ಇತಿಹಾಸಕ್ಕೆ ಆಕರವಾಗಿ ತುಳು ಪಾಡ್ಡನಗಳು
ಇತಿಹಾಸ ರಚನೆಗೆ ಇಲ್ಲಿಯವರೆಗೆ ಶಾಸನಗಳು, ಕಡತಗಳು, ಕೈಫಿಯತ್ತುಗಳು, ಲಿಖಿತದಾಖಲೆಗಳು, ಸಮಕಾಲೀನ ಸಾಹಿತ್ಯ ಕೃತಿಗಳನ್ನು ಮಾತ್ರ ಆಕರಗಳಾಗಿ ಬಳಸಲಾಗುತ್ತಿತ್ತು. ಆದರೆ ತುಳುವರ ಜೀವಾಳವಾಗಿರುವ ತುಳು ಪಾಡ್ದನಗಳು ಕೂಡ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ, ಜನಸಾಮಾನ್ಯರ ಚರಿತ್ರೆ ಕಟ್ಟುವಲ್ಲಿ ಬಳಸಲು ಸಾಧ್ಯವಿಲ್ಲವೆ?
ಇಲ್ಲಿಯವರೆಗೆ ಬಳಸುತ್ತಿದ್ದ ಎಲ್ಲಾ ಆಕರಗಳಲ್ಲಿ ವಿಷಯಗಳು ಸ್ಪಷ್ಟ ಹಾಗೂ ಕರಾರುವಕ್ಕಾಗಿದೆ ಎಂಬ ಅಭಿಪ್ರಾಯ ವಿದ್ವನ್ಮಣಿಗಳ ಮನಸ್ಸಿನಲ್ಲಿ ಗೂಟವೂರಿ ಕೂತಿದೆ. ಆದರೆ ಅವು ಜನ ಸಮುದಾಯದ ಇತಿಹಾಸವಾಗದೆ ಮೇಲ್ವರ್ಗದ, ಶಿಕ್ಷಿತವರ್ಗದ ಚರಿತ್ರೆಯನ್ನು ಬೆಳಕಿಗೆ ತರುತ್ತದೆ. ರಾಜರುಗಳ ಅಟ್ಟಹಾಸ, ಯುದ್ಧ, ಕಟ್ಟಿಸಿದ ದೇಗುಲಗಳು, ಮಠ-ಮಂದಿರಗಳು, ಅವರ ವಿಜಯಗಳನ್ನು ಮಾತ್ರ ಸಾರುತ್ತದೆ. ಸತಿಯಕಲ್ಲುಗಳು, ನಿಷಿಧಿಕಲ್ಲುಗಳು, ವೀರಗಲ್ಲುಗಳು ಮಹಿಳೆಯರ ಆತ್ಮಾರ್ಪಣೆ, ಪ್ರಾಣ ತ್ಯಾಗ ಮಾಡಿದ ಜೈನಮುನಿಗಳು, ವೀರರ ಬಲಿದಾನಗಳನ್ನು ವೈಭವೀಕರಿಸುತ್ತದೆ. ಇಂತಹ ಆಕರಗಳು ಜನಸಾಮಾನ್ಯನ ನೋವು-ನಲಿವು, ದುಃಖ-ದುಮ್ಮಾನಗಳನ್ನು ತೋರಿಸಲಾರವು. ಇಂತಹ ಸಂದರ್ಭದಲ್ಲಿ ಮೌಖಿಕ ಆಕರಗಳು ಇತಿಹಾಸದ ನೈಜತೆಯನ್ನು ಸಾರುತ್ತವೆ.
ಈ ಇತಿಹಾಸಕಾರರು ಕಂಠಸ್ಥ ಪರಂಪರೆಗೆ ಸೇರಿದ ಜನಪದ ಸಾಹಿತ್ಯವನ್ನು ತಮ್ಮ ಮಡಿವಂತಿಕೆಯ ಮನೋಧರ್ಮದಿಂದ ಅಸ್ಪೃಶ್ಯತೆಯಿಂದ ಕಂಡುದು ಮತ್ತು ಕೆಲವೊಂದು ಬಾರಿ ಇಂತಹ ಜನಪದ ಸಾಹತ್ಯದ ಮಹತ್ವದ ಬಗೆಗಿನ ಅಜ್ಞಾನ- ಇವು ಈ ಧೋರಣೆಗೆ ಕಾರಣ (ವಿದ್ವಾಂಸ ಡಾ. ವಿವೇಕ್ ರೈ )
ಜನಪದ ಸಾಹಿತ್ಯವನ್ನು ಐತಿಹಾಸಿಕ ಆಕರಗಳಾಗಿ ಬಳಸಬಹುದು ಎಂಬುದಕ್ಕೆ ವಿದ್ವಾಂಸ ಅಲೆಗ್ಸಾಂಡರ್ ಕ್ರಾಪೆಯ ಮಾತುಗಳು ಪುಷ್ಟಿ ಕೊಡುತ್ತದೆ.
ತುಳು ಪಾಡ್ದನಗಳನ್ನು ಐತಿಹಾಸಿಕ ಮೂಲವಾಗಿ ಬಳಸುವಾಗ ಜಾಗೃತೆ ವಹಿಸುವುದು ಅಗತ್ಯ. ಜಾನಪದ ಕಂಠಸ್ಥ ಪರಂಪರೆಯಲ್ಲಿ ನೈಜ ಇತಿಹಾಸದ ಜೊತೆಗೆ ಕಾಲ್ಪನಿಕಾಂಶಗಳೂ ಬೆರೆತಿರುತ್ತದೆ. ಕೆಲವು ಬಾರಿ ನೈಜತೆಯನ್ನು ಮರೆಮಾಚುವಷ್ಟು ರಂಗು ರಂಗಿನ ಕಲ್ಪನೆಗಳಿರುತ್ತವೆ. ಅತ್ಯಂತ ಜಾಗೃತೆಯಿಂದ ವಾಸ್ತವ ಹಾಗೂ ಕಲ್ಪನೆಗಳನ್ನು ಬೇರ್ಪಡಿಸಬೇಕು.
