ಗೌಪ್ಯತೆಯ ವಿಚಾರ ಬೆತ್ತಲಾದಾಗ ಉಳಿದಿದ್ದೇನು?!
ಧಾರವಾಡ ಸಾಹಿತ್ಯ ಸಮ್ಮೇಳನದ ಸಮರೋಪ ಕಾರ್ಯಕ್ರಮವು ಗಲಾಟೆಯೊಂದಿಗೆ ಮುಕ್ತಾಯವಾಗಿದೆ. ಶಿಕ್ಷಣ ತಜ್ಞ ಶಿವ ವಿಶ್ವನಾಥನ್ ಭಾರತೀಯ ಸೈನಿಕರ ಮೇಲೆ ನೀಡಿದ ಹೇಳಿಕೆಯೊಂದು ವಿರೋಧ, ಪ್ರತಿಭಟನೆಗಳಿಗೆ ಕಾರಣವಾಗಿದೆ. ಅವರ ಹೇಳಿಕೆಯನ್ನು ಸಮರ್ಪಕವಾಗಿ ವರದಿಯಾಗದೆ ಅನೇಕ ಪತ್ರಿಕೆಗಳು ತಮಗೆ ಬೇಕಾದಂತೆ ವರದಿ ಮಾಡಿ ಕಿಚ್ಚಿಗೆ ತುಪ್ಪ ಸುರಿದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆ ಸಾಕಷ್ಟು ಟೀಕೆಗಳಿಗೆ ಒಳಗಾಗಿದೆ. ಕ್ಷಮೆ ಕೇಳುವಂತೆ ಒತ್ತಡವೂ ಅವರ ಮೇಲೆ ಹಾಕಲಾಗಿದೆ.
"ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು" ಎಂಬ ವಿಚಾರಗೋಷ್ಟಿಯಲ್ಲಿ ಶಿವ ವಿಶ್ವನಾಥನ್ ಹೇಳಿದ್ದು ಹೀಗೆ... "ನಾನು ಅಸ್ಸಾಂಗೆ ಬೇಟಿ ನೀಡಿದ್ದಾಗ ಮಹಿಳೆಯರು ನಮಗೆ ಶಾಂತಿ ಬೇಕು ಎಂದು ಹೇಳಿದರು. ನಾನು ಒಬ್ಬ ಶಿಕ್ಷಣ ತಜ್ಞನಾಗಿ ಸಶಸ್ತ್ರ ಸೇನೆಯ ವಿಶೇಷ ಅಧಿಕಾರದ ಬಗ್ಗೆ ಕೆಲಸ ಮಡಲು ಸೂಚಿಸಿದೆ. ಅವರು ಸೇನೆಯಿಂದ ನಡೆದ 1,500 ಅತ್ಯಾಚಾರ ಮತ್ತು ಕೊಲೆಯ ಪ್ರಕರಣಗಳನ್ನು ದಾಖಲೀಕರಣ ಮಾಡಲು ಆರಂಭಿಸಿದರು, ಅದು ಭಯಾನಕವಾಗಿತ್ತು. ಇದು ಸೇನೆಯನ್ನು ನಾಶ ಮಾಡುತ್ತದೆ. 17 ರಿಂದ 21 ವರ್ಷದ ಒಳಗಿನವರು ಯಾವುದೇ ಪರಿವೇ ಇಲ್ಲದೆ ಅತ್ಯಾಚಾರ ಮಾಡುವುದು ಸಾಧ್ಯ ಎಂದರೆ......" ಇವರ ಮಾತುಗಳು ಮುಂದುವರಿಯುತ್ತಿದ್ದಂತೆ ಮಾಜಿ ಸೇನಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, "ಸೈನಿಕರನ್ನು ನೀವು ಅತ್ಯಾಚಾರಿಗಳೆಂದು ಕರೆಯುತ್ತಿದ್ದೀರಿ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಮೇಲೆ ನಡೆದ ಜಟಾಪಟಿಗಳ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ.
