ನಾಗಬನಗಳ ಸ್ಥಿತ್ಯಂತರ



ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಅದೆಷ್ಟೋ ಸಾವಿರ ಬನಗಳು ಹಾಗೂ ದೈವಗಳ ಬನಗಳು ಜೀರ್ಣೋದ್ಧಾರಗೊಂಡು ಕಟ್ಟೆಗಳು ಕಟ್ಟಲ್ಪಟ್ಟು ಹಾಸ್ಯಕ್ಕೆ ಎಡೆ ಮಾಡಿಕೊಡುತ್ತಿರುವುದು ದುರಂತ. ಕಾಡಿನಲ್ಲಿದ್ದ ನಾಗ ಕಾಂಕ್ರೀಟು ಕಟ್ಟೆಗಳ ಮೇಲೆ ವಿರಾಜಮಾನನಾಗಿದ್ದಾನೆ! ಒಟ್ಟಾರೆ ಇದು ಶ್ರದ್ಧೆ, ನಂಬಿಕೆಗಳನ್ನು ವಿಡಂಬನೆ ಮಾಡುವಂತೆ ತೋರುತ್ತಿವೆ. ಭಯ ಭಕ್ತಿಯನ್ನು ಹುಟ್ಟಿಸಬೇಕಾದ ಇವು ತಿರಸ್ಕಾರವನ್ನು ಸೃಷ್ಟಿಸುತ್ತಿವೆ. ಕಾಲನ ಚಕ್ರ ಉರುಳಿದಂತೆ, ಬದಲಾವಣೆಯ ಗಾಳಿ ಬೀಸಿದಂತೆ ನಂಬಿಕೆಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದು ಖೇದಕರ ಸಂಗತಿ.

ಇಂದು ಅಷ್ಟಮಂಗಲ, ಪ್ರಶ್ನಾಚಿಂತನಗಳಲ್ಲಿ ಪ್ರತಿಯೊಂದು ಕುಟುಂಬ, ಮನೆಗಳಿಗೂ ನಾಗದೋಷ ಇರುವುದು ಕಾಣುತ್ತಿದೆ. ಪ್ರಶ್ನೆಯವರು ಅದಕ್ಕೆ ಪರಿಹಾರವನ್ನೂ ನೀಡುತ್ತಾರೆ. ದೇವರು ನುಡಿದಂತೆ ನಾಗಬನಗಳನ್ನು ನವೀಕರಿಸುತ್ತೇವೆ. ಸರ್ಪ ಸಂಸ್ಕಾರ, ನಾಗ ಪ್ರತಿಷ್ಟೆ ಅಲ್ಲದೆ ಇತ್ತೀಚೆಗೆ ನಾಗಮಂಡಲಗಳನ್ನು ಮಾಡಲು ಹೇಳಿ ಲಕ್ಷಾಂತರ ರೂಪಾಯಿ ವ್ಯಯ ಮಾಡುತ್ತಾರೆ. ಇದರ ಜೊತೆಗೆ ಪೂರ್ವದ ಕಟ್ಟಳೆಗಳನ್ನೂ ಮುರಿಯುತ್ತಿದ್ದೇವೆ.

ಆಲಡೆ ಹಾಗೂ ನಾಗಾಲಯಗಳು ಹಿಂದೆ ವನ ಪ್ರದೇಶದಲ್ಲಿದ್ದ ಪೂಜಾಸ್ಥಾನಗಳು ಎನ್ನಬಹುದು. ನಾಗನಿಗಂತೂ ಸಸ್ಯ ಶ್ಯಾಮಲವಾದ ತಂಪಾದ ತಾಣವೇ ಇಷ್ಟಕರ. ತುಳುನಾಡಿನಲ್ಲಿ ನಾಗಸಂಬಂಧಿ ದೇಗುಲಗಳು ರೂಪುಗೊಂಡಿರುವುದು ತಿಳಿದುಬರುತ್ತದೆ. (ಉದಾಹರಣೆಗೆ ಸುಬ್ರಹ್ಮಣ್ಯ, ಕುಡುಪು, ಮಂಜೇಶ್ವರ) ಒಂದು ಕಾಲದಲ್ಲಿ ಆಯಾ ದೇಗುಲಗಳು ಇದ್ದ ಸ್ಥಾನಗಳಲ್ಲಿ ಮರಗಿಡ ಬಳ್ಳಿಗಳಿಂದ ನಿಬಿಡವಾದ ನಾಗವನ ಅಥವಾ ಹಿರಿಯ ಹುತ್ತಗಳು ಇದ್ದಿರಬಹುದು (ಅಮೃತ ಸೋಮೇಶ್ವರ, ದೀಪಾವಳಿ ವಿಶೇಷಾಂಕ, ೧೯೮೭). ನಾಗನಿಗೆ ಮರಗಿಡ ಬಳ್ಳಿಗಳಿಂದ ಆವರಿಸಿದ, ಕ್ರಿಮಿ ಕೀಟಾದಿಗಳಿಂದ ಕೂಡಿದ ಬಲ್ಲೆಗಳೇ ವಾಸಸ್ಥಾನ. ಅವು ತಂಪಾಗಿದ್ದು ನಾಗನಿಗೆ ವಾಸಯೋಗ್ಯವಾಗಿವೆ.
ಹಿರಿಯ ವಿದ್ವಾಂಸರಾದ ಅಮೃತರು ಹೇಳುವಂತೆ ಹಿಂದೆ ಬನಗಳಿದ್ದ, ಹುತ್ತಗಳಿಂದ ಕೂಡಿದ್ದ ನಾಗನ ಆರಾಧನಾ ಕೇಂದ್ರಗಳು ಕಟ್ಟಡಗಳ ಒಳಗೆ ಬಂಧಿಯಾಗಿ ದೇಗುಲಗಳಾಗಿವೆ. ಉದಾಹರಣೆಗೆ ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಮಲೆ ಕುಡಿಯರ ಮೂಲತಾಣ ಆಲಡೆ ಯಾಗಿರಬೇಕು. ಹಾಗಾಗಿ ಅಲ್ಲಿಯ ಸಕಲ ಕಾರ್ಯಗಳಿಗೂ ಅವರ ಉಪಸ್ಥಿತಿ ಅನಿವಾರ್ಯ. ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸ್ಕಂದನ ತಾಯಿಯ ಪೂಜೆ ಅಬ್ಬಗ-ದಾರಗ ಎಂಬ ದೈವರೂಪದಲ್ಲಿ ನಡೆಯುತ್ತದೆ. ಇದಕ್ಕೆ ಊರಿನ ಗೌಡರೆಲ್ಲರೂ ಪ್ರಾಣಿಬಲಿ ಕೊಡುತ್ತಾರೆ. (ಕಡವ ಶಂಭುಶರ್ಮ; ತುಳು ದೇಶ ಭಾಷಾ ವಿಚಾರವು ಪು.೩೧) . ಸುಬ್ರಹ್ಮಣ್ಯದ ಕುಮಾರ ನಾಗಕುಮಾರ ಅಲ್ಲಿಯ ಮೂಲಸ್ಥಾನದ ಪರ್ವತದ ಹೆಸರೂ ಕುಮಾರ, ಆ ಪರ್ವತದಲ್ಲಿ ಹುಟ್ಟುವ ನದಿಯ ಹೆಸರೂ ಕುಮಾರಧಾರ (ಡಾ. ಇಂದಿರಾ ಹೆಗ್ಗಡೆ, ತುಳುವರ ಮೂಲತಾನ ಆಲಡೆ).