ಪಾಡ್ದನಗಳಲ್ಲಿನ ಕತೆಗಳು ಬರಿಯ ಕಾಗೆ-ಗುಬ್ಬಕ್ಕನ ಕತೆಗಳಲ್ಲ. ಓರ್ವ ಕವಿ, ಶಾಸನಗಾರನಿಗಿಂತ ಹೆಚ್ಚು ಸತ್ಯತೆಯನ್ನು ತೋರಿಸಬಲ್ಲವು. ಯಾಕೆಂದರೆ ಇತರರಿಗೆ ಇರುವಷ್ಟು ಅಧಿಕಾರಶಾಹಿಗಳ ಮೇಲಿರುವ ಭಯ ಜಾನಪದರಿಗೆ ಇಲ್ಲ. ಜಾನಪದರು ಸರ್ವ ಸ್ವತಂತ್ರರು, ಹಾಗಾಗಿ ಪುಂಖಾನುಪುಂಖವಾಗಿ ತನ್ನ ಆಸ್ಥಾನ ಕವಿಯಿಂದ ಹೊಗಳಿಸಿಕೊಳ್ಳುವ ರಾಜನೋರ್ವನ ನೈಜ ಹಾಗೂ ಕರಾಳ ಮುಖದರ್ಶನ ಜಾನಪದದಲ್ಲಾಗುತ್ತದೆ.
ಕಾರ್ಕಳ ಹಾಗೂ ವೇಣೂರಿನ ಗೊಮ್ಮಟ ಪ್ರತಿಮೆಗಳ ಸ್ಥಾಪನೆಗಳ ಹಿಂದೆ ಎರಡು ಅರಸೊತ್ತಿಗೆಗಳ ನಡುವೆ ನಡೆದ ಸಂಘರ್ಷವನ್ನು ಕಲ್ಕುಡ-ಕಲ್ಲುರ್ಟಿ ಪಾಡ್ದನದಲ್ಲಿ ಹೇಳಲಾಗಿದೆ. ಪಾಡ್ದನಗಳಲ್ಲಿ ಕಾರ್ಕಳದ ಅರಸನು ಕಲ್ಕುಡನಿಂದ ಕಡೆಯಲ್ಪಟ್ಟ ಇಂತಹ ಮೂರ್ತಿ ಮತ್ತೆಲ್ಲೂ ಕೆತ್ತಬಾರದೆಂಬ ದುರುದ್ದೇಶದಿಂದ ಕಲ್ಕುಡನ ಎಡಗೈ, ಬಲಗಾಲನ್ನು ತುಂಡರಿಸುತ್ತಾನೆ. ಆದರೆ ದೈವೀಶಕ್ತಿಯಿಂದ ವೇಣೂರಿನ ಅಜಿಲರ ಅಪ್ಪಣೆಯಂತೆ ಅಲ್ಲಿಯೂ ಗೊಮ್ಮಟನನ್ನು ಕಡೆಯುತ್ತಾನೆ. ತನ್ನ ಅಣ್ಣನಿಗಾದ ಅನ್ಯಾಯವನ್ನು ಕಂಡುನೊಂದ ಕಾಳಮ್ಮ ಅಣ್ಣನೊಂದಿಗೆ ಪ್ರಾಣ ತ್ಯಾಗಮಾಡಿ ಮಾಯ ಸೇರಿ ಅರಸನನ್ನು ಶಿಕ್ಷಿಸುತ್ತಾರೆ ಕಾರ್ಕಳದ ಗೊಮ್ಮಟನ ಪಕ್ಕದಲ್ಲಿರುವ ಸಂಸ್ಕೃತ ಶಾಸನದಲ್ಲಿ ಈ ರೀತಿ ಬರೆಯಲಾಗಿದೆ: ಪ್ರಖ್ಯಾತವಾದ ದೇಶೀಗಣದ ಪನಸೋಗೆ ಬಳಿಯ ಲಲಿತಕೀರ್ತಿವರ್ಯರ ಉಪದೇಶವನ್ನನುಸರಿಸಿ ಕ್ರಿ.ಶ. ೧೩೫೩ ವಿರೋಧೀಕೃತ್ ಸಂವತ್ಸರದ ಫಾಲ್ಗುಣ ಮಾಸದ ಶುಕ್ಲಪಕ್ಷ ದ್ವಾದಶಿತಿಥಿಯ ಬುಧವಾರ (ಕ್ರಿ.ಶ 1432 ಫೆಬ್ರವರಿ 13) ಚಂದ್ರವಂಶೀಯನಾದ ಶ್ರೀ ಭೈರವೇಂದ್ರನೆಂಬ ಅರಸುಮಗನಾದ ಶ್ರೀ ವೀರಪಾಂಡ್ಯನೆಂಬ ಅರಸನಿಂದ ಶ್ರೀ ಬಾಹುಬಲಿ ಮೂರ್ತಿ ಸ್ಥಾಪಿಸಲ್ಪಟ್ಟಿತು (ಕನ್ನಡ ಅವತರಣಿಕೆ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್)
ವೇಣೂರಿನ ಶಾಸನದಲ್ಲೂ ಬೆಳ್ಗುಳಪುರದ ಪಟ್ಟಕ್ಕೆ ಸೇರಿದ ಚಾರುಕೀರ್ತಿ ಮುನಿಗಳ ಉಪದೇಶದಂತೆ ತಿಮ್ಮರಾಜನು ಸ್ಥಾಪಿಸಿದ. ಅಜಿಲರ ತಿಮ್ಮರಾಜನನ್ನು ಚಾಮುಂಡಾನ್ವಯ ಭೂಷಕನೆಂದು ಪಾಂಡ್ಯರಾಜ ಹಾಗೂ ಪಾಂಡ್ಯಿಕ ದೇವಿಯ ಪುತ್ರನೆಂದು ಬಣ್ಣಿಸಲಾಗಿದೆ. (ಕೆ. ರಮೇಶ್)
