ವಿಶ್ವವಿದ್ಯಾನಿಲಯಗಳಿಗೆ ಏನಾಗುತ್ತಿದೆ?




ಅಹಮದಾಬಾದ್ ವಿಶ್ವವಿದ್ಯಾನಿಲಯದ ಮಾನವಿಕ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಮತ್ತು ಗಾಂಧಿ ಚಳಿಗಾಲದ ಶಾಲೆಯ (Gandhi Winter School)ನಿರ್ದೇಶಕರಾಗಿ ನೇಮಕರಾಗಿದ್ದ ಇತಿಹಾಸಕಾರ ರಾಮಚಂದ್ರ ಗುಹಾ ಹುದ್ದೆಯನ್ನು ತಿರಸ್ಕರಿಸಿದ್ದಾರೆ. ಅ.16ರಂದು ಅವರ ನೇಮಕಾತಿಯಾದ್ದು ಅ.19ರಂದು ಅವರ ಆಯ್ಕೆಯನ್ನು ವಿರೋಧಿಸಿ ಅಭಾವಿಪದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅವರ ಆರೋಪಗಳು ಬಹಳ ವಿಚಿತ್ರವಾಗಿವೆ. ರಾಮಚಂದ್ರರನ್ನು ದೇಶದ್ರೋಹಿ ಎಂದು ಕರೆಯಲಾಗಿದೆ. ಹಿರಿಯ ಪ್ರಾಧ್ಯಾಪಕರೋರ್ವರು ಗುಹಾರನ್ನು ಗುಜರಾತ್‍ನಲ್ಲಿ ಪಾಠ ಮಾಡಲು ಬಿಡುವುದಿಲ್ಲ, ಅವರು ಮೋದಿ ವಿರೋಧಿ ಎಂದು ಮಿರರ್‍ಗೆ ಹೇಳಿದ್ದಾರೆ!

ಈ ಬೆಳವಣಿಗೆಗಳನ್ನು ಕಂಡ ರಾಮಚಂದ್ರ ಗುಹಾ  "ಪರಿಸ್ಥಿತಿ ತನ್ನ ನಿಯಂತ್ರಣವನ್ನು ಮೀರಿರುವುದರಿಂದ ನಾನು ಅಹಮದಾಬಾದ್ ವಿವಿಯನ್ನು ಸೇರುವುದಿಲ್ಲ" ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ. ರಾಮಚಂದ್ರ ಗುಹಾರನ್ನು ಟೀಕಿಸುವ ವರ್ಗವು ಅವರನ್ನು ಕಮ್ಯುನಿಸ್ಟ್ ಎಂದು ಕರೆದಿದೆ. ಆದರೆ ಗುಹಾ ತಮ್ಮ ಅನೇಕ ಬರಹಗಳಲ್ಲಿ ಕಮ್ಯನಿಸ್ಟರನ್ನೂ ಟೀಕಿಸಿದ್ದಿದೆ. ನಮ್ಮ ಮುಂದಿರುವ ಪ್ರಶ್ನೆಯೆಂದರೆ ರಾಮಚಂದ್ರ ಗುಹಾರಂತಹ ಜಾಗತಿಕ ಮಟ್ಟದ ಚಿಂತಕರನ್ನು ಒಂದು ವಿಶ್ವವಿದ್ಯಾನಿಲಯ  ಹೊಂದುವುದು ತಪ್ಪೇ? ಅವರಿಗೆ ಆ ಸ್ಥಾನವನ್ನು ತುಂಬುವ ಯೋಗ್ಯತೆ ಇಲ್ಲವೇ?

ದೆಹಲಿ ವಿಶ್ವವಿದ್ಯಾನಿಲಯ ಇತ್ತೀಚೆಗೆ ರಾಜ್ಯಶಾಸ್ತ್ರದ ಪಠ್ಯಕ್ರಮದಿಂದ ಪ್ರೊ.ಕಂಚಾ ಇಳಯ್ಯನವರ Why I am not a Hindu, Post-Hindu India and God as Political Philosopher. God as Political Philosopher ಪುಸ್ತಕಗಳನ್ನು ಹಿಂದೂ ವಿರೋಧಿ ಎಂಬ ಕಾರಣಕ್ಕೆ ತೆಗೆದು ಹಾಕಿದೆ.  ವಿಚಿತ್ರವೆಂದರೆ ಸ್ವತಃ ಕೆಲವು ರಾಜ್ಯಶಾಸ್ತ್ರದ ಪ್ರಾಧ್ಯಾಪಕರು ಈ ಪಠ್ಯಗಳನ್ನು ಪಾಠಮಾಡಲು ತಿರಸ್ಕರಿಸಿದ್ದಾರೆ. ಆದರೆ ಈ ಪುಸ್ತಕಗಳು ದಲಿತ ಬಹುಜನ ರಾಜಕೀಯ ಚಿಂತನೆ (Dalit Bahujan Political Thought) ಎಂಬ ಎಂ.ಎ ಐಚ್ಚಿಕ ವಿಷಯದಲ್ಲಿ ಹೆಚ್ಚಿನ ಓದಿಗಾಗಿ ಸೂಚಿಸಲಾದ ಪಟ್ಟಿಯಲ್ಲಿವೆ. ಈ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಬುದ್ಧ, ಕಬೀರ, ಬಿ.ಆರ್ ಅಂಬೇಡ್ಕರ್, ಜ್ಯೋತಿಬಾ ಫುಲೆ, ಮೊದಲಾದವರನ್ನೂ ಓದಬೇಕಿತ್ತು. ಪೇಪರ್‍ನ ಹೆಸರೇ ತಿಳಿಸುವಂತೆ ಇದೊಂದು ದಲಿತ ರಾಜಕೀಯದ ಮೇಲಿನ ಬಹು ಚಿಂತನೆಗಳ ಒಂದು ಆಧ್ಯಯನವಾಗಿದೆ.


ಜೆಎನ್‍ಯುನ ಮಾಧ್ಯಮ ಅಧ್ಯಯನ ಕೇಂದ್ರವು ಭಾರತ-ಅಮೇರಿಕಾದ ಹಿಂದುತ್ವ ವಿಚಾರಗಳ

ವಿವಾದಾತ್ಮಕ ಲೇಖಕ, ಇನ್ಫಿನಿಟಿ ಫೌಂಡೇಶನ್‍ನ ಸ್ಥಾಪಕ   ರಾಜೀವ್ ಮಲ್ಹೋತ್ರರನ್ನು ಗೌರವ ಪ್ರಾಧ್ಯಾಪಕರನ್ನಾಗಿ ನೇಮಕಗೊಳಿಸಿದೆ. ಆಂಡ್ರೂ ನಿಕೋಲ್ಸನ್‍ನ À Unifying Hinduism ಪುಸ್ತಕದಿಂದ ಕೃತಿಚೌರ್ಯ ಮಾಡಿದ ವಿವಾದವನ್ನು ಹೊಂದಿರುವ ಮಲ್ಹೋತ್ರ ವಿವಾದಿತ ದೇವಮಾನವ ನಿತ್ಯಾನಂದರೊಂದಿಗೆ ವೇದಿಕೆ ಹಂಚಿಕೊಂಡು ಸುದ್ದಿಯಾಗಿದ್ದರು.

