದರೆ , ಕೃಷ್ಣ-ಪಾಂಡವ ದ್ವೇಷಿ ಶಿಶುಪಾಲ ಸತ್ಯವನ್ನು ತಿರುಚುತ್ತಾ ಕೃಷ್ಣ ನಿಂದೆ ಮಾಡುತ್ತಿದ್ದ. ಇದಕ್ಕೆ ಅವನು ಕೊಡುವ ಸಮರ್ಥನೆಗಳೆಲ್ಲವೂ ಛಿoಟಿಛಿeಚಿಟeಜ ಜಿಚಿಛಿಣs ಆಗಿದ್ದವು.
ಕೊನೆಯದಾಗಿ ಕೃಷ್ಣನನ್ನು ಸಮರ್ಥಿಸುವ ಭೀಷ್ಮನ ಮಾತಿನೊಂದಿಗೆ ಮುಗಿಸೋಣ. ಶಿಶುಪಾಲ ಎಷ್ಟೇ ನಿಂದಿಸಿದರೂ ಕೃಷ್ಣನ ವ್ಯಕ್ತಿತ್ವಕ್ಕೆ ಅದರಿಂದ ಚೂರೂ ಚ್ಯುತಿಯಿಲ್ಲ.
ನೆಳಲು ಜಲದಲಿ ನಡುಗಲಿನ ಮಂ
ಡಲಕೆ ಕಂಪವೆ? ಧೂಮಶಿಖಿ ಕು
ಪ್ಪಳಿಸಿದರೆ ಕಂದುವುದೆ ನಭ? ಕೆಂಧೂಳಿಯೊಡಮುರಿದು |
ಸುಳಿದರನಿಲನ ತೊಳೆವರೆ?ನರ
ರೊಳಗೆ ಡಿಳ್ಳವೆ ಪರಮ ಸುಖನಿಧಿಗೆಂದನಾ ಭೀಷ್ಮ||
ವ್ಯಾವಹಾರಿಕವಾಗಿ ಮಾನವರೂಪಿಯಾಗಿರುವ ಕೃಷ್ಣ ಪಾರಮಾರ್ಥಿಕವಾಗಿ ಭಗವಂತನೇ. ಆಕಾಶದ ನೆರಳು ನೀರಿನಲ್ಲಿ ನಡುಗಿದರೆ ಇನ ಮಂಡಲ ನಡುಗುವುದಿಲ್ಲವಲ್ಲಾ? ಬೆಂಕಿಯ ಜ್ವಾಲೆ ಎಗರೆಗರಿ ಮೇಲೆ ಹೋದರೆ ಆಕಾಶ ಸೀದು ಹೋಗುತ್ತದೆಯೋ? ಕೆಂಧೂಳಿನಿಂದ ಕೆಂಪಾದ ಗಾಳಿಯನ್ನು ತೊಳೆಯುವುದಕ್ಕೆ ಸಾಧ್ಯವೇ?ನರ ಮನುಷ್ಯರ ಮಧ್ಯೆ ಹುಟ್ಟಿದ ಮಾತ್ರಕ್ಕೆ ಅವನೂ ಮನುಷ್ಯನೇ? ಅಲ್ಲಾ……!!!! ದೇಹಕ್ಕೆ ಸಂಬಂಧಿಸಿದ್ದು ಆತ್ಮಕ್ಕೆ ತಟ್ಟುವುದಿಲ್ಲ ಎಂಬ ವೇದಾಂತದ ದರ್ಶನವನ್ನು ಭೀಷ್ಮ ಮಾಡುತ್ತಾನೆ.
ಕೃಷ್ಣ ಮೂಜಗದ ದೈವದ ದೈವ….
ZÀgÀuï LªÀ£ÁðqÀÄ
¢éwÃAiÀÄ JA¹eÉ
ªÀÄAUÀ¼ÀUÀAUÉÆÃwæ
ªÀÄAUÀ¼ÀÆgÀÄ «±Àé«zÁ央AiÀÄ
9740249793


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thank You