ಮೇಲಿನ ಎರಡೂ ಶಾಸನಗಳಲ್ಲೂ ಶಿಲ್ಪಿಯ ಉಲ್ಲೇಖವಾಗಲೀ, ಲಿಂಗ ಛೇದನ ಪ್ರಸಂಗದ ಉಲ್ಲೇಖವಾಗಲೀ ಇಲ್ಲ. ಕಾರ್ಕಳದ ಚದುರ ಚಂದ್ರಮ ಕವಿಯ ಗೊಮ್ಮಟೇಶ್ವರ ಚರಿತ್ರೆಯಲ್ಲಿ (ಕ್ರಿ.ಶ. ೧೬೪೬) ವೀರಪಾಂಡ್ಯನು ಶಿಲ್ಪಿಗೆ ಕಡಗ, ಪದಕ, ಕಂಠಮೂಲೆ, ಚೌಕುಳಿ, ಹೊನ್ನುಡಿದಾರ, ಕಾಲಸರಗಳು, ಹಿಡಿಹೊನ್ನು ಗ್ರಾಮಗಳನ್ನು ನೀಡಿದ ವರ್ಣಸೆ ಇದೆ. ಇದು ಮೌಖಿಕ ಆಧಾರಕ್ಕೆ ತದ್ವಿರುದ್ಧವಾಗಿದೆ.
ಆದರೆ ಕರ್ನಲ್ ಮೆಕೆಂಜಿಯ ಕಾರ್ಕಳದ ಅರಸರ ಕೈಫಿಯತ್ತುವಿನಲ್ಲಿ ಚಿಕ್ಕಣಾಚಾರಿ ಎಂಬ ಶಿಲ್ಪಿ ಕಾರ್ಕಳದ ಕರಿಬೆಟ್ಟದಲ್ಲಿ ಮೂರ್ತಿ ಕೆತ್ತಿದ ವಿವರವಿದೆ. ಅಲ್ಲದೇ ಆ ಬಳಿಕ ಅರಸನು ಶಿಲ್ಪಿಯನ್ನು ಕರೆಸಿ ಬೇರೆಯಿನ್ನುವೊಂದು ಸ್ಥಳದಲ್ಲಿ ಇದೇ ರೀತಿ ಗುಮ್ಮಟನ ಪ್ರತಿಮೆ ಮಾಡಬಾರದು ಯಂತ ಹೇಳಿ ಆ ಚಿಕ್ಕಣಾಚಾರಿಗೆ ಬಲಭಾಗದ ವೊಂದು ಕೈಯ ಹಸ್ತ ತೆಗೆಸಿ ಬಿಟ್ಟು ಕಳುಹಿಸಿಕೊಟ್ಟು ಎಂದಿದೆ. ಇದು ಪಾಡ್ದನದ ಅಂಶಕ್ಕೆ ಹತ್ತಿರವಾಗಿದೆ.
ಶಾಸನಕಾರ, ಆಸ್ಥಾನ ಕವಿಯ ನಿಯಂತ್ರಣ ರಾಜನ ಕೈಯಲ್ಲಿರುವುದರಿಂದ ಅರಸನ ನೈಜ ಮುಖದರ್ಶನವನ್ನು ಮಾಡುವಷ್ಟು ಧೈರ್ಯ ಅವರಿಗಿಲ್ಲ. ಆದರೆ ಜಾನಪದರು ಸ್ವತಂತ್ರರು. ಇವರ ಕಾವ್ಯದಲ್ಲಿ ನೈಜತೆಯ ಅನಾವರಣವಾಗಿದೆ ಎಂಬುದು ನಿಸ್ಸಂಶಯ. ಅಲ್ಲದೆ ಈ ಎರಡೂ ರಾಜ ಮನೆತನಗಳಿಗೆ ಜಗಳ ಹಾಗೂ ಪೂರ್ವ ವೈಷಮ್ಯ ಇದ್ದುದಕ್ಕೆ ಮೌಖಿಕ ಪರಂಪರೆಗಳಲ್ಲಿ ಸೂಚನೆಗಳಿವೆ. ಎರಡೂ ಬಿಂಬಗಳ ಸ್ಥಾಪನೆಯ ನಡುವೆ ೧೩೨ ವರ್ಷಗಳ ಅಂತರವಿದ್ದು ಜನಪದರು ಕಾರ್ಕಳದ ಶಿಲ್ಪಿಯನ್ನು, ಅವನ ಸಾಧನೆಯನ್ನು ಹೊಗಳುತ್ತಾ ವೇಣೂರಿನಲ್ಲಿ ಶಿಲ್ಪವನ್ನು ಕಡೆದ ಶಿಲ್ಪಿಗೆ ಅವನನ್ನು ಹೋಲಿಸಿದ್ದಾರೆ ಎನಿಸುತ್ತದೆ. ಏನೇ ಆದರೂ ಕಲ್ಕುಡ- ಕಲ್ಲುರ್ಟಿ ಪಾಡ್ದನ ಇತಿಹಾಸಕ್ಕೆ ಉತ್ತಮ ಆಕರ ಎಂಬುದು ನಿಸ್ಸಂಶಯ. ಇಲ್ಲಿ ವಾಸ್ತವತೆಯ ಅನಾವರಣವಾಗಿದೆ.