2008ರ ಡೆಲ್ಲಿ ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿದ್ದ ಕವಿ ಮತ್ತು ವಿದ್ವಾಂಸ “ಎ ಕೆ ರಾಮಾನುಜನ್g”À  ಮುನ್ನೂರು ರಾಮಾಯಣಗಳು (Three Hundred Ramayanas) ಎಂಬ ಪ್ರಬಂಧಕ್ಕೆ ಹಿಂದೂ ಸಂಘಟನೆಗಳು ತೀವ್ರವಾದ ವಿರೋಧವನ್ನು ಮಾಡಿದವು. ಆ ಪ್ರಬಂಧವು ತಮಿಳಿನ ಕಂಬನ್ ರಾಮಯಣ, ಕನ್ನಡದ ತಂಬೂರಿ ರಾಮಯಣ ಮುಂತಾದ ರಾಮಾಯಣದ ಅನೇಕ ಪಠ್ಯಗಳ ಬಗ್ಗೆ 1987ರ ಫಿಟ್ಸ್‍ಬರ್ಗ ವಿಶ್ವವಿದ್ಯಾನಿಲಯದಲ್ಲಿ ವಿಚಾರ ಮಂಡಿಸಲು ಸಿದ್ಧಪಡಿಸಿದ್ದಾಗಿತ್ತು. ಕೊನೆಗೆ ಒತ್ತಡಗಳಿಂದಾಗಿ ಆ ಪಠ್ಯವನ್ನು ತೆಗೆಯಬೇಕಾಯಿತು. ಇದೊಂದು ಶತಮೂರ್ಖ ನಿರ್ಧಾರವೆಂದೇ ಭಾವಿಸಬೇಕು. ಈ ವಿರೋಧವು ಭಾರತದ ಬಹುಭಾಷಿಕ ಸಮುದಾಯಗಳು ಕಟ್ಟಿದ ರಾಮಾಯಣ, ಮಹಾಭಾರತಗಳಂತಹ ಕಾವ್ಯಗಳ ತಿರಸ್ಕಾರವಾಗಿತ್ತು. ಅರ್ಥಾತ್ ಏಕ ಸಂಸ್ಕøತಿಯ ಹೇರಿಕೆಯಾಗಿತ್ತು. ಇಂದು ಅದೇ ಸಂಘಟನೆಗಳು ಆ ನಿಲುವನ್ನು ಹಿಂಜರಿಯಬಹುದು!