ನಮ್ಮ ಸೈನಿಕರ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಅವರ ತ್ಯಾಗ ಬಲಿದಾನಗಳನ್ನು ನಾವು ಸ್ಮರಿಸಬೇಕು. ಸೈನ್ಯಕ್ಕೆ ಸಂಬಂಧಿಸಿದ್ದೆಲ್ಲವನ್ನೂ ರಾಜಕೀಯಗೊಳಿಸುತ್ತಿರುವ ಈ ಸಂದರ್ಭದಲ್ಲಿ ಪರ ವಿರೋಧಗಳ ಚರ್ಚೆಗಳ ನಡುವೆ ಅದರ ಘನತೆಗೆ ಧಕ್ಕೆಯಾಗುತ್ತಿದೆ. ಗೌಪ್ಯವಾಗಿಡಬೇಕಾದ ಸೈನ್ಯದ ವಿಚಾರಗಳು ಬೀದಿ ಚರ್ಚೆಗಳಾಗುತ್ತಿವೆ ಮತ್ತು ಸೈನ್ಯದ ಅಧಿಕಾರಿಗಳು ಟಿವಿ ಚರ್ಚೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಡಿಯಲ್ಲಿ ನಡೆಯುವ ಸೈನಿಕ ಕಾರ್ಯಾಚರಣೆಯೊಂದು ರಾಜಕೀಯ ಪಕ್ಷಗಳ ಜಾಹೀರಾತುಗಳಿಗೆ ಬಳಕೆಯಾಗುತ್ತಿದೆ. ಸೈನ್ಯದ ಬಗ್ಗೆ ಭಾವನಾತ್ಮಕವಾಗಿ ಮಾತನಾಡುತ್ತಲೇ ಸೈನಿಕರ ಮರಣವಾಗುತ್ತಿರುವಾಗ ನೋವಾಗುತ್ತದೆ.
ಸೈನ್ಯಗಳು ನಮ್ಮ ದೇಶದಲ್ಲಿನ ವ್ಯವಸ್ಥೆಗಳೇ. ಅವುಗಳು ಪ್ರಶ್ನಾತೀತವೆಂದು ಭಾವಿಸುವುದು ತಪ್ಪಾಗುತ್ತದೆ. ಸೈನ್ಯದಿಂದ ತಪ್ಪುಗಳು ಘಟಿಸಿದಾಗ ಅದನ್ನು ಎಲ್ಲಾ ವ್ಯವಸ್ಥೆಗಳಲ್ಲಿನ ದೋಷಗಳಂತೆ ಪ್ರಶ್ನಿಸುವುದು ಅಪರಾಧವೆಂದು ಬಿಂಬಿಸುವುದು ಎಷ್ಟು ಸರಿ? ಶಿವ ವಿಶ್ವನಾಥನ್‍ರ ಹೇಳಿಕೆಯಲ್ಲಿ ಒಂದು ವಾಕ್ಯವಿದೆ. ಆ ಮಾತಿನ ಆಂತರ್ಯವನ್ನು ವಿರೋಧಿಸುವ ಧಾವಂತದಲ್ಲಿ ನಾವು ಗಮನಿಸಿಲ್ಲ. ಅವರು ಈಶಾನ್ಯ ಭಾರತದಲ್ಲಿ “ವಿಶೇಷ ಅಧಿಕಾರದ ಸಶಸ್ತ್ರ ಸೇನೆಯ (AFSPA) ಕೆಲ ಸೈನಿಕರು ನಡೆಸಿದ ಅತ್ಯಾಚಾರವನ್ನು ಪ್ರಸ್ತಾಪಿಸುತ್ತಾ "ಇದು ಸೇನೆಯನ್ನು ನಾಶ ಮಾಡುತ್ತದೆ" ಎಂದಿದ್ದಾರೆ. ಇದು ಸೇನೆಯಲ್ಲಿ ನಡೆಯುವ ಅಕ್ರಮಗಳಿಂದ ಸೇನೆಯ ಘನತೆಯ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ಅವರ ಕಾಳಜಿಯ ಅಭಿಪ್ರಾಯ ಎಂದು ನಾವು ಏಕೆ ಭಾವಿಸಬಾರದು?