ಜಗತ್ತಿನ ಎಲ್ಲಾ ನಾಗಾರಾಧನೆಗಳೂ ಪ್ರಕೃತಿಯ ಮಡಿಲಿನಲ್ಲಿ ನಡೆಯುತ್ತದೆ. ದ. ಆಫ್ರಿಕಾದಲ್ಲಿ ನಾಗನಿಗೆ ಬೊಂಬಾಟ್ ಮರದ ಅಡಿಯಲ್ಲಿ ಗೂಟ ಹಾಕಿ ಆರಾಧಿಸುತ್ತಾರೆ. ಅದಕ್ಕೆ ಜೋಳದ ಹಿಟ್ಟು ಹಾಗೂ ಮೊಸರಿನ ಅಭಿಷೇಕ ಮಾಡುತ್ತಾರೆ.

ಮಾನವನ ಮನಸ್ಸಿನಲ್ಲಿ ಹೆಡೆಯೆತ್ತಿ ವಿಶಿಷ್ಟ ರೂಪವನ್ನು ತೋರಿಸುವ ವಿಷಪೂರಿತ ಸರ್ಪ ಭಯವನ್ನು ಸೃಷ್ಟಿಸಿತ್ತು. ಬೆಳೆಗಳಿಗೆ, ಗದ್ದೆಗಳಲ್ಲಿ ಕಾಡುವ ಇಲಿ-ಹೆಗ್ಗಣಗಳು, ಹುಳು- ಹುಪ್ಪಟೆಗಳನ್ನು ಇವು ತಿಂದು ಬೆಳೆ ಸಂರಕ್ಷಣೆ ಮಾಡುತ್ತವೆ. ಹಾಗಾಗಿ ಮಾನವ ಭಯಾನಕ ಜೀವಿಗಳಾದ ಸರ್ಪಗಳಲ್ಲಿ ಮಾನವ ಭಗವಂತನನ್ನು ಕಂಡ ನಾಗ ಫಲವಂತಿಕೆಯ ಹಾಗೂ ಸಮೃದ್ಧಿಯ ಸಂಕೇತ.
ತುಳುವರು ನಾಗರಹಾವಿಗೆ ಮರಿ ಎನ್ನುತ್ತಾರೆ. ನಾಗನಿಗೂ ನೀರಿಗೂ ನಂಟಿದೆ. ಹಾಗಾಗಿ ನಾಗಬನಗಳು, ಆಲಡೆಗಳು ನೀರಿನ ಬದಿಗಳಲ್ಲೋ, ಹೇರಳವಾದ ನೀರಿರುವ ತಂಪಾದ ಜಾಗಗಳಲ್ಲೋ ಇರುತ್ತವೆ. ಹಾಗಾಗಿ ನಾಗ ಹಾಗೂ ನೀರು ಎರಡೂ ಚಲಿಸುವುದನ್ನೂ ಪರ ಪುನ ಎನ್ನುತ್ತೇವೆ. ಮರಿ ಎಂಬುದು ಮಳೆಗಾಲ ಎಂಬುದರ ಮೂಲ ತುಳು ಪದವಂತೆ. ಹಾಗಾಗಿ ಮಳೆಗೂ ನಾಗನಿಗೂ ನಂಟಿದೆ. ಮಳೆ ನಾಗಬನಗಳ ಮೇಲೆ ಸಿಂಚನಗೈದು ಬನಗಳನ್ನು ತಂಪಾಗಿಡುತ್ತದೆ. ಮಳೆ ಬೀಳುವ ಕಾಲ ತುಳುವರಿಗೆ ಮರಿಯಾಲ!

ನಾಗ ಎಂಬ ಶಬ್ಧವಾಗಲೀ, ನಾಗ ಪೂಜೆಯಾಗಲೀ ವೇದಗಳಲ್ಲಿ ಅಥವಾ ಬ್ರಾಹ್ಮಣಗಳಲ್ಲಿ ಹೇಳಿಲ್ಲ (ಗೋವಿಂದ ಪೈ ಸಂಶೋಧನಾ ಸಂಪುಟ ಪು.೫೭೦). ಸಂಸ್ಕೃತದಲ್ಲಿ ನಾಗ ಎಂದರೆ ಲಾಂಗಲ (ನೇಗಿಲು). ಲಾಂಗರ ಪ್ರಾಕೃತದಲ್ಲಿ ನಾಗರವಾಗಿದೆ (ಬೋಜರಾಜ ಪಾಟೀಲ, ನಾಗರಖಂಡ ೭೦)ಕಾಶ್ಮೀರಿ ಭಾಷೆಯಲ್ಲಿ ನಾಗ ಎಂದರೆ ನೀರಿನ ಸೆಲೆ. ಸಲಕ್ನಾಗ, ಅನಂತ್ನಾಗ, ನೀಲಿನಾಗ ಇವೆಲ್ಲವೂ ಸರೋವರಗಳು. ಹಾಗಾಗಿ ನಾಗ ಎಂದರೆ ನೀರು, ನೀರು ಎಂದರೆ ನಾಗ!

ಇವೆಲ್ಲವುಗಳಿಂದ ಕಂಡು ಬರುವುದೇನೆಂದರೆ ಎಲ್ಲಾ ನಾಗನ ಆರಾಧನಾ ಕೇಂದ್ರಗಳೂ ವನಸಿರಿಯ ಮಧ್ಯೆ ಇರುತ್ತವೆ. ಆದರೆ ಇಂದು ನಾವು ಪಂಡಿತರ ದೈವ ವಾಕ್ಯಗಳಿಗೆ ಮರುಳಾಗಿ ಕಾಡನ್ನು ಕಡಿದು ಸಿಮೆಂಟ್ ನಾಗನ ಕಟ್ಟೆಗಳನ್ನು ಕಟ್ಟುತ್ತಿದ್ದೇವೆ. ಅಷ್ಟಮಂಗಲ ಪ್ರಶ್ನೆಯಂತೆ ಅದೆಷ್ಟೋ ಸಾವಿರ ವರ್ಷಗಳ ಪ್ರಾಚೀನತೆ ಇರುವ ನಾಗಬಿಂಬಗಳನ್ನು ನೀರಿಗೆ ಹಾಕಿ, ಕಾಡನ್ನು ಕಡಿದು ಕಾಂಕ್ರೀಟು ಕಟ್ಟೆ ಕಟ್ಟಿ ನಾಗನ ಕಟ್ಟೆಗಳ ಮೇಲೆ ಹೊಸ ಬಿಂಬಗಳನ್ನು ಇಡುತ್ತಿದ್ದೇವೆ. ಅದಕ್ಕೆ ಸುತ್ತಲೂ ಕಂಪೌಂಡು ಕಟ್ಟಿ ಕಬ್ಬಿಣದ ಗೇಟು ಬೇರೆ ಹಾಕಿದ್ದೇವೆ! ನಿಜಕ್ಕೂ ಇದು ಮೂರ್ಖತನವಲ್ಲವೇ?
ಹಿಂದೊಮ್ಮೆ ಹೊಸ ನಾಗನ ಕಟ್ಟೆ ನಿರ್ಮಿಸುವ ತುರಾತುರಿಯಲ್ಲಿ ಮೇಸ್ತ್ರಿ ಯೋರ್ವರಿಂದ ಎರಡು ಹಾವುಗಳೂ? ಒಂದಷ್ಟು ಮೊಟ್ಟೆಗಳೂ ನಾಶವಾದವಂತೆ. ಮುಂದೆ ಆ ಮೇಸ್ತ್ರಿ ಚರ್ಮ ವ್ಯಾಧಿಯಿಂದ ಸತ್ತು ಹೋದ ಅನುಭವವನ್ನು ಹಿರಿಯರೊಬ್ಬರು ಹೇಳಿದ್ದರು.