ಸುಳ್ಯದ ಅನೇಕ ಕಡೆಗಳಲ್ಲಿ ಕನ್ನಡ ಮಾತನಾಡುವ ದೈವಗಳಿದ್ದು ಇವೆಲ್ಲವೂ ಹಿಂದೊಮ್ಮೆ ಕಪ್ಪ ಸ್ವೀಕಾರಕ್ಕೆ ಘಟ್ಟದ ಮೇಲಿಂದ ಬಂದ ರಾಜರುಗಳೋ ಇಲ್ಲವೆ ರಾಜದೂತರಿರಬಹುದು, ಏನೆಕಲ್ಲಿನ ಬಚ್ಚನಾಯಕ, ಅವನ ಸಹೋದರರೆಂದು ಕರೆಯಲ್ಪಡುವ ಮಡಪ್ಪಾಡಿ, ಮೊಗ್ರಾಲ್ನಲ್ಲಿ ಆರಾಧಿಸಲ್ಪಡುವ ಕರಿಯಣ್ಣ ನಾಯಕ, ಬೈಸು ನಾಯಕ ಇವರೆಲ್ಲರೂ ಐತಿಹಾಸಿಕ ಪುರುಷರು. ಏನೆಕಲ್ಲು ಮಾಗಣೆಯ ನಾಲ್ಕೂರು ಗುತ್ತಿನ ಮನೆಯ ಸಬ್ಬಣ ಗೌಡ ಪಂಜದ ಬಲ್ಲಾಳನಿಗೆ ಕಪ್ಪ ನೀಡದಿದ್ದಾಗ ಬಚ್ಚನಾಯಕನನ್ನು ಘಟ್ಟದಿಂದ ಕರೆಸಿ ಗೌಡನನ್ನು ಶಿಕ್ಷಿಸಲು ಬಲ್ಲಾಳ ಕಳುಹಿಸುತ್ತಾನೆ.
ಏನೆಕಲ್ಲು ಮಾಗಣೆಯ ನಾಲ್ಕೂರು ಗುತ್ತಿನ ಮನೆಯ ಸಬ್ಬಣ ಗೌಡ ಪಂಜದ ಬಲ್ಲಾಳನಿಗೆ ಕಪ್ಪ ನೀಡದಿದ್ದಾಗ ಬಚ್ಚನಾಯಕನನ್ನು ಘಟ್ಟದಿಂದ ಕರೆಸಿ ಗೌಡನನ್ನು ಶಿಕ್ಷಿಸಲು ಬಲ್ಲಾಳ ಕಳುಹಿಸುತ್ತಾನೆ. ಆದರೆ ಗೌಡ ದಾರಿ ಮಧ್ಯದಲ್ಲಿ ಬಚ್ಚನಾಯಕನನ್ನು ಮೋಸದಿಂದ ಕೊಲ್ಲುತ್ತಾನೆ. ಮುಗೇರನೋರ್ವನ ವಿಷಪೂರಿತ ಬಾಣಕ್ಕೆ ಬಚ್ಚನಾಯಕ ಬಲಿಯಾಗುತ್ತಾನೆ. ಸಬ್ಬಣ ಗೌಡನ ಹೆಂಡತಿಯರ ನಾಯಕನ ಕೊರಳಿಗೆ ಮೆಟ್ಟಿ ಅವನ ನಾಲಗೆಯನ್ನು ತುಂಡರಿಸುತ್ತಾರೆ. ಇದು ಬಲ್ಲಾಳ ಹಾಗೂ ಗೌಡನೊಬ್ಬನ ನಡುವಿನ ಸಂಘರ್ಷವನ್ನು ತೋರಿಸುತ್ತದೆ.
ಜಾಲ್ಸೂರು, ಪನ್ನೆಬೀಡು, ಬೆಳ್ಳಾರೆ, ನೇರೆಂಕಿಗಳಲ್ಲಿ ಆರಾಧಿಸಲ್ಪಡುವ ಜಾಲ್ಸೂರಾಯ (ದಾಲ್ಸೂರಾಯ) ದೈವದ ಪಾಡ್ದನದಲ್ಲೂ ಇತಿಹಾಸ ಇನುಕುತ್ತದೆ. ನೇರೆಂಕಿ ಬಂಡಾಡಿಯ ಅರಸರು ತಮ್ಮ ಹೆತ್ತವರ ಪಿಂಡ ಪ್ರದಾನ ಮಾಡಲು ತಲಕಾವೇರಿಗೆ ಹೋಗುವಾಗ ದಾರಿ ಮಧ್ಯೆ ಕೇಮರ ಬಲ್ಲಾಳ ಹೋಗುವಾಗ ಇಲ್ಲಿ ಹೋದಿರಿ. ಬರುವಾಗ ಯಾವ ದಾರಿಯಿಂದ ಬರುತ್ತೀರಿ? ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಅರಸ ಇದೇ ದಾರಿಯಿಂದ ಬರುತ್ತೇನೆಂದು ಉತ್ತರಿಸಿ ಮುಂದುವರಿಯುತ್ತಾರೆ. ತಲಕಾವೇರಿಯಲ್ಲಿ ಅಲ್ಲಿನ ಬಲ್ಲಾಳರ ಹೆಣ್ಮಕ್ಕಳನ್ನು ಮದುವೆಯಾಗುವ ಬಯಕೆಯನ್ನು ನೇರೆಂಕಿಯ ಅರಸ ತೋಡಿಕೊಂಡಾಗ ಬಲ್ಲಾಳ ಮದುವೆ ಮಾಡಿಕೊಟ್ಟು ದಂಡಿಗೆಯಲ್ಲಿ ದಿಬ್ಬಣ ಕಳುಹಿಸುತ್ತಾನೆ. ಆಗ ತಲಕಾವೇರಿಯ ಬಲ್ಲಾಳನ ದೈವ ದಂಡಿಗೆಯ ಕೋಡಿಯಲ್ಲಿ ಕುಳಿತು ಬರುತ್ತದೆ. ಮುಂದೆ ಕಳಸ ಕಂಡಲ್ಲಿ ಉದ್ಭವವಾಗಿ ಜಾಲ್ಸೂರಿನಲ್ಲಿ ನೆಲೆಯೂರುತ್ತದೆ. ಇಲ್ಲಿ ಕೇಮರ ಬಲ್ಲಾಳನಿಗೂ ನೇರೆಂಕಿ- ಬಂಡಾಡಿಯ ಅರಸನಿಗೂ ನಡೆದು ಸಂಘರ್ಷದ ಛಾಯೆ ಕಾಣುತ್ತದೆ. ಅಲ್ಲದೆ ಕೊಡವ ಅರಸರೊಂದಿಗೆ ಬಂಡಾಡಿಯ ಬಲ್ಲಾಳನ ವೈವಾಹಿಕ ಸಂಬಂಧವೇರ್ಪಟ್ಟದ್ದನ್ನು ಕಾಣಬಹುದು.ಬಿಚರಣ್ ಐವರ್ನಾಡ್
ದುಗ್ಗಲಡ್ಕ, ಪಾಲ್ತಾಡಿ, ಸವಣೂರು, ಹಿರೇ ಬಂಡಾಡಿಗಳಲ್ಲಿ ಆರಾಧಿಸಲ್ಪಡುವ ಸ್ತ್ರೀ ದೈವ ದುಗ್ಗಲಾಯನ ಪಾಡ್ಡನದಲ್ಲೂ ಇತಿಹಾಸದ ಅಂಶಗಳಿವೆ. ಹಿರೇ ಬಂಡಾಡಿಯ ಬಾರಿ ಬಲ್ಲಾಳನಿಗೂ ಉಪ್ಪಿನಂಗಡಿ ಅರಮನೆಯ ಬುಳೇರಗುತ್ತಿನ ಹೆಣ್ಣಿಗೂ ಮದುವೆಯಾಗುತ್ತದೆ. ಕೆಲವೇ ತಿಂಗಳಲ್ಲಿ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು ಮಡದಿ ತವರಿಗೆ ಬಂದು ಗಂಡನ ವಿರುದ್ಧವೇ ಕದನ ಸಾರುತ್ತಾಳೆ.
ಇಲ್ಲಿ ಉಪ್ಪಿನಂಗಡಿಯ ಬಲ್ಲಾಳರಿಗೂ ಹಿರೇ ಬಂಡಾಡಿಯ ಬಲ್ಲಾಳರಿಗೂ ಹೆಣ್ಣಿಗಾಗಿ ಯುದ್ಧ ನಡೆದು ಹಿರೇ ಬಂಡಾಡಿಯ ಬಲ್ಲಾಳ ಓಡಿ ಹೋಗುತ್ತಾನೆ. ಇವನ ಸಲುವಾಗಿ ಇನ್ನೋರ್ವ ವ್ಯಕ್ತಿ ಯುದ್ಧ ಮಾಡಿ, ಕನ್ನಡರಸರನ್ನೂ ಸೋಲಿಸಿ ದುಗ್ಗಲಡ್ಕದ ಕೊಕುಳಿ ಮನೆತನ ಹಾಗೂ ಬಂಗೇರರಿಂದ ಹತನಾಗಿ ದೈವವಾಗುತ್ತಾನೆ. ತಾಯಿಯಂತೆ ಬಂದು ಹಿರೇ ಬಂಡಾಡಿಯ ಬಲ್ಲಾಳನ ಮಾನ ಪ್ರಾಣ ಕಾಪಾಡಿದ ದೈವ ಚಾಮುಂಡಿಯೆಂಬ ಸ್ತ್ರೀ ದೈವವಾಯಿತು.
ದುಗ್ಗಲಾಯ, ದಾಲ್ಸೂರಾಯ, ಎಡಮಂಗಲದ ಮಾಲಿಂಗರಾಯ ಇವೆಲ್ಲವೂ ದುರಂತ ಸಾವನ್ನಪ್ಪಿದ ಐತಿಹಾಸಿಕ ಪುರುಷರು. ರಾಯ ಎಂಬ ಉಪನಾಮ ಕಂಡಾಗ ಹಿಂದೆ ವಿಜಯನಗರದ ಅರಸರ ಕಾಲದಲ್ಲಿ ಆದಾಯ ಸಂಗ್ರಹಿಸುತ್ತಿದ್ದ ರಾಯ ಅಧಿಕಾರಿಗಳಿರಬಹುದು. ಇದೇ ಅಭಿಪ್ರಾಯವನ್ನು ಹಿರಿಯ ಜಾನಪದ ವಿದ್ವಾಂಸ ಡಿ.ಜಿ. ನಡ್ಕ ಹೊಂದಿದ್ದಾರೆ. ಬಚ್ಚನಾಯಕ, ಬೈಸುನಾಯಕ, ಕರಿಯಣ್ಣ ನಾಯಕ ದೈವಗಳು ಎಂಬ ಉಪನಾಮವನ್ನು ಹೊಂದಿರುವುದರಿಂದ ಕೆಳದಿ ಅರಸರ ಸಂಬಂಧಿಗಳಿರಬಹುದು. ಏಕೆಂದರೆ ಕೆಳದಿಯ ಅರಸರ ಆಳ್ವಿಕೆಗೆ ಸಂಬಂಧಿಸಿದಂತೆ ಸುಳ್ಯದಲ್ಲಿ ಅನೇಕ ಕುರುಹುಗಳಿವೆ.