2004 ಜುಲೈ 15ರಂದು ಹನ್ನೆರಡು ಮಧ್ಯವಯಸ್ಕ ಮಹಿಳೆಯರು ಮಣಿಪುರದಲ್ಲಿರುವ ಭಾರತೀಯ ಸೈನ್ಯದ 17ನೇ ಅಸ್ಸಾಂ “ರೈಫಲ್ ಘಟಕದ ಕಾಂಗ್ಲಾ ಫೋರ್ಟ್ ಯೂನಿಟ್”ನ ಮುಂಬಾಗ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದು ನಮ್ಮ ಕಣ್ಣ ಮುಂದಿದೆ. ತಮ್ಮ ಬೆತ್ತಲಾದ ದೇಹವನ್ನು ಬ್ಯಾನರ್‍ನಿಂದ ಮುಚ್ಚಿದ್ದರು. ಆ ಬ್ಯಾನರ್‍ನಲ್ಲಿ “Indian Army Rape Us..we all are Manorama’s mothers,
Kill us, Flesh us!” ಎಂದು ಬರೆಯಲಾಗಿತ್ತು! ಇದು ಭಾರತೀಯ ಸೈನ್ಯವು ಉಗ್ರಗಾಮಿ ಎಂದು ಆರೋಪಿಸಿದ್ದ ಥಾಂಜಮ್ ಮನೋರಮಾ ಎಂಬ ಮೂವತ್ತು ವರ್ಷದ ಮಹಿಳೆಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ನಡೆದ ಪ್ರತಿಭಟಯಾಗಿತ್ತು. ಈ ಕೊಲೆಯನ್ನು ನಡೆಸಿದ ಆರೋಪಿಗಳ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ. ಈಕೆಗೆ 17ನೇ ಅಸ್ಸಾಂ ರೈಫಲ್ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯಿದೆಯ ಅಡಿಯಲ್ಲಿ ಮರಣ ದಂಡನೆ ಘೋಷಿಸಲಾಗಿತ್ತು ಎಂದು ಆರೋಪಿಸಲಾಗಿತ್ತು.
ಈಶಾನ್ಯ ಭಾರತದಲ್ಲಿ ಇಂತಹ ಆರೋಪ-ಸಮರ್ಥನೆಗಳು ಸಾಕಷ್ಟು ನಡೆದಿವೆ. ಬ್ರಿಟೀಷ್ ಸರಕಾರ ವಸಾಹತು ವಿರೋಧಿ ಕ್ವಿಟ್ ಇಂಡಿಯಾ ಚಳುವಳಿಯನ್ನು ನಿಯಂತ್ರಿಸಲು 1942ರಲ್ಲಿ (AFSPA)ನ್ನು ಈಶಾನ್ಯ ಭಾರತಕ್ಕೆ ತಂದಿತು. 1947ರಲ್ಲಿ ಭಾರತವು ರಾಜಪ್ರಭುತ್ವಗಳಿದ್ದ ಪ್ರದೇಶಗಳನ್ನು ಹೊರತು ಪಡಿಸಿ ಒಕ್ಕೂಟವನ್ನು ರಚಿಸಿತು. 1972ರಲ್ಲಿ ಮಣಿಪುರವು ಭಾರತೀಯ ಒಕ್ಕೂಟದ ಭಾಗವಾಯಿತು. 1958ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ, ಸರಕಾರಿ ಶಾಲೆಗಳು ಮತ್ತು ಸರಕಾರಿ ಕಚೇರಿಗಳ ವಿರುದ್ಧದ ಬಹಿಷ್ಕಾರ ಹೋರಾಟಗಳ ಮತ್ತು ನಾಗಲ್ಯಾಂಡಿನ ಬಂಡುಕೋರರನ್ನು ನಿಯಂತ್ರಿಸಲು ಭಾರತೀಯ ಸರಕಾರವು 17ನೇ ಅಸ್ಸಾಂ ರೈಫಲ್ಸ್ ಅರೆಸೈನಿಕ ಘಟಕವನ್ನು ನಿಯೋಜಿಸುತ್ತದೆ. ಇವರಿಗೆ ವಾರಂಟ್ ಇಲ್ಲದೆ ಬಂಧಿಸಲು, ಕೊಲ್ಲಲು ವಿಶೇಷ ಅಧಿಕಾರವನ್ನು ನೀಡಲಾಗಿತ್ತು. ಮಕ್ಕಳನ್ನೂ ಸೈನ್ಯಕ್ಕೆ ಬಲವಂತವಾಗಿ ಸೇರಿಸುವ ಪರಿಪಾಠ ಬೆಳೆಯಿತು. ಈ ವಿಶೇಷ ಅಧಿಕಾರದ ಪರಿಣಾಮವಾಗಿ ನಡೆದ ಹಿಂಸಾಚಾರಗಳ ವಿರುದ್ಧ ವ್ಯಾಪಕ ಹೋರಾಟಗಳು ನಡೆಯುತ್ತಾ ಬಂದಿವೆ. ಮಾನವ ಹಕ್ಕುಗಳ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳ ಹೋರಾಟಗಳು ನಡೆದಿವೆ.