ಉರಿ ಬಿಸಿಲಿನ ಗುಡ್ದದ ಮೇಲೆ ಕಟ್ಟಿದ ನಾಗನ ಕಟ್ಟೆಯಲ್ಲಿ ಯಾವ ಜೀವಂತನಾಗ ಬದುಕಬಲ್ಲುದು? ಇಂದು ಕಟ್ಟೆಗಳು, ಕಂಪೌಂಡುಗಳು ಮಾತ್ರವಲ್ಲ ಇಂಟರ್ಲಾಕರ್ ಬೇರೆ ನೆಲಕ್ಕೆ ಹಾಕಿಸುತ್ತಿದ್ದೇವೆ. ಅರ್ಚಕರಿಗೆ ಅನುಕೂಲವಾಗುವಂತೆ ಇಂತಹ ಲೇಟೆಸ್ಟ್ ನಾಗಬನಗಳನ್ನು ಕಟ್ಟಿಸುತ್ತಿದ್ದೇವೆ. ಇಂತಹ ಕಟ್ಟೆ ಕಟ್ಟಲು ವಾಸ್ತುವನ್ನು ಬಳಸುವ ಮಂದಿಯನ್ನು ನೋಡಿಕೊಂಡಿದ್ದೇವೆ. ಇದೆಂತಹಾ ದುರ್ದೈವ! ನಾಗನೆಂದರೆ ಹೆಡೆಯೆತ್ತಿದ, ಮಿಥುನ ಕ್ರಿಯೆಯಲ್ಲಿ ತೊಡಗಿರುವ ಕಲ್ಲು ಹಾವುಗಳೇ ಹೊರತು ಜೀವಂತ ಸರ್ಪಗಳಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದೇವೆ! ಅಷ್ಟಕ್ಕೂ ನಾಗನಿಗೆ ವೈದಿಕ ಸಂಪ್ರದಾಯದ ಮೂಲಕ ಬ್ರಾಹ್ಮಣ ಅರ್ಚಕರೇ ಪೂಜೆ, ತನು ಎರೆಯಬೇಕೆಂಬ ನಿಯಮವಿಲ್ಲ. ಆದಿಯಲ್ಲಿ ಬಿಲ್ಲವರು, ಬಂಟರು ಇತರ ತುಳು ಜನಾಂಗಗಳು ನಾಗನ ಪೂಜೆ ಮಾಡುತ್ತಿದ್ದರು. ಇಂದಿಗೂ ಬಿಲ್ಲವರು ಚಾರಗಳಲ್ಲಿ ನಾಗಪಾತ್ರಿಗಳಾಗಿ, ಅರ್ಚಕರಾಗಿ, ನಾಗಪ್ರತಿಷ್ಟೆ ಮಾಡುತ್ತಾರೆ ಅನೇಕ ನಾಗಬೆರ್ಮೆರ ಮೂಲಸ್ಥಾನಗಳಲ್ಲಿ ಬಂಟ, ಬಿಲ್ಲವ , ಪರಿಶಿಷ್ಟರೂ ಅರ್ಚಕರು. ಇಲ್ಲಿ ಬ್ರಾಹ್ಮಣರು ಭಕ್ತರಷ್ಟೇ. ಇವರು ತರುವ ಹಾಲು- ಬೊಂಡದ ತನುವನ್ನು ಪರಿಶಿಷ್ಟರು ನಾಗನಿಗೆ ಎರೆಯುತ್ತಾರೆ. ಪರಿಶಿಷ್ಟರು ನೀಡುವ ಪಿಂಗಾರ, ತಾನದ ಮಣ್ಣನ್ನು ಗಂಧ ಪುಷ್ಪವಾಗಿ ಬ್ರಾಹ್ಮಣರು ಪಡೆಯುತ್ತಾರೆ. ಹಾಗಾಗಿ ಮೈಲಿಗೆಯ ಭೀತಿ ಇಲ್ಲ. ಚಾರದಲ್ಲಿ ಬಿಲ್ಲವರು, ಕಾಡ್ಯರು, ಮೇಲ್ದೊಟ್ಟುವಿನಲ್ಲಿ ಮುಗ್ಗೆರ್ಲು, ಕಾಸರಗೋಡಿನಲ್ಲಿ ಬಾಕುಡರು ಈ ರೀತಿಯ ಪೂಜೆ ಮಾಡುತ್ತಾರೆ. ಇವರು ತಮ್ಮ ಮೂಲತಾನ, ನಾಗಬನಗಳನ್ನು ಬ್ರಾಹ್ಮಣೀಕರಣವಾಗಲು ಬಿಟ್ಟಿಲ್ಲ.
ಇದು ಬರಿಯ ನಾಗಬನಗಳಿಗೆ ಮಾತ್ರ ಸಂಬಂಧಿಸಿಲ್ಲ, ದೈವಗಳ ಬನಗಳ ಕತೆಯೂ ಹೀಗೇ ಆಗಿದೆ. ಕಾನನದ ಮರಗಳ ನಡುವೆ ರಕ್ಷಕನಾಗಿರಬೇಕಾದ ಗುಳಿಗ ಸಿಮೆಂಟ್ ಕಟ್ಟೆಯ ಮೇಲೆ ಬೆಪ್ಪಾಗಿ ಅಸಹಾಯಕತೆಯಿಂದ ಕೂತಿದ್ದಾನೆ! ಲೆಕ್ಕೆಸಿರಿ, ಗುಳಿಗ ಇತರ ದೈವಗಳನ್ನು ಹೊರಗೆ ಹೋಗದಂತೆ ಕಂಪೌಂಡುಗಳ ಮೂಲಕ ಈ ಹುಚ್ಚು ಮಾನವ ಬಂಧಿಸಿದ್ದಾನೆ! ನಮ್ಮ ಹಿರಿಯರು ಮಾಡುತ್ತಿದ್ದ ತಂಬಿಲದ ಕ್ರಮವನ್ನು ಬಿಟ್ಟು ಅರ್ಚಕರ ಮೂಲಕ ತಂಬಿಲ ಕಟ್ಟುತ್ತಿದ್ದೇವೆ.


ನಮ್ಮ ಪೂರ್ವಜರು ಪ್ರತಿಯೊಂದು ಆಚರಣೆಗಳ ಮೂಲಕ ಮೌಲ್ಯಯುತವಾದ ಸಂದೇಶವನ್ನು ಪೀಳಿಗೆಗೆ ನೀಡಿದ್ದಾರೆ. ಅದನ್ನು ಆಧುನೀಕರಣದ ಭರಾಟೆಯಲ್ಲಿ ಹಾಳು ಮಾಡುವುದು ಸರಿಯಲ್ಲ. ತುಳುವರ ಸಂಸ್ಕೃತಿಗಳು ಪ್ರಕೃತಿಯೊಂದಿಗೆ ಬೆಳೆದು ಬಂದಿದೆ. ಅದನ್ನೇ ಮರೆತು ಆಚರಿಸುವ ಯಾವುದೇ ನಂಬಿಕೆ, ಆಚರಣೆಗಳು ಅಪೂರ್ಣ!

ಹಾವನ್ನು ಕೊಂದರೆ ಅದಕ್ಕೆ ಪರಿಹಾರವಾಗಿ ಸಂಸ್ಕಾರ, ಆಶ್ಲೇಷ ಪೂಜೆ ಮಾಡುವುದರ ಜೊತೆಗೆ ನಾಗ ಸಂತತಿ. ಬೆಳೆಯಲು ಪೂರಕ ವಾತಾವರಣ ಕಲ್ಪಿಸಿಕೊಡುವುದು ಒಳಿತು. ಬರಿಯ ಪೂಜೆ-ಪುರಸ್ಕಾರ ಮಾಡುವುದು ಮೂರ್ಖತನ. ಇದರ ಜೊತೆಗೆ ಪರ್ಯಾವರಣದ ರಕ್ಷಣೆಯನ್ನೂ ಪೂಜೆಯೆಂಬ ದೃಷ್ಟಿಯಿಂದಲೇ ಮಾಡುವುದು ಒಳ್ಳೆಯ ಬೆಳವಣಿಗೆ. ಬಸವಣ್ಣ ಹೇಳಿದಂತೆ ಕಲ್ಲನಾಗರ ಕಂಡು ಹಾಲೆರೆಯುವ ನಾವು ನಿಜ ನಾಗರನಿಗೆ ಬದುಕಲು ಬಿಡುತ್ತಿಲ್ಲ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಾಗ ದೋಷಿಗಳೇ. ಅದರ ಪರಿಹಾರ ಪೂಜೆಗಳಿಂದಲ್ಲ. ನಾಗ ಬನಗಳ ರಕ್ಷಣೆಯಿಂದಾಗಬೇಕು. ನಮ್ಮ ಹಿರಿಯರು ಹಿಂದೆ ಮುರಕಲ್ಲುಗಳನ್ನು ಹಾಕಿ ಮರಗಳ ಕೆಳಗೆ ಹಾಕಿ ನಾಗ ಎಂದರು. ಕನಿಷ್ಟ ಪಕ್ಷ ನಾಮ ಬಹಳ ಪ್ರಾಚೀನ ನಾಗ ಸಾನಿಧ್ಯಗಳನ್ನು ಹಿಂದು ಮುಂದು ನೋಡದೆ ಮೂರ್ಖರಂತೆ ನಾಶ ಮಾಡಬಾರದು.