ಕುಪ್ಪೆಟ್ಟು ಪಂಜುರ್ಲಿ ಹಾಗೂ ವರ್ತೆ ಪಂಜುರ್ಲಿ ದೈವಗಳ ಪಾಡ್ದನದಲ್ಲಿ ಕಾರ್ಕಳದ ಭೈರರಸರಿಗೂ ವಿಜಯನಗರದ ಅರಸರಿಗೂ ನಡೆದ ಯುದ್ಧದ ವಿವರವಿದೆ. ಕಪ್ಪ ನೀಡದಿದ್ದಾಗ ಭೈರರಸನ ಮೇಲೆ ವಿಜಯನಗರದ ಅರಸರು ಧಾಳಿ ಇಡುತ್ತಾರೆ. ಯುದ್ಧದಲ್ಲಿ ಸೋತ ಅರಸ ತನ್ನ ಚಾಕರಿಯ ಕುಪ್ಪೆಟ್ಟು ಕೋಟಿ ಬೈದ್ಯನೊಂದಿಗೆ ಕುಡುಮಕ್ಕೆ (ಧರ್ಮಸ್ಥಳ) ಓಡಿಹೋಗುತ್ತಾನೆ. ಅಲ್ಲಿ ಕೋಟಿ ಬೈದ್ಯ ಪಾಲಿಸಿಕೊಂಡು ಬಂದ ಪಂಜುರ್ಲಿಯನ್ನು ಆರಾಧಿಸುತ್ತಾರೆ. ಆ ಬಳಿಕ ವಿಜಯನಗರದ ಅರಸರು ರಾಜ್ಯವನ್ನು ಮರಳಿ ನೀಡುತ್ತಾರೆ.
ಹಿಂದೆ 4ನೇ ಭೈರವನ ಅಕ್ಕ ಬೊಮ್ಮಲ ದೇವಿಯ ಮಗ ೫ನೇ ಭೈರರಸ (ಕ್ರಿ.ಶ 151೦-1535)ನು ಕೃಷ್ಣ ದೇವರಾಯನನ್ನು ಪ್ರತಿಭಟಿಸಿದ್ದನು. ಇದರಿಂದ ಕೋಪಗೊಂಡ ಕೃಷ್ಣದೇವರಾಯ ತಾನೇ ಸೇನೆಯ ಮುಂದಾಳುತ್ವ ವಹಿಸಿ ತುಳುನಾಡಿನ ಮೇಲೆ ಧಾಳಿಯಿಟ್ಟು ಭೈರರಸನನ್ನು ಸೋಲಿಸಿ ಪದಚ್ಯುತಿಗೊಳಿಸುತ್ತಾನೆ. ತನ್ನ ರಾಜ್ಯ ತನ್ನ ಕೈಗೇ ಸೇರಿದರೆ, ವಿಜಯನಗರದ ದಂಡು ಹಿಂತಿರುಗಿ ಹೋದರೆ ಕಳಸನಾಥನ ದೇಗುಲ ಜೀರ್ಣೋದ್ಧಾರ ಮಾಡುವುದಾಗಿ ಹರಕೆ ಹೇಳಿಕೊಂಡಿದ್ದ. ಕ್ರಿ.ಶ 1516ರ ಕಳಸದ ಶಾಸನದಲ್ಲಿ ಆ ದಂಡು ಹಿಂದಕ್ಕೆ ತಿರುಗಿ ಹೋಗಿ ನಮ್ಮ ಸೀಮೆಗೆ ನಾವು ಬಂದ ನಿಂದ ವೇಲೆಯಲು ಎಂದು ಉಲ್ಲೇಖಗೊಂಡಿದೆ. ಮುಂದೆ ಭೈರರಸನ ಉದಾರತೆಗೆ ಮೆಚ್ಚಿ ಅವನ ರಾಜ್ಯವನ್ನು ಅವನಿಗೆ ಮರಳಿಸಲಾಗುತ್ತದೆ. ಮೌಖಿಕ ಸಾಹಿತ್ಯದಲ್ಲಿ ಪಂಜುರ್ಲಿಗೆ ಹರಕೆ ಹೇಳಿಕೊಂಡರೆ, ಲಿಖಿತ ಆಕರಗಳಲ್ಲಿ ಕಳಸನಾಥನ ಬಸದಿಯ ಜೀರ್ಣೋದ್ಧಾರ ಮಾಡುವುದಾಗಿ ಹರಕೆ ಹೇಳಿಕೊಂಡದ್ದು ಕಾಣುತ್ತದೆ.
ಕೋಟಿ-ಚೆನ್ನಯರ ಬಂಟರ ಸಂಧಿಯಲ್ಲಿ ಹದಿನಾರು ಹದಿನೇಳನೇ ಶತಮಾನದಲ್ಲಿ ನಡೆದ ಅಧಿಕಾರಶಾಹಿಯ ವಿರುದ್ಧ ಜನಸಾಮಾನ್ಯರ ಹೋರಾಟದ ಚಿತ್ರಣವಿದೆ. ಕೋಟಿ-ಚೆನ್ನಯರೆಂಬ ಅವಳಿ ವೀರರು ವ್ಯವಸ್ಥೆಯ ವಿರುದ್ಧ ಹೋರಾಡಿದ ಕತೆಯಿದೆ. ಪಂಜ, ಎಣ್ಮೂರು ಹಾಗೂ ಪಡುಮಲೆಯ ಬಲ್ಲಾಳರ ನಡುವೆ ಕದನದ ಚಿತ್ರಣವಿದೆ. ಐತಿಹಾಸಿಕವಾಗಿ ಇದೊಂದು ಅಪೂರ್ವವಾದ ಕಾವ್ಯ.