ವಿಶ್ವವಿದ್ಯಾನಿಲಯಗಳು ಬರಿಯ ಪಠ್ಯಪುಸ್ತಕಗಳನ್ನು ಬೋಧಿಸಿ ಉದ್ಯೋಗಗಳಿಗೆ ಯುವಕರನ್ನು ತಯಾರುಮಡುವುದಿಲ್ಲ. ವಿಶ್ವಾವಿದ್ಯಾನಿಲಯಗಳ ವಿದ್ಯಾರ್ಥಿಗಳು ಬೌದ್ಧಿಕವಾಗಿ ಪ್ರಬುದ್ಧರಾಗಿರುತ್ತಾರೆ. ಅವರು ಯಾವುದನ್ನು ಓದಬೇಕು ಎಂಬುದನ್ನು ಯಾರೂ ನಿರ್ಧರಿಸಲು ಸಾಧ್ಯವಿಲ್ಲ. ಅವರ ಪಠ್ಯಕ್ರಮಗಳಿಗನುಗುಣವಾಗಿ ನೀಡಿದ ಕೃತಿಗಳು ನೀಡಿದರೂ ಅವರ ಓದು ಅದನ್ನೂ ಮೀರಿರುತ್ತದೆ ಮತ್ತು ಇರಲೇ ಬೇಕು. ವಿಶ್ವವಿದ್ಯಾನಿಲಯಗಳು ಹೊಸ ಚಿಂತನೆಗಳನ್ನು ಹುಟ್ಟು ಹಾಕುವ ಕೇಂದ್ರಗಳು. ಅಲ್ಲಿ ಅನೇಕ ವಿಚಾರಗಳ, ಸಂಸ್ಕøತಿಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕರಿರುತ್ತಾರೆ. ಆ ಚಿಂತನೆಗಳ ನಡುವೆ ಸಂವಾದವೇರ್ಪಡುತ್ತದೆ. ರಾಷ್ಟ್ರದ್ರೋಹಿಗಳ ಜನನ ಕೇಂದ್ರವೆಂದು ಬಿಂಬಿಸಲ್ಪಡುತ್ತಿರುವ ಜೆಎನ್ಯು ಬರೀ ಕಮ್ಯುನಿಸ್ಟ್ ಚಿಂತನೆಯ ಪಾಠಗಳನ್ನು ಮಾತ್ರ ಮಾಡುತ್ತಿಲ್ಲ. ಅಲ್ಲಿ ಇತರ ವಿವಿಗಳಲ್ಲಿ ಇಲ್ಲದ ಭಕ್ತಿ ಚಳುವಳಿ ಮೊದಲಾದ ಸಾಂಸ್ಕøತಿಕ ವಿಚಾರಗಳನ್ನು ಅಧ್ಯಯನ ಮಾಡಲು ಅವಕಾಶಗಳಿವೆ. ಇಂತಹ ಅಧ್ಯಯನಗಳು ಧರ್ಮದ ಅಧಿಕೃತ ಸಂರಕ್ಷಕರೆಂದು ಘೋಷಿಸಿಕೊಂಡವರಿಗೆ ಬೇಡವಷ್ಟೇ! ಎಷ್ಟೇ ವೈಚಾರಿಕ ವೈರುಧ್ಯಗಳಿದ್ದರೂ ತಮ್ಮ ವಿರೋಧಿ ಚಿಂತನೆಗಳನ್ನು ಕೇಳುವ ಸೈರಣೆ ವಿದ್ಯಾರ್ಥಿಗಳಿಗಿರಬೇಕು. ಈ ತೆರನಾದ ವಾತಾವರಣದಿಂದ ಮಾತ್ರ ಸ್ವತಂತ್ರ ಆಲೋಚನೆಗಳ ವಿದ್ಯಾರ್ಥಿಗಳು ಹುಟ್ಟಲು ಸಾಧ್ಯ.

ಭಾರತದ ವಿಶ್ವವಿದ್ಯಾನಿಲಗಳು ಶೈಕ್ಷಣಿಕವಾಗಿ ಕುಸಿಯುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅನೇಕ ವಿವಿಗಳಲ್ಲಿ ಅಕಾಡೆಮಿಕ್ ಚರ್ಚೆಗಳಿಗಿಂತ ಹೆಚ್ಚು ಧಾರ್ಮಿಕ ಆಚರಣೆಗಳಿಗೆ, ಶಿಕ್ಷಣೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡಲಾಗುತ್ತಿದೆ. ಅಲ್ಲದೇ ಮಾನವಿಕ ವಿಭಾಗಗಳಿಗೆ ಅನುದಾನವನ್ನೂ ಕಡಿಮೆಗೊಳಿಸಲಾಗುತ್ತಿದೆ. ಇವು ನಿರುತ್ಪಾದಕ ಶಿಸ್ತುಗಳೆಂದು ಕರೆಯಲ್ಪಟ್ಟು  ವ್ಯವಸ್ಥೆಯನ್ನು ಪ್ರಶ್ನಿಸುವ ವಿದ್ಯಾರ್ಥಿಗಳನ್ನು ನಿಯಂತ್ರಿಸುವ ಹುನ್ನಾರದ ಲಕ್ಷಣ. ಅಲ್ಲದೇ ವಿವಿಗಳಲ್ಲಿ ತಮ್ಮ ವಿಚಾರಗಳಿಗೆ ವಿರುದ್ಧ ನಿಲುವನ್ನು ಹೊಂದಿರುವ ಪ್ರಾಧ್ಯಾಪಕರನ್ನು ವೈಚಾರಿಕವಾಗಿ ಪ್ರಶ್ನಿಸುವ ಬದಲು ದೈಹಿಕವಾಗಿ ಹಲ್ಲೆ ನಡೆಸುವ ಮಟ್ಟಕ್ಕೆ ಯುವಕರ ಚಿಂತನೆಗಳು ಬೆಳೆದಿರುವುದು ಧುರಂತ.