ನಾಗ ಪ್ರತಿಮೆಗಳು ಕ್ರಿ.ಪೂ. ವರ್ಷಗಳಿಂದಲೇ ದೊರಕಿವೆ. ಕುಶಾನರ ಕಾಲದಲ್ಲಿ ಮನುಷ್ಯ ರೂಪದ ನಾಗ ಶಿಲ್ಪಗಳು ಬಳಕೆಗೆ ಬಂದಂತೆ ತೋರುತ್ತದೆ. ಮುಂದೆ ಒಂದು ಹೆಡೆ, ಐದು ಹೆಡೆ, ಏಳು ಹೆಡೆಯ ನಾಗ ಪ್ರತಿಮೆಗಳು ಮಾತ್ರವಲ್ಲ, ನಾ ಪುರುಷರು ನಾಗಕನ್ನಿಕೆಯರಯ ಬೇರೆ ಬೇರೆಯಾಗಿಯೋ ಯುಗದ್ರವವಾಗಿಯೇ ಅರಳಿ ಮರದ ಎಡೆ, ಕೆರೆ, ಕೊಳಗಳ ದಂಡೆಗಳ ಮೇಲೆ ನದೀ ತೀರದಲ್ಲಿ ಮರಗಿಡಗಳು ಒತ್ತಾಗಿ ಬೆಳೆದಿರುವ ಕಡೆ ನಾಗ ಸನ್ನಿಧಾನವೆಂಬುದು ನಂಬಿಕೆ. ಬಿಚರಣ್ ಐವರ್ನಾಡ್  ಮರಗಿಡಗಳಿಗೆ ಬೆಟ್ಟಗುಡ್ಡಗಳಿಗೆ ಹಾವಿನ ನಂಟಿರುವಂತೆಯೇ ನೀರಿನ ಹರವಿದ್ದಡೆಯೇ ಹಾವಿನ ನಂಟನ್ನು ಪಡೆದಿರುತ್ತದೆ. ನಾಡಿನ ನಂಟಿರು ವಂತೆಯೇ ನೀರಿನ ಹರವಿದ್ದಡೆಯೇ ಹಾವಿನ ನಂಟನ್ನು ಪಡೆದಿರುತ್ತದೆ. ನಾಡಿನ ಹಲವು ಕೆರೆಗಳು, ಗುಡಿಗಳು, ಬಾವಿಗಳು, ಹೊಂಡಗಳು ಇರುವಲ್ಲಿ ನಾಗ ಸಂಬಂಧವನ್ನು ಗುಡಿಯಲ್ಲೋ ಪ್ರತಿಮೆಯಲ್ಲೋ ಕಾಣುತ್ತೇವೆ. ಅಮರಾವತಿಯ ಹಾಗೂ ಸಿಲೋನಿನ ಬೌದ್ಧ ಸಂಪ್ರದಾಯದಲ್ಲೂ ಮಾನವಾಕೃತಿಯ ಹೆಡೆ ಬಿಟ್ಟಿರುವ ಸರ್ಪಗಳು ಇವೆ (ರಾಮಚಂದ್ರ ರಾವ್ ಸಾ.ಕೃ. ಪ್ರಜಾವಣಿ ದೀಪಾವಳಿ ವಿಶೇಷಾಂಕ ೧೯೮೭)

ಆದಿಯಲ್ಲಿ ನಾಗನನ್ನು ಪ್ರತಿಷ್ಠಾಪಿಸುವ ಪರಿಕಲ್ಪನೆ ಇರಲಿಲ್ಲ. ಇತ್ತೀಚೆಗೆ ಪ್ರತಿಷ್ಠಾಪನೆ ಮಿತಿಮೀರಿ ಒಂದು ರೀತಿಯಲ್ಲಿ ಬುದ್ಧಿವಂತರು ಮಾಡುವ ದೈವೀಕ ಶಕ್ತಿಯ ವಿಡಂಬನೆ ಎಂಬಂತೆ ತೋರುತ್ತದೆ. ಯಾವ ಜಾಗದಲ್ಲಿ ಸಮೃದ್ಧ ಮರಗಳು, ಗಿಡಗಳು ಇದ್ದು ತಂಪಾದ ನೆಲವಿರುತ್ತದೆಯೋ ನಾಗ ಹಾಗೂ ಮತ್ತಿತರ ಜಂತುಗಳು, ಹುತ್ತಗಳು, ಮಿಥುನ ಕ್ರಿಯೆಯಲ್ಲಿ ಸರ್ಪಗಳು ತೊಡಗಿರುವಂತೆ ಒಂದನ್ನೊಂದು ಅಪ್ಪಿರುವ ಬಳ್ಳಿಗಳಿರುತ್ತವೆಯೋ ಅಲ್ಲೆಲ್ಲಾ ಹಿರಿಯರಿಗೆ ನಾಗಸಾನಿಧ್ಯ ಕಂಡಿತು. ಅದು ದೊಡ್ಡ ಕಾಡು ಮಾತ್ರವಲ್ಲ ಬೆಳೆಯ ರಕ್ಷಣಾ ಕಾರ್ಯದ ಹೊಣೆ ಹೊತ್ತು ಗದ್ದೆಯ ಮಧ್ಯೆಯೂ ಬನ ಒರುತ್ತದೆ. ನೀರಿನ ಪಸೆ ಇರುವ ನೆಲದಲ್ಲಿ ಮರಗಳು ಎಲೆಗಳನ್ನು ಉದುರಿಸಿ ಮಣ್ಣನ್ನು ಫಲವತ್ತಾಗಿಸುತ್ತವೆ. ಪ್ರಶಾಂತ ವಾತಾವರಣವೂ ಸೃಷ್ಟಿಯಾಗಿರುತ್ತದೆ. ಅದು ಬರಿಯ ನಾಗನಿಗೆ ಮಾತ್ರವಲ್ಲ. ಹಕ್ಕಿಗಳು, ಕೀಟಾದಿ ಜಂತುಗಳು, ಕೇರೆ ಹಾವುಗಳಿಗೂ ಆವಾಸ ಸ್ಥಾನ. ಅಲ್ಲಿ ಸತ್ವ ಭರಿತ ನೆಲವಿರುತ್ತದೆ. ಔಷಧೀಯ ಸಸ್ಯಗಳು, ಗಿಡ ಮೂಲಿಕೆಗಳಿರುತ್ತವೆ. ಆಲದ ಮರ, ಅರಳಿ, ಸಂಪಿಗೆ, ಕೇದಗೆ, ಎಂಜಿರ್, ಸರೋಳಿ, ನೆಕ್ಕಿ ಅನೇಕ ಮರಗಳನ್ನು ಇಲ್ಲಿ ಕಾಣಬಹುದು. ನಾಗ ಸುಗಂಧ ಪ್ರಿಯ. ನಾಗನಿಗೆ ಪರಿಮಳ ಯುಕ್ತವಾದ ಹೂಗಳೆಂದರೆ ಇಷ್ಟ. ಹಾಗಾಗಿ ಕೇದಗೆಯಂತಹ ಹೂಗಳು ನಾಗ ಬಿಂಬಗಳ ಮೇಲೆ ಪುಷ್ಪ್ಪ ವೃಷ್ಟಿಯನ್ನು ಮಾಡುತ್ತಿರುತ್ತವೆ. ಇಂತಹ ಗಿಡಗಳನ್ನು ಕಡಿಯುವುದಾಗಲೀ, ಕತ್ತಿತಾಗಿಸುವುದಾಗಲೀ ನಿಷೇಧ. ಇದು ಜೀರ್ಣೋದ್ಧಾರ ಎಂಬ ಪರಿಕಲ್ಪನೆ ಬರುವ ವರೆಗೆ ಚಾಲ್ತಿಯಲ್ಲಿತ್ತು. ಯಾವಾಗದಿಂದ ಪ್ರಶ್ನೆಯವರ ಮಾತಿಗೆ ಕಿವಿಯನ್ನು, ಬುದ್ಧಿಯನ್ನು ಮಾರಿಕೊಂಡೆವೋ ಅಂದಿನಿಂದ ನಾಗಬನಗಳು ಹಂತ ಹಂತವಾಗಿ ನಶಿಸಲಾರಂಭಿಸಿವೆ. 