ಬಬ್ಬರ್ಯ ದೈವದ ಪಾಡ್ದನದಲ್ಲಿ ಮುಸ್ಲಿಂ ಸಮುದಾಯಗಳಲ್ಲಿ ಒಂದಾದ ಬ್ಯಾರಿಗಳ ಕಡಲ ವ್ಯಾಪಾರದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ತುಳುವರಿಗೂ ಅರಬ್ಬರಿಗೂ ಇರುವ ವ್ಯಾಪಾರ ಸಂಬಂಧವನ್ನು ಸಾರುತ್ತದೆ. ಜೈನ ಮಹಿಳೆಯಾದ ಮುತ್ತು ಸೆಟ್ಟೆದಿಯನ್ನು ಮುರುವ (ಮಾಧವ) ಬ್ಯಾರಿ ಮದುವೆಯಾಗುವ ಪ್ರಸಂಗವಿದ್ದು, ಅಂತರ್ ಧರ್ಮ ವಿವಾಹಕ್ಕೆ ಇದೊಂದು ನಿದರ್ಶನ.ಬಿಚರಣ್ ಐವರ್ನಾಡ್
ಸುಳ್ಯ ಹಾಗೂ ಪುತ್ತೂರು ತಾಲೂಕಿನಲ್ಲಿ ಆರಾಧಿಸಲ್ಪಡುವ ಉಲ್ಲಾಕುಳು (ಕಿನ್ನಿಮಾಣಿ – ಪೂಮಾಣಿ) ದೈವಗಳ ಪಾಡ್ದನದಲ್ಲಿ, ಆಚರಣೆಯ ಹಿಂದೆ ಭವ್ಯವಾದ ಇತಿಹಾಸವಿದ್ದು ಇದರ ಮೂಲವನ್ನು ಗಂಗರ ಇತಿಹಾಸದಲ್ಲಿ ಕಾಣಬಹುದು. ಇದರ ಕುರಿತು ಡಾ| ಪೂವಪ್ಪ ಕಣಿಯೂರು ತಮ್ಮ ಲೇಖನ ತುಳುನಾಡಿನ ದೈವಾರಾಧನೆ ಮತ್ತು ಗೌಡ ಸಮುದಾಯದಲ್ಲಿ ವಿಸ್ತೃತವಾಗಿ ಚರ್ಚಿಸಿದ್ದಾರೆ.
ಬಜ್ಪೆಯ ಪಡುಪೆರಾರಿನಲ್ಲಿ ಬಲಾಂಡಿ/ ಬಲವಾಂಡಿ ದೈವಕ್ಕೆ ಆರಾಧನೆ ಇದ್ದು ಇದರ ಪಾಡ್ದನದಲ್ಲಿ ಮಂಗಳೂರಿನ ಮಂಗಾರ ಅರಸ ಚಂದ್ರಶೇಖರನ ಪ್ರಸ್ಥಾಪವಿದೆ. ಅನಕ್ಷರಸ್ಥ, ಅಶಿಕ್ಷಿತ ಜನಸಮದಾಯವನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುವ ಭಾರತದಂತಹ ರಾಷ್ಟ್ರದ ನೈಜ ಇತಿಹಾಸವನ್ನು ಕಟ್ಟುವಲ್ಲಿ ಮೌಖಿಕ ಪರಂಪರೆಯನ್ನು ಆಕರವಾಗಿ ಎಚ್ಚರದಿಂದ ಉಪಯೋಗಿಸಬಹುದು. ಘಟನೆಗಳು ಸತ್ಯವೇ, ಮಿಥ್ಯವೇ ಎಂಬುವುದಕ್ಕಿಂತಲೂ ಜನಸಾಮಾನ್ಯರು ಆಳುವ ವರ್ಗದ ಬಗೆಗೆ ಹೊಂದಿದ್ದ ಧೋರಣೆಗೆ ಇಲ್ಲಿ ಮಾನ್ಯತೆ ನೀಡಬೇಕು.
ಹೊಸದಾದ ಚರಿತ್ರೆಯನ್ನು ಈ ನೆಲದಲ್ಲಿ ಕಟ್ಟುವುದಾಗಿ ಲಿಖಿತ ಆಧಾರಗಳ ಜೊತೆಗೆ ಕಂಠಸ್ಥ ಪರಂಪರೆಯನ್ನು ಬಳಸಿಕೊಂಡಲ್ಲಿ ನೈಜ ಇತಿಹಾಸವನ್ನು ಸಮಾಜಕ್ಕೆ ನೀಡಬಹುದು.