ನಮ್ಮ ಆಲೋಚನೆಗಳನ್ನು ಇತರರು ನಿಯಂತ್ರಸುತ್ತಿದ್ದಾರೆ. ಈ ನಿಯಂತ್ರಕರು ಯಾವ ಸೈದ್ಧಾಂತಿಕ ಹಿನ್ನಲೆಯವರೂ ಇರಬಹುದು. ಅವರ ಅಭಿಪ್ರಾಯಗಳು ನಮ್ಮ ಅಭಿಪ್ರಾಯಗಳಾಗಿ ಬದಲಾಗುತ್ತಾ ನಮ್ಮ ಸ್ವತಂತ್ರ ವಿವೇಚನಾ ಪ್ರವೃತ್ತಿ ನಾಶವಾಗುತ್ತಿದೆ. ಹೀಗಾಗಿ ದಿನೆ ದಿನೇ ವಿವಿಗಳು ಪ್ರತಿಭಾವಂತ, ಚಿಂತನಶೀಲ ವಿದ್ಯಾರ್ಥಿಗಳನ್ನು ಸೃಷ್ಟಿಸಲು ಸೋಲುತ್ತವೆ. QS World University Rankings 2019ರ ವರದಿಯ ಪ್ರಕಾರ ಭಾರತದದಲ್ಲಿ ಪ್ರಥಮ ಸ್ಥಾನದಲ್ಲಿರುವ ಮುಂಬಾಯಿ ಐಐಟಿಯು ಪ್ರಪಂಚ ಮಟ್ಟದಲ್ಲಿ 162ನೇ ಸ್ಥಾನದಲ್ಲಿದೆ! ಮೋದಿ ಸರಕಾರ ಯುಜಿಸಿಯನ್ನು HECI (Higher Education Commission of India)ಗೆ ಬದಲಿಸುವ ಯೋಜನೆಯನ್ನು ಹೊಂದಿದ್ದು, ಇದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ನಿಯಂತ್ರಣದಲ್ಲಿ ಇರುತ್ತದೆ.

ವಿವಿಗಳು ರಾಜಕೀಯ ನಾಟಕಗಳ ವೇದಿಕೆಗಳಾಗುತ್ತವೆ. ಪ್ರಬುದ್ಧ ರಾಜಕೀಯ ನಾಯಕರನ್ನು ಸೃಷ್ಟಿಸಬೇಕಾದಲ್ಲಿ ಹೊರಗಿನ ಹೊಲಸು ರಾಜಕೀಯ ರಾಡಿಯೆಬ್ಬಿಸುತ್ತದೆ. ವಿದ್ಯಾರ್ಥಿಗಳನ್ನು ರಾಷ್ಟ್ರದ್ರೋಹಿ ಮೊದಲಾದ ಹೊಸ ಹೊಸ ಹಣೆ ಪಟ್ಟಿಗಳಿಂದ ಕರೆಯಲಾಗುತ್ತಿದೆ. ಸರಕಾರಗಳೂ ತಮ್ಮ ಪ್ರಚಾರಾರ್ಥವಾಗಿ ಅನಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಯುಜಿಸಿ ಎಲ್ಲಾ ವಿವಿಗಳಲ್ಲಿ ಕಡ್ಡಾಯವಾಗಿ “ಸರ್ಜಿಕಲ್ ದಿನವನ್ನು ಆಚರಿಸಬೇಕೆಂಬ ಸುತ್ತೋಲೆ ಹೊರಡಿಸಿದ್ದು ಚುನಾವಣಾ ಕಾಲೇ ರಾಜಕೀಯವಾಗಿಯೇ ಕಂಡುಬರುತ್ತದೆ.