ನಾಗ ಬನಗಳ ಮರಗಳನ್ನು ಕಡಿಯುವುದರಿಂದ ನಾಗರಗಳು, ನಾಗನ ಮೊಟ್ಟೆಗಳು ನಾಶವಾಗುತ್ತವೆ. ಹಿಂದೊಮ್ಮೆ ಯಾರೋ ಮುಟ್ಟಾಳರು ಬನಗಳನ್ನು ಕಡಿಯುವಾಗ ನಿತ್ಯ ಹಾವುಗಳನ್ನು ದೂರದ ಕಾಡಿಗೆ ಬಿಟ್ಟರಂತೆ! ಕೆಲವರು ಬನಗಳ ನೆಲದಲ್ಲಿ ಬೆಳೆದ ಗಿಡ-ಬಳ್ಳಿಗಳನ್ನು ನಾಶ ಮಾಡಲು ಬೆಂಕಿ ಹಾಕಿದ್ದರಂತೆ! ಇಂತವರನ್ನು ನಾಗರಾಜ ಎಂದೆಂದೂ ಕ್ಷಮಿಸುವುದಿಲ್ಲ. ಇವರನ್ನು ಇದಕ್ಕೆಲ್ಲಾ ಹೊಣೆ ಯಾರು ಎಂದು ಕೇಳಿದರೆ ಪ್ರಶ್ನೆಯವರು ಅದಕ್ಕೆ ನಿಮುರ್ತಿ (ಪರಿಹಾರ) ಮಾಡುತ್ತಾರೆ. ಅವರೇ ಕಟ್ಟೆ ಕಟ್ಟಲು ಹೇಳಿದ್ದು ಎಂಬ ಸಿದ್ಧ ಉತ್ತರ ನೀಡುತ್ತಾರೆ! ಅಷ್ಟಮಂಗಳದವರಿಗೆ ತಮ್ಮ ವಿವೇಚನಾ ಶಕ್ತಿಯನ್ನು ಮಾರಿಕೊಂಡಿರುವುದು ವಿಪರ್ಯಾಸ!

ಬಹುಶಃ ಯಾವುದೇ ನಂಬಿಕೆಗಳು, ದೇವರಕಲ್ಪನೆಗಳು ಬರುವ ಹಿಂದೆಯೇ ನಾಗನನ್ನು ಆರಾಧಿಸುತ್ತಿದ್ದರು. ತುಳು ನಾಡಿನಲ್ಲೂ ಇದರ ಪ್ರಾಚೀನತೆ ಬಹಳ ಹಿಂದಿನದ್ದಿರಬೇಕು. ಭಾರತದ ಸಹ್ಯಾದ್ರಿ ಶಿಖರಗಳ ತಪ್ಪಲು ಆಫ್ರಿಕಾದ ದಕ್ಷಿಣ ಭಾಗದೊಂದಿಗೆ ಜೋಡಣೆ ಯಾಗಿತ್ತು. ಅಂದರೆ ಅರಬ್ಬೀ ಕಡಲು ಹಿಂದೆ ಇರಲಿಲ್ಲ! ಹಾಗಾಗಿ ಅಫ್ರಿಕಾದ ಮೂಲ ಜನಾಂಗಿಗಳ ಅನೇಕ ಆಚಾರ-ವಿಚಾರಗಳಿಗೂ ಸಾಮ್ಯಗಳಿವೆ. ಉದಾಹರಣೆಗೆ ತುಳುನಾಡಿನ ಮಾತಾರಾಧನೆಯನ್ನೇ ಹೋಲುವ ಆಚರಣೆ ಆಫ್ರಿಕಾದಲ್ಲೂ ಇದೆ. ಅದಕ್ಕೆ ವೂಡೂ (voodoo) ಎನ್ನುತ್ತಾರೆ. ಈ ಶಬ್ಧದ ಮೂಲ ವೊಡ್ಙೂ ಆಗಿದ್ದು ಅಲೌಕಿಕ ಶಕ್ತಿಗಳನ್ನು ನಂಬುವುದು ಎಂದರ್ಥ. ಇಲ್ಲಿಯೂ ಸೊಂಟಕ್ಕೆ ಹಸಿ ತೆಂಗಿನ ಸಿರಿಯನ್ನು ಕಟ್ಟಿಕೊಂಡು ಪಾತ್ರಿ ಕುಣಿಯುತ್ತಾನೆ. ಗಂಡಸರು, ಮಹಿಳೆಯರಿಗೆ ಶಕ್ತಿ ಆವಾಹನೆಯಾಗುತ್ತದೆಯಂತೆ. ಒಂದು ರೀತಿಯಲ್ಲಿ ಇದು ಆಫ್ರಿಕಾದ ದೈವಾರಾಧನೆ! ಲೇಖಕ ಜಿನುಅ ಅಚಿಬೆಯವರ Things fall Apart  ಎಂಬ ಕಾದಂಬರಿಯಲ್ಲಿ ಇದರ ಉಲ್ಲೇಖವಿದೆ. (ಈ ಕೃತಿ ಕನ್ನಡಕ್ಕೂ ಅನುವಾದಗೊಂಡಿದೆ. ಮ್ಯಾನ್ ಬೂಕರ್ ಪ್ರಶಸ್ತಿಗೂ ಭಾಜನವಾಗಿದೆ) ತುಳುವರಂತೆ ಆಫ್ರಿಕನ್ನರೂ ನಾಗಾರಾಧಕರು. ತುಳುವರು ಆಫ್ರಿಕನ್ನರಿಗೆ ನೆಂಟರು ಎನ್ನಲು ಇದೊಂದು ಸಣ್ಣ ಉದಾಹರಣೆ. ಒಂದು ಪ್ರಾಕೃತಿಕ ಸ್ಥಿತ್ಯಂತರದಿಂದಾಗಿ ತುಳುನಾಡಿನಿಂದ ಆಫ್ರಿಕಾದೂರವಾಗಿ ನಡುವೆ ಅರಬ್ಬಿ ಕಡಲು ಬಂತು. ಈ ಸ್ಕಿತ್ಯಂತರವೇ ಪರಶುರಾಮನ ಸೃಷ್ಠಿಯ ಕತೆಯೊಂದಿಗೆ ತಳುಕು ಹಾಕಿಕೊಂಡಿದೆ. (ನನ್ನ ಬ್ಲಾಗ್ ಸ್ಪಾಟ್ ಅಕ್ಷರ ನಂಟು ನೋಡಿ   http://charanagowda.blogspot.in/ )