Published in Suddi Bidugade
suddinews.com/sullia/2014/03/17/82734/
ZÀgÀuï LªÀ£ÁðqÀÄ
¢éwÃAiÀÄ JA¹eÉ
ªÀÄAUÀ¼ÀUÀAUÉÆÃwæ
ªÀÄAUÀ¼ÀÆgÀÄ «±Àé«zÁ央AiÀÄ
9740249793
2 Responses to ಇತಿಹಾಸಕ್ಕೆ ಆಕರವಾಗಿ ತುಳು ಪಾಡ್ಡನಗಳು
Indira Hegde
April 5th, 2014 at 11:48 AM
ಚರಣ್ , ನಿಮ್ಮ ಪ್ರಯತ್ನ ಅಭಿನಂದನಾರ್ಹವಾದುದು. ಜನಪದ ಸಾಹಿತ್ಯದಲ್ಲಿ ಐತಿಹಾಸಿಕ ರಾಜರ ಹೆಸರು ಕಂಡು ಬಾರದೇ ಇರುವುದು ನನಗೆ ಅಚ್ಚರಿ. ಅಪರೂಪಕ್ಕೆ ಎಂಬಂತೆ ಸಿರಿ ಪಾಡ್ದನಗಳಲ್ಲಿ ಬರುವ ಬೋಲದ ದೇಸಿಂಗರಸರ ಉಲ್ಲೇಖ ಎರಡು ಶಾಸನಗಳಲ್ಲಿ ಲಭ್ಯವಾಗುತ್ತದೆ.
ಪಾಡ್ದನದಲ್ಲಿ ಅತಿಮಾನುತೆಗೆ , ಪವಾಡಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಪಾಡ್ದನ ಸೃಜನಶೀಲವಾಗಿದ್ದು ಆಯಾ ಕಾಲದ ಪ್ರಭಾವವೂ ಪಾಡ್ದನಕಾರರ ಮೇಲಾಗುತ್ತದೆ.
ಮೆಕಿಂಜಿ ದಾಖಲಿಸುವುದು ಮೌಖಿಕ ಮಾಹಿತಿದಾರರು ನೀಡುವ ಮಾಹಿತಿಗಳನ್ನು. ಕಲೆ ಹಾಕಿದ್ದು. ಮೌಖಿಕಮಾಹಿತಿಗಳು ಪಾಡ್ದನವನ್ನು ಅವಲಂಬಿಸುತ್ತದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ಬೇಕಾಗಿದೆ.
ನೀವು ಶಾಸನ ಮತ್ತು ಜಾನಪದ ಎರಡನ್ನೂ ತೆಗೆದುಕೊಂಡು ಅಧ್ಯಯನ ಮಾಡುವುದು ಸ್ತುತ್ಯ. ಪ್ರಯತ್ನ ಮುಂದುವರಿಯಲಿ. ನಿರ್ಲಿಪ್ತರಾಗಿ ಅಧ್ಯಯನಶೀಲರಾಗಿ ಎನ್ನುವುದು ನನ್ನ ಸಲಹೆ.
ಡಾ. ಇಂದಿರಾ ಹೆಗ್ಗಡೆ
April 5th, 2014 at 11:48 AM
ಚರಣ್ , ನಿಮ್ಮ ಪ್ರಯತ್ನ ಅಭಿನಂದನಾರ್ಹವಾದುದು. ಜನಪದ ಸಾಹಿತ್ಯದಲ್ಲಿ ಐತಿಹಾಸಿಕ ರಾಜರ ಹೆಸರು ಕಂಡು ಬಾರದೇ ಇರುವುದು ನನಗೆ ಅಚ್ಚರಿ. ಅಪರೂಪಕ್ಕೆ ಎಂಬಂತೆ ಸಿರಿ ಪಾಡ್ದನಗಳಲ್ಲಿ ಬರುವ ಬೋಲದ ದೇಸಿಂಗರಸರ ಉಲ್ಲೇಖ ಎರಡು ಶಾಸನಗಳಲ್ಲಿ ಲಭ್ಯವಾಗುತ್ತದೆ.
ಪಾಡ್ದನದಲ್ಲಿ ಅತಿಮಾನುತೆಗೆ , ಪವಾಡಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಪಾಡ್ದನ ಸೃಜನಶೀಲವಾಗಿದ್ದು ಆಯಾ ಕಾಲದ ಪ್ರಭಾವವೂ ಪಾಡ್ದನಕಾರರ ಮೇಲಾಗುತ್ತದೆ.
ಮೆಕಿಂಜಿ ದಾಖಲಿಸುವುದು ಮೌಖಿಕ ಮಾಹಿತಿದಾರರು ನೀಡುವ ಮಾಹಿತಿಗಳನ್ನು. ಕಲೆ ಹಾಕಿದ್ದು. ಮೌಖಿಕಮಾಹಿತಿಗಳು ಪಾಡ್ದನವನ್ನು ಅವಲಂಬಿಸುತ್ತದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ಬೇಕಾಗಿದೆ.
ನೀವು ಶಾಸನ ಮತ್ತು ಜಾನಪದ ಎರಡನ್ನೂ ತೆಗೆದುಕೊಂಡು ಅಧ್ಯಯನ ಮಾಡುವುದು ಸ್ತುತ್ಯ. ಪ್ರಯತ್ನ ಮುಂದುವರಿಯಲಿ. ನಿರ್ಲಿಪ್ತರಾಗಿ ಅಧ್ಯಯನಶೀಲರಾಗಿ ಎನ್ನುವುದು ನನ್ನ ಸಲಹೆ.
ಡಾ. ಇಂದಿರಾ ಹೆಗ್ಗಡೆ
Damodar shetty
November 10th, 2014 at 9:22 AM
great jot, keep it up
-damodar shetty
November 10th, 2014 at 9:22 AM
great jot, keep it up
-damodar shetty
- Super charan ji…nimma yella article superb. ..Liked by 1 person
- Really outstanding write up Charan , keep this work going alwaysLike
- ಪ್ರೌಢ ಬರಹ , ಮಾಹಿತಿ ಪೂರ್ಣವಾಗಿದೆ , ತುಳು ವಲ್ಲೆ ಅಕ್ಷರ ಮೆರವಣಿಗೆ ನಡೆಯಲಿ ಶುಭವಾಗಲಿLiked by 1 person