ಕಳೆದ ವರ್ಷ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾವು ಕೆಲವು ಗೆಳೆಯರು ‘ಕ್ಯಾಂಪಸ್ ಟಾಕ್’ ಎಂಬ ವೇದಿಕೆಯಿಂದ ಭಿನ್ನ ವಿಚಾರಗಳನ್ನು ಚರ್ಚಿಸುತ್ತಿದ್ದೆವು. ಬೇರೆ ಬೇರೆ ವೈಚಾರಿಕ ಹಿನ್ನಲೆಗಳಿಂದ ಬಂದ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳಿದ್ದರು. ಅಂಬೇಡ್ಕರ್, ಭಗತ್ ಸಿಂಗ್, ಭಾರತೀಯ ದರ್ಶನ ಪರಂಪರೆ, ಸಂಸ್ಕøತಿ, ಕವಿತೆಗಳು, ಸಂವಿಧಾನ ಇತ್ಯಾದಿಗಳನ್ನು ಸಂಜೆ ಮಂಗಳಾ ಕ್ಯಾಂಟೀನ್ ಎದುರುಗಡೆ ಚರ್ಚಿಸುತ್ತಿದ್ದೆವು. ಎಲ್ಲರಿಗೂ ಮಾತನಾಡುವ, ಇತರರ ನಿಲುವುಗಳನ್ನು ಪ್ರಶ್ನಿಸುವ ಮತ್ತು ವಿರೋಧಿಸುವ ಅವಕಾಶ ನೀಡಿದ್ದೆವು. ಆದರೆ ಕೆಲ ರಾಜಕೀಯ ಹಿತಸಕ್ತಿಗಳು ಈ ಚರ್ಚೆಗಳ ಬಗ್ಗೆ ತಪ್ಪು ಅಭಿಪ್ರಾಯವನ್ನು ಹರಡಲಾರಂಭಿಸಿದವು. ಕಾರ್ಯಕ್ರಮವನ್ನು ನಿಲ್ಲಿಸುವಂತೆ ಒತ್ತಡ ಹೇರಿದವು.

ಬಹುವಿಚಾರಗಳ ನಡುವೆ ಸಂವಾದವೇರ್ಪಡಿಸಬೇಕಾದ ವಿಶ್ವವಿದ್ಯಾನಿಲಯಗಳು ವೈಚಾರಿಕವಾದ ಕಾರಣಗಳಿಗೆ ಹೊಡೆದಾಡುವ ವಾತಾವರಣವನ್ನು ಸೃಷ್ಟಿಸುವುದು ಅಪಾಯದ ಲಕ್ಷಣ. ಈ ವಾತಾವರಣದಲ್ಲಿ ಸ್ವತಂತ್ರ ಆಲೋಚನೆಗಳು ಹುಟ್ಟಲು ಸಾಧ್ಯವಿಲ್ಲ. ಬಲತ್ಕಾರವಾಗಿ ಏಕರೂಪದ ವಿಚಾರಗಳು, ಏಕ ಸಂಸ್ಕøತಿಯನ್ನು ಹೇರುವುದು ಬಹುಸಾಂಸ್ಕøತಿಕ ನೆಲೆಗಳ ನಾಶಕ್ಕೆ ಕಾರಣವಾಗುತ್ತದೆ. ಈ ಬೆಳವಣಿಗೆಗಳು ವಿಶ್ವವಿದ್ಯಾನಿಲಯಗಳಲ್ಲೂ ಕಂಡುಬರುತ್ತಿವೆ. ವಿಶ್ವವಿದ್ಯಾನಿಲಯಗಳು ಪ್ರಶ್ನಿಸುವುದನ್ನು ಮರೆಯಲಾರಂಭಿಸಿವೆ !

                                           ***************************************

ಚರಣ್ ಐವರ್ನಾಡು
ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೊತ್ರಿ
ಕೊನಾಜೆ

Charan Aivarnad



ಕಾಮೆಂಟ್‌ಗಳು

Bahurupi Bharatha