ಈ ಸ್ಥಿತ್ಯಂತರ ಆಗುವ ಮೊದಲೇ ನಾಗಾರಾಧನೆ ಈ ನೆಲದಲ್ಲಿ ಇತ್ತು. ಉಷ್ಣವಲಯಕ್ಕೆ ಸೇರಿದ ತುಳುನಾಡು ಬೆಚ್ಚನೆಯಾಗಿದ್ದು, ಆರ್ದ್ರತೆಯ ಪರಿಸರವನ್ನು ಹೊಂದಿರುವ ದಟ್ಟ ಕಾಡನ್ನು ಹೊಂದಿದಂತೆ ತೋರುತ್ತದೆ. ಈ ಪರಿಸರ ಉರಗಗಳ ಬದುಕಿಗೆ ಉಪಯುಕ್ತವಾಗಿತ್ತು. ಹಾಗಾಗಿ ಪ್ರಾಚೀನ ನಾಗವನಗಳಲ್ಲಿ ಯಾವುದೇ ಬಿಂಬಗಳು, ಮನುಷ್ಯ ನಿರ್ಮಿತ ಪರಿಕರಗಳು ಇರಲಿಲ್ಲ. ದೈನಂದಿನ ಬದುಕಿನಲ್ಲಿ ಭಯವನ್ನು ಸೃಷ್ಟಿಸುತ್ತಿದ್ದ ನಾಗಗಳಿಗೆ ಪ್ರತ್ಯೇಕ ಜಾಗ ನಿರ್ಮಿಸಿ ನೆಮ್ಮದಿ, ಧೈರ್ಯ ಪಡೆಯುವುದು ನಾಗಬನಗಳ ಉದ್ದೇಶವಾಗಿತ್ತು.   ಮುಂದೆ ಮುರಕಲ್ಲುಗಳನ್ನು, ಮಡಕೆಗಳನ್ನು, ಬಿಂಬಗಳನ್ನು ಹಾಕಿ ನಾಗನೆಂದೋ, ಬೆರ್ಮೆರೆಂದೋ ನಂಬಿದರು. ಗದ್ದೆಗಳಲ್ಲಿ ಬೆಳೆಗಳ ರಕ್ಷಣೆಗಾಗಿ ಪಕ್ಕದಲ್ಲೇ ನಾಗನನ್ನು ಆರಾಧಿಸಿದರು.
ನಾಗವನಗಳು ದೇವರ ಕಾಡುಗಳು. ಈ ನೆಲದಲ್ಲಿ ಕೊರಗ, ಪಾಣರು, ಮೇರ, ಮನ್ಸ, ಬಾಕುಡರಂತಹ ಆದಿ ದ್ರಾವಿಡ ಬಂಧುಗಳೇ ಬನಗಳ ಹುಟ್ಟಿಗೆ ಕಾರಣಕರ್ತರು. ಈಗೀಗ ಅವರನ್ನು ಮಡಿವಂತಿಕೆ, ಮೈಲಿಗೆಗಳ ಕಲ್ಪನೆಗಳ ಹೆಸರಿನಲ್ಲಿ ದೂರ ಇಟ್ಟು ಹುಳು ಹುಪ್ಪಟೆಗಳೂ ಬದುಕಲಾರದಂತಹ ಕಾಂಕ್ರೀಟ್ ಬನಗಳಲ್ಲಿ ಕಲ್ಲು ನಾಗನಿಗೆ ಹಾಲೆರೆಯುತ್ತಿದ್ದೇವೆ.

ನಮ್ಮ ಅತಿರೇಕ ನಂಬಿಕೆಗಳು, ಅಂಧ ಶ್ರದ್ಧೆಗಳು ನಾಗ ಹಾಗೂ ದೈವಗಳ ಬನಗಳಿಗೆ ಮುಳುವಾಗುತ್ತಿದೆ. ಮೂಲ ಆಶಯವನ್ನು ಅರಿಯದೆ ಆಚರಣೆ, ನಂಬಿಕೆಗಳನ್ನು ತಿರುಚುವುದು ಮೌಢ್ಯತೆ.
ನಾಗಕಲ್ಲಿನ ನಂಬಿಕೆಯನ್ನು ಒಂದು ಶೋಷಣೆಯ ಅಸ್ತ್ರವಾಗಿ ಬಳಸಬೇಕಿಲ್ಲ; ಜನರಿಗೆ ಜ್ಯೋತಿಷ್ಯದಲ್ಲಿ ನಿಮಿತ್ತ ಕೇಳುವ ಪ್ರವೃತ್ತಿ ಹೆಚ್ಚಿದಂತೆ ನಾಗನ ಉಪಟಳವೂ ಒಂದೇ ಸಮನೆ ಅಧಿಕವಾಗಿ ತೋರುತ್ತದೆ! ಜೀವಂತ ನಾಗನಿಗಿಂತ ಅದೃಶ್ಯ, ಭೂಗತ ನಾಗನದ್ದೇ ದೊಡ್ಡ ಬಾಧೆ! ಇದೂ ತಿಲತಲಾಂತರಕ್ಕೆ ಬರುತ್ತಿದ್ದಂತೆ! ನಾಗಬೀದಿ, ನಾಗಸನ್ನಿಧಿಗಳ ನಂಬಿಕೆಯಿಂದಾಗಿ ಅನೇಕರ ಕೈಯ ಹಣ, ಮೈಯ ಆರೋಗ್ಯ, ಮನಸ್ಸಿನ ನೆಮ್ಮದಿ ಸೊರಗುತ್ತಾ ಇದೆ ಎಂಬ ಅಮೃತ ಸೋಮೇಶ್ವರರ ಮಾತು ಎಷ್ಟು ಸತ್ಯ! ಮಕ್ಕಳಾಗದಿದ್ದರೂ, ರೋಗ-ರುಜಿನಗಳಿಗೂ, ದುಃಖ-ದುಮ್ಮಾನ ಗಳಿಗೆಲ್ಲಕ್ಕೂ ನಾಗನೇ ಕಾರಣ! ನಾಗನ ಮೇಲೆ ವಿನಾಕಾರಣ ದೋಷಾರೋಪ. ಇದು ಭಕ್ತಿಯಲ್ಲ. ಅಂಧ ಶ್ರದ್ಧೆ! ಇಂದು ಜೀವಂತ ನಾಗನ ಉಪದ್ರವಕ್ಕಿಂತ, ಪ್ರಶ್ನೆಯವರ ಕಣ್ಣಿಗೆ ಕಾಣದ ನಾಗನದ್ದೇ ಕಾಟ ಜಾಸ್ತಿ! ಪ್ರಶ್ನೆಯವರು ನಿಮ್ಮ ಕುಟುಂಬದಲ್ಲಿ ಯಾರೋ ಹಾವು ಕೊಂದಿದ್ದಾರೆ ಎಂದಾಗ ಇವರೋ ಹೌದಾ? ಆಗಿರಬಹುದು! ಎಂದು ತಲೆ ಆಡಿಸುತ್ತಾರೆ.

ಹಿರಿಯರು, ಬಲ್ಲವರು ತಮ್ಮ ಮನೆ, ಕುಟುಂಬಗಳಲ್ಲಿ ನಾಗನ ಕಟ್ಟೆಗಳನ್ನು ಸಸ್ಯ ಸಮೃದ್ಧಗೊಳಿಸಬೇಕಾಗಿದೆ. ಸುಮ್ಮಸುಮ್ಮನೆ ಖರ್ಚು ಮಾಡುವ ಬದಲು ಊರ ಸಮಸ್ತರನ್ನು ಸೇರಿಸಿ ಕಟ್ಟಳೆಗಳ ಪ್ರಕಾರ ದೈವಗಳಿಗೆ ನೇಮ, ಕೋಲಾದಿಗಳನ್ನು ಕೊಡುವುದು ಉತ್ತಮ. ಭೂತಾಲಗಳಿಗೆ ಬ್ರಹ್ಮಕಲಶ, ಅಷ್ಠಮಂಗಲ, ಮಾಡುವುದನ್ನು ಕಡಿಮೆಗೊಳಿಸಬೇಕಾಗಿದೆ. ದೈವಂಗಳ ಪ್ರತಿಷ್ಠಾಪನೆಗೆ ನಮ್ಮ ಹಿರಿಯರು ಭೂತ ಮಂಡಲ ಮಾಡುತ್ತಿದ್ದರು! ತೊಂಬತ್ತು ದಾಟಿದ ಹಿರಿತಲೆಗಳಿಗೆ ಬ್ರಹ್ಮಕಲಶ, ಅಷ್ಟಮಂಗಲ ಇವ್ಯಾವುವೂ ಗೊತ್ತಿಲ್ಲ! ಈ ಬಗೆಗೆ ಜಾನಪದ ವಿದ್ವಾಂಸ, ದೈವಗಳ ಬಗೆಗೆ ಅತೀವ ಗೌರವ ಇಟ್ಟುಕೊಂಡಿರುವ ಬನ್ನಂಜೆ ಬಾಬು ಅಮೀನ್ ತಮ್ಮ ತುಳುನಾಡ ದೈವಗಳು, ಸಾಂಸ್ಕೃತಿಕ ವಿಶ್ಲೇಷಣೆ ಎಂಬ ಕೃತಿಯಲ್ಲಿ ವಿವರಿಸಿದ್ದಾರೆ. ತಂದೆಯೋ, ಅಜ್ಜನೋ ಮಾಡಿದ ತಪ್ಪಿಗೆ ನಾವು ಪ್ರಾಯಶ್ಚಿತ ಪಡುವುದು ಯಾವ ನ್ಯಾಯ? ನಮ್ಮ ಕರ್ಮ ಪೂರ್ಣಗೊಳಿಸುವುದಷ್ಟೇ ನಮ್ಮ ಜನ್ಮದ ಉದ್ದೇಶ. ಅಜ್ಜ ಹಾವು ಕೊಂದಿದ್ದು ಎಂದು ನಾವು ಅದಕ್ಕೆ ಸರ್ಪಸಂಸ್ಕಾರ ಮಾಡುವುದು ಯಾವ ನ್ಯಾಯ? ಕಷ್ಟಗಳು ಬಂದಾಗ, ಖಾಯಿಲೆ ಬಂದಾಗ ನಮ್ಮ ಅಜ್ಜಂದಿರು ದೈವಗಳಿಗೆ ಈಡು ಎಂದು ನಾಣ್ಯ ತೆಗೆದಿಡುತ್ತಿದ್ದರು. ಅದು ನಮ್ಮಲ್ಲಿ ಮಾನಸಿಕವಾಗಿ ಧೈರ್ಯ ತುಂಬುತ್ತಿತ್ತು. ದನ ಬಾರದಿದ್ದಾಗ ಅಂಗಾರ ಬಾಕುಡನ ಕಲ್ಲಿಗೆ ಕಾಯಿ ಹೊಡೆಯುತ್ತಿದ್ದೆವು. ಇವೆಲ್ಲ ಮೌಢ್ಯತೆಗಳಲ್ಲ! ಅಲೌಕಿಕ ಶಕ್ತಿಗಳೊಂದಿಗೆ ತಮ್ಮ ನೋವನ್ನು ಹಂಚಿಕೊಳ್ಳುವುದು. ಮಕ್ಕಳಿಗೆ ಮೈ ಸುಡುವ ಜ್ವರ ಬಂದರೆ ಅಜಲಿನ ನಲ್ಕೆಯವರ ಮನೆಯಿಂದ ಭಸ್ಮ ತಂದು ಹಾಕುತ್ತಿದ್ದರು. ಜೊತೆಗೆ ಮದ್ದೂ ಕುಡಿಸುತ್ತಿದ್ದರು. ಈ ಭಸ್ಮ ಮನೆಯವರಲ್ಲಿ, ಮಕ್ಕಳಲ್ಲಿ ಧೈರ್ಯ ಹಾಗೂ ನಂಬಿಕೆ ತುಂಬುವ ಕೆಲಸ ಮಾಡುತ್ತಿತ್ತು. ಇದು ನಿಷ್ಕಲ್ಮಶವಾದದ್ದು!

ಅನಕ್ಷರಸ್ಥರಾದ ನಮ್ಮ ಪೂರ್ವಜರು ಅವರ ಹಿರಿಯರ ಮೌಲ್ಯಗಳನ್ನು ಗೌರವಿಸಿ ಉಳಿಸಿದ್ದಾರೆ. ಶಿಕ್ಷಿತರಾದ ನಾವು ಸುಲಭದಲ್ಲಿ ಕೆಲಸ ಮುಗಿಸಲು ವಾಮಮಾರ್ಗ ತುಳಿಯುತ್ತಿದ್ದೇವೆ. ಬಿಚರಣ್ ಐವರ್ನಾಡ್  ದೈವಸ್ಥಾನಗಳಿಗೆ ಹಿಂದೆ ಪೂಪೂಜನೆಯವರು ಮಡಿವಾಳನ ನೇತೃತ್ವದಲ್ಲಿ ಕಲಶಕಟ್ಟಿ ಜಾನಪದೀಯ ಶುದ್ಧೀಕರಣ ಮಾಡುತ್ತಿದ್ದರು. ದೈವಗಳನ್ನು ಭೂತಮಂಡಲ ಮಾಡಿ ಸ್ಥಾಪಿಸುತ್ತಿದ್ದರು. ಇಂದು ನಾವು ತಂತ್ರಿಗಳಿಗೆ ಕಾಂಟ್ರಾಕ್ಟ್ ಕೊಟ್ಟು ಬ್ರಹ್ಮಕಲಶ ಮಾಡಿಸುತ್ತಿದ್ದೇವೆ. ಅಷ್ಟಕ್ಕೂ ಆಗಮಶಾಸ್ತದಲ್ಲಿ ದೈವಗಳ ಪ್ರತಿಷ್ಠಾಪನೆಯ ಕುರಿತು ಉಲ್ಲೇಖವೇ ಇಲ್ಲ. ಇತ್ತೀಚೆಗೆ ಬ್ರಹ್ಮಕಲಶಗಳಲ್ಲಿ ಹಳೆಯ ಮುಗ-ಮೂರ್ತಿ, ಪರಿಕರಗಳನ್ನು ಜಲಸ್ಥಂಭನ ಮಾಡುತ್ತಿದ್ದಾರೆ. ನಮ್ಮ ಹಿರಿಯರ ಹಳೆಯವನ್ನು ಹಾಗೆಯೇ ಉಳಿಸಿ ಒಡಕು ಬಂದಿದ್ದನ್ನು ಮಾತ್ರ ಹಾಲು ಬರುವ ಮರಗಳ ಕೆಳಗೆ ಇಡುತ್ತಿದ್ದರು. ಇದು ನಮ್ಮ ಪೂರ್ವಜರಿಗೆ ಐತಿಹಾಸಿಕ ವಸ್ತುಗಳ ಬಗೆಗೆ ಇರುವ ಗೌರವ! ಒಂದು ಕಡೆ ಬುದ್ಧನ ಮೂರ್ತಿಗಳು, ಶಾತವಾಹನ ಕಾಲದ ನಂದಿಯನ್ನು (ಬಹುಶಃ ಅಮಿತಾಬ ಭೋದಿಸತ್ವನ ವಿಗ್ರಹ) ಭೂತಗಳ ವಿಗ್ರಹ ಎಂದು ಬೊಳ್ಳಕ್ಕೆ ಬಿಟ್ಟ ನಿದರ್ಶನ ಹತ್ತಿರದಿಂದ ಬಲ್ಲೆ. ಇದು ಎಂಥಾ ಘೋರ ಅಪರಾಧ! ಇತಿಹಾಸ ವಸ್ತುಗಳ ಕೊಲೆ!

ಹಾಗೆಂದು ವೈದಿಕ ಸಂಪ್ರದಾಯ ವನ್ನು ತಿರಸ್ಕರಿಸಬೇಕು ಎಂದು ಅರ್ಥವಲ್ಲ. ಅಷ್ಟೆಲ್ಲಾ ಖರ್ಚು ಮಾಡುವ ಬದಲು ಕಡಿಮೆ ಖರ್ಚಿನಲ್ಲಿ ಜಾನಪದ ರೀತಿಯಲ್ಲಿ ದೈವಗಳನ್ನು ಪ್ರತಿಷ್ಠಾಪಿಸಿ ದೈವಾಲಯಗಳ ಹೊರಗಡೆ ಲೋಕಕಲ್ಯಾಣಾರ್ಥವಾಗಿ ಗಣಹವನ, ಸತ್ಯನಾರಾಯಣ ಪೂಜೆ ಚಂಡಿಕಾಯಾಗ ಮಾಡಿಸುವುದು ಒಳಿತು. ಏಕೆಂದರೆ ಎರಡು ಸಾವಿರ ವರುಷಗಳ ಹಿಂದೆ ತುಳುನಾಡನ್ನು ಆಳಿದ ದೊರೆ ಭೂತಾಳ ಪಾಂಡ್ಯನ ಕಟ್ಟಳೆಗಳ ಕುರಿತು ೧೮೫೭ರಲ್ಲಿ ಬಾಸೆಲ್ ಮಿಶನ್ ಭೂತಾಳ ಪಾಡ್ಯನ ಅಳಿಯ ಸಂತಾನದ ಕಟ್ಟುಕಟ್ಟಳೆಗಳು ಎಂಬ ಕೃತಿಯನ್ನು ಮುದ್ರಿಸಿತ್ತು. ಅದರ ಒಂದು ಕಟ್ಟಳೆಯನ್ನು ಗಮನಿಸಿ- ಕಟ್ಟಳೆಯಂತಂದಹ-ಬ್ರಾಹ್ಮಣ ಮೂಲಕ ಶುಭಧಾರೆಗಳು ಇಲ್ಲ, ಸತ್ತರೆ ಮ್ಹಾಳ ಕಾರ್ಯಗಳು ಇಲ್ಲ, ಹೆತ್ತರೆ ಸತ್ತರೆ, ದರ್ಬೆ ಹಿಡಿದು ಪಂಚಗವ್ಯ ಪುಣ್ಯ ಹೋಮಕ್ಕೆ ಕಾರಣವಿಲ್ಲ. ಸತ್ತರೆ ಹೆತ್ತರೆ ದೇವಸ್ಥಾನದಲ್ಲಿ ಇರುವ ನಿರ್ಮಾಲ್ಯ, ಹೆತ್ತವರ ಸತ್ತವರ ಹೆಸರಲ್ಲೂ ದೇವರ ಪೂಜೆ ಅಭಿಷೇಕ ಶಾಂತಿ ಸಮಾರಾಧನೆಗಳು ಇತ್ಯಾದಿ ಮಾಡಿ ಕೊಂಡಿರುವುದುದೆಂದು ಶಾಸ್ತ್ರಗಳ ನಿಲ್ಲಿಸಿದನಾ ಭೂತಾಳ ಪಾಂಡ್ಯ ಭೂತಾಳ ಪಾಂಡ್ಯ ದೈವಸ್ಥಾನಗಳಲ್ಲಿ ವೈದಿಕ ಪೂಜೆಗಳನ್ನು ನಿಷೇಧಿಸಿ ದ್ದನಂತೆ! ಆದರೆ ಭಾರತೀಯ ವೈಧಿಕ ಪರಂಪರೆಗಳ ಬಗೆಗೆ ನಮಗೆ ಅಚಲ ಭಕ್ತಿ, ಶ್ರದ್ಧೆ ಇದೆ. ಹಾಗಾಗಿ ದೈವಾಲ ಯಗಳ ಹೊರಗೆ ಹೋಮ-ಹವನಗಳನ್ನು ಮಾಡಿಸಬೇಕು.
ಕೊನೆಯ ಮಾತು : ಸಂಸ್ಕೃತಿಗಳಲ್ಲಿ ಬದಲಾವಣೆ ಸಹಜ ಕ್ರಿಯೆ. ಈ ಪ್ರಕ್ರಿಯೆ ಸಂಸ್ಕೃತಿಗಳ ಮೇಲ್ಪದರಗಳಲ್ಲಿ ನಡೆಯಬೇಕು. ಅಂದರೆ ಕೊಡು-ಕೊಳ್ಳುವಿಕೆ ನಡೆದು ಸದಾ ಜೀವಂತಿಕೆ ತುಂಬುವಂ ತಿರಬೇಕು. ಒಂದು ರೀತಿಯಲ್ಲಿ ಹಳೆಯ ಚರ್ಮ ಸವೆದು ಹೊಸ ಚರ್ಮ ಬಂದಂತೆ. ಅದರ ಹೊರತಾಗಿ ಸಂಸ್ಕೃತಿಯ ಗರ್ಭದಲ್ಲಿ ಬದಲಾವಣೆ ಯನ್ನು ತಂದರೆ ಮೂಲ ಆಶಯಗಳ ಜೊತೆಗೆ ಸಂಸ್ಕೃತಿಯೇ ನಾಶ ವಾಗುತ್ತದೆ. ಅದು ದೇಹದ ವಂಶವಾಹಿ ಜೀನ್ಗಳಲ್ಲಿ ಬದಲಾ ವಣೆ ತಂದಂತೆ! ಹಾಗಾಗದಂತೆ ತುಳುವರ ಅಪೂರ್ವ ಪರಂಪರೆ ಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ.




ಚರಣ್ ಐವರ್ನಾಡು

ದ್ವಿತೀಯ ಎಂಸಿಜೆ

ಮಂಗಳಗಂಗೋತ್ರಿ

ಮಂಗಳೂರು ವಿಶ್ವವಿದ್ಯಾನಿಲಯ

9740249793





ಪುರುಷೋತ್ತಮ ಬಿಳಿಮಲೆ
July 11th, 2014 at 8:13 PM
ಲೇಖನ ತುಂಬಾ ಚೆನ್ನಾಗಿದೆ. ಈಗ ಧರ್ಮ, ಆರಾಧನೆ ಇತ್ಯಾದಿಗಳೆಲ್ಲ ಸುಳ್ಳು ಪ್ರತಿಷ್ಠೆಯನ್ನು ಮೆರೆಸಲು ಒಂದು ತಂತ್ರ ಅಷ್ಟೆ. ಢಾಂಬಿಕತೆ ಹೆಚ್ಚಾದಾಗ ುಳಿದೆಲ್ಲವೂ ಹಿಂದೆ ಬೀಳುತ್ತದೆ

Tara Puttaswamy
July 11th, 2014 at 8:57 PM
Charan,
It’s a nice and interesting topic. naga endare neeru neeru endare naga..The meanings of the word naga in different languages shows the connection. I can’t critically analyse your article.But, I definitely found it interesting and good.keep it up! Keep writing!
Anantharaja Gowda Puttur/Tenkila
July 12th, 2014 at 2:20 PM
Thought provoking Article. I am of the strong opinion that practices like “AsthaMangala” should be stopped. It is a means to misguide people, fleece and rob them. Keep them in “Andhakara”.
purushothama
July 16th, 2014 at 8:43 PM
Thanks
Chowta
August 2nd, 2014 at 5:36 PM
Good writeup Charan..with lots of comparitive study notes & insight , article is a eyeopener for those who involved in the ruining process of meaningfull folk worship of Naagaaradhane in the name of ” Naveekarana ” …They closed thier eyes & mind… and as you rightly obsereved, ” ashtamangala prashne – bhramakalasha” advice is the sole reason for all these blind practices…

2 THOUGHTS ON “ನಾಗಬನಗಳ ಸ್ಥಿತ್ಯಂತರ









ಕಾಮೆಂಟ್‌ಗಳು

Bahurupi Bharatha