2017ರಲ್ಲಿ ಮಣಿಪುರದಲ್ಲಿ ಭದ್ರತಾ ಪಡೆಗಳಿಂದ ನಡೆದ ಹೆಚ್ಚುವರಿ ಹತ್ಯೆಗಳನ್ನು ತನಿಖೆ ನಡೆಸಲು ವಿಶೇಷ ತನಿಖಾ ದಳ (SIT) ಮಾತ್ರ ನಂಬಲರ್ಹವಾಗಿದೆ ಎಂಬ ವರದಿಯನ್ನು ಮೇನಕಾ ಗುರುಸ್ವಾಮಿ ಸುಪ್ರಿಂ ಕೋರ್ಟಿಗೆ ಸಲ್ಲಿಸಿದ್ದರು. (AFSPA)ಯ ದುರ್ಬಳಕೆಯನ್ನು ತನಿಖೆ ನಡೆಸಲು ಸುಪ್ರೀಂಕೋರ್ಟು ವಿಶೇಷ ನ್ಯಾಯಾಲಯವನ್ನು ರಚಿಸಿತ್ತು. ಗುರುಸ್ವಾಮಿ ವರದಿಯನ್ನು ನೋಡಿದ ಮದನ್ ಬಿ ಲೋಕುರ್ ಮತ್ತು ಯು ಯು ಲಲಿತ್ ಪೀಠವು "ಸೈನ್ಯದ ಸಮವಸ್ತ್ರದಲ್ಲಿ ಅತ್ಯಾಚಾರಿಗಳಿದ್ದಾರೆಯೇ?" ಎಂದು ಸೈನ್ಯವನ್ನು ತರಾಟೆಗೆ ತೆಗೆದುಕೊಂಡಿತ್ತು.
2003 ಅಕ್ಟೋಬರ್ 4 ರಂದು 13 ವರ್ಷದ ಹುಡುಗಿಯನ್ನು ಸೈನ್ಯದ ಅಧಿಕಾರಿಯೋರ್ವ ಅತ್ಯಾಚಾರವೆಸಗಿದ್ದ. ಅತ್ಯಾಚಾರ ನಡೆದ ಗಂಟೆಗಳ ಒಳಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಳು. 2004 ಜುಲೈ 1ರಂದು ಇಂಪಾಲ್‍ನಲ್ಲಿ ನಡೆದ ಮೂವತ್ತರ ವಯಸ್ಸಿನ ಮನೋರಮಾ ದೇವಿಯ ಅತ್ಯಾಚಾರ ಮತ್ತು ಹತ್ಯೆ ಸೈನ್ಯದ ವಿರುದ್ಧ ತೀವ್ರ ಪ್ರತಿಭಟನೆ ಏಳಲು ಕಾರಣವಾಯ್ತು. ಇಂತಹ ಸಾವಿರಾರು ಪ್ರಕರಣಗಳಿವೆ. ಈ ಕೃತ್ಯಗಳನ್ನು ಖಂಡಿಸಿ ಇರೋಮ್ ಶರ್ಮಿಲಾ ನಡೆಸಿದ ಹದಿನಾರು ವರ್ಷಗಳ ಉಪವಾಸ ಇತಿಹಾಸವಾಗಿದೆ.
ಭಾರತೀಯರಾದ ನಾವೆಲ್ಲರೂ ನಮ್ಮ ಸೈನಿಕರನ್ನು ಗೌರವಿಸಬೇಕಾದದ್ದು ನಮ್ಮ ಕರ್ತವ್ಯ. ಆದರೆ ಸೈನ್ಯವು ಪ್ರಶ್ನಾತೀತವೆಂದು ಭಾವಿಸುವುದು ಸರಿಯಲ್ಲ. ಇತ್ತೀಚೆಗೆ ಸೇನೆಯಲ್ಲಿ ಕೊಡುವ ಕಳಪೆ ಆಹಾರದ ಬಗ್ಗೆ ಸೈನಿಕರು ತಮ್ಮ ಅಳಲು ತೋಡಿಕೊಂಡಿದ್ದಿದೆ. ನಮ್ಮ ಸೈನ್ಯ ಮತ್ತು ಸೈನಿಕರು ತಮ್ಮ ಘನತೆಯನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಸೈನ್ಯದಲ್ಲಿ ನಡೆದ ಇಂತಹ ದುಷ್ಕತ್ಯಗಳಿಗೆ ಇಡೀ ಸೈನ್ಯವನ್ನು ದೂರಲಾಗುವುದಿಲ್ಲ. ಹಾಗೆಂದು ತಪ್ಪೆಸಗಿದ ಸೈನಿಕರೂ ಶಿಕ್ಷಾರ್ಹರೇ ಆಗಿದ್ದಾರೆ.
ಸೈನ್ಯವೂ ರಾಜಕೀಯದ ದಾಳವಾಗಿ ಬದಲಾಗುತ್ತಿರುವ ಈ ಕಾಲದಲ್ಲಿ ಆಡಳಿತ ವ್ಯವಸ್ಥೆಯಿಂದ ಅಂತರವನ್ನು ಕಾಯ್ದುಕೊಂಡು ತನ್ನ ಘನತೆಯನ್ನು ಉಳಿಸಿಕೊಳ್ಳಬೇಕು. ಶಿವ ವಿಶ್ವನಾಥನ್‍ರ ಹೇಳಿಕೆಯನ್ನು ಸಂಪೂರ್ಣವಾಗಿ ಗ್ರಹಿಸದೆ, ವಿಮರ್ಶಿಸದೆ ಹರಿಹಾಯಬಾರದಿತ್ತು. ನಾವು ಎಲ್ಲಾ ಅಭಿಪ್ರಾಯಗಳನ್ನು ಆಲಿಸುವಾಗಲೂ ಸಂಯಮದಿಂದ ವರ್ತಿಸಬೇಕು ಮತ್ತು ಸಮರ್ಪಕವಾಗಿಯೇ ಟೀಕಿಸಬೇಕು. ದೇಶ ಪ್ರೇಮ ಮತ್ತು ರಾಷ್ಟ್ರೀಯತೆಯಂತಹ ಪದಗಳು ಬೀದಿ ಜಗಳಕ್ಕೆ ಸಿಲುಕಿ ಹಳಸಲಾಗುತ್ತಿರುವಾಗ ವ್ಯವಸ್ಥೆಯ ದೋಷವನ್ನು ಪ್ರಶ್ನಿಸುವವನು ದೇಶ ದ್ರೋಹಿಯಾಗುತ್ತಿರುವುದು ಅಚ್ಚರಿ ಪಡುವಂತದ್ದಲ್ಲ !
Charan Aivarnad
Published In Udayakala
http://udayakala.news/secrecy-of-nakedness/?fbclid=IwAR0Yu_0ajLfjC2OQdTOu16kv9UALPHnxrmAWzLcL2Tf4l-F5ed_c2oWDrMs


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